ವಿಜಯಪುರ: ಜಿಲ್ಲೆಯ ಭೂತನಾಳ ಕೆರೆಯಲ್ಲಿ ಮಹಿಳೆ ಹಾಗೂ ಆಕೆಯ ಐವರು ಮಕ್ಕಳ ಮೃತದೇಹಗಳು ಪತ್ತೆಯಾಗಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದ್ದರೂ, ಸಾವಿನ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಶೋಭಾ (35) ಹಾಗೂ ಆಕೆಯ ಐವರು ಮಕ್ಕಳಾದ ವಿದ್ಯಾ (15), ಸುವರ್ಣಾ (13), ತಿಪ್ಪರಾಯ (12), ಸಾನಿಕಾ (10) ಮತ್ತು ವಿಕಾಸ್ (6) ಎಂದು ಗುರುತಿಸಲಾಗಿದೆ. ಈ ಎಲ್ಲರ ಮೃತದೇಹಗಳು ಆದರ್ಶ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಭೂತನಾಳ ಕೆರೆಯಲ್ಲಿ ಪತ್ತೆಯಾಗಿವೆ.
ಬುಧವಾರ ಬೆಳಗ್ಗೆ ಸುಮಾರು 8:45 ಗಂಟೆಗೆ ಕೆರೆಯಲ್ಲಿ ಆರು ಮೃತದೇಹಗಳು ತೇಲುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರಕಿತ್ತು. ತಕ್ಷಣವೇ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಹೊರತೆಗೆದರು.
ಆಗಸ್ಟ್ 24ರಂದು ಶೋಭಾ ಅವರ ಪತಿ ಮಲ್ಲಿಕಾರ್ಜುನ ಜಲಗೇರಿ ಅವರು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಕುಟುಂಬದ ವಿಚಾರವಾಗಿ ಉಂಟಾದ ಜಗಳದ ಬಳಿಕ ಶೋಭಾ ಮಕ್ಕಳೊಂದಿಗೆ ಮನೆಯಿಂದ ಹೊರಟು ಹೋಗಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದರು.
ಪೊಲೀಸರ ಮಾಹಿತಿ ಪ್ರಕಾರ, ಶೋಭಾ ಅವರು ಆಗಸ್ಟ್ 24ರಂದು ಬೆಳಿಗ್ಗೆ ಸುಮಾರು 6 ಗಂಟೆಗೆ ನಾಲ್ವರು ಮಕ್ಕಳೊಂದಿಗೆ ಮನೆಯಿಂದ ಹೊರಟಿದ್ದರು. ಬಳಿಕ ವಸತಿ ನಿಲಯಕ್ಕೆ ತೆರಳಿ, ಅಲ್ಲಿ ವಾಸಿಸುತ್ತಿದ್ದ ತನ್ನ ಕಿರಿಯ ಮಗನನ್ನೂ ಕರೆದುಕೊಂಡು ಹೋಗಿದ್ದರು. ಆ ಮಗುವಿಗೆ ಶ್ರವಣ ದೋಷ (ಕಿವಿ ಕೇಳದ ಸಮಸ್ಯೆ) ಇತ್ತು ಎಂದು ತಿಳಿದುಬಂದಿದೆ.
ಈ ಕುರಿತು ಮಾಹಿತಿ ನೀಡಿದ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ವಿಧಿವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ವರದಿ, ಮರಣೋತ್ತರ ಪರೀಕ್ಷೆ ಹಾಗೂ ಇತರ ತನಿಖಾ ವರದಿಗಳು ಬಂದ ಬಳಿಕವೇ ತಿಳಿಯಲಿದೆ” ಎಂದು ತಿಳಿಸಿದ್ದಾರೆ.
ಮೃತ ಮಕ್ಕಳಲ್ಲಿ ಮೂವರು ಬಾಲಕಿಯರು ಹಾಗೂ ಇಬ್ಬರು ಬಾಲಕರು ಇದ್ದು, ಅವರ ವಯಸ್ಸು 6ರಿಂದ 15 ವರ್ಷಗಳ ನಡುವೆ ಇತ್ತು.
ಮೃತದೇಹಗಳು ಗಾಳಿ ಮತ್ತು ಅಲೆಗಳ ಪರಿಣಾಮವಾಗಿ ಕೆರೆಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ತೇಲಿ ಬಂದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಅಲ್ಲದೆ, ಪ್ರಕರಣದ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
“ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಎಫ್ಎಸ್ಎಲ್ ವರದಿ ಅತ್ಯಂತ ಮಹತ್ವದ್ದಾಗಿದೆ. ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರನ್ನೂ ವಿಚಾರಣೆ ನಡೆಸಲಾಗುವುದು. ತನಿಖೆಯ ವೇಳೆ ಹೊರಬರುವ ಪ್ರತಿಯೊಂದು ಮಾಹಿತಿಯನ್ನೂ ಪರಿಶೀಲಿಸಿ ಸತ್ಯಾಂಶ ತಿಳಿದುಕೊಳ್ಳಲಾಗುವುದು” ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಶೋಭಾ ಅವರ ಪತಿ ಮಲ್ಲಿಕಾರ್ಜುನ ಜಲಗೇರಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಜಯಪುರದ ಬಿಎಲ್ಡಿಇ ಆಸ್ಪತ್ರೆಗೆ ರವಾನಿಸಲಾಗಿದ್ದು, ವರದಿಗಳಿಗಾಗಿ ಪೊಲೀಸರು ಕಾಯುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ