ಹೊನ್ನಾವರ: ಶಿಷ್ಯರು-ಅಭಿಮಾನಿಗಳಿಂದ ಇಂದು ಹಿಂದೂಸ್ಥಾನೀ ಗಾಯಕ ಡಾ.ಅಶೋಕ ಹುಗ್ಗಣ್ಣವರಿಗೆ ಅಭಿನಂದನೆ, ಪುಸ್ತಕ ಲೋಕಾರ್ಪಣೆ, ನಾದಾರಾಧನೆ

ಹೊನ್ನಾವರ: ಶಿಷ್ಯರು, ಅಭಿಮಾನಿಗಳು ಹಾಗೂ ಸ್ನೇಹಿತರಿಂದ ಖ್ಯಾತ ಹಿಂದುಸ್ಥಾನೀ ಗಾಯಕ ಹಾಗೂ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಎಸ್‌ಡಿಎಂ ಕಾಲೇಜಿನ ಸಂಗೀತ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಡಾ.ಅಶೋಕ ಹುಗ್ಗಣ್ಣವರ ಅವರಿಗೆ ಬೃಹತ್‌ ಅಭಿನಂದನೆ, ಚಂದ್ರಪ್ರಭಾ ಅಭಿನಂದನಾ ಗ್ರಂಥದ ಲೋಕಾರ್ಪಣೆ ಹಾಗೂ ನಾದಾಭಿನಂದನೆ ಕಾರ್ಯಕ್ರಮ ಹೊನ್ನಾವರದ ಕರ್ಕಿ ಸಮೀಪದ ಹವ್ಯಕ ಸಭಾಭವನದಲ್ಲಿ ಮೇ 1 ರಂದು ಅಪರಾಹ್ನ 3 ರಿಂದ ನಡೆಯಲಿದೆ.
ಖ್ಯಾತ ಹಿಂದೂಸ್ಥಾನೀ ಗಾಯಕ ಡಾ.ನಾಗರಾಜ ಹವಾಲ್ದಾರ ಅವರು ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್‌ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಚಂದ್ರಪ್ರಭಾ ಅಭಿನಂದನಾ ಗ್ರಂಥ ಲೋಕಾರ್ಪಣೆ ಮಾಡಲಿದ್ದಾರೆ. ಅಭಿನಂದನಾ ನುಡಿ ಖ್ಯಾತ ಸಾಹಿತಿ ಡಾ.ಶ್ರೀಧರ ಬಳಗಾರ ಅವರಿಂದ ನಡೆಯಲಿದೆ.
ಡಾ. ಅಶೋಕ ಹುಗ್ಗಣ್ಣವರ ಅವರಿಗೆ ಸನ್ಮಾನ ಕಾರ್ಯಕ್ರಮವಿದ್ದು, ಮುಖ್ಯ ಅತಿಥಿಗಳಾಗಿ ಖ್ಯಾತ ಹಿಂದೂಸ್ಥಾನೀ ಗಾಯಕರಾದ ಪಂಡಿತ ಪರಮೇಶ್ವರ ಹೆಗಡೆ ಆಗಮಿಸಲಿದ್ದಾರೆ. ಪ್ರೊ. ಎಸ್‌.ಶಂಭು ಭಟ್‌ ಕಡತೋಕಾ ಅಧ್ಯಕ್ಷತೆ ವಹಿಸಲಿದ್ದಾರೆ. ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಆರ್‌.ಜಿ. ಭಟ್‌ ಹಾಗೂ ಕಾರ್ಯಾಧ್ಯಕ್ಷರಾದ ಕೃಷ್ಣಮೂರ್ತಿ ಭಟ್‌ ಶಿವಾನಿ ಪಾಲ್ಗೊಳ್ಳುವರು.
ನಾದಾಭಿನಂದನೆ ಕಾರ್ಯಕ್ರಮ ನಡೆಯಲಿದ್ದು, ಡಾ. ನಾಗರಾಜ ಹವಾಲ್ದಾರ ಹಾಗೂ ಡಾ.ಅಶೋಕ ಹುಗ್ಗಣ್ಣವರ ಅವರಿಂದ ಗಾಯನ ಕಾರ್ಯಕ್ರಮವಿದೆ. ಸಹಕಲಾವಿದರಾಗಿ ತಬಲಾದಲ್ಲಿ ಗೋಪಾಲಕೃಷ್ಣ ಹೆಗಡೆ ಕಲಭಾಗ, ಅಲ್ಲಮಪ್ರಭು ಕಡಕೋಳ ಧಾರವಾಡ, ಅನಂತಮೂರ್ತಿ ಶಾಸ್ತ್ರೀ ಗುಣವಂತೆ, ಕೇದಾರ ಹಲವಾಲ್ದಾರ ಬೆಂಗಳೂರು, ಶೇಷಾದ್ರಿ  ಅಯ್ಯಂಗಾರ ಮಂಕಿ, ಎನ್‌.ಜಿ. ಹೆಗಡೆ ಕಪ್ಪೆಕರೆ, ಗುರುರಾಜ ಹೆಗಡೆ ಆಡುಕಳ, ಅಕ್ಷಯ ಭಟ್‌ ಅಂಸಳ್ಳಿ ಪಾಲ್ಗೊಳ್ಳಲಿದ್ದಾರೆ. ಹಾರ್ಮೋನಿಯಂನಲ್ಲಿ ಗೌರೀಶ ಯಾಜಿ ಕೂಜಳ್ಳಿ, ನಿರಂಜನಮೂರ್ತಿ ಬೆಳಗಾವಿ ಹಾಗೂ ಹರಿಶ್ಚಂದ್ರ ನಾಯ್ಕ ಇಡಗುಂಜಿ ಪಾಲ್ಗೊಳ್ಳಲಿದ್ದಾರೆ ಎಂದು ಹೊನ್ನಾವರದ ಡಾ.ಅಶೋಕ ಹುಗ್ಗಣ್ಣವರ ಅಭಿನಂದನಾ ಸಮಿತಿ ತಿಳಿಸಿದೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವೀಡಿಯೊ ಪ್ರಕರಣ : ತನಿಖೆಗೆ ಎಡಿಜಿಪಿ ಬಿ.ಕೆ ಸಿಂಗ್ ನೇತೃತ್ವದಲ್ಲಿ ಎಸ್ಐಟಿ ರಚನೆ

ಹಿಂದೂಸ್ಥಾನೀ ಗಾಯಕ ಡಾ.ಅಶೋಕ ಹುಗ್ಗಣ್ಣವರ ಅವರ ಬಗ್ಗೆ .:
ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಎಸ್‌ಡಿಎಂ ಕಾಲೇಜಿನ ಸಂಗೀತ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಡಾ.ಅಶೋಕ ಹುಗ್ಗಣ್ಣವರ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ 1961ರ ಮೇ 1 ರಂದು ಜನಿಸಿದರು. ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಂಗೀತದಲ್ಲಿ ಸ್ನಾತಕೋತ್ತರ ಪದವಿ( ಎಂ.ಎ.)ಯಲ್ಲಿ ಚಿನ್ನದ ಪದಕ ಪಡೆದವರು, ನಂತರ ಸಂಗೀತ ರತ್ನ ಡಿಪ್ಲೊಮಾ ಪಡೆದಿದ್ದಾರೆ. ಅವರು ಸಸ್ಯಶಾಸ್ತ್ರದಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ಹಂಪಿ ವಿಶ್ವ ವಿದ್ಯಾಲಯದಿಂದ ಪಿ.ಎಚ್‌ಡಿ ಪಡೆದಿದ್ದು, ಆಕಾಶವಾಣಿ ಬಿ ಹೈಗ್ರೇಡ್‌ ಶಾಸ್ತ್ರೀಯ ಸಂಗೀತ ಕಲಾವಿದರು.
ಇವರು ಗ್ಯಾಲಿಯರ್‌ ಘರಾಣಾದ ಹೆಸರಾಂತ ಗಾಯಕರಾಗಿದ್ದ ದಿ.ಪಂ.ಲಿಂಗರಾಜ ಬುವಾ ಅವರಲ್ಲಿ 12 ವರ್ಷಗಳ ಕಾಲ ಸಂಗೀತ ಅಭ್ಯಾಸ ಮಾಡಿದವರು. ನಂತರ 10 ವರ್ಷಗಳ ಕಾಲ ದೇಶದ ದಿಗ್ಗಜ ಹಿಂದೂಸ್ಥಾನೀ ಗಾಯಕ ಧಾರವಾಡದ ಡಾ.ಬಸವರಾಜ ರಾಜಗುರು ಹಾಗೂ ನಂತರ ಕಿರಾಣಾ ಘರಾಣದ ಹೆರಾಂತ ಗಾಯಕ ಪಂಡಿತ ಸಂಗಮೇಶ ಗುರವ ಅವರಲ್ಲಿ ಸಂಗೀತ ಕಲಿತಿದ್ದಾರೆ.
ಖ್ಯಾಲ್‌, ಠುಮ್ರಿ, ಟಪ್ಪಾ, ರಂಗಗೀತೆ ಹಾಗೂ ಭಜನೆಗಳನ್ನು ಹಾಡುವುದರಲ್ಲಿ ಸಿದ್ಧಹಸ್ತರಾಗಿರುವ ಡಾ.ಅಶೋಕ ಹುಗ್ಗಣ್ಣವರು ಆಕಾಶವಾಣಿ ಹಾಗೂ ದೂರದರ್ಶನಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಪಾರ ಶಿಷ್ಯವೃಂದಕ್ಕೆ ಸಂಗೀತ ಕಲಿಸಿದ್ದಾರೆ.
ದೇಶದ ಹೆಸರಾಂತ ಸಂಗೀತ ಉತ್ಸವಗಳಾದ ಜೈಪುರ, ಗ್ವಾಲಿಯರ್‌, ದೆಹಲಿ, ಕೋಲ್ಕತ್ತಾ, ಧಾರವಾಡ, ಮುಂಬೈ, ಬೆಂಗಳೂರು, ಕುಂದಗೋಳ ಸೇರಿದಂತೆ ದೇಶದ ನಾನಾ ಉತ್ಸವಗಳಲ್ಲಿ ಹಿಂದೂಸ್ಥಾನೀ ಗಾಯನ ಕಛೇರಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಕಾಂಗ್ರೆಸ್‌ ಆಡಳಿತ ಬಂದ ನಂತರ ಅಪರಾಧಗಳು ಹೆಚ್ಚಳ, ವಿಧಾನಸೌಧದಲ್ಲೇ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ.. ಕಾಂಗ್ರೆಸ್‌ ಅನ್ನು ತಿರಸ್ಕರಿಸಬೇಡವೇ : ಶಿರಸಿಯಲ್ಲಿ ಮತದಾರರಿಗೆ ಮೋದಿ ಪ್ರಶ್ನೆ

ಪ್ರಶಸ್ತಿ-ಪುರಸ್ಕಾರಗಳು..
ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಕೊಡಮಾಡುವ ಕರ್ನಾಟಕ ಕಲಾಶ್ರೀ ಪುರಸ್ಕಾರ, ಅನನ್ಯ ಮನ್ಸೂಗೆ ಪ್ರಶಸ್ತಿ, ಗಾಯನ ಚತರ ಪ್ರಶಸ್ತಿ, ಕಲಾಜ್ಯೋತಿ ಪುರಸ್ಕಾರ ಹೀಗೆ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement