ಶತಮಾನದ ಸಂಭ್ರಮದಲ್ಲಿ ನಿವೃತ್ತ ಕುಲಸಚಿವ ಎಸ್. ಆರ್. ಹಿರೇಮಠ

( ೧೩-೦೭-೨೦೨೫ ರಂದು ಹುಬ್ಬಳ್ಳಿಯ  ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲಿನಲ್ಲಿ ಎಸ್‌. ಆರ್. ಹಿರೇಮಠ ಅವರ ಜನ್ಮ ಶತಮಾನೋತ್ಸವ ಜರುಗಲಿದ್ದು ಆ ನಿಮಿತ್ತ ಲೇಖನ)
ಸೋಮಶೇಖರ ರಾಚಯ್ಯ ಹಿರೇಮಠ ಅವರು ಶೈಕ್ಷಣಿಕ ವಲಯದಲ್ಲಿ ಎಸ್.ಆರ್. ಹಿರೇಮಠ ಎಂದೇ ಚಿರಪರಿಚಿತರು. ಎಸ್.ಆರ್. ಹಿರೇಮಠರದು ಲಕ್ಷ್ಮೇಶ್ವರದ ಹತ್ತಿರದ ಬಟ್ಟೂರ ಗ್ರಾಮದಲ್ಲಿ ಶ್ರದ್ಧಾ ಭಕ್ತಿಯ ಹಿರೇಮಠ ಕುಟುಂಬದಲ್ಲಿ ಜನಿಸಿದವರು. ರಾಚಯ್ಯನವರ ಹೆಂಡತಿ ಗೌರಮ್ಮ, ಡಾ ಎಚ್.ಎಫ್. ಕಟ್ಟಿಮನಿ ಅವರ ಸಹೋದರಿ. ಹಿರೇಮಠ ದಂಪತಿಗೆ ನಾಲ್ಕು ಜನ ಮಕ್ಕಳು. ಸೋಮಶೇಖರ ಎರಡನೆಯವರು. ೧೩-೭-೧೯೨೬ರಲ್ಲಿ ಹುಬ್ಬಳ್ಳಿಯಲ್ಲಿ ಜನಿಸಿದರು. ಎಚ್.ಎಫ್. ಕಟ್ಟಿಮನಿಯವರ ಮನೆತನ ಶಿಕ್ಷಣಕ್ಕೆ ಆದ್ಯತೆ ಕೊಟ್ಟ ಮನೆತನ.
ಎಸ್.ಆರ್. ಹಿರೇಮಠರ ತಮ್ಮ ಶಿಕ್ಷಣವನ್ನು ಹುಬ್ಬಳ್ಳಿ , ಬಾಗಲಕೋಟೆ ಮತ್ತು ಸೊಲ್ಲಾಪುರದಲ್ಲಿ ಪೂರೈಸಿದರು. ಬಿ.ಎ. ಪದವಿಯನ್ನು ಮುಂಬೈ ವಿಶ್ವವಿದ್ಯಾಲಯದ ಸೊಲ್ಲಾಪುರದ ಡಿಎವಿ ಕಾಲೇಜಿನಲ್ಲಿ ಪಡೆದರು. ವರಕವಿ ಡಾ. ದ.ರಾ. ಬೇಂದ್ರೆ ಅವರು ಅಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕಲಿಯುತ್ತಲೇ ಉದ್ಯೋಗ ಮಾಡಿದ ಇವರು, ಕಾಡಾದಿ ಅಪ್ಪಣ್ಣಾ ಹೈಸ್ಕೂಲ್‌ನಲ್ಲಿ ಗುಮಾಸ್ತರಾಗಿ, ಎರಡು ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಆ ಬಳಿಕ ಸೊಲ್ಲಾಪುರದಿಂದ ಹುಬ್ಬಳ್ಳಿಗೆ ಬಂದು ಹುಬ್ಬಳ್ಳಿಯಲ್ಲಿ ಬಿ.ವಿ.ಬಿ. ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ನೇಮಕಗೊಂಡರು. ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಯ ಕೆ.ಎಲ್.ಇ. ಸಂಸ್ಥೆಯವರು ಹುಬ್ಬಳ್ಳಿಯಲ್ಲಿ ಸ್ಥಾಪಿಸಿದ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲದಿಂದ ಬಿ.ಕಾಂ ಪದವಿಯನ್ನು ೧೯೫೨ ರಲ್ಲಿ ಪಡೆದರು. ರೇಶನಿಂಗ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಬಿ.ಕಾಮ್. ಪದವಿ ಪಡೆದ ಆ ಕಾಲೇಜಿನ ಪ್ರಥಮ ಬ್ಯಾಚ್‌ ವಿದ್ಯಾರ್ಥಿ. ಇವರನ್ನು ಇತ್ತೀಚಿಗೆ ಮಹಾವಿದ್ಯಾಲಯದಲ್ಲಿ ನಡೆದ ಹಳೆಯ ವಿದ್ಯಾರ್ಥಿಗಳ ಸಂಘದ ಪುನರ್‌ಮಿಲನ್ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗಿದೆ.

೧೯೫೨ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪರೀಕ್ಷಾ ವಿಭಾಗದಲ್ಲಿ ಸಹಾಯಕ ಅಧೀಕ್ಷಕರೆಂದು ನೇಮಕಗೊಂಡರು. ಯಾರೂ ಊಹಿಸಲಾಗದಂತೆ ಮುಂಬಡ್ತಿ ಪಡೆದವರಲ್ಲಿ ಅಗ್ರಗಣ್ಯರು. ಅಧೀಕ್ಷಕರು, ಸಹಾಯಕ ಕುಲಸಚಿವರು, ಉಪ ಕುಲಸಚಿವರು, ವಿತ್ತಾಧಿಕಾರಿ, ಶೈಕ್ಷಣಿಕ ಮಂಡಳಿ ಉಪ ಕುಲಸಚಿವರು, ಆಡಳಿತಾತ್ಮಕ ಉಪ ಕುಲಸಚಿವರು, ಯುಜಿಸಿ, ಎಸ್ಟಾಬ್ಲಿಷ್‌ಮೆಂಟ್ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದರು. ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಕುಲಸಚಿವರಾಗಿ, ವಿತ್ತಾಧಿಕಾರಿಗಳಾಗಿ ಸೇವೆ ಸಲ್ಲಿಸಿದರು. ಸಾಮಾನ್ಯವಾಗಿ ಆಯಾ ವಿಶ್ವವಿದ್ಯಾಲಯಗಳಲ್ಲಿ ಕುಲಸಚಿವರಾಗಿ ಬೋಧಕ ವರ್ಗದವರು ನೇಮಕವಾಗುತ್ತಾರೆ. ಆದರೆ ಸಂಪ್ರದಾಯವನ್ನು ಮೀರಿ ಎಸ್.ಆರ್. ಹಿರೇಮಠರು ಬೋಧಕೇತರ ವರ್ಗದಿಂದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕುಲಸಚಿವರಾಗಿ ನೇಮಕಗೊಂಡ ಪ್ರಪ್ರಥಮ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿಶ್ವವಿದ್ಯಾಲಯದ ಕುಲಸಚಿವ, ವಿತ್ತಾಧಿಕಾರಿ, ಮೌಲ್ಯಮಾಪನ ಹುದ್ದೆಗಳನ್ನು ಸರ್ಕಾರವು ಐಎಎಸ್ ಕೇಡರಿಗೆ ತತ್ಸಮಾನ ಹುದ್ದೆಯೆಂದು ಪರಿಗಣಿಸಿದೆ.
ಎಸ್.ಆರ್. ಹಿರೇಮಠ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ವಿಶ್ವವಿದ್ಯಾಲಯಗಳ ಪರೀಕ್ಷೆಗಳ ನ್ಯಾಯಸಮ್ಮತ ಮತ್ತು ಸುಗಮ ನಡವಳಿಕೆ, ಶೈಕ್ಷಣಿಕ ಸಮಗ್ರತೆ ಮತ್ತು ವಿಶ್ವವಿದ್ಯಾಲಯದ ನಿಯಮಾವಳಿಗಳನ್ನು ಪಾಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಪರೀಕ್ಷಾ ವ್ಯವಸ್ಥೆಯ ಮೇಲ್ವಿಚಾರಣೆ, ಮರುಮೌಲ್ಯಮಾಪನ, ಸವಾಲು ಮೌಲ್ಯಮಾಪನ, ಪರೀಕ್ಷಾ ಕರ್ತವ್ಯಗಳು ಮತ್ತು ಕಾನೂನುಗಳ ಅನುಸರಣೆಗಳನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದ್ದಾರೆ. ಪರೀಕ್ಷಾ ಚಟುವಟಿಕೆಗಳ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸುಗಳಿಗೆ ಸಮಯಕ್ಕೆ ಸರಿಯಾಗಿ ವೇಳಾಪಟ್ಟಿ, ಪ್ರಶ್ನೆಪತ್ರಿಕೆ ತಯಾರಿಕೆ ಮತ್ತು ವಿತರಣೆಯನ್ನು ತಮ್ಮ ಸೇವಾ ಕಾಲದಲ್ಲಿ ಪರಿಪಾಲಿಸುತ್ತಾ ಬಂದವರು.

ಪ್ರಮುಖ ಸುದ್ದಿ :-   ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ; ಸಿಎಂ ಡಿಕೆ ಶಿವಕುಮಾರ ಘೋಷಣೆ

ಪರೀಕ್ಷೆಗಳಿಗೆ ಮುಖ್ಯ ಸಂಯೋಜಕರು, ಪರೀಕ್ಷಕರು ಮತ್ತು ಮೌಲ್ಯಮಾಪಕರಿಗೆ ಪರೀಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಿದ್ದಾರೆ. ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.
ಪರೀಕ್ಷಾ ಕೇಂದ್ರಗಳ ಪ್ರಾಚಾರ್ಯರಿಗೆ ಪರೀಕ್ಷಾ ಹಾಲ್ ವ್ಯವಸ್ಥೆ, ಆಸನ ವ್ಯವಸ್ಥೆ ಮತ್ತು ನಕಲು ತಡೆಗಟ್ಟುವ ಕ್ರಮಗಳ ಬಗ್ಗೆ ಮಾರ್ಗಸೂಚಿಗಳು, ಪರೀಕ್ಷಾ ಹಾಲ್‌ಗಳನ್ನು ಪರಿಶೀಲಿಸಲು ತಂಡಗಳನ್ನು ನಿಯೋಜಿಸಿ, ಅನಿಯಮಿತತೆ ಹಾಗೂ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಲು ಪ್ರಯತ್ನಿಸಿದ್ದರು.
ಎಸ್.ಆರ್. ಹಿರೇಮಠರು ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ೧೯೫೨ ರಿಂದ ೧೯೮೨ರ ವರೆಗೆ ಕುಲಪತಿಗಳಾದ ಡಾ. ಡಿ ಸಿ. ಪಾವಟೆ, ಡಾ. ಎ. ಎಸ್. ಅಡಕೆ, ಡಾ. ಆರ್.ಸಿ. ಹಿರೇಮಠ, ಡಾ. ಎಸ್. ಬಿ. ದೇಸಾಯಿ, ಜಯಲಕ್ಷ್ಮಣ್ಣಿ, ಎಸ್.ಎಸ್. ಒಡೆಯರ್, ಡಾ. ಡಿ.ಎಂ. ನಂಜುಂಡಪ್ಪ ಮೊದಲಾದವರ ಅವಧಿಯಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಿ ಹೌದೆನಿಸಿಕೊಂಡವರು. ಡಾ.ಡಿ.ಎಂ. ನಂಜುಂಡಪ್ಪನವರು ಕುಲಪತಿಗಳಾಗಿದ್ದಾಗ ಇವರ ಕಾರ್ಯದಕ್ಷತೆ, ನಡೆ-ನುಡಿಗಳನ್ನು ಮೆಚ್ಚಿ ಇವರಿಗೆ ಮೆರಿಟ್ ಪ್ರಮಾಣಪತ್ರ ಕೊಟ್ಟು ಪ್ರಶಂಸೆ ಮಾಡಿದ್ದು ಎಸ್.ಆರ್. ಹಿರೇಮಠ ಅವರ ಆಡಳಿತ ವೈಖರಿಗೆ ಹಿಡಿದ ಕನ್ನಡಿಯಾಗಿದೆ.

ಸರಳ ಸಜ್ಜನಿಕೆಯ, ಸೌಮ್ಯ ಸ್ವಭಾವದ, ಶಿಸ್ತು, ಸಮಯಪಾಲನೆ, ಪ್ರಾಮಾಣಿಕತೆಯನ್ನು ತಮ್ಮ ಜೀವನದೂದ್ದಕ್ಕೂ ಅಳವಡಿಸಿಕೊಂಡಿರುವ ಎಸ್. ಎಸ್. ಹಿರೇಮಠ ಅವರು ಎಲ್ಲರಿಗೂ ಮಾದರಿ ಆಗಿದ್ದಾರೆ. ಎಸ್.ಆರ್. ಹಿರೇಮಠರ ವ್ಯಕ್ತಿತ್ವವನ್ನು ರೂಪಿಸಿದವರು ಕೆ.ಎಲ್.ಇ. ಸಂಸ್ಥೆಯ ಸಪ್ತರ್ಷಿಗಳಲ್ಲಿ ಒಬ್ಬರಾದ ಡಾ. ಎಚ್.ಎಫ್. ಕಟ್ಟಿಮನಿ ಅವರು. ಅವರ ಮಗಳು ಅನ್ನಪೂರ್ಣಾ ಅವರೊಂದಿಗೆ ೧೯೫೬ರಲ್ಲಿ ಜೆ.ಜಿ. ಕಾಮರ್ಸ್ ಕಾಲೇಜಿನ ಸಭಾಂಗಣದಲ್ಲಿ ಮದುವೆ ಆಯಿತು. ದಂಪತಿಗೆ ಶೋಭಾ, ಅಶೋಕ, ಪ್ರಕಾಶ, ಸತೀಶ ಮಕ್ಕಳು, ಒಳ್ಳೆಯ ಶಿಕ್ಷಣವನ್ನು ಪಡೆದಿದ್ದಾರೆ. ಶೋಭಾ ಅವರನ್ನು ಹುಬ್ಬಳ್ಳಿಯ ಗಣ್ಯ ವ್ಯಕ್ತಿಗಳೂ, ಖ್ಯಾತ ಲೆಕ್ಕ ಪರಿಶೋಧಕರಾಗಿರುವ ಡಾ. ಎನ್.ಎ. ಚರಂತಿಮಠ ಅವರಿಗೆ ಕೊಟ್ಟು ಮದುವೆ ಮಾಡಲಾಗಿದೆ. ಅಶೋಕ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಪ್ರಕಾಶ ಅವರು ಖಾಸಗಿ ಉದ್ಯೋಗಿಯಾಗಿ ಬೈರಿದೇವರಕೊಪ್ಪದಲ್ಲಿ ನೆಲೆಸಿದ್ದಾರೆ. ಸತೀಶ ಅವರು ಹುಬ್ಬಳ್ಳಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಮ್ಯಾನೇಜರ್ ಆಗಿ ಇತ್ತೀಚಿಗೆ ನಿವೃತ್ತಿ ಹೊಂದಿದ್ದಾರೆ.
-ಡಾ. ಬಿ. ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು.

ಪ್ರಮುಖ ಸುದ್ದಿ :-   ಇಂದು ಸಿಎಂ ಆಗಿ ಡಿಕೆ ಶಿವಕುಮಾರ ಪ್ರಮಾಣ ವಚನ: ಪರಮೇಶ್ವರ ಡಿಸಿಎಂ ; 13 ಶಾಸಕರಿಗೆ ಸಚಿವ ಸ್ಥಾನ ; ಪಟ್ಟಿ ಇಲ್ಲಿದೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement