ನವದೆಹಲಿ : ಈ ವರ್ಷದ ಅಕ್ಟೋಬರ್ನಿಂದ ಡಿಸೆಂಬರ್ ಅವಧಿಯಲ್ಲಿ ಭಾರತದ ಕರಾವಳಿ ಪ್ರದೇಶಗಳಿಗೆ ಮೂರು ಪ್ರಬಲ ಚಂಡಮಾರುತಗಳು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಎಚ್ಚರಿಕೆ ನೀಡಿದೆ.
ಇಸ್ರೋ ವಿಜ್ಞಾನಿಗಳ ಮುನ್ಸೂಚನೆಯ ಪ್ರಕಾರ, ಉತ್ತರ ಹಿಂದೂ ಮಹಾಸಾಗರದಲ್ಲಿ ಈ ಅವಧಿಯಲ್ಲಿ ತೀವ್ರ ಉಷ್ಣವಲಯ ಚಂಡಮಾರುತಗಳು ರೂಪುಗೊಳ್ಳಬಹುದು. ಈ ಚಂಡಮಾರುತಗಳ ಒಟ್ಟು ತೀವ್ರತೆ ಕಳೆದ 44 ವರ್ಷಗಳ ಚಂಡಮಾರುತದ ತೀವ್ರತೆಯ ಸರಾಸರಿಗಿಂತ ಸುಮಾರು ಶೇ.83ರಷ್ಟು ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ. ಇದರಿಂದ ದೇಶದ ಪೂರ್ವ ಮತ್ತು ಪಶ್ಚಿಮ ಕರಾವಳಿ ರಾಜ್ಯಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಬಲಪಡಿಸುವ ಅಗತ್ಯ ಎದುರಾಗಿದೆ.
ವಿಜ್ಞಾನಿಗಳ ಪ್ರಕಾರ, ಈ ಚಂಡಮಾರುತಗಳ ಒಟ್ಟು ಶಕ್ತಿ ಸಾಮಾನ್ಯಕ್ಕಿಂತ ಹೆಚ್ಚು ಇರಲಿದೆ. ಇದನ್ನು ಅಳೆಯಲು ಬಳಸುವ ‘ಪವರ್ ಡಿಸಿಪೇಷನ್ ಇಂಡೆಕ್ಸ್’ (ಪಿಡಿಐ) ಎಂಬ ಮಾನದಂಡವು ಸುಮಾರು 13.06 × 10⁶ knots³ ಮಟ್ಟ ತಲುಪುವ ಸಾಧ್ಯತೆ ಇದೆ. 1982 ರಿಂದ 2025 ರವರೆಗಿನ ಸರಾಸರಿ ‘ಪವರ್ ಡಿಸಿಪೇಷನ್ ಇಂಡೆಕ್ಸ್’ (ಪಿಡಿಐ)ಮಟ್ಟ ಸುಮಾರು 7.15 × 10⁶ knots³ ಇತ್ತು. ಆದರೆ, 2026ರ ಅಕ್ಟೋಬರ್-ಡಿಸೆಂಬರ್ ಅವಧಿಗೆ ಈ ಮಟ್ಟವು ಬರೋಬ್ಬರಿ 13.06 × 10⁶ knots³ ತಲುಪುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಸರಳವಾಗಿ ಹೇಳುವುದಾದರೆ, ಚಂಡಮಾರುತಗಳ ಗಾಳಿಯ ವೇಗ, ಅವುಗಳ ಅವಧಿ ಮತ್ತು ಒಟ್ಟಾರೆ ವಿನಾಶಕಾರಿ ಸಾಮರ್ಥ್ಯ ಈ ಬಾರಿ ಹೆಚ್ಚಿರಬಹುದು ಎಂಬುದಾಗಿ ಇಸ್ರೋ ಮುನ್ಸೂಚನೆ ನೀಡಿದೆ.
ಈ ಮುನ್ಸೂಚನೆ ರೂಪಿಸಲು ಇಸ್ರೋ ವಿಜ್ಞಾನಿಗಳು ಕಳೆದ 40 ವರ್ಷಗಳ ಸಮುದ್ರ ಮತ್ತು ವಾತಾವರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಅಧ್ಯಯನ ಮಾಡಿದ್ದಾರೆ. ಜನವರಿಯಿಂದ ಆಗಸ್ಟ್ವರೆಗೆ ದಾಖಲಾಗಿರುವ ಸಮುದ್ರದ ಉಷ್ಣಾಂಶ, ಹವಾಮಾನ ಬದಲಾವಣೆಗಳು ಹಾಗೂ ಇತರ ವೈಜ್ಞಾನಿಕ ಅಂಶಗಳನ್ನು ವಿಶ್ಲೇಷಿಸಿ ಈ ಅಂದಾಜು ಮಾಡಿದ್ದಾರೆ.
ಸಾಮಾನ್ಯವಾಗಿ ಮುಂಗಾರು ನಂತರದ ಅವಧಿಯಲ್ಲಿ ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಚಟುವಟಿಕೆಗಳು ಹೆಚ್ಚುತ್ತವೆ. ಪ್ರಸ್ತುತ ಇಸ್ರೋ ಮುನ್ಸೂಚನೆಯಂತೆ ಪ್ರಬಲ ವಾಯುಭಾರ ಕುಸಿತ ಅಥವಾ ಚಂಡಮಾರುತಗಳು ರೂಪುಗೊಂಡರೆ ದೇಶದ ಪೂರ್ವ ಅಥವಾ ಪಶ್ಚಿಮದ ಕರಾವಳಿ ತೀರಗಳಲ್ಲಿ ಭಾರೀ ಗಾಳಿ-ಮಳೆ ಹಾಗೂ ಬೃಹತ್ ಗಾತ್ರದ ಅಲೆಗಳು ಅಪ್ಪಳಿಸುವ ಅಪಾಯವಿದೆ. ಪಶ್ಚಿಮ ಕರಾವಳಿ ಪ್ರದೇಶಗಳು ಅರಬ್ಬಿ ಸಮುದ್ರದಲ್ಲಿ ಉಂಟಾಗುವ ಸಮುದ್ರೀಯ ಬೆಳವಣಿಗೆಗಳ ಮೇಲೆ ತೀವ್ರ ನಿಗಾ ಇರಿಸಬೇಕಾಗಿದೆ.
ಆದರೆ ಚಂಡಮಾರುತಗಳು ಯಾವ ಪ್ರದೇಶಕ್ಕೆ ಅಪ್ಪಳಿಸುತ್ತವೆ ಅಥವಾ ಯಾವ ದಿನ ಸಂಭವಿಸುತ್ತವೆ ಎಂಬುದನ್ನು ಇಸ್ರೋ ಇನ್ನೂ ಸ್ಪಷ್ಟಪಡಿಸಿಲ್ಲ. ಆದರೂ ಈ ಮುನ್ಸೂಚನೆ ಕರಾವಳಿ ರಾಜ್ಯಗಳ ಸರ್ಕಾರಗಳು, ಬಂದರು ಆಡಳಿತಗಳು ಮತ್ತು ವಿಪತ್ತು ನಿರ್ವಹಣಾ ಸಂಸ್ಥೆಗಳಿಗೆ ಮೊದಲೇ ಸಿದ್ಧತೆ ನಡೆಸಲು ನೆರವಾಗಲಿದೆ.
ಈ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳು ತುರ್ತು ಪರಿಸ್ಥಿತಿ ನಿರ್ವಹಣಾ ಯೋಜನೆಗಳನ್ನು ಪರಿಶೀಲಿಸುತ್ತಿವೆ. ಕರಾವಳಿ ಪ್ರದೇಶದ ಜನರ ಸುರಕ್ಷತೆ, ಮೀನುಗಾರರಿಗೆ ಎಚ್ಚರಿಕೆ ನೀಡುವುದು, ಸಮುದ್ರದಲ್ಲಿರುವ ಹಡಗುಗಳ ರಕ್ಷಣೆ ಹಾಗೂ ಅಗತ್ಯವಿದ್ದರೆ ಮೀನುಗಾರಿಕೆ ನಿಷೇಧ ಜಾರಿ ಮಾಡುವಂತಹ ಕ್ರಮಗಳಿಗೆ ಸಿದ್ಧತೆ ನಡೆಸಲಾಗುತ್ತಿದೆ.
ತಜ್ಞರ ಅಭಿಪ್ರಾಯದಂತೆ, ಉತ್ತರ ಹಿಂದೂ ಮಹಾಸಾಗರದಲ್ಲಿ ಅಪಾಯದ ಮಟ್ಟ ಹೆಚ್ಚುತ್ತಿರುವ ಕಾರಣ ಕರಾವಳಿ ಪ್ರದೇಶದ ಜನರು ಹಾಗೂ ಆಡಳಿತಗಳು ಮುಂಚಿತವಾಗಿ ಸಜ್ಜಾಗಿರುವುದು ಅತ್ಯಂತ ಮುಖ್ಯವಾಗಿದೆ. ಸರಿಯಾದ ಸಮಯದಲ್ಲಿ ಎಚ್ಚರಿಕೆ ನೀಡುವುದು ಮತ್ತು ವೈಜ್ಞಾನಿಕ ಮುನ್ಸೂಚನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದರಿಂದ ಸಂಭವನೀಯ ಪ್ರಾಣಹಾನಿ ಮತ್ತು ಆಸ್ತಿನಷ್ಟವನ್ನು ಕಡಿಮೆ ಮಾಡಬಹುದು.


ನಿಮ್ಮ ಕಾಮೆಂಟ್ ಬರೆಯಿರಿ