ಅಮೆರಿಕದ ವರ್ಜೀನಿಯಾ ರಾಜ್ಯದ ಆಶ್ಲ್ಯಾಂಡ್‌ನಲ್ಲಿ ನಡೆದ ಒಂದು ನಾಟಕೀಯ ಘಟನೆಯು ಎಲ್ಲೆಡೆ ನಗೆ ಮತ್ತು ಅಚ್ಚರಿಗೆ ಕಾರಣವಾಗಿದೆ. ಇಲ್ಲಿನ ಮದ್ಯದಂಗಡಿಯೊಂದಕ್ಕೆ ಶನಿವಾರ ಬೆಳಗ್ಗೆ ಸಿಬ್ಬಂದಿ ಬಂದಾಗ, ಬಾತ್‌ರೂಮಿನಲ್ಲಿ ಅನಿರೀಕ್ಷಿತ ಸನ್ನಿವೇಶ ಕಂಡುಬಂದಿದೆ. ಸಿಬ್ಬಂದಿಗೆ ಬಾತ್‌ರೂಮಿನಲ್ಲಿ ಮದ್ಯಪಾನ ಮಾಡಿ ಮಲಗಿದ ಅಪರಿಚಿತ ಪ್ರಾಣಿಯೊಂದು ಪ್ರಜ್ಞೆ ತಪ್ಪಿ ಬಿದ್ದಿರುವುದು ಕಂಡುಬಂದಿದೆ.
ಆ ಪ್ರಾಣಿ ರಕೂನ್(ಉತ್ತರ ಅಮೆರಿಕದ ನಿಶಾಚರ ಮಾಂಸಾಹಾರಿ ಪ್ರಾಣಿ). ಅದು ಅಕ್ರಮವಾಗಿ ಅಂಗಡಿಗೆ ನುಗ್ಗಿ, ಅಲ್ಲಿನ ವಿವಿಧ ಮದ್ಯಪಾನೀಯಗಳನ್ನು ಸೇವಿಸಿ, ನಂತರ ಅಮಲೇರಿ ಪ್ರಜ್ಞೆ ಕಳೆದುಕೊಂಡು ಮಲಗಿತ್ತು ಎಂದು ಹೇಳಲಾಗಿದೆ.ಹ್ಯಾನೋವರ್ ಕೌಂಟಿ ಪ್ರಾಣಿ ಸಂರಕ್ಷಣೆ ಮತ್ತು ಆಶ್ರಯದ ಅಧಿಕಾರಿ ಮಾರ್ಟಿನ್ ಅವರು ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದಾಗ, ರಕೂನ್ ಹಲವಾರು ಶೆಲ್ಫ್‌ಗಳನ್ನು ಚೆಲ್ಲಾಪಿಲ್ಲಿ ಮಾಡಿ, ಬಾಟಲಿಗಳಲ್ಲಿದ್ದ ಮದ್ಯ ಕುಡಿದ ನಂತರ ಬಾತ್‌ರೂಮಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಅವರು ಕಂಡುಕೊಂಡರು.
ಪ್ರಾಣಿ ಆಶ್ರಯ ಕೇಂದ್ರವು ಈ ಘಟನೆಯ ವಿವರಗಳನ್ನು ರಕೂನ್‌ನ ಫೋಟೋಗಳೊಂದಿಗೆ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದೆ. ಅಧಿಕಾರಿಗಳು ರಕೂನ್ “ತೀವ್ರವಾಗಿ ಮದ್ಯಪಾನ ಮಾಡಿದೆ” ಎಂದು ದೃಢಪಡಿಸಿದ್ದಾರೆ,
ಆದರೆ ಅದಕ್ಕೆ ಯಾವುದೇ ಗಾಯ ಅಥವಾ ಹಾನಿಯಾಗಿರಲಿಲ್ಲ. ಅಧಿಕಾರಿ ಮಾರ್ಟಿನ್ ಅವರು ಆ ರಕೂನ್ ಅನ್ನು ಸುರಕ್ಷಿತವಾಗಿ ಪ್ರಾಣಿ ಆಶ್ರಯಕ್ಕೆ ಸಾಗಿಸಿದ್ದಾರೆ. ಅಲ್ಲಿ ಅದು ವಿಶ್ರಾಂತಿ ಪಡೆದು ಚೇತರಿಸಿಕೊಳ್ಳಲು ಅವಕಾಶ ನೀಡಲಾಯಿತು. ಕೆಲವೇ ಗಂಟೆಗಳ ನಿದ್ರೆಯ ನಂತರ, ಪ್ರಾಣಿಯು ಸಂಪೂರ್ಣ ಪ್ರಜ್ಞೆ ಪಡೆದು, ನಂತರ ಅದನ್ನು ಮತ್ತೆ ಕಾಡಿಗೆ ಬಿಡಲಾಯಿತು.
“ಇದು ಹ್ಯಾನೋವರ್ ಪ್ರಾಣಿ ಸಂರಕ್ಷಣಾ ಇಲಾಖೆಯ ಜೀವನದ ಮತ್ತೊಂದು ದಿನ,” ಎಂದು ಹೇಳಿ, ಅಸಾಮಾನ್ಯ ಪರಿಸ್ಥಿತಿಯನ್ನು ವೃತ್ತಿಪರತೆ ಮತ್ತು ಹಾಸ್ಯದೊಂದಿಗೆ ನಿರ್ವಹಿಸಿದ್ದಕ್ಕಾಗಿ ಆಶ್ರಯ ಕೇಂದ್ರವು ಅಧಿಕಾರಿ ಮಾರ್ಟಿನ್ ಅವರನ್ನು ಶ್ಲಾಘಿಸಿದೆ. ಈ ಕಥೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಆ ರ‍್ಯಾಕೂನ್ ವರ್ತನೆಯಿಂದ ಬಳಕೆದಾರರು ಆಶ್ಚರ್ಯಚಕಿತರಾಗಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ