25 ಲಕ್ಷಕ್ಕೂ ಹೆಚ್ಚು ಬಳಕೆದಾರರಿಂದ ಚಾಟ್‌ಜಿಪಿಟಿ ಬಹಿಷ್ಕಾರ : ಕಾರಣ ಏನು ಗೊತ್ತೆ..?

 ಪ್ರಖ್ಯಾತ ಕೃತಕ ಬುದ್ಧಿಮತ್ತೆ ಸಂಸ್ಥೆ ‘ಓಪನ್ ಎಐ’ (OpenAI), ಅಮೆರಿಕದ ರಕ್ಷಣಾ ಇಲಾಖೆಯಾದ ಪೆಂಟಗನ್ ಜೊತೆ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಭಾರಿ ಹಿನ್ನಡೆ ಅನುಭವಿಸಿದೆ. ಈ ನಿರ್ಧಾರವನ್ನು ವಿರೋಧಿಸಿ ಈಗಾಗಲೇ 2.5 ಮಿಲಿಯನ್‌ಗಿಂತಲೂ (25 ಲಕ್ಷ) ಹೆಚ್ಚು ಬಳಕೆದಾರರು ಚಾಟ್‌ಜಿಪಿಟಿ ಸೇವೆಯನ್ನು ತೊರೆದಿದ್ದಾರೆ ಎಂದು ಬಹಿಷ್ಕಾರದ ಕರೆ ನೀಡಿರುವ ವೆಬ್‌ಸೈಟ್ ಒಂದು ಪ್ರತಿಪಾದಿಸಿದೆ.
ಏನಿದು ವಿವಾದಾತ್ಮಕ ಒಪ್ಪಂದ?
ಜಗತ್ತಿನಾದ್ಯಂತ 900 ಮಿಲಿಯನ್‌(9 ಕೋಟಿ)ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಚಾಟ್‌ಜಿಪಿಟಿ, ಕಳೆದ ವಾರ ಪೆಂಟಗನ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ಒಪ್ಪಂದದ ಪ್ರಕಾರ, ಅಮೆರಿಕದ ರಕ್ಷಣಾ ಇಲಾಖೆಯು ತನ್ನ ಅತ್ಯಂತ ರಹಸ್ಯವಾದ (Classified) ನೆಟ್‌ವರ್ಕ್‌ಗಳಲ್ಲಿ ಓಪನ್ ಎಐನ ಮಾದರಿಗಳನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ.
ವೆಬ್‌ಸೈಟ್‌ನಲ್ಲಿ ಸಂಗ್ರಹವಾಗಿರುವ ಸಹಿಗಳು, ಸಾಮಾಜಿಕ ಜಾಲತಾಣಗಳಲ್ಲಿನ ಹಂಚಿಕೆಗಳು ಮತ್ತು ನಂಬಲರ್ಹವಾದ ಆ್ಯಪ್ ಬಳಕೆ ದತ್ತಾಂಶಗಳ ಆಧಾರದ ಮೇಲೆ, ಜನರು ಚಾಟ್‌ಜಿಪಿಟಿ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗಿದೆ ಎಂದು ವರದಿ ಹೇಳಿದೆ.
“ನಾವು ಅಮೆರಿಕನ್ನರನ್ನು ಮತ್ತು ವಿಶ್ವದಾದ್ಯಂತ ಇರುವ ಜನರನ್ನು ಚಾಟ್‌ಜಿಪಿಟಿ ಬಿಡುವಂತೆ ಸಂಘಟಿಸುತ್ತಿದ್ದೇವೆ,” ಎಂದು ಪ್ರತಿಭಟನಾಕಾರರ ವೆಬ್‌ಸೈಟ್ ತಿಳಿಸಿದೆ. “ನಾವು ಓಪನ್ ಎಐ ಸಂಸ್ಥೆಯನ್ನು ಸಂಕಷ್ಟಕ್ಕೆ ತಳ್ಳಬಹುದು. ಚಾಟ್‌ಜಿಪಿಟಿಯನ್ನು ಒಂದು ಉದಾಹರಣೆಯನ್ನಾಗಿ ಮಾಡುವ ಮೂಲಕ, ಐಸಿಇ (ICE – ವಲಸೆ ಮತ್ತು ಕಸ್ಟಮ್ಸ್ ಜಾರಿ ಸಂಸ್ಥೆ) ಗೆ ಸಹಾಯ ಮಾಡುವವರ ಕ್ರಮಗಳು ಶಿಕ್ಷೆಯಿಲ್ಲದೆ ಹೋಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸುತ್ತೇವೆ,” ಎಂದು ಸಂಘಟಕರು ಎಚ್ಚರಿಸಿದ್ದಾರೆ.
ಹಿನ್ನಡೆ ಅನುಭವಿಸಿದ ಚಾಟ್‌ಜಿಪಿಟಿ; ಕ್ಲೋಡ್‌ಗೆ ಅಗ್ರಸ್ಥಾನ
‘ಸೆನ್ಸರ್ ಟವರ್’ ವಿಶ್ಲೇಷಣೆಯ ಪ್ರಕಾರ, ಈ ಬೆಳವಣಿಗೆಯ ನಂತರ ‘ಆಂಥ್ರೋಪಿಕ್’ ಸಂಸ್ಥೆಯ ಚಾಟ್‌ಬಾಟ್ ‘ಕ್ಲೋಡ್’ (Claude), ಆಪಲ್‌ನ ಆ್ಯಪ್ ಸ್ಟೋರ್ ಚಾರ್ಟ್‌ಗಳಲ್ಲಿ ಚಾಟ್‌ಜಿಪಿಟಿಯನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ. ‘ಟೆಕ್‌ಕ್ರಂಚ್’ ವರದಿಯ ಪ್ರಕಾರ, ಕಳೆದ ಶನಿವಾರ ಅಮೆರಿಕದಲ್ಲಿ ಚಾಟ್‌ಜಿಪಿಟಿ ಮೊಬೈಲ್ ಆ್ಯಪ್ ಅನ್ನು ಅನ್-ಇನ್ಸ್ಟಾಲ್ (Uninstall) ಮಾಡಿದವರ ಸಂಖ್ಯೆಯಲ್ಲಿ ಶೇ. 295 ರಷ್ಟು ದಿಢೀರ್ ಏರಿಕೆ ಕಂಡುಬಂದಿದೆ.
ಆಂಥ್ರೋಪಿಕ್‌ನಿಂದ ಪೆಂಟಗನ್ ಹೊರಬಂದಿದ್ದೇಕೆ?
ಪೆಂಟಗನ್‌ ತನ್ನ ಎಐ ಗುತ್ತಿಗೆದಾರನಾಗಿದ್ದ ಆಂಥ್ರೋಪಿಕ್ ಸಂಸ್ಥೆಯನ್ನು ಕೈಬಿಟ್ಟ ತಕ್ಷಣವೇ ಓಪನ್ ಎಐ ಈ ಒಪ್ಪಂದ ಮಾಡಿಕೊಂಡಿರುವುದು ತೀವ್ರ ಟೀಕೆಗೆ ಗುರಿಯಾಗಿದೆ. ಡೇರಿಯೊ ಅಮೋಡೆ ನೇತೃತ್ವದ ಆಂಥ್ರೋಪಿಕ್ ಸಂಸ್ಥೆಯು, “ಅಮೆರಿಕ ಸರ್ಕಾರವು ಎಐ ಮಾದರಿಯನ್ನು ಆಂತರಿಕ ಕಣ್ಗಾವಲು (Domestic Surveillance) ಉದ್ದೇಶಕ್ಕೆ ಬಳಸಲು ಯೋಜಿಸಿದೆ, ಇದು ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ,” ಎಂದು ಹೇಳುವ ಮೂಲಕ ಒಪ್ಪಂದದಿಂದ ಹೊರಬಂದಿತ್ತು.
ಸ್ಯಾಮ್ ಆಲ್ಟ್‌ಮನ್ ಪಶ್ಚಾತ್ತಾಪ ಮತ್ತು ತಿದ್ದುಪಡಿ
ಸಾರ್ವಜನಿಕರ ಆಕ್ರೋಶಕ್ಕೆ ಪ್ರತಿಕ್ರಿಯಿಸಿರುವ ಓಪನ್ ಎಐ ಸಿಇಒ ಸ್ಯಾಮ್ ಆಲ್ಟ್‌ಮನ್, “ನಾವು ಶುಕ್ರವಾರದಂದು ಈ ನಿರ್ಧಾರವನ್ನು ಇಷ್ಟು ಅವಸರದಲ್ಲಿ ತೆಗೆದುಕೊಳ್ಳಬಾರದಿತ್ತು. ಈ ವಿಷಯಗಳು ಅತ್ಯಂತ ಸಂಕೀರ್ಣವಾಗಿದ್ದು, ಸ್ಪಷ್ಟ ಸಂವಹನದ ಅಗತ್ಯವಿತ್ತು. ನಾವು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದೆವು, ಆದರೆ ಅದು ನಮ್ಮ ಅವಕಾಶವಾದಿ ಮತ್ತು ಅಸಡ್ಡೆಯ ನಿರ್ಧಾರದಂತೆ ಕಂಡಿತು,” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
‘ದಿ ಗಾರ್ಡಿಯನ್’ ವರದಿಯ ಪ್ರಕಾರ, ಕಂಪನಿಯು ಈಗ ತನ್ನ ಒಪ್ಪಂದವನ್ನು ತಿದ್ದುಪಡಿ ಮಾಡುತ್ತಿದೆ. ಸಾಮೂಹಿಕ ಕಣ್ಗಾವಲು ಉದ್ದೇಶಗಳಿಗಾಗಿ ಅಥವಾ ರಾಷ್ಟ್ರೀಯ ಭದ್ರತಾ ಸಂಸ್ಥೆ (NSA) ಯಂತಹ ಗುಪ್ತಚರ ಸಂಸ್ಥೆಗಳು ತನ್ನ ತಂತ್ರಜ್ಞಾನವನ್ನು ಬಳಸುವುದನ್ನು ಸ್ಪಷ್ಟವಾಗಿ ನಿಷೇಧಿಸುವುದಾಗಿ ಓಪನ್ ಎಐ ಹೇಳಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement