ದೇಶಿ ಕ್ರಿಕೆಟ್ ಋತುವಿನ ಆರಂಭಕ್ಕೂ ಮುನ್ನ ಮುಂಬೈ ಮತ್ತು ಮಹಾರಾಷ್ಟ್ರ ನಡುವಿನ ಅಭ್ಯಾಸ ಪಂದ್ಯದಲ್ಲಿ ಪೃಥ್ವಿ ಶಾ (Prithvi Shaw) ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿ ಶತಕವನ್ನು ಸಿಡಿಸಿದರೂ ಬೇರೆ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.
ಮುಂಬೈ ತಂಡ ತೊರೆದ ನಂತರ ಪೃಥ್ವಿ ಶಾ ಮಹಾರಾಷ್ಟ್ರ ಪರ ದೇಶಿ ಕ್ರಿಕೆಟ್ ಆಡುತ್ತಿದ್ದಾರೆ. ಆದಾಗ್ಯೂ, ಈ ಪಂದ್ಯದ ಸಮಯದಲ್ಲಿ ಶಾ ತಮ್ಮ ಹಿಂದಿನ ತಂಡದ (ಮುಂಬೈ) ಮಾಜಿ ಸಹ ಆಟಗಾರರ ಜೊತೆ ಮೈದಾನದಲ್ಲಿ ಜಗಳಕ್ಕಿಳಿದು ಸುದ್ದಿಯಲ್ಲಿದ್ದಾರೆ ಅವರು ಮುಶೀರ್ ಖಾನ್ ಸೇರಿದಂತೆ ಮುಂಬೈ ಆಟಗಾರರ ಜೊತೆ ಮಾತಿನ ವಾಗ್ವಾದ ನಡೆಸುತ್ತಿರುವ ವೀಡಿಯೊ ವೈರಲ್ ಆಗಿದೆ.
ಈ ಪಂದ್ಯದಲ್ಲಿ ಪೃಥ್ವಿ ಶಾ ಅವರನ್ನು ಮುಶೀರ್ ಖಾನ್ ಔಟ್ ಮಾಡಿದರು. ಪೃಥ್ವಿ ಶಾ, ಮುಶೀರ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಹೋಗಿ, ಬೌಂಡರಿ ಲೈನ್ನಲ್ಲಿ ಕ್ಯಾಚಿತ್ತು ವಿಕೆಟ್ ಒಪ್ಪಿಸಿದ್ದರು. ಈ ವೇಳೆ ಮೈದಾನದಲ್ಲಿ ಮುಶೀರ್ ಖಾನ್ ಮತ್ತು ಪೃಥ್ವಿ ಶಾ ನಡುವೆ ವಾಗ್ವಾದ ನಡೆಯಿತು. ಮುಂಬೈ ಆಟಗಾರರು ಶಾ ಅವರನ್ನು ಸುತ್ತುವರೆದರು.
ಈ ವೇಳೆ ಕಿಟ್ ಸಂಖ್ಯೆ ‘100’ ಧರಿಸಿದ್ದ ಶಾ, ಮುಂಬೈ ಆಟಗಾರರೊಬ್ಬರ ಮೇಲೆ ತನ್ನ ಬ್ಯಾಟ್ ಬೀಸಿದ್ದು ಕಂಡುಬಂದಿತು, ಆದರೆ ಅವರ ಬ್ಯಾಟಿಂಗ್ ಜೊತೆಗಾರ ಇದನ್ನು ತಡೆಯಲು ಪ್ರಯತ್ನಿಸಿದರು. ಅವರು ಬೀಸಿದ ಬ್ಯಾಟ್ ಯಾರಿಗೂ ತಗುಲಲಿಲ್ಲ. ಬರಲಿಲ್ಲ. ನಂತರ ಕ್ಯಾಮೆರಾ ಶಾ ಅವರನ್ನು ಮುಂಬೈ ಫೀಲ್ಡರ್ಗಳು ಸುತ್ತುವರೆದಿರುವುದನ್ನು ಸೆರೆಹಿಡಿಯಿತು, ಅದೇ ಸಮಯದಲ್ಲಿ ಅಂಪೈರ್ಗಳು ಅವರನ್ನು ದೂರ ಕರೆದೊಯ್ದರು. ನಂತರ, ಪೃಥ್ವಿ ಶಾ ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗುತ್ತಿದ್ದಾಗ, ಅವರು ಮುಂಬೈ ತಂಡದ ಮಾಜಿ ನಾಯಕ ಸಿದ್ಧೇಶ ಲಾಡ್ ಅವರೊಂದಿಗೆ ವಾಗ್ವಾದ ನಡೆಸಿದರು. ಈ ವೇಳೆಯೂ ಅಂಪೈರ್ಗಳು ಮಧ್ಯೆ ಪ್ರವೇಶಿಸಿ ಆಟಗಾರರನ್ನು ತಣ್ಣಗಾಗಿಸಿದರು.
ಪೃಥ್ವಿ ಶಾ ತಮ್ಮ ಹಿಂದಿನ ತಂಡದ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು ಹಾಗೂ ಶತಕವನ್ನು ಬಾರಿಸಿದರು. ಅವರು 220 ಎಸೆತಗಳನ್ನು ಎದುರಿಸಿ 21 ಬೌಂಡರಿ ಮತ್ತು ಮೂರು ಸಿಕ್ಸರ್ಗಳನ್ನು ಒಳಗೊಂಡಂತೆ 181 ರನ್ಗಳನ್ನು ಬಾರಿಸಿದರು.
ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಬೇಕೆಂಬ ಗುರಿಯನ್ನು ಹೊಂದಿರುವ ಅವರು, ಈ ಬಾರಿ ದೇಶಿ ಕ್ರಿಕೆಟ್ನಲ್ಲಿ ರನ್ ಹೊಳೆ ಹರಿಸಲು ಎದುರು ನೋಡುತ್ತಿದ್ದಾರೆ. ಆ ಮೂಲಕ ರಾಷ್ಟ್ರೀಯ ತಂಡಕ್ಕೆ ಮರಳುವ ಯೋಜನೆಯಲ್ಲಿದ್ದಾರೆ. 2018 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಪೃಥ್ವಿ ಶಾ ಶತಕ ಬಾರಿಸಿದ್ದರು.
ಪೃಥ್ವಿ ಶಾ ಅವರು ಭಾರತ ತಂಡವನ್ನು ಐದು ಟೆಸ್ಟ್ ಪಂದ್ಯಗಳು ಹಾಗೂ ಆರು ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಶಿಸ್ತು ಹಾಗೂ ಫಿಟ್ನೆಸ್ ಸಮಸ್ಯೆಯ ಕಾರಣ ಕಳೆದ ಸೀಸನ್ನಲ್ಲಿ ಪೃಥ್ವಿ ಶಾ ಅವರನ್ನು ಮುಂಬೈ ತಂಡದಿಂದ ತೆಗೆಯಲಾಗಿತ್ತು. ಕಳೆದ ಆವೃತ್ತಿಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಫೈನಲ್ನಲ್ಲಿ ಮಧ್ಯ ಪ್ರದೇಶ ವಿರುದ್ಧ ಕೊನೆಯ ಬಾರಿ ಮುಂಬೈ ತಂಡವನ್ನು ಪೃಥ್ವಿ ಶಾ ಪ್ರತಿನಿಧಿಸಿದ್ದರು. ಈ ಪಂದ್ಯದ ಮಧ್ಯ ಪ್ರದೇಶ ವಿರುದ್ಧ ಮುಂಬೈ ಗೆದ್ದು ಚಾಂಪಿಯನ್ ಆಗಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ