ಮುಂಬೈ: ಮುಂಬೈನ ನಯಾ ನಗರ ಪ್ರದೇಶದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಯ ಧರ್ಮವನ್ನು ಕೇಳಿ, ನಂತರ ಅವರಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ. ಈ ಸಂಬಂಧ 31 ವರ್ಷದ ಜೈಬ್ ಜುಬೇರ್ ಅನ್ಸಾರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ಮುಂಜಾನೆ ಸುಮಾರು 4 ಗಂಟೆಯ ಸುಮಾರಿಗೆ ವೊಕಾರ್ಡ್ ಆಸ್ಪತ್ರೆಯ ಹಿಂಭಾಗದಲ್ಲಿರುವ ನಿರ್ಮಾಣ ಹಂತದ ಕಟ್ಟಡದ ಬಳಿ ಈ ಕೃತ್ಯ ನಡೆದಿದೆ. ಆರೋಪಿ ಅನ್ಸಾರಿ ಅಲ್ಲಿದ್ದ ಭದ್ರತಾ ಸಿಬ್ಬಂದಿ ರಾಜಕುಮಾರ ಮಿಶ್ರಾ ಮತ್ತು ಸುಬ್ರತೋ ಸೇನ್ ಅವರನ್ನು ಅಡ್ಡಗಟ್ಟಿ, ಇಸ್ಲಾಂ ಧರ್ಮದ ‘ಕಲ್ಮಾ’ ಪಠಿಸುವಂತೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ. ಅವರು ನಿರಾಕರಿಸಿದಾಗ ಚಾಕುವಿನಿಂದ ಮನಬಂದಂತೆ ಇರಿದಿದ್ದಾನೆ.
ಸೋಮವಾರ ಮುಂಜಾನೆ, ಬೆಳಗಿನ ಜಾವ 4 ಗಂಟೆ ಸುಮಾರಿಗೆ ದಾಳಿ ನಡೆದಿದೆ ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಮಿಶ್ರಾ ಹೇಗೋ ನಡೆದುಕೊಂಡು ಆಸ್ಪತ್ರೆ ತಲುಪಿದ್ದಾರೆ. ಮತ್ತೊಬ್ಬ ಗಾಯಾಳು ಸೇನ್ ಅವರು ರಕ್ತದ ಮಡುವಿನಲ್ಲಿ ಬೂತ್‌ನಲ್ಲಿ ಅಡಗಿ ಕುಳಿತಿದ್ದರು. ನೆರೆಯ ಕಟ್ಟಡದ ನಿವಾಸಿ ನಯಾಬ್ ಶೇಖ್ ಎಂಬುವವರು ಇದನ್ನು ಗಮನಿಸಿ, ಕೂಡಲೇ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ನಂತರ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕೇವಲ 90 ನಿಮಿಷಗಳಲ್ಲಿ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಕೊಲೆ ಯತ್ನ ಮತ್ತು ಎರಡು ಗುಂಪುಗಳ ನಡುವೆ ದ್ವೇಷ ಬಿತ್ತಲು ಯತ್ನಿಸಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಥಾಣೆ ನ್ಯಾಯಾಲಯವು ಆರೋಪಿಯನ್ನು ಮೇ 4 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಅನ್ಸಾರಿ ಈ ಹಿಂದೆ ಅಮೆರಿಕಾದಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಅಲ್ಲಿ ಕೆಲಸ ಸಿಗದ ಕಾರಣ ಭಾರತಕ್ಕೆ ಮರಳಿದ್ದ ಈತ, ಆನ್‌ಲೈನ್‌ನಲ್ಲಿ ಕೆಮಿಸ್ಟ್ರಿ ಪಾಠ ಮಾಡುತ್ತಿದ್ದ. ಈತ ಮೀರಾ ರಸ್ತೆ ಪ್ರದೇಶದಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಎನ್ನಲಾಗಿದೆ.
ಭಯೋತ್ಪಾದನಾ ಆಯಾಮ:
ಪೊಲೀಸರು ವಶಪಡಿಸಿಕೊಂಡ ಆತನ ನೋಟ್ಸ್‌ಗಳಲ್ಲಿ ‘ISIS’, ‘ಲೋನ್ ವುಲ್ಫ್’ (Lone Wolf), ‘ಜಿಹಾದ್’ ಮತ್ತು ‘ಗಾಜಾ’ ಎಂಬ ಪದಗಳು ಪತ್ತೆಯಾಗಿವೆ. ಆತ ಆನ್‌ಲೈನ್ ಮೂಲಕ ಉಗ್ರಗಾಮಿ ವಿಚಾರಗಳಿಗೆ ಪ್ರೇರಿತನಾಗಿರುವ ಶಂಕೆಯಿದ್ದು, ರಾಜ್ಯ ಭಯೋತ್ಪಾದನಾ ನಿರೋಧಕ ದಳ (ATS) ತನಿಖೆ ನಡೆಸುತ್ತಿದೆ.
ಸಾರ್ವಜನಿಕರು ಯಾವುದೇ ರೀತಿಯ ವದಂತಿಗಳನ್ನು ನಂಬಬಾರದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಬಾರದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ