ಮುಂಬೈ: ಮಹಾರಾಷ್ಟ್ರದ ಒಟ್ಟು 246 ನಗರ ಪಾಲಿಕೆಗಳು ಹಾಗೂ 42 ನಗರ ಪಂಚಾಯತಗಳಿಗೆ ನಡೆದ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ. 246 ನಗರ ಪಾಲಿಕೆಗಳಲ್ಲಿ ಮಹಾಯುತಿ ಮೈತ್ರಿಕೂಟವು 207 ನಗರ ಪಾಲಿಕೆಗಳಲ್ಲಿ ಅಧ್ಯಕ್ಷ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮಹಾ ವಿಕಾಸ ಅಘಾಡಿಯನ್ನು ಒಟ್ಟು 44 ಕ್ಕೆ ಸೀಮಿತಗೊಳಿಸಿದೆ.
ರಾಜ್ಯ ಚುನಾವಣಾ ಆಯೋಗದ ಪ್ರಕಾರ, ಬಿಜೆಪಿ 117 ನಗರ ಪಾಲಿಕೆ ಅಧ್ಯಕ್ಷ ಸ್ಥಾನಗಳನ್ನು ಗೆದ್ದಿದೆ, ಶಿವಸೇನೆ 53 ಮತ್ತು ಎನ್ಸಿಪಿ 37ರಲ್ಲಿ ಗೆದ್ದಿದೆ. ಕಾಂಗ್ರೆಸ್ 28, ಎನ್ಸಿಪಿ (ಎಸ್ಪಿ) ಏಳು ಮತ್ತು ಶಿವಸೇನೆ (ಯುಬಿಟಿ) ಒಂಬತ್ತರಲ್ಲಿ ಗೆದ್ದಿದೆ.
ಚುನಾವಣಾ ಆಯೋಗದಲ್ಲಿ ನೋಂದಾಯಿಸಲಾದ ಪಕ್ಷಗಳು ನಾಲ್ಕು ಸ್ಥಾನಗಳನ್ನು ಗೆದ್ದರೆ, 28 ನಗರ ಪಾಲಿಕೆ ಅಧ್ಯಕ್ಷ ಸ್ಥಾನಗಳು ಮಾನ್ಯತೆ ಪಡೆಯದ ನೋಂದಾಯಿತ ಪಕ್ಷಗಳಿಗೆ ಹೋಗಿವೆ. ಐದು ಸ್ಥಾನಗಳನ್ನು ಸ್ವತಂತ್ರರು ಗೆದ್ದಿದ್ದಾರೆ.
ಸುಮಾರು ಒಂದು ದಶಕದ ನಂತರ ನಡೆದ ರಾಜ್ಯದ 264 ನಗರ ಪಾಲಿಕೆಗಳು ಮತ್ತು ನಗರ ಪಂಚಾಯತಗಳಿಗೆ ಡಿಸೆಂಬರ್ 2 ರಂದು ಮತದಾನ ನಡೆಯಿತು. ಡಿಸೆಂಬರ್ 20 ರಂದು ಸುಮಾರು 20 ಕ್ಕೂ ಹೆಚ್ಚು ಪುರಸಭೆಗಳು ಮತ್ತು ನಗರ ಪಂಚಾಯತಗಳಿಗೆ ಮತದಾನ ನಡೆಯಿತು. ಮತ ಎಣಿಕೆ ಭಾನುವಾರ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಯಿತು.
ಆರಂಭಿಕ ಹಂತದಿಂದಲೇ ಬಿಜೆಪಿ ನೇತೃತ್ವದ ಮೈತ್ರಿಕೂಟ ಮುನ್ನಡೆಯಲ್ಲಿತ್ತು. ಚುನಾವಣೆ ನಡೆದ ಒಟ್ಟು 6,859 ಕ್ಷೇತ್ರಗಳ ಪೈಕಿ ಬಿಜೆಪಿಯೊಂದೇ 3325 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಅದರ ಮೈತ್ರಿ ಪಕ್ಷಗಳಾದ ಶಿವಸೇನೆ ಸುಮಾರು 826 ಹಾಗೂ ಎನ್ಸಿಪಿ 411ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದೆ.
ವಿಪಕ್ಷಗಳ ಮೈತ್ರಿಕೂಟ ಮಹಾ ವಿಕಾಸ ಅಘಾಡಿಯ ಅಂಗಪಕ್ಷಗಳಾದ ಶಿವಸೇನೆ (ಉದ್ಭವ್ ಠಾಕ್ರೆ ಬಣ), ಕಾಂಗ್ರೆಸ್ ಹಾಗೂ ಎನ್ಸಿಪಿ (ಶರದ್ ಪವಾರ್ ಬಣ) ಕ್ರಮವಾಗಿ 170, 161 ಮತ್ತು 148 ಕ್ಷೇತ್ರಗಳಲ್ಲಿ ಮಾತ್ರ ಜಯಗಳಿಸಿವೆ ಅಥವಾ ಮುನ್ನಡೆಯಲ್ಲಿವೆ. ಇದರಿಂದ ನಿರೀಕ್ಷಿತ ಮಟ್ಟದ ಸಾಧನೆ ಮಾಡಲು ಮಹಾ ವಿಕಾಸ್ ಆಘಾಡಿಗೆ ಸಾಧ್ಯವಾಗಿಲ್ಲ ಎಂಬುದು ಸ್ಪಷ್ಟವಾಗಿದೆ.
ಮಹಾರಾಷ್ಟ್ರದಲ್ಲಿ ಕೃಷಿ ಬಿಕ್ಕಟ್ಟುಗಳ ಹಿನ್ನೆಲೆಯಲ್ಲಿ, ಮಹಿಳೆಯರು ಮತ್ತು ರೈತರ ಆರ್ಥಿಕ ಸಹಾಯದ ಕೊರತೆಯ ದೂರುಗಳಿಗಾಗಿ ಸರ್ಕಾರದ ಪ್ರಮುಖ ಕಲ್ಯಾಣ ಯೋಜನೆಯ ಭಾಗಶಃ ಪಾವತಿ ಮಾಡಿದ್ದರಿಂದ, ವಿಪಕ್ಷಗಳ ಮೈತ್ರಿಕೂಟವು ಬಲವಾದ ಹೋರಾಟವನ್ನು ನಡೆಸುವ ನಿರೀಕ್ಷೆಯಿತ್ತು. ಆದರೆ ಅದು ಸಂಭವಿಸಲಿಲ್ಲ.


ನಿಮ್ಮ ಕಾಮೆಂಟ್ ಬರೆಯಿರಿ