ನೌಕಾಪಡೆಯಲ್ಲೂ ಭಾರತ ಆತ್ಮನಿರ್ಭರ, ೪೦ ಹಡಗುಗಳು ಭಾರತದಲ್ಲಿಯೇ ನಿರ್ಮಾಣ: ರಾಜನಾಥ್‌

ಕಾರವಾರ:ಭಾರತೀಯ ಐಎನ್‌ಎಸ್ ಕದಂಬ ನೌಕಾನೆಲೆಗೆ ಗುರುವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಭೇಟಿ ನೀಡಿ ಸೀಬರ್ಡ್ ಯೋಜನೆಯ ಎರಡನೇ ಹಂತದ ಯೋಜನೆಯ ಬಗ್ಗೆ ಪರಿವೀಕ್ಷಣೆ ಮಾಡಿದ್ದಾರೆ.
ಗೋವಾ ಏರ್‌ಪೋರ್ಟ್‌ನಿಂದ ಹ್ಯಾಲಿಕ್ಯಾಪ್ಟರ್ ಮೂಲಕ ಕಾರವಾರದ ಅರಗಾದಲ್ಲಿರುವ ಐಎನ್‌ಎಸ್ ಕದಂಬ ನೌಕಾನೆಲೆಗೆ ಗುರುವಾರ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರೊಂದಿಗೆ ಆಗಮಿಸಿ ಇಲ್ಲಿನ ವಿವಿಧ ಸೈಟ್‌ಗಳಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.
ಬಳಿಕ ಐಎನ್‌ಎಸ್ ಕದಂಬ ಮುಖ್ಯ ಕಚೇರಿಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ನೌಕಾಪಡೆಯ ಅಧಿಕಾರಿಗಳು, ನಾವಿಕರೊಂದಿಗೆ ಮಾತನಾಡಿ ಅವರು ರಕ್ಷಣಾ ವಿಷಯದಲ್ಲಿಯೂ ಭಾರತ ಆತ್ಮನಿರ್ಭರವಾಗಲಿದೆ. ನೌಕಾಪಡೆಗೆಂದು ಒಟ್ಟು ೪೬ ಹಡುಗುಗಳು ಹಾಗೂ ಜಲಾಂತರ್ಗಾಮಿಗಳು ಸಿದ್ಧವಾಗುತ್ತಿದ್ದು ಇವುಗಳಲ್ಲಿ ೪೦ ಭಾರತದಲ್ಲಿಯೇ ನಿರ್ಮಾಣವಾಗುತ್ತಿವೆ. ಭಾರತವೂ ಪ್ರತಿ ವಿಷಯದಲ್ಲಿಯೂ ಆತ್ಮ ನಿರ್ಭರವಾಗಬೇಕು ಎಂಬುದನ್ನು ಪ್ರಧಾನಿಗಳು ಪ್ರತಿ ಬಾರಿ ಹೇಳುತ್ತಾರೆ. ಈ ಬಗ್ಗೆ ಸರ್ವ ಪ್ರಯತ್ನಗಳು ನಡೆಯುತ್ತಿವೆ. ಮುಂದಿನ ಕೆಲವೇ ವರ್ಷಗಳಲ್ಲಿ ಭಾರತವು ಟಾಪ್ ೩ ರಾಷ್ಟ್ರಗಳಲ್ಲಿ ಒಂದಾಗಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಭವಿಷ್ಯದಲ್ಲಿ ದೇಶದ ಸುರಕ್ಷತೆಯ ವಿಷಯದಲ್ಲಿ ನೌಕಾಸೇನೆಯೇ ಪ್ರಮುಖ ಪಾತ್ರ ವಹಿಸಲಿದೆ. ಕಳೆದ ಹಲವಾರು ವರ್ಷಗಳಿಂದ ತಾನು ಈ ಬಗ್ಗೆ ಗಮನಿಸುತ್ತಿದ್ದೇನೆ. ಕಾರವಾರದ ನೌಕಾನೆಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಇಡೀ ವಿಶ್ವಕ್ಕೆ ಭಾರತೀಯ ನೌಕಾಪಡೆಯ ಕೊಡುಗೆ ಬಹಳ ಇದೆ. ಇದಕ್ಕೆ ನಮ್ಮ ಸಾಮರ್ಥ್ಯವನ್ನು ನಾವೇ ಅರಿತುಕೊಳ್ಳುವ ಅವಶ್ಯಕತೆ ಇದೆ. ಕೆಲವೊಮ್ಮೆ ನಮ್ಮ ಸಾಮರ್ಥ್ಯವೇನು ಎಂಬುದನ್ನು ನಾವೇ ಮರೆತು ಬಿಡುತ್ತೇವೆ. ನಾವು ಚಿಕ್ಕವರಿದ್ದೇವೆ, ವಿಶ್ವದಲ್ಲಿ ದೊಡ್ಡ ದೊಡ್ಡ ತಾಕತ್ತುಗಳಿವೆ, ಅವರ ಎದುರು ನಾವು ಹೇಗೆ ನಿಲ್ಲಲು ಸಾಧ್ಯ, ಈ ತರಹದ ಯೋಚನೆಗಳು ಬರುತ್ತವೆ.ಆದರೆ ಯುದ್ಧಗಳು ನಡೆದಾಗ ಕೇವಲ ಶಸ್ತ್ರಗಳಿಂದ ಕಾರ್ಯವಾಗುವುದಿಲ್ಲ. ನಮ್ಮಲ್ಲಿನ ಉತ್ಸಾಹ, ಆತ್ಮವಿಶ್ವಾಸದಿಂದ ಸಾಧ್ಯವಾಗುತ್ತದೆ. ಈ ರೀತಿ ಈ ಹಿಂದೆಯೂ ಹಲವು ಘಟನೆಗಳು ನಡೆದಿವೆ ಎಂದರು.
ಕಾರವಾರದ ನೇವಲ್ ಬೇಸ್ ಕೇವಲ ಭಾರತದ ಮಾತ್ರವಲ್ಲದೇ ಏಷ್ಯಾದ ಅತೀ ದೊಡ್ಡ ನೌಕಾನೆಲೆಯಾಗಿ ರೂಪುಗೊಳ್ಳಬೇಕಾಗಿದೆ. ಇತರ ನೇವಲ್ ಬೇಸ್‌ಗಳಿಗಿಂತ ಕಾರವಾರದ ಐಎನ್‌ಎಸ್ ಕದಂಬ ನೌಕಾನೆಲೆಯು ವಿಶೇಷವಾದದ್ದು. ದೇಶದ ಮೊದಲ ಸೀ ಲಿಫ್ಟ್ ವಿಧಾನವನ್ನು ಇಲ್ಲಿ ಇಂದು ವೀಕ್ಷಿಸಿದ್ದೇನೆ. ವೈಮಾನಿಕ ಸಮೀಕ್ಷೆಯ ಮೂಲಕ ಪ್ರಾಜೆಕ್ಟ್ ಸೀಬರ್ಡ್‌ನ್ನು ವೀಕ್ಷಿಸಿದರು.

ಪ್ರಮುಖ ಸುದ್ದಿ :-   ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ, ಸುಳ್ಳು ಪ್ರಕರಣ ದಾಖಲು : ಬಂಧನದ ನಂತರ ರೇವಣ್ಣ ಮೊದಲ ಪ್ರತಿಕ್ರಿಯೆ

ಸೀಬರ್ಡ್ ಪ್ರಾಜೆಕ್ಟ್‌ ಹತ್ತಿರದಿಂದ ವೀಕ್ಷಿಸಿ ಖುಷಿಯಾಗಿದೆ..

ಕಾರವಾರದ ಪ್ರಾಜೆಕ್ಟ್ ಸೀಬರ್ಡ್‌ನ್ನು ನೋಡಲು ಹಾಗೂ ಇದರ ಬಗ್ಗೆ ಅರಿಯಲು ಕುತೂಹಲಿಯಾಗಿದ್ದೆ. ಈ ಹಿಂದೊಮ್ಮೆ ಐಎನ್‌ಎಸ್ ವಿಕ್ರಮಾದಿತ್ಯ ಹಡಗಿನ ಮೇಲೆ ಇಳಿದು ಅಲ್ಲಿಂದಲೇ ಮರಳಿದ್ದೆ. ಆ ಸಂದರ್ಭದಲ್ಲಿ ಆಗಸದಿಂದಲೇ ಭೂಮಿಯಲ್ಲಿರುವ ಈ ಸೀಬರ್ಡ್ ಪ್ರಾಜೆಕ್ಟ್‌ನ್ನು ವೀಕ್ಷಿಸಿದ್ದೆ. ಇಂದು ಹತ್ತಿರದಿಂದ ವೀಕ್ಷಿಸಿ ಬಹಳಷ್ಟು ಖುಷಿಯಾಗಿದ್ದು ಈ ನೌಕಾನೆಲೆಯ ಬಗ್ಗೆ ತಮ್ಮ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಿದೆ. ಈ ಪ್ರಾಜೆಕ್ಟ್ ಪೂರ್ಣಗೊಳ್ಳುತ್ತಿದ್ದಂತೆ ದೇಶದ ಸುರಕ್ಷತಾ ಸಿದ್ಧತೆಗಳು ಬಲಿಷ್ಠವಾಗಲಿವೆ. ಜೊತೆಗೆ ವಾಣಿಜ್ಯ, ಆರ್ಥಿಕವಾಗಿ ಜೊತೆಗೆ ಜನರಿಗೆ ಮಾನವೀಯ ಸಹಾಯ ಮಾಡುವಲ್ಲಿಯೂ ಸಹಾಯಕವಾಗಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ನೌಕಾನೆಲೆಯ ಹ್ಯಾಲಿಪ್ಯಾಡ್‌ನಲ್ಲಿ ಇಳಿಯುವ ಮುನ್ನ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಸೀಬರ್ಡ್ ಪ್ರಾಜೆಕ್ಟ್ ಏರಿಯಾ ಹಾಗೂ ಸೈಟ್‌ಗಳ ವೈಮಾನಿಕ ಸಮೀಕ್ಷೆಯನ್ನು ಕೈಗೊಂಡರು. ಈ ವೇಳೆ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರು ಸಚಿವರಿಗೆ ಮಾಹಿತಿಯನ್ನು ಒದಗಿಸಿದರು.ಇದರ ಭವಿಷ್ಯವೂ ಕಂಡಿದೆ. ನೌಕಾನೆಲೆಯ ಭವಿಷ್ಯವು ಉಜ್ವಲವಾಗಲಿದ್ದು ಇದರ ಕ್ರೆಡಿಟ್ ಇಲ್ಲಿನ ಎಲ್ಲಾ ನೌಕಾಪಡೆ ಅಧಿಕಾರಿಗಳು, ಸಿಬ್ಬಂದಿಗೆ ಸಲ್ಲುತ್ತದೆ ಎಂದರು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ : ಗೃಹ ಸಚಿವ ಡಾ..ಪರಮೇಶ್ವರ

ಕೋವಿಡ್ ತೀವ್ರವಾಗಿದ್ದ ಸಂದರ್ಭದಲ್ಲಿ ಭಾರತೀಯ ನೌಕಾಪಡೆ ಕೈಗೊಂಡಿರುವ ಕಾರ್ಯಗಳು ಅಸಾಮಾನ್ಯ. ಇಡೀ ದೇಶದಲ್ಲಿ ಆಮ್ಲಜನಕ ಬೇಕು ಎಂದು ಬೇಡಿಕೆ ಕೇಳಿಬರುತ್ತಿತ್ತು. ಈ ಸಂದರ್ಭದಲ್ಲಿ ಹೊರದೇಶಗಳಿಂದ ಆಕ್ಸಿಜನ್ ಕಂಟೇನರ್‌ಗಳನ್ನು ಹೊತ್ತು ಭಾರತಕ್ಕೆ ತಲುಪಿಸುವಲ್ಲಿ ನೌಕಾಪಡೆ ಮಹತ್ವದ ಪಾತ್ರ ವಹಿಸಿದೆ. ಬೇರೆ ದೇಶಗಳಲ್ಲಿಯೂ ಈ ವಿಷಯದಲ್ಲಿ ಭಾರತೀಯ ನೌಕಾಪಡೆಯನ್ನು ಪ್ರಶಂಸಿಸಲಾಗಿದೆ ಎಂದರು.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement