ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ -ನಟ ವಿಜಯ ದೇವರಕೊಂಡ

 ಉದಯಪುರ: ದಕ್ಷಿಣ ಭಾರತದ ಖ್ಯಾತ ನಟರಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಗುರುವಾರ (ಫೆಬ್ರವರಿ 26, 2026) ರಾಜಸ್ಥಾನದ ಉದಯಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಗುರುವಾರ ಬೆಳಿಗ್ಗೆ 10:10ಕ್ಕೆ ವಿಜಯ ದೇವರಕೊಂಡ ಅವರ ತೆಲುಗು ಸಂಪ್ರದಾಯದಂತೆ ವಿವಾಹ ಕಾರ್ಯಕ್ರಮ ನೆರವೇರಿತು. ನಂತರ ಸಂಜೆ ರಶ್ಮಿಕಾ ಮಂದಣ್ಣ ಅವರ ಕೊಡವ (ಕೊಡಗು) ಸಂಪ್ರದಾಯದಂತೆ ಎರಡನೇ ಬಾರಿ ವಿವಾಹ ವಿಧಿವಿಧಾನಗಳು ನಡೆದವು. ಉದಯಪುರದಿಂದ 50 ಕಿ.ಮೀ ದೂರದಲ್ಲಿರುವ ಐಷಾರಾಮಿ ‘ಐಟಿಸಿ ಮೆಮೆಂಟೋಸ್’ (ITC Mementoes) ಹೋಟೆಲ್‌ನಲ್ಲಿ ಈ ಅದ್ಧೂರಿ ವಿವಾಹ ನೆರವೇರಿದೆ.
ಮದುವೆಯ ಅಧಿಕೃತ ಚಿತ್ರಗಳನ್ನು ಹಂಚಿಕೊಂಡ ರಶ್ಮಿಕಾ, “ನನ್ನ ಪತಿ ವಿಜಯ ದೇವರಕೊಂಡ ಅವರನ್ನು ನಿಮಗೆ ಪರಿಚಯಿಸುತ್ತಿದ್ದೇನೆ! ನಿಜವಾದ ಪ್ರೀತಿ ಮತ್ತು ನೆಮ್ಮದಿ ಎಂದರೆ ಏನು ಎಂದು ನನಗೆ ಕಲಿಸಿದ ವ್ಯಕ್ತಿ ಇವರು. ದೊಡ್ಡ ಕನಸು ಕಾಣುವುದು ತಪ್ಪಲ್ಲ ಎಂದು ಪ್ರತಿಕ್ಷಣವೂ ನನ್ನನ್ನು ಹುರಿದುಂಬಿಸಿದವರು,” ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ವಿಜಯ ದೇವರಕೊಂಡ ಕೂಡ  ಬರೆದುಕೊಂಡಿದ್ದು, “ಒಂದು ದಿನ ಅವರ ಅನುಪಸ್ಥಿತಿ ನನ್ನನ್ನು ತುಂಬಾ ಕಾಡಿತು. ಅವರು ಜೊತೆಗಿದ್ದರೆ ನನ್ನ ಊಟ, ವ್ಯಾಯಾಮ ಮತ್ತು ಇಡೀ ದಿನ ಹೆಚ್ಚು ಅರ್ಥಪೂರ್ಣವಾಗಿರುತ್ತದೆ ಎಂದು ಅನ್ನಿಸಿತು. ಹಾಗಾಗಿ ನನ್ನ ಆತ್ಮೀಯ ಗೆಳತಿಯನ್ನು ಇಂದು ನನ್ನ ಹೆಂಡತಿಯನ್ನಾಗಿ ಮಾಡಿಕೊಂಡೆ,” ಎಂದು ಪೋಸ್ಟ್ ಮಾಡಿದ್ದಾರೆ.
ಸಂಗೀತ ಮತ್ತು ಹಳದಿ ಸಂಭ್ರಮ
ಸಂಗೀತ ಕಾರ್ಯಕ್ರಮದಲ್ಲಿ ಈ ಜೋಡಿಯ ಅಭಿನಯದ ‘ಗೀತಾ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಚಿತ್ರದ ಹಾಡುಗಳು ರಂಗೇರಿಸಿದವು. ವಿಶೇಷವಾಗಿ ‘ಪುಷ್ಪ’ ಚಿತ್ರದ ‘ಪೀಲಿಂಗ್ಸ್’ ಹಾಡಿಗೆ ಅತಿಥಿಗಳು ಸಂಭ್ರಮದಿಂದ ಹೆಜ್ಜೆ ಹಾಕಿದರು.
ಹಳದಿ ಶಾಸ್ತ್ರಕ್ಕಾಗಿ ಗುಲಾಬಿ ದಳಗಳ ಕಾರ್ಪೆಟ್ ಮತ್ತು ಕಿತ್ತಳೆ ಬಣ್ಣದ ಕನಕಾಂಬರ ಹೂವುಗಳಿಂದ ವೇದಿಕೆಯನ್ನು ಅತ್ಯಂತ ಸುಂದರವಾಗಿ ಅಲಂಕರಿಸಲಾಗಿತ್ತು.
ತಮ್ಮ ಸಾಕುಪ್ರಾಣಿಗಳಾದ ಸ್ಟಾರ್ಮ್, ಚೆಸ್ಟರ್ ಮತ್ತು ಔರಾ ಹೆಸರಿನಲ್ಲಿ ವಿಶೇಷ ಅಲಂಕಾರಗಳನ್ನು ಮಾಡುವ ಮೂಲಕ ಈ ಜೋಡಿ ತಮ್ಮ ಪ್ರಾಣಿ ಪ್ರೇಮವನ್ನು ಮೆರೆದಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement