ಸಿಯೋಲ್: ಕತ್ತಲ ರಾತ್ರಿ, ಕಾಲಡಿ ಇಟ್ಟರೆ ಸಿಡಿಯುವ ಮೈನ್ಫೀಲ್ಡ್ಗಳು, ರಾಡಾರ್ ಕಣ್ಣು ತಪ್ಪಿಸಿ ಸಾಗಬೇಕಾದ ಭೋರ್ಗರೆಯುವ ಸಮುದ್ರ, ಮತ್ತು ಗೋಣಿಚೀಲದೊಳಗೆ ಉಸಿರು ಬಿಗಿಹಿಡಿದು ಮಲಗಿರುವ ಕಂದಮ್ಮಗಳು… ಇದು ಯಾವುದೋ ರೋಮಾಂಚಕಾರಿ ಸಿನಿಮಾದ ದೃಶ್ಯವಲ್ಲ ; ಉತ್ತರ ಕೊರಿಯಾದ ಸರ್ವಾಧಿಕಾರಿ ಆಡಳಿತದಿಂದ ತಪ್ಪಿಸಿಕೊಳ್ಳಲು ಕಿಮ್ ಕುಟುಂಬ ನಡೆಸಿದ ನೈಜ ಹೋರಾಟ. ತಮ್ಮ ದಿವಂಗತ ತಂದೆಯ ಹತ್ತು ವರ್ಷಗಳ ಹಳೆಯ ಕನಸನ್ನು ಹೊತ್ತು, ಒಂಬತ್ತು ಜೀವಗಳು ಜವರಾಯನ ಜೊತೆ ಜೂಜಾಡುತ್ತಾ ಹಳದಿ ಸಮುದ್ರವನ್ನು ದಾಟಿದ ಆ ರೋಚಕ ಕಥೆ ಇಲ್ಲಿದೆ.
ಅದು ಮೇ 6, 2023ರ ಕತ್ತಲ ರಾತ್ರಿ. ಉತ್ತರ ಕೊರಿಯಾದ ಕರಾವಳಿಯಲ್ಲಿ ಕಿಮ್ ಕುಟುಂಬದ ಒಂಬತ್ತು ಸದಸ್ಯರು ಅತ್ಯಂತ ನಿಶ್ಯಬ್ದವಾಗಿ ಒಂದು ಸಣ್ಣ ಮೀನುಗಾರಿಕಾ ದೋಣಿಯನ್ನು ಹತ್ತಿದರು. ಹಳದಿ ಸಮುದ್ರದ ಅಲೆಗಳ ಮೇಲೆ ಸಾಗಿದ ಅವರು, ಕೇವಲ ಎರಡೇ ಗಂಟೆಗಳಲ್ಲಿ ಉತ್ತರ ಮತ್ತು ದಕ್ಷಿಣ ಕೊರಿಯಾ ನಡುವಿನ ವಿವಾದಿತ ಗಡಿರೇಖೆಯಾದ ‘ನಾರ್ದರ್ನ್ ಲಿಮಿಟ್ ಲೈನ್’ (NLL) ಅನ್ನು ದಾಟಿ ಸುರಕ್ಷಿತ ತೀರ ಸೇರಿದರು. ಯಾವುದೇ ಅಳತೆಗೋಲಿನಿಂದ ನೋಡಿದರೂ ಉತ್ತರ ಕೊರಿಯಾದ ಸರ್ವಾಧಿಕಾರಿ ಆಡಳಿತದ ವಿಪರೀತ ಭದ್ರತಾ ಕವಚ ದಾಟಿ ಹೋದ ಇದು ಒಂದು ಅಸಾಧಾರಣ ಸಾಹಸವಾಗಿತ್ತು.
ಈ ಅಪಾಯಕಾರಿ ಪಲಾಯನದ ಯೋಜನೆ ಇಂದಿನದಲ್ಲ; ಹತ್ತು ವರ್ಷಗಳ ಹಿಂದೆಯೇ ಇವರ ತಂದೆ ಸಮುದ್ರ ಮಾರ್ಗದ ಮೂಲಕ ತಪ್ಪಿಸಿಕೊಳ್ಳುವ ಆಲೋಚನೆಯನ್ನು ಮೊದಲು ಪ್ರಸ್ತಾಪಿಸಿದ್ದರು. ಆದರೆ ಆ ಯಶಸ್ಸನ್ನು ನೋಡಲು ಅವರು ಬದುಕಿರಲಿಲ್ಲ. ತಂದೆಯ ಆಸೆಯನ್ನು ಈಡೇರಿಸಲು ನಿರ್ಧರಿಸಿದ ಸಹೋದರರಾದ ಕಿಮ್ ಇಲ್-ಹ್ಯೋಕ್ ಮತ್ತು ಕಿಮ್ ಯಿ-ಹ್ಯೋಕ್, ತಾವು ಹೊರಟ ರಾತ್ರಿ ದೋಣಿಯಲ್ಲಿ ತಮ್ಮ ತಂದೆಯ ಚಿತಾಭಸ್ಮವನ್ನು ಹೊತ್ತೊಯ್ದಿದ್ದರು.
ಈ ಸಾಹಸಕ್ಕಾಗಿ ಕಿಮ್ ಕುಟುಂಬವು ಅತ್ಯಂತ ವ್ಯವಸ್ಥಿತವಾಗಿ ಸಿದ್ಧತೆ ನಡೆಸಿತ್ತು. ಕಿರಿಯ ಸಹೋದರ ಕಿಮ್ ಯಿ-ಹ್ಯೋಕ್ ಕರಾವಳಿ ಪ್ರದೇಶಕ್ಕೆ ವಲಸೆ ಹೋಗಿ ಮೀನುಗಾರಿಕೆಯನ್ನು ಕಲಿತಿದ್ದಲ್ಲದೆ, ಸ್ವಂತ ದೋಣಿಯನ್ನೂ ಖರೀದಿಸಿದ್ದರು. ಸ್ಥಳೀಯ ಭದ್ರತಾ ಅಧಿಕಾರಿಗಳಿಗೆ ಲಂಚ ನೀಡುವ ಮೂಲಕ ಅವರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಂಡಿದ್ದರು. ಗಡಿಯಲ್ಲಿನ ಗಸ್ತು ತಿರುಗುವ ಮಾದರಿಗಳನ್ನು ಅಭ್ಯಸಿಸಲು ಮತ್ತು ಪ್ರತಿಕ್ರಿಯೆಯ ಸಮಯವನ್ನು ಲೆಕ್ಕ ಹಾಕಲು ಇವರು ಪದೇ ಪದೇ ಮೀನುಗಾರರ ಸೋಗಿನಲ್ಲಿ ಗಡಿ ಸಮೀಪಕ್ಕೆ ಹೋಗಿ ಬರುತ್ತಿದ್ದರು. ಪ್ರತಿ ಬಾರಿ ವಾಪಸ್ ಬಂದಾಗಲೂ, ಅದು ಮುಂದೊಂದು ದಿನ ಎಂದಿಗೂ ವಾಪಸ್ ಬರದ ಹಾದಿಗೆ ಭದ್ರ ಬುನಾದಿಯಾಗುತ್ತಿತ್ತು.
ಆ ರಾತ್ರಿಯ ಭಯಾನಕ ಕ್ಷಣಗಳು
ತಪ್ಪಿಸಿಕೊಳ್ಳಲು ಅವರು ಆರಿಸಿಕೊಂಡ ರಾತ್ರಿ ವಸಂತ ಕಾಲದ ಬಿರುಗಾಳಿ ಬೀಸುತ್ತಿತ್ತು. ಇದರಿಂದಾಗಿ ರಾಡಾರ್ ದೃಶ್ಯಾವಳಿಗಳು ಮಸುಕಾಗಿದ್ದವು ಮತ್ತು ಗಸ್ತು ಕಾರ್ಯ ನಿಧಾನವಾಗಿತ್ತು. ಆ ರಾತ್ರಿ ಕಾವಲುಗಾರರಿಗೆ ಲಂಚ ನೀಡಿದ ಸಹೋದರರು ದೋಣಿಯೊಂದಿಗೆ ಪ್ರಯಾಣ ಬೆಳೆಸಿದರು.
ದೋಣಿ ಹತ್ತುವ ಮೊದಲು ಕುಟುಂಬದ ಮಹಿಳೆಯರು (ಐದು ತಿಂಗಳ ಗರ್ಭಿಣಿಯಾಗಿದ್ದ ಕಿಮ್ ಇಲ್-ಹ್ಯೋಕ್ ಅವರ ಪತ್ನಿ ಸೇರಿದಂತೆ) ಕಾಲ್ನಡಿಗೆಯಲ್ಲಿ ಮೈನ್ಫೀಲ್ಡ್ (ಸಿಡಿಗುಂಡುಗಳ ಪ್ರದೇಶ) ದಾಟಬೇಕಾಯಿತು. ಆ ಹಾದಿಯನ್ನು ಅವರು ಮೊದಲೇ ನೆನಪಿಟ್ಟುಕೊಂಡಿದ್ದರು. ಇನ್ನು ನಾಲ್ಕು ಮತ್ತು ಆರು ವರ್ಷದ ಇಬ್ಬರು ಸಣ್ಣ ಮಕ್ಕಳನ್ನು ಗೋಣಿಚೀಲದಲ್ಲಿ ಅಡಗಿಸಿ ಇಡಲಾಗಿತ್ತು ಮತ್ತು ಪ್ರಯಾಣದುದ್ದಕ್ಕೂ ಅವರಿಗೆ ಯಾವುದೇ ಕಾರಣಕ್ಕೂ ಮಾತನಾಡದಂತೆ ಸೂಚಿಸಲಾಗಿತ್ತು.
ರಾಡಾರ್ ಕಣ್ತಪ್ಪಿಸಿ ಸಿಯೋಲ್ ಕಡೆಗೆ
ದೋಣಿಯು ರಾಡಾರ್ನಲ್ಲಿ ಕೇವಲ ತೇಲುವ ಕಸದಂತೆ ಕಾಣಿಸಿಕೊಳ್ಳಲಿ ಎಂಬ ಕಾರಣಕ್ಕೆ ನಡಿಗೆಯ ವೇಗಕ್ಕಿಂತಲೂ ಕಡಿಮೆ ವೇಗದಲ್ಲಿ ದೋಣಿ ನಿಧಾನವಾಗಿ ಸಾಗುತ್ತಿತ್ತು. ದೋಣಿಯಲ್ಲಿ ಯಾರೂ ಮಾತನಾಡುತ್ತಿರಲಿಲ್ಲ. “ಎಂಜಿನ್ ಶಬ್ದಕ್ಕಿಂತಲೂ ನನ್ನ ಎದೆಯ ಬಡಿತವೇ ನನಗೆ ಜೋರಾಗಿ ಕೇಳಿಸುತ್ತಿತ್ತು” ಎಂದು ಕಿಮ್ ಇಲ್-ಹ್ಯೋಕ್ ನಂತರ ಸಿಎನ್ಎನ್ (CNN) ಗೆ ನೀಡಿದ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.
ಕೊನೆಗೂ ದಕ್ಷಿಣ ಕೊರಿಯಾದ ಯಿಯೊನ್ಪ್ಯೊಂಗ್ ದ್ವೀಪ ಬೆಳಕಿನಿಂದ ಮಿನುಗುತ್ತಿರುವುದು ಕಂಡರು. ಆಗ ದಕ್ಷಿಣ ಕೊರಿಯಾದ ನೌಕಾಪಡೆಯ ಹಡಗು ಇವರನ್ನು ಸಮೀಪಿಸಿತು. ಕುಟುಂಬವು ತಮ್ಮ ಗುರುತನ್ನು ಹೇಳಿದ ತಕ್ಷಣ ಅವರ ಸುದೀರ್ಘ ಸಂಕಷ್ಟ ಅಂತ್ಯಗೊಂಡಿತು.
ನಗು ಮತ್ತು ಅಳು: ಸ್ವಾತಂತ್ರ್ಯದ ಬೆಲೆ
ನಾಲ್ಕು ತಿಂಗಳ ನಂತರ ಸಿಯೋಲ್ನಲ್ಲಿ ಕಿಮ್ ಇಲ್-ಹ್ಯೋಕ್ ಅವರ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಮಗುವಿನ ಮೊದಲ ಜನ್ಮದಿನವನ್ನು ಆಚರಿಸಲು ಕುಟುಂಬವು ಒಂದಾದಾಗ ಅದು ಅತ್ಯಂತ ಸಂತೋಷದ ಕ್ಷಣವಾಗಿತ್ತು. ಆದರೆ ಆ ಸಂತೋಷ ಬಹಳ ಕಾಲ ಉಳಿಯಲಿಲ್ಲ.
ತಪ್ಪಿಸಿಕೊಳ್ಳಲು ಹಗಲಿರುಳು ಶ್ರಮಿಸಿದ್ದ ಕಿಮ್ ಯಿ-ಹ್ಯೋಕ್, ದಕ್ಷಿಣ ಕೊರಿಯಾ ಸೇರಿದ ಎರಡು ತಿಂಗಳ ನಂತರ ಸ್ಕೂಬಾ ಡೈವಿಂಗ್ ಅಪಘಾತದಲ್ಲಿ ನಿಧನರಾದರು. ಅವರು ಸ್ವಾತಂತ್ರ್ಯದ ಗಾಳಿಯನ್ನು ಉಸಿರಾಡಿದ್ದು ಕೇವಲ 19 ತಿಂಗಳುಗಳು ಮಾತ್ರ.
ಹೊಸ ಜೀವನದ ಭರವಸೆ
ಪ್ರಸ್ತುತ ಕಿಮ್ ಇಲ್-ಹ್ಯೋಕ್ ದಕ್ಷಿಣ ಕೊರಿಯಾದಲ್ಲಿ ಶೆಫ್ (Chef) ಆಗಿ ತರಬೇತಿ ಪಡೆಯುತ್ತಿದ್ದಾರೆ ಮತ್ತು ಉತ್ತರ ಕೊರಿಯಾದ ಕರಾಳ ಜೀವನದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುತ್ತಿದ್ದಾರೆ. ಮಾರ್ಚ್ 2026 ರಲ್ಲಿ ಅವರು ಎರಡನೇ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ. “ನಾನು ಅತ್ಯಂತ ಅದೃಷ್ಟವಂತರಲ್ಲಿ ಒಬ್ಬನೆಂದು ಭಾವಿಸುತ್ತೇನೆ” ಎಂದು ಅವರು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ