ವೀಡಿಯೊ.. | ಹೃದಯಸ್ಪರ್ಶಿ ಘಟನೆ : ಜೈಲೊಳಗಿದ್ದ ಅಮ್ಮನ ನೋಡಲು ಹಂಬಲಿಸಿ ಜೈಲಿನ ಬಾಗಿಲಲ್ಲಿ ನಿಂತು ಕಣ್ಣೀರಿಟ್ಟ 9 ವರ್ಷದ ಬಾಲಕಿ

ಕರ್ನೂಲ್: 9 ವರ್ಷದ ಬಾಲಕಿಯೊಬ್ಬಳು  ಜೈಲಿನಲ್ಲಿದ್ದ  ತನ್ನ ತಾಯಿಯನ್ನು ಭೇಟಿಯಾಗಲು ಅವಕಾಶ ನೀಡುವಂತೆ ಜೈಲಿನ ಅಧಿಕಾರಿಗಳಿಗೆ  ಮನವಿ ಮಾಡುತ್ತ ಜೋರಾಗಿ ಅಳುತ್ತಿರುವ ಹೃದಯಸ್ಪರ್ಶಿ ಘಟನೆ ಕರ್ನೂಲ್‌ನಲ್ಲಿ ವರದಿಯಾಗಿದೆ ಮತ್ತು ಘಟನೆಯ ವಿಡಿಯೋ ದೃಶ್ಯಾವಳಿ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ.
ಬಿಗಿ ಭದ್ರಕೋಟೆಯ ಜೈಲಿನೊಳಗೆ ಬಂಧಿಯಾಗಿರುವ ಅಮ್ಮನನ್ನು ಹೊರಗೆ ಬಿಡಲು ಅವಕಾಶವಿಲ್ಲ. ಬಾಲಕಿಯನ್ನು ಒಳಗೆ ಅಮ್ಮನೊಟ್ಟಿಗೆ ಕಳುಹಿಸಲು ಅವಕಾಶವಿಲ್ಲ. ಮುಚ್ಚಿದ ಜೈಲಿನ ಬಾಗಿಲುಗಳ ಎದುರು ಮುಖವಿಟ್ಟು ತಾಯಿಗಾಗಿ ಪುಟ್ಟ ಮಗುವಿನ ಆಕ್ರಂದನ ನಿಲ್ಲುತ್ತಿಲ್ಲ..ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ನಡೆದ ಈ ಮನಕಲಕುವ ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೋಟೆಯಂತಹ ಜೈಲಿನ ಹೊರಗೆ 9 ವರ್ಷದ ಬಾಲಕಿಯ ಕಣ್ಣೀರನ್ನು ಕಂಡು ಮರುಗಿದ ಕಾರಾಗೃಹ ಅಧಿಕಾರಿಗಳು, ಬಾಲಕಿಗೆ ತಾಯಿಯನ್ನು ಭೇಟಿ ಮಾಡಲು ಅವಕಾಶ ನೀಡಿದ್ದಾರೆ.
ಶುಕ್ರವಾರ ಮಧ್ಯಾಹ್ನ 12:30ರ ಸುಮಾರಿಗೆ ಕರ್ನೂಲ್ ನಗರದ ಕಂದಾಯ ವಿಭಾಗೀಯ ಕಚೇರಿ ಹಾಗೂ ಮಂಡಲ ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ಉಪ ಕಾರಾಗೃಹದಲ್ಲಿ ಈ ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿವೆ.
ಜೈಲಿನ ಹೊರಗೆ ಬಾಲಕಿ ಅಳುತ್ತಿರುವ ದೃಶ್ಯವನ್ನು ಆಕೆಯ ಸಂಬಂಧಿಕರು ಕೆಲವರು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ ಎನ್ನಲಾಗಿದೆ. ಇದು ಜೈಲಿನ ಅಧಿಕಾರಿಗಳ ಗಮನಕ್ಕೆ ಬಂದಿದೆ ಮತ್ತು ಖಾಜಾ ಭಿ ಎಂದು ಗುರುತಿಸಲಾದ ಆಕೆಯ ತಾಯಿಯನ್ನು ಭೇಟಿಯಾಗಲು ಅವರು ಅವಕಾಶ ನೀಡಿದರು.

ಮಹಿಳಾ ಉಪ ಕಾರಾಗೃಹದ ಪ್ರವೇಶ ದ್ವಾರದ ಬಳಿ ಬಂದಿದ್ದ 9 ವರ್ಷದ ಬಾಲಕಿ, ಡಿಸೆಂಬರ್‌ 12ರಿಂದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ತನ್ನ ತಾಯಿ ಖದಿಯಾ ಬೀಯನ್ನು ಅಳುತ್ತಾ ಕರೆಯುತ್ತಿದ್ದಳು ಎಂದು ಕರ್ನೂಲ್ ಜಿಲ್ಲಾ ಉಪ ಕಾರಾಗೃಹದ ವರಿಷ್ಠಾಧಿಕಾರಿ ಘನಿ ನಾಯ್ಕ್ ತಿಳಿಸಿದ್ದಾರೆ.
ತನ್ನ ತಾಯಿಯನ್ನು ನೋಡಬೇಕೆಂದು, ಅಸಹಾಯಕಳಾಗಿ ಹೊರಗೆ ನಿಂತು ಕಣ್ಣೀರು ಸುರಿಸುತ್ತಿರುವ 9 ವರ್ಷದ ಬಾಲಕಿ ಕುರಿತು ಕೆಲವರು ಜೈಲು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಹೊರಗೆ ಬಂದ ಜೈಲು ಅಧಿಕಾರಿಗಳು, ಜೈಲಿನಲ್ಲಿರುವ ತನ್ನ ಅಮ್ಮನನ್ನು ನೋಡಲೇಬೇಕು ಎಂಬ ಬಾಲಕಿಯ ಪ್ರಯತ್ನ ಕಂಡು ಮರುಗಿದ್ದಾರೆ. ಕೊನೆಗೆ ಆಕೆಯನ್ನು ಜೈಲಿನ ಒಳಗೆ ಕರೆದುಕೊಂಡು ಹೋಗಿ ತಾಯಿ ಖದಿಯಾ ಬೀ ಜೊತೆ ಮಾತನಾಡುವ ಅವಕಾಶ ಕಲ್ಪಿಸಿದ್ದಾರೆ.
35 ವರ್ಷದ ಖದಿಯಾ ಬೀಯನ್ನು ಕೆಲವು ವರ್ಷಗಳ ಹಿಂದೆ ಆಕೆಯ ಪತಿ ಬಿಟ್ಟು ಹೋಗಿದ್ದ. ಅಂದಿನಿದ ಆಕೆ ಸಣ್ಣಪುಟ್ಟ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದಳು.

ಪ್ರಮುಖ ಸುದ್ದಿ :-   'ಯಾರೂ ಮೋದಿಗೆ ಮತ ಹಾಕಬೇಡಿ' ಎಂದು ತರಗತಿಯೊಳಗೆ ಹೇಳುತ್ತಿದ್ದ ಸರ್ಕಾರಿ ಶಾಲಾ ಶಿಕ್ಷಕನ ಬಂಧನ

ಖದಿಯಾಳ ಐವರು ಮಕ್ಕಳಲ್ಲಿ ನಾಲ್ವರು ಗಂಡುಮಕ್ಕಳು ಹಾಗೂ 9 ವರ್ಷದ ಹೆಣ್ಣುಮಗಳು. ತಾವು ವಾಸವಿರುವ ಸಮೀಪದಲ್ಲಿರುವ ಸ್ಥಳೀಯ ತಹಶೀಲ್ದಾರ್ ಕಚೇರಿ ಹತ್ತಿರದಲ್ಲಿನ ಮಹಿಳಾ ಉಪ ಕಾರಾಗೃಹದಲ್ಲಿ ಅಮ್ಮನನ್ನು ಇರಿಸಲಾಗಿದೆ ಎಂದು ಬಾಲಕಿಯ ಅಣ್ಣ ಅವಳಿಗೆ ತಿಳಿಸಿದ್ದ. ಅನೇಕ ದಿನಗಳಾದರೂ ಅಮ್ಮ ಮನೆಗೆ ಬಾರದ ಕಾರಣ ಬಾಲಕಿ ಕಂಗಾಲಾಗಿದ್ದಳು. ಅಮ್ಮನನ್ನು ಜೈಲಿಗೆ ಹಾಕಿದ ವಿಷಯ ಗೊತ್ತಾದ ನಂತರ, ಜೈಲಿನ ಬಳಿ ಹೋದರೆ ಮಾತನಾಡಲು ಅಮ್ಮ ಸಿಗುತ್ತಾಳೆ ಎಂದು ಭಾವಿಸಿದ ಅವಳು ಜೈಲಿಗೆ ಹೋಗಿದ್ದಾಳೆ. ಆದರೆ ಸೆರೆಮನೆಯಲ್ಲಿ ಭೇಟಿಯಾಗಲು ಬಹಳಷ್ಟು ಪ್ರಕ್ರಿಯೆಗಳು ಇರುತ್ತವೆ ಎಂಬುದು ಬಾಲಕಿಗೆ ಗೊತ್ತಿರಲಿಲ್ಲ. ತಾಯಿ ಇರುವ ಜೈಲನ್ನು ಹುಡುಕಿದ ಅವಳು ಒಳಗೆ ಹೋಗುವುದು ಗೊತ್ತಾಗದೆ ತಾಯಿಯನ್ನು ಭೇಟಿಯಾಗಲು ಸಾಧ್ಯವಾಗದೆ ಅಳುತ್ತಿದ್ದಳು. ಕೊನೆಗೆ ವಿಷಯ ಅಧಿಕಾರಿಗಳಿಗೆ ಗೊತ್ತಾಗಿ ಆಕೆಗೆ ಅಮ್ಮನನ್ನು ನೋಡುವ ಅವಕಾಶ ನೀಡಿದ್ದಾರೆ.
ಆರು ವರ್ಷದೊಳಗಿನ ಮಕ್ಕಳಿಗೆ ಮಾತ್ರ ನಿಯಮಗಳ ಪ್ರಕಾರ ಜೈಲಿನಲ್ಲಿ ತಮ್ಮ ತಾಯಂದಿರೊಂದಿಗೆ ಇರಲು ಅವಕಾಶವಿದೆ.
ಖಾಜಾಭಿ ಮನೆಗೆ ಭೇಟಿ ನೀಡಿ ಮಕ್ಕಳನ್ನು ಭೇಟಿ ಮಾಡಿ ಪರಿಸ್ಥಿತಿ ಅವಲೋಕಿಸಿದ ಕರ್ನೂಲ್ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಎಸ್ ಜುಬೈದಾ ಬೇಗಂ ಅವಳನ್ನು ಈಗ ಶಿಶುಪಾಲನಾ ಸಂಸ್ಥೆಗೆ ಸ್ಥಳಾಂತರಿಸಿದ್ದಾರೆ ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   'ಐಸ್‌ಕ್ರೀಂ ಮ್ಯಾನ್‌' ಖ್ಯಾತಿಯ ನ್ಯಾಚುರಲ್ಸ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ ಕಾಮತ್ ನಿಧನ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement