ಸ್ಥಳೀಯ ಸಂಸ್ಥೆಗಳ ಚುನಾವಣೆ : ಒಬಿಸಿಗೆ ಶೇ.33 ಮೀಸಲಾತಿ ಕಲ್ಪಿಸಲು ನ್ಯಾ.ಭಕ್ಸವತ್ಸಲ ಆಯೋಗ ಶಿಫಾರಸು

ಬೆಂಗಳೂರು: ರಾಜ್ಯದ ಎಲ್ಲ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ‘ಎ’ ಮತ್ತು ‘ಬಿ’ ಪ್ರವರ್ಗದಡಿ ಬರುವ ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೂರನೇ ಒಂದು ಭಾಗ ಅಥವಾ ಶೇ.33ರಷ್ಟು ಮೀಸಲಾತಿ ನೀಡುವುದು ಸೂಕ್ತ ಎಂದು ನ್ಯಾಯಮೂರ್ತಿ ಭಕ್ತವತ್ಸಲ ಅವರ ನೇತೃತ್ವದ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಿದೆ. .
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಸಂಬಂಧ ಸ್ವತಂತ್ರ ಆಯೋಗ ರಚಿಸಿ ವರದಿ ಪಡೆಯಬೇಕು ಎಂದು ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಇದು ಎಲ್ಲ ರಾಜ್ಯಗಳಿಗೂ ಅನ್ವಯಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ಸಂಬಂಧ ಆಯೋಗ ರಚಿಸಲು ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಮೇ 7ರಂದು ನ್ಯಾಯಮೂರ್ತಿ ಭಕ್ತವತ್ಸಲ ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಲಾಗಿತ್ತು. ಆಯೋಗವು ಗುರುವಾರ ಮುಖ್ಯಮಂತ್ರಿ ಅವರಿಗೆ ವರದಿ ಸಲ್ಲಿಸಿದ್ದು, ಒಬಿಸಿ ಮೀಸಲಾತಿಗೆ ಸಂಬಂಧಿಸಿದಂತೆ ಅನೇಕ ಅಂಶಗಳನ್ನು ಉಲ್ಲೇಖಿಸಿದೆ.

ಮುಖ್ಯವಾಗಿ ಹಿಂದುಳಿದ ವರ್ಗಗಳಿಗೆ ಶೇ.33ರಷ್ಟು ರಾಜಕೀಯ ಮೀಸಲಾತಿ ಮುಂದುವರೆಸುವುದರೊಂದಿಗೆ ಒಬಿಸಿ ಮತ್ತು ಎಸ್ಸಿ​-ಎಸ್ಟಿ ಸಮುದಾಯಗಳಿಗೆ ನೀಡುವ ಮೀಸಲಾತಿ ಪ್ರಮಾಣ ಶೇ.50ರಷ್ಟು ಮೀರಬಾರದು ಎಂದು ಆಯೋಗ ಸೂಚಿಸಿದೆ.
ರಾಜ್ಯದಲ್ಲಿ 1996, 2001, 2010 ಮತ್ತು 2015ರಲ್ಲಿ ನಡೆದ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಸಂಬಂಧ ಅವಲೋಕಿಸಿದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಬಿಸಿ ವ್ಯಾಪ್ತಿಯ ಪ್ರವರ್ಗ ಎ ಮತ್ತು ಬಿ ಅಡಿ ಬರುವ ಜಾತಿ, ಸಮುದಾಯದ ಜನರು ರಾಜ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇಂದಿಗೂ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಒಬಿಸಿ ಅಡಿ ಬರುವ ಸಮುದಾಯಗಳಿಗೆ (ಅಲ್ಪಸಂಖ್ಯಾತರನ್ನೂ ಒಳಗೊಂಡು) ಒಟ್ಟು ಸ್ಥಾನಗಳ 1/3 ಭಾಗ ಅಥವಾ ಶೇ.33ರಷ್ಟು ಮೀಸಲಾತಿ ನೀಡುವುದು ಸಮಂಜಸವಾಗಿದೆ ಎಂದು ಹೇಳಿದೆ.

ಪ್ರಮುಖ ಸುದ್ದಿ :-   ಗೋಕರ್ಣ ಮಹಾಗಣಪತಿ ದೇವರ ಸ್ಪರ್ಶ ದರ್ಶನಕ್ಕೆ ನಿರ್ಬಂಧ

ಭಾರತದ ಸಂವಿಧಾನದಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯಗಳ ಪಟ್ಟಿಯನ್ನು ಗುರುತಿಸುವ ಆರ್ಟಿಕಲ್‌ 15(4) ಮತ್ತು 16(4)ರಲ್ಲೇ ಆ ಸಮುದಾಯಗಳಿಗೆ ರಾಜಕೀಯ ಮೀಸಲಾತಿ ಅಳವಡಿಸಲಾಗಿದೆ. ರಾಜಕೀಯ ಮೀಸಲಾತಿಗಾಗಿ ಪ್ರತ್ಯೇಕ ಉಲ್ಲೇಖವನ್ನು ನೀಡಲಾಗಿಲ್ಲ ಎಂಬುದನ್ನು ಸರ್ಕಾರ ಗಮನಿಸಬೇಕು. ಈ ಆಧಾರದ ಮೇಲೆ ರಾಜ್ಯದಲ್ಲಿ ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿ ಉದ್ದೇಶಕ್ಕಾಗಿ ಪಟ್ಟಿಮಾಡಿರುವ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.44ರಷ್ಟಿರುವ ಒಬಿಸಿಯವರಿಗೂ (ಅಲ್ಪಸಂಖ್ಯಾತರನ್ನೂ ಒಳಗೊಂಡು) ರಾಜಕೀಯ ಮೀಸಲಾತಿಗೆ ಪರಿಗಣಿಸಬೇಕು. ರಾಜಕೀಯ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಆಧಾರದ ಮೇಲೆ ಅವರನ್ನು ರಾಜಕೀಯ ಮೀಸಲಾತಿಗೆ ಪರಿಗಣಿಸಬೇಕು ಎಂದು ವರದಿ ಹೇಳಿದೆ.

ಮುಸ್ಲಿಂ ಹೊರತುಪಡಿಸಿ ಬೇರೆ ಅಲ್ಪಸಂಖ್ಯಾತ ಸಮುದಾಯಕ್ಕೆ ಮೀಸಲಾತಿ ಲಾಭ ಸಿಕ್ಕಿಲ್ಲ
ರಾಜ್ಯದಲ್ಲಿ ಮುಸ್ಲಿಂ ಸಮುದಾಯವನ್ನು ಹೊರತುಪಡಿಸಿ ಅಲ್ಪಸಂಖ್ಯಾತರೆಂದು ಪರಿಗಣಿಸಲ್ಪಡುವ ಬೇರೆ ಯಾವ ಸಮುದಾಯದವರೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಜಕೀಯ ಮೀಸಲಾತಿಯ ಲಾಭವನ್ನು ಪರಿಣಾಮಕಾರಿಯಾಗಿ ಪಡೆಯಲು ಸಾಧ್ಯವಾಗಿಲ್ಲ. ಪ್ರವರ್ಗ 2(ಬಿ) ಅಡಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಗಾಗಿ ಕೇವಲ ಮುಸ್ಲಿಂ ಸಮುದಾಯವನ್ನು ಮಾತ್ರ ಗಣನೆಗೆ ಪಡೆಯಲಾಗಿದೆ. 1996, 2001, 2010 ಮತ್ತು 2015ರಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲಾಗಿದೆ.
ಬೇರೆ ಅಲ್ಪಸಂಖ್ಯಾತರ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಆಯೋಗ ಹೇಳಿದೆ. ಹಾಗಾಗಿ ಅಲ್ಪಸಂಖ್ಯಾತರು ಸೇರಿದಂತೆ ಒಬಿಸಿ ಅಡಿ ಬರುವ ಎಲ್ಲ ಸಮುದಾಯಗಳಿಗೂ ಮೀಸಲಾತಿ ಸೌಲಭ್ಯ ಪರಿಣಾಮಕಾರಿಯಾಗಿ ದೊರೆಯುವಂತಾಗಲು 2027 ಅಥವಾ 2028ರ ಕರ್ನಾಟಕ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳಡಿ ಪರಿಗಣಿಸಲ್ಪಡುವ ಪ್ರವರ್ಗ-ಎ ಮತ್ತು ಬಿ ಗಳನ್ನು ಮತ್ತೆರಡು ವರ್ಗಗಳಾಗಿ ಮರು ವರ್ಗೀಕರಿಸುವ ಬಗ್ಗೆ ಪರಿಶೀಲಿಸಬೇಕು ಎಂದು ಸಲಹೆ ನೀಡಿದೆ.

ಕೆಎಂಸಿ ಕಾಯ್ದೆ ತಿದ್ದುಪಡಿಗೆ ಸಲಹೆ
ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್‌ 57 ರ ಪ್ರಕಾರ ಮೇಯರ್‌ ಮತ್ತು ಉಪ ಮೇಯರ್‌ ಅವರ ಅಧಿಕಾರಾವಧಿಯನ್ನು ಚುನಾವಣಾ ದಿನಾಂಕದಿಂದ 30 ತಿಂಗಳುಗಳ ವರೆಗೆ ನಿಗದಿಪಡಿಸಲಾಗಿದೆ. ಆದರೆ, ಕರ್ನಾಟಕ ಮುನ್ಸಿಪಲ್‌ ಕಾರ್ಪೊರೇಷನ್‌ ಕಾಯ್ದೆ 1976ರ ಸೆಕ್ಷನ್‌ 10ರ ಪ್ರಕಾರ ಮೇಯರ್‌ ಮತ್ತು ಉಪಮೇಯರ್‌ ಅಧಿಕಾರಾವಧಿಯನ್ನು ಕೇವಲ 12 ತಿಂಗಳಿಗೆ ಸೀಮಿತಗೊಳಿಸಲಾಗಿದೆ. ಹಾಗಾಗಿ ಕೆಎಂಸಿ ಕಾಯ್ದೆಯ ಸೆಕ್ಷನ್‌ 10ಅನ್ನು ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ಆಯೋಗ ಹೇಳಿದೆ.
ರಾಜ್ಯದಲ್ಲಿ ಕೆಎಂಸಿ ಕಾಯಿದೆ ಸೆಕ್ಷನ್‌ 10ರ ಅಡಿ ಹಿಂದುಳಿದ ವರ್ಗಗಳ ವಿಭಾಗ ಎ ಮತ್ತು ಬಿ ಅಡಿ ಬರುವ ಸದಸ್ಯರಿಗೆ ಒಟ್ಟಾರೆ ಮೇಯರ್‌ ಮತ್ತು ಉಪಮೇಯರ್‌ಗಳ ಸಂಖ್ಯೆಯಲ್ಲಿ ಮೂರನೇ ಒಂದು ಭಾಗದಷ್ಟು ಮೀಸಲಾತಿ ನೀಡಲಾಗುತ್ತಿದೆ. ಆದರೆ, ಬಿಬಿಎಂಪಿ ಕಾಯಿದೆ ಸೆಕ್ಷನ್‌ 58ರಲ್ಲಿ ಒಬಿಸಿಗಳಿಗೆ ಸಂಬಂಧಿಸಿದ ಸೀಟುಗಳ ಮೀಸಲಾತಿ ಕುರಿತು ಮೌನವಹಿಸಲಾಗಿದೆ ಎಂದು ಹೇಳಿದೆ.
ಎಲ್ಲಾ ನಗರ ಮತ್ತು ಸ್ಥಳೀಯ ಸಂಸ್ಥೆ ಚುನಾವಣಾ ಘಟಕವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್‌) ಅಡಿಗೆ ತರಬೇಕು. ನಗರಾಭಿವೃದ್ಧಿ ಇಲಾಖೆ ಪ್ರಕಟಿಸಿರುವ ಅಧಿಸೂಚನೆಯಲ್ಲಿ ಬಿಬಿಎಂಪಿ ಕಾಯಿದೆಯ ಹಿಂದುಳಿದ ವರ್ಗಗಳ ವ್ಯಾಖ್ಯಾನದಲ್ಲಿ ಒಬಿಸಿ ವಿಭಾಗ ಎ ಮತ್ತು ಬಿ ಬಗ್ಗೆ ಉಲ್ಲೇಖಿಸದಿರುವುದು ಮತ್ತೊಂದು ಮಹತ್ವದ ವಿಷಯವಾಗಿದೆ. ಆದರೆ, ಬಿಬಿಎಂಪಿ ಕಾಯಿದೆ ಸೆಕ್ಷನ್‌ 8ರ ಉಪ ಸೆಕ್ಷನ್‌ 3ರಲ್ಲಿ ಬರುವ 1, 2 ಮತ್ತು 3ನೇ ಉಪ ನಿಯಮದಲ್ಲಿ ಹಿಂದುಳಿದ ವರ್ಗದ ವಿಭಾಗ ಎ ಮತ್ತು ಬಿ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ಆಯೋಗ ಹೇಳಿದೆ.

ಪ್ರಮುಖ ಸುದ್ದಿ :-   ನಂದಿನಿ ತುಪ್ಪ, ಬೆಣ್ಣೆ ಬೆಲೆ ಹೆಚ್ಚಳ ; ಜುಲೈ 24ರಿಂದ ಜಾರಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement