ಬೆಂಗಳೂರು:ಜೊಮ್ಯಾಟೊ (Zomato) ಸಂಸ್ಥೆಯ ಬೆಂಗಳೂರಿನ ಗೋದಾಮೊಂದರ ಮೇಲ್ವಿಚಾರಕ ಸ್ಥಳೀಯ ಸಿಬ್ಬಂದಿಗೆ “ಹಿಂದಿ ಕಲಿಯಿರಿ, ಇಲ್ಲದಿದ್ದರೆ ಕೆಲಸ ಬಿಟ್ಟು ಹೋಗಿ” ಎಂದು ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ ಅಶೋಕ ಎಂಬ ಹೆಸರಿನ ಗೋದಾಮು ಮೇಲ್ವಿಚಾರಕ ಸಿಬ್ಬಂದಿಯೊಂದಿಗೆ ಮಾತನಾಡುತ್ತಿರುವುದು ಕಾಣಿಸುತ್ತದೆ. ಆಂಧ್ರ ಪ್ರದೇಶ ಮೂಲದವರಾಗಿರುವ ಅಶೋಕ, “ನನಗೆ ಕನ್ನಡ ಗೊತ್ತಿಲ್ಲ. ನಾನು ಹಿಂದಿಯಲ್ಲೇ ಮಾತನಾಡುತ್ತೇನೆ. ಇಲ್ಲಿ ನನ್ನೊಂದಿಗೆ ಕೆಲಸ ಮಾಡಬೇಕಾದರೆ ಹಿಂದಿ ಕಲಿಯಬೇಕು. ನೀವು ಕೆಲಸ ಬಿಟ್ಟು ಹೋದರೂ ಪರವಾಗಿಲ್ಲ” ಎಂದು ಸಿಬ್ಬಂದಿಗೆ ಹೇಳುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.
ಇದೇ ವೇಳೆ ಸಿಬ್ಬಂದಿಯೊಬ್ಬರು “ಇದು ಕರ್ನಾಟಕ” ಎಂದು ಹೇಳಿದಾಗ, ಅದಕ್ಕೆ ಪ್ರತಿಕ್ರಿಯಿಸಿದ ಅಶೋಕ “ಆದರೆ ಏನು? ನಾನು ಹಿಂದಿಯಲ್ಲೇ ಮಾತನಾಡುತ್ತೇನೆ” ಎಂದು ಜೋರಾಗಿ ಉತ್ತರಿಸಿರುವುದು ಕಂಡುಬಂದಿದೆ. ಬಳಿಕವೂ ಅವರು “ಹಿಂದಿ ಕಲಿಯಿರಿ, ಇಲ್ಲವಾದರೆ ಕೆಲಸ ಬಿಟ್ಟು ಹೋಗಿ” ಎಂದು ಸಿಬ್ಬಂದಿಗೆ ಹೇಳಿರುವುದು ವಿಡಿಯೊದಲ್ಲಿ ಕೇಳಿಬಂದಿದೆ.
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಘಟನೆಯ ವಿರುದ್ಧ ಮದನಾಯಕನಹಳ್ಳಿ ಪೊಲೀಸ್ ಠಾಣೆಗೆ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು.
ಇದರ ನಡುವೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಜೋಮ್ಯಾಟೊ ಗೋದಾಮಿನ ಎದುರು ಪ್ರತಿಭಟನೆ ನಡೆಸಿ, ಅಶೋಕ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿದರು. ಈ ಸಂಬಂಧ ಅಶೋಕ ವಿರುದ್ಧ ಅಧಿಕೃತ ದೂರು ಹಾಗೂ ಪೊಲೀಸ್ ಮನವಿಯನ್ನೂ ಸಲ್ಲಿಸಲಾಯಿತು. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಸ್ವಲ್ಪ ಸಮಯದವರೆಗೆ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಅಶೋಕ ನಂತರಕ ವಿಡಿಯೊ ಬಿಡುಗಡೆ ಮಾಡಿ, ಕೈಮುಗಿದು ಕನ್ನಡದಲ್ಲೇ ಸಾರ್ವಜನಿಕ ಕ್ಷಮೆಯಾಚನೆ ಮಾಡಿದರು. ತಮ್ಮ ಹೇಳಿಕೆಯಿಂದ ಉಂಟಾದ ನೋವಿಗೆ ವಿಷಾದ ವ್ಯಕ್ತಪಡಿಸಿದ ಅವರು, ಇಂತಹ ತಪ್ಪು ಮತ್ತೆ ಮರುಕಳಿಸದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.


ನಿಮ್ಮ ಕಾಮೆಂಟ್ ಬರೆಯಿರಿ