ಕಟಕ್: ಕತ್ತಲ ರಾತ್ರಿ, ಸುತ್ತಲೂ ನಿಶ್ಯಬ್ದ. ಆ ಫಾರ್ಮ್‌ಹೌಸ್‌ನಲ್ಲಿ ಇದ್ದಕ್ಕಿದ್ದಂತೆ ನಾಯಿಗಳ ಮೌನ ಮುರಿದು ಬೊಗಳುವ ಶಬ್ದ ಕೇಳಿಸಿತು. ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಸಾಕ್ಷಾತ್ ‘ಸಾವೇ’ ಎದುರಿಗೆ ಬಂದು ನಿಂತಿತ್ತು! ಅದು ಹಸಿದ ಚಿರತೆಯ ರೂಪದಲ್ಲಿತ್ತು. ಇದು ಒಡಿಶಾದ ಕಟಕ್ ಜಿಲ್ಲೆಯ ನರಸಿಂಹಪುರ ಅರಣ್ಯ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದ ಎದೆನಡುಗಿಸುವ ಘಟನೆ ಒಡಿಶಾದ ಕಟಕ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ನರಸಿಂಗ್‌ಪುರ ಪಶ್ಚಿಮ ಅರಣ್ಯ ವ್ಯಾಪ್ತಿಯ ಹಳ್ಳಿಯೊಂದರ ತೋಟದ ಮನೆಯಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಶುಭ್ರಾಂಶು ಭೋಲ್ ಎಂಬವರ ಫಾರ್ಮ್‌ಹೌಸ್‌ಗೆ ಚಿರತೆಯೊಂದು ನುಗ್ಗಿತ್ತು. ಸಾಕು ನಾಯಿಗಳು ಚಿರತೆಯನ್ನು ತಡೆಯಲು ಪ್ರಯತ್ನಿಸಿ ವಿಫಲವಾದವು, ಕೆರಳಿದ ಚಿರತೆ ನೇರವಾಗಿ ಶುಭ್ರಾಂಶು ಅವರ ಮೇಲೆರಗಿತು. ಸಾವು ಕಣ್ಣಮುಂದೆ ಕಂಡಾಗ ಮನುಷ್ಯನಿಗೆ ಬರುವ ಅತೀಂದ್ರಿಯ ಶಕ್ತಿ ಎಂದು ಹೇಳುತ್ತಾರೆ. ಅದು ಶುಭ್ರಾಂಶು ಅವರಲ್ಲಿ ಜಾಗೃತವಾಯಿತೇನೋ..? ತೀವ್ರವಾಗಿ ಗಾಯಗೊಂಡಿದ್ದರೂ, ಬದುಕುಳಿಯುವ ಛಲದಿಂದ ಅವರು ಕೈಗೆ ಸಿಕ್ಕ ಸಣ್ಣ ಚಾಕುವಿನಿಂದ ಚಿರತೆಯೊಂದಿಗೆ ಹೋರಾಡಿದರು. ಅಂತಿಮವಾಗಿ ಚಿರತೆ ಪ್ರಾಣಬಿಟ್ಟಿತು, ಶುಭ್ರಾಂಶು ರಕ್ತಸಿಕ್ತವಾಗಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯದ ನೋವಿಗಿಂತ ‘ಅಮ್ಮನ’ ಮೇಲಿನ ಪ್ರೀತಿ….
ಈ ಕಥೆಯ ಅತ್ಯಂತ ಭಾವುಕ ಕ್ಷಣ ಅಡಗಿರುವುದು ಆ ಘಟನೆಯ ನಂತರದ ಫೋನ್ ಕರೆಯಲ್ಲಿ. ಮೈಯೆಲ್ಲಾ ರಕ್ತ ಸುರಿಯುತ್ತಿದ್ದರೂ, ತಲೆಗೆ ತೀವ್ರ ಏಟಾಗಿದ್ದರೂ ಶುಭ್ರಾಂಶು ಮೊದಲು ತನ್ನ ತಂದೆ ಸುದರ್ಶನ ಭೋಲ್ ಅವರಿಗೆ ಫೋನ್ ಮಾಡಿದ್ದಾರೆ.
“ಅಪ್ಪಾ, ಕೂಡಲೇ ಅಂಬುಲೆನ್ಸ್ ವ್ಯವಸ್ಥೆ ಮಾಡಿ ಫಾರ್ಮ್‌ಹೌಸ್‌ಗೆ ಬನ್ನಿ. ಆದರೆ… ದಯವಿಟ್ಟು ಈ ವಿಷಯವನ್ನು ‘ಅಮ್ಮನಿಗೆ’ ಮಾತ್ರ ಹೇಳಬೇಡಿ, ಅವಳು ಗಾಬರಿಯಾಗುತ್ತಾಳೆ,” ಎಂಬ ಮಾತುಗಳು ಅವರ ತಂದೆಯ ಎದೆಯನ್ನು ಚುಚ್ಚಿದವು.
ತಾನು ಸಾವಿನ ದವಡೆಯಿಂದ ಬಂದಿದ್ದರೂ, ತನ್ನ ಸ್ಥಿತಿ ಕಂಡು ತಾಯಿ ತಲ್ಲಣಿಸಬಾರದೆಂಬ ಆ ಮಗನ ಕಾಳಜಿ ನಿಜಕ್ಕೂ ಕಣ್ಣಾಲಿಗಳನ್ನು ತೇವಗೊಳಿಸುತ್ತದೆ. ಅಷ್ಟೊಂದು ನೋವಿನಲ್ಲೂ ಅಪ್ಪನಿಗೆ ಕರೆ ಮಾಡಿ ಅಂಬುಲೆನ್ಸ್ ಕರೆಸಿದ ಶುಭ್ರಾಂಶು, ನಂತರ ಸುರಕ್ಷಿತವಾಗಿರಲು ತನ್ನನ್ನು ತಾನು ಮನೆಯೊಳಗೆ ಲಾಕ್ ಮಾಡಿಕೊಂಡಿದ್ದರು.
ಅವರ ತಲೆ ಮತ್ತು ದೇಹದ ಹಲವಾರು ಭಾಗಗಳಿಗೆ ತೀವ್ರ ಗಾಯಗಳಾಗಿವೆ. ಹತ್ತಿರದಲ್ಲೆ ತಕ್ಷಣದ ವೈದ್ಯಕೀಯ ಸಹಾಯವನ್ನು ನೀಡಲಾಯಿತು ಮತ್ತು ನಂತರ ಉತ್ತಮ ಚಿಕಿತ್ಸೆಗಾಗಿ ಕಟಕ್‌ಗೆ ಸ್ಥಳಾಂತರಿಸಲಾಯಿತು.
ಸದ್ಯ ಶುಭ್ರಾಂಶು ಕಟಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ. ಆ ಚಿರತೆ ಹಳ್ಳಿಗೆ ಏಕೆ ಬಂತು? ಆಹಾರದ ಹುಡುಕಾಟವೇ ಅಥವಾ ಆವಾಸಸ್ಥಾನದ ನಾಶವೇ? ಎಂಬ ಪ್ರಶ್ನೆಗಳು ಕಾಡುತ್ತಿವೆ.
ಒಂದೆಡೆ ಅಮೂಲ್ಯ ವನ್ಯಜೀವಿ ಪ್ರಾಣ ಕಳೆದುಕೊಂಡರೆ, ಇನ್ನೊಂದೆಡೆ ತನ್ನ ಪ್ರಾಣ ಉಳಿಸಿಕೊಳ್ಳಲು ಹೋರಾಡಿದ ಯುವಕ ತೀವ್ರವಾಗಿ ಗಾಯಗೊಂಡಿದ್ದಾನೆ. ಆದರೆ ಈ ಎಲ್ಲ ಆತಂಕದ ನಡುವೆಯೂ, ಶುಭ್ರಾಂಶು ಅವರ ಧೈರ್ಯ ಮತ್ತು ತಾಯಿಯ ಮೇಲಿಟ್ಟಿದ್ದ ಆ ಮಮತೆ ಜನರ ಮನ ಗೆದ್ದಿದೆ.


ನಿಮ್ಮ ಕಾಮೆಂಟ್ ಬರೆಯಿರಿ