ನವದೆಹಲಿ: ಇರಾನ್ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾರತ ಸರ್ಕಾರದ ಪರವಾಗಿ ಬಿಹಾರದ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸಯ್ಯದ್ ಅತಾ ಹಸ್ನೈನ್ ಹಾಗೂ ವಿದೇಶಾಂಗ ಖಾತೆ ರಾಜ್ಯ ಸಚಿವರಾದ ಪಬಿತ್ರ ಮಾರ್ಗರಿಟಾ ಭಾಗವಹಿಸಲಿದ್ದಾರೆ ಎಂದು ಸರ್ಕಾರದ ಮೂಲಗಳು ಸೋಮವಾರ ತಿಳಿಸಿವೆ.
ಕಳೆದ ವಾರ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದರು.
ಖಮೇನಿ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಜುಲೈ 4ರಂದು ಆರಂಭವಾಗಿ, ಅವರು ಜನಿಸಿದ ಈಶಾನ್ಯ ಇರಾನ್ನ ಪವಿತ್ರ ನಗರ ಮಶ್ಹಾದ್ನಲ್ಲಿ ಜುಲೈ 9ರಂದು ಅಂತ್ಯಸಂಸ್ಕಾರ ನೆರವೇರಲಿದೆ. ಜುಲೈ 7ರಂದು ಮತ್ತೊಂದು ಪವಿತ್ರ ನಗರವಾದ ಕೋಮ್ನಲ್ಲೂ ಶ್ರದ್ಧಾಂಜಲಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ತಿಳಿಸಿವೆ.
86 ವರ್ಷದ ಖಮೇನಿ ಅವರು ಫೆಬ್ರವರಿ 28ರಂದು ತೆಹ್ರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ನಡೆಸಿದ ವೈಮಾನಿಕ ದಾಳಿಯ ಮೊದಲ ದಿನವೇ ಮೃತಪಟ್ಟಿದ್ದರು. ಅವರು 36 ವರ್ಷಗಳ ಕಾಲ ಇರಾನ್ನ ಸರ್ವೋಚ್ಚ ನಾಯಕರಾಗಿದ್ದರು.
ಖಮೇನಿ ಅವರ ಅಂತ್ಯಕ್ರಿಯೆಯ ದಿನಾಂಕ ಹಲವು ತಿಂಗಳುಗಳಿಂದ ಊಹಾಪೋಹಗಳಿಗೆ ಕಾರಣವಾಗಿತ್ತು. ಇಸ್ಲಾಮಿಕ್ ಧರ್ಮಶಾಸ್ತ್ರದ ಪ್ರಕಾರ ಮೃತದೇಹವನ್ನು ಸಾಧ್ಯವಾದಷ್ಟು ಬೇಗ ಸಮಾಧಿ ಮಾಡಬೇಕು. ಆದರೆ ಯುದ್ಧದಂತಹ ವಿಶೇಷ ಸಂದರ್ಭಗಳಲ್ಲಿ ವಿಳಂಬಕ್ಕೆ ಅವಕಾಶವಿದೆ. ಆರಂಭದಲ್ಲಿ ಜೂನ್ ಅಂತ್ಯದೊಳಗೆ ಅಂತ್ಯಸಂಸ್ಕಾರ ನಡೆಯಲಿದೆ ಎನ್ನಲಾಗಿತ್ತಾದರೂ, ಬಳಿಕ ಜುಲೈನಲ್ಲಿ ವಿಧಿವಿಧಾನಗಳು ನಡೆಯಲಿವೆ ಎಂದು ಸರ್ಕಾರಿ ಮಾಧ್ಯಮಗಳು ಅಧಿಕೃತವಾಗಿ ಪ್ರಕಟಿಸಿದ್ದವು.
ತೆಹ್ರಾನ್, ಮಶ್ಹಾದ್ ಮತ್ತು ಕೋಮ್ ನಗರಗಳಲ್ಲಿ ನಡೆಯಲಿರುವ ಅಂತ್ಯಕ್ರಿಯೆಯಲ್ಲಿ ಸುಮಾರು ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆಯಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಸೇರಿದಂತೆ ಆ ದೇಶದ ಹಿರಿಯ ಅಧಿಕಾರಿಗಳೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.
ಇದೀಗ ಎಲ್ಲರ ಗಮನ ಇರಾನ್ನ ಹಾಲಿ ಸರ್ವೋಚ್ಚ ನಾಯಕ ಹಾಗೂ ಆಯತೊಲ್ಲಾ ಅಲಿ ಖಮೇನಿ ಪತ್ರ ಮೊಜ್ತಬಾ ಖಮೇನಿ ಅವರತ್ತ ನೆಟ್ಟಿದೆ. 56 ವರ್ಷದ ಅವರು ಅಂತ್ಯಕ್ರಿಯೆಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆಯೇ ಎಂಬ ಬಗ್ಗೆ ಕುತೂಹಲ ಹೆಚ್ಚಿದೆ. ಫೆಬ್ರವರಿ 28ರ ವೈಮಾನಿಕ ದಾಳಿಯಲ್ಲಿ ತಂದೆ ಸಾವಿಗೀಡಾದ ವೇಳೆ ಇವರು ಗಾಯಗೊಂಡಿದ್ದರು. ಆದರೆ ನಂತರ ಅವರು ಸಾರ್ವಜನಿಕವಾಗಿ ಅಥವಾ ಯಾವುದೇ ವಿಡಿಯೊದಲ್ಲಿ ಕಾಣಿಸಿಕೊಂಡಿಲ್ಲ.
ಅವರ ಆರೋಗ್ಯ ಹಾಗೂ ಅವರು ಇರುವ ಸ್ಥಳದ ಕುರಿತು ಹಲವು ಪ್ರಶ್ನೆಗಳು ಇವೆ. ಅಮೆರಿಕದ ಹಿರಿಯ ಅಧಿಕಾರಿಗಳಾದ ಮಾರ್ಕೊ ರೂಬಿಯೊ ಮತ್ತು ಪೀಟ್ ಹೆಗ್ಸೆತ್ ಅವರು ಮೊಜ್ತಬಾ ಖಮೇನಿ ಕೋಮಾದಲ್ಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಇರಾನ್ ಸರ್ಕಾರಿ ಮಾಧ್ಯಮಗಳು ಅವರಿಗೆ ಮುಖದ ಭಾಗದಲ್ಲಿ ಗಂಭೀರ ಗಾಯಗಳು ಹಾಗೂ ಕಾಲಿಗೆ ತೀವ್ರ ಪೆಟ್ಟಾಗಿರುವುದಾಗಿ ವರದಿ ಮಾಡಿದ್ದು, ಅವರ ಪ್ರಸ್ತುತ ಆರೋಗ್ಯ ಸ್ಥಿತಿಯನ್ನು ಅಧಿಕೃತವಾಗಿ ದೃಢಪಡಿಸಿಲ್ಲ.
ಈ ಎಲ್ಲ ಬೆಳವಣಿಗೆಗಳ ನಡುವೆ, ಹಲವು ತಿಂಗಳುಗಳ ಸಂಘರ್ಷದಿಂದ ಪಶ್ಚಿಮ ಏಷ್ಯಾವನ್ನು ತೀವ್ರ ಬಿಕ್ಕಟ್ಟಿಗೆ ತಳ್ಳಿದ್ದ ಹಾಗೂ ಜಾಗತಿಕ ಇಂಧನ ಮತ್ತು ಇಂಧನೋತ್ಪಾದನಾ ವಲಯದಲ್ಲಿ ಸಂಕಷ್ಟ ಉಂಟುಮಾಡಿದ್ದ ಉದ್ವಿಗ್ನತೆಗೆ ತೆರೆ ಎಳೆಯುವ ನಿಟ್ಟಿನಲ್ಲಿ ಇರಾನ್ ಮತ್ತು ಅಮೆರಿಕ ಶಾಂತಿ ಒಪ್ಪಂದಕ್ಕೆ ಸಹಮತ ವ್ಯಕ್ತಪಡಿಸಿವೆ. ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತ್ಯೇಕವಾಗಿ ಡಿಜಿಟಲ್ ತಿಳುವಳಿಕೆ ಒಪ್ಪಂದಗಳಿಗೆ (MoUs) ಸಹಿ ಹಾಕಿದ್ದು, ಉಭಯ ದೇಶಗಳ ನಡುವೆ ದೀರ್ಘಕಾಲಿಕ ಶಾಂತಿ ಸ್ಥಾಪನೆಗಾಗಿ ಸ್ವಿಟ್ಜರ್ಲ್ಯಾಂಡ್ನಲ್ಲಿ ಮಾತುಕತೆಗಳು ಮುಂದುವರಿದಿವೆ.


ನಿಮ್ಮ ಕಾಮೆಂಟ್ ಬರೆಯಿರಿ