“ಕಣ್ಣಿನಲ್ಲಿ 3, ದೇಹದಲ್ಲಿ 200 ಪೆಲೆಟ್‌ಗಳು”..: ಎಫ್‌ಐಆರ್‌ ದಾಖಲಿಸಲು ಒತ್ತಾಯಿಸಿ ಠಾಣೆ ಮುಂದೆ ರಾಹುಲ್ ಗಾಂಧಿ ಧರಣಿ

ನವದೆಹಲಿ: ವಿದ್ಯಾರ್ಥಿಗಳ ಮೇಲೆ ಪೆಲೆಟ್‌ ಗನ್‌ ಬಳಸಿ ಗುಂಡಿನ ದಾಳಿ ನಡೆಸಲು ಆದೇಶ ನೀಡಿದ್ದು ಯಾರು ಎಂಬುದಕ್ಕೆ ಉತ್ತರ ನೀಡಬೇಕು ಎಂದು ಆಗ್ರಹಿಸುತ್ತಿರುವ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಪೆಲೆಟ್‌ ಗನ್‌ ದಾಳಿಗೆ ಒಳಗಾದ ವಿದ್ಯಾರ್ಥಿ ಸಾಹಿಲ್ ಲೋಚಬ್‌ ಅವರನ್ನು ಜೊತೆಯಲ್ಲಿ ಕರೆದುಕೊಂಡು ಇಂದು, ಶುಕ್ರವಾರ ಸಂಸತ್‌ ಸ್ಟ್ರೀಟ್‌ ಪೊಲೀಸ್ ಠಾಣೆಗೆ ತೆರಳಿ ಎಫ್‌ಐಆರ್‌ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಪೊಲೀಸರು ಎಫ್‌ಐಆರ್‌ ದಾಖಲಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಹಾಗೂ ಸಾಹಿಲ್ ಲೋಚಬ್‌ ಪೊಲೀಸ್ ಠಾಣೆ ಹೊರಗೆ ಧರಣಿ ನಡೆಸಿದರು.
ಪೊಲೀಸರು ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸಲು ಸಾಧ್ಯವಿಲ್ಲ ಎಂದು ಹೇಳಿದ ಬಳಿಕವೂ ರಾಹುಲ್ ಗಾಂಧಿ ಅಲ್ಲಿಂದ ತೆರಳಲು ನಿರಾಕರಿಸಿದರು. ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು ಹಾಗೂ ಅರೆಸೇನಾ ಪಡೆಗಳು ಅತಿಯಾದ ಮತ್ತು ಅಸಮರ್ಪಕ ಬಲಪ್ರಯೋಗ ಮಾಡಿರುವ ಆರೋಪಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್‌ ಹೈ-ಪವರ್ಡ್ ಎಕ್ಸ್‌ಪರ್ಟ್ ಕಮಿಟಿ (HPEC) ರಚಿಸಿದೆ ಎಂದು ದೆಹಲಿ ಪೊಲೀಸರು ಕಾಂಗ್ರೆಸ್‌ ನಾಯಕರಿಗೆ ತಿಳಿಸಿದರು.
ಆದರೆ, ಎಫ್‌ಐಆರ್‌ ದಾಖಲಾಗುವವರೆಗೆ ಧರಣಿ ಮುಂದುವರಿಸುವುದಾಗಿ ರಾಹುಲ್ ಗಾಂಧಿ ಸ್ಪಷ್ಟಪಡಿಸಿದರು. ಪೊಲೀಸ್ ಅಧಿಕಾರಿಗಳು ತಮಗೆ, ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸಲು ಸಾಧ್ಯವಿಲ್ಲ, ಏಕೆಂದರೆ “ಮೇಲಿನಿಂದ ಆದೇಶವಿದೆ” ಎಂದು ತಿಳಿಸಿದ್ದಾರೆ ಎಂದು ಅವರು ಆರೋಪಿಸಿದರು.
“ನಾವು ವಿದ್ಯಾರ್ಥಿಗಳ ಪರ ನಿಲ್ಲುತ್ತೇವೆ. ನ್ಯಾಯಕ್ಕಾಗಿ ನಿಲ್ಲುತ್ತೇವೆ. ಮೌನವಾಗಿರುವುದಿಲ್ಲ. ಎಫ್‌ಐಆರ್‌ ದಾಖಲಾಗುವವರೆಗೆ ಡಿಸಿಪಿ ಕಚೇರಿ ಎದುರು ಧರಣಿ,” ಎಂದು ಕಾಂಗ್ರೆಸ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿತು. ರಾಹುಲ್ ಗಾಂಧಿ, ಸಾಹಿಲ್ ಲೋಚಬ್‌ ಮತ್ತು ಅವರ ತಾಯಿ ಪೊಲೀಸ್ ಠಾಣೆ ಹೊರಗೆ ಕುರ್ಚಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಬಳಿಕ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಕೂಡ ಸ್ಥಳಕ್ಕೆ ಆಗಮಿಸಿ ಧರಣಿಯಲ್ಲಿ ಪಾಲ್ಗೊಂಡರು.
ರಾಹುಲ್ ಗಾಂಧಿ ಎಕ್ಸ್‌ನಲ್ಲಿ, ಜುಲೈ 20ರಂದು ಜಂತರ್‌ ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಸಾಹಿಲ್ ಮೇಲೆ ಪೊಲೀಸರು ಪೆಲೆಟ್‌ ಗನ್‌ನಿಂದ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದರು. ಈ ದಾಳಿಯಿಂದ ಸಾಹಿಲ್ ಅವರ ಒಂದು ಕಣ್ಣಿನ ದೃಷ್ಟಿಗೆ ಅಪಾಯ ಉಂಟಾಗಿದೆ ಎಂದು ಅವರು ಹೇಳಿದರು.
ಆದರೆ, ದೆಹಲಿ ಪೊಲೀಸರು ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಪೆಲೆಟ್‌ ಗನ್‌ ಬಳಸಲಾಗಿದೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ. ಏಕಕಾಲದಲ್ಲಿ ಹಲವು ಸಣ್ಣ ಲೋಹದ ಗುಂಡುಗಳನ್ನು ಚಿಮ್ಮಿಸುವ ಪೆಲೆಟ್‌ ಗನ್‌ಗಳು ಗಂಭೀರ ಗಾಯಗಳನ್ನು ಉಂಟುಮಾಡುವ ಸಾಮರ್ಥ್ಯ ಹೊಂದಿವೆ. ಪೆಲೆಟ್‌ ಗನ್‌ಗಳನ್ನು 2010ರಲ್ಲಿ ಕಾಶ್ಮೀರದ ಪ್ರತಿಭಟನಾಕಾರರ ವಿರುದ್ಧ ಮೊದಲ ಬಾರಿಗೆ ಬಳಸಲಾಗಿತ್ತು. ಗಲಭೆ ನಿಯಂತ್ರಣಕ್ಕಾಗಿ ಬಳಸುವ ಕೇಂದ್ರ ಮೀಸಲು ಪೊಲೀಸ್ ಪಡೆ (CRPF)ಯ ರ‍್ಯಾಪಿಡ್ ಆಕ್ಷನ್ ಫೋರ್ಸ್‌ (RAF) ಬಳಿ ಪೆಲೆಟ್‌ ಗನ್‌ಗಳು ಹಾಗೂ ಶಾಕ್‌ ಬ್ಯಾಟನ್‌ಗಳು ಸೇರಿದಂತೆ ವಿವಿಧ ಸಾಧನಗಳಿರುತ್ತವೆ. ಜಂತರ್‌ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ  ರ‍್ಯಾಪಿಡ್ ಆಕ್ಷನ್ ಫೋರ್ಸ್‌ (RAF) ನಿಯೋಜಿಸಲಾಗಿತ್ತು. ಆದರೆ, ಅಲ್ಲಿ ಪೆಲೆಟ್‌ ಗನ್‌ ಬಳಸಲಾಗಿದೆಯೇ ಎಂಬ ಕುರಿತು ಸಿಆರ್‌ಪಿಎಫ್‌ (CRPF) ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪೆಲೆಟ್‌ ಗನ್‌ನ ಒಂದು ಕಾರ್ಟ್ರಿಡ್ಜ್‌ನಲ್ಲಿ 600ರವರೆಗೆ ಲೋಹದ ಅಥವಾ ರಬ್ಬರ್‌ ಗುಂಡುಗಳಿರಬಹುದು. ಅವು ಸುಮಾರು ಸೆಕೆಂಡಿಗೆ 1,000 ಅಡಿ ವೇಗದಲ್ಲಿ ಎಲ್ಲ ದಿಕ್ಕುಗಳಿಗೂ ಚದುರಬಹುದು. ಪ್ರಮಾಣಿತ ಕಾರ್ಯಾಚರಣಾ ವಿಧಾನ (SOP) ಪ್ರಕಾರ, ಪೆಲೆಟ್‌ ಗನ್‌ ಅನ್ನು ಕನಿಷ್ಠ 500 ಅಡಿ ದೂರದಿಂದ ಹಾರಿಸಬೇಕು ಮತ್ತು ಗನ್‌ನ ನಳಿಕೆಯನ್ನು ಸೊಂಟದ ಕೆಳಭಾಗದತ್ತ ಮಾತ್ರ ಗುರಿಯಾಗಿಸಬೇಕು.
ಪೊಲೀಸ್ ಠಾಣೆ ಎದುರು ಮಾಧ್ಯಮಗಳ ಮುಂದೆ ಮಾತನಾಡಿದ ರಾಹುಲ್ ಗಾಂಧಿ, ಸಾಹಿಲ್ ಅವರ ಜೊತೆ ಸಣ್ಣ ಪ್ಲಾಸ್ಟಿಕ್‌ ಬಾಕ್ಸ್‌ವೊಂದನ್ನು ತೋರಿಸಿದರು. ನೀಲಿ ಮುಚ್ಚಳವಿದ್ದ ಆ ಬಾಕ್ಸ್‌ ತೆರೆದು ಅದರಲ್ಲಿದ್ದ ಸಣ್ಣ ಗುಂಡುಗಳನ್ನು ತಮ್ಮ ಕೈಗೆ ಸುರಿದುಕೊಂಡು ಮಾಧ್ಯಮಗಳಿಗೆ ಪ್ರದರ್ಶಿಸಿದರು.
“ಇವು ಪೆಲೆಟ್‌ಗಳು. ಇವುಗಳನ್ನು ನೋಡಿ, ಚೆನ್ನಾಗಿ ನೋಡಿ,” ಎಂದು ಹಿಂದಿಯಲ್ಲಿ ಹೇಳಿದ ರಾಹುಲ್ ಗಾಂಧಿ, “ಇವು ಎಲ್ಲಿಂದ ಬಂದವು?” ಎಂದು ಪ್ರಶ್ನಿಸಿದರು. ಬಳಿಕ, “ಇವು ಅವರ ದೇಹದಿಂದ ಬಂದವು,” ಎಂದು ಉತ್ತರಿಸಿದರು.
ಕಪ್ಪು ಬಣ್ಣದ ಕನ್ನಡಕ ಧರಿಸಿದ್ದ ಸಾಹಿಲ್‌ ತಮ್ಮ ಟಿ-ಶರ್ಟ್‌ನ ತೋಳನ್ನು ಮೇಲಕ್ಕೆತ್ತಿ ದೇಹದಲ್ಲಿರುವ ಗಾಯಗಳನ್ನು ತೋರಿಸಿದರು. ಅವರ ದೇಹದಲ್ಲಿ ಸುಮಾರು 200 ಪೆಲೆಟ್‌ಗಳು ಹಾಗೂ ಕಣ್ಣಿನಲ್ಲಿ ಮೂರು ಪೆಲೆಟ್‌ಗಳು ಸಿಲುಕಿಕೊಂಡಿವೆ ಎಂದು ರಾಹುಲ್ ಗಾಂಧಿ ಹೇಳಿದರು.
ಲೇಡಿ ಹಾರ್ಡಿಂಜ್ ಮೆಡಿಕಲ್ ಕಾಲೇಜು ಹಾಗೂ ಏಮ್ಸ್‌ನ ವೈದ್ಯಕೀಯ ವರದಿಗಳನ್ನು ಪ್ರದರ್ಶಿಸಿದ ರಾಹುಲ್ ಗಾಂಧಿ, ಸಾಹಿಲ್‌ ಅವರ ದೇಹದಲ್ಲಿ 200ಕ್ಕೂ ಹೆಚ್ಚು ಪೆಲೆಟ್‌ಗಳು ಸಿಲುಕಿಕೊಂಡಿರುವುದನ್ನು ವರದಿಗಳು ದಾಖಲಿಸಿವೆ ಎಂದು ಹೇಳಿದರು.
“ಪೊಲೀಸರು ಈ ಪೆಲೆಟ್‌ಗಳನ್ನು ಹಾರಿಸಿಲ್ಲ ಎಂದಾದರೆ, ಯಾರೋ ಒಬ್ಬರು ಅವುಗಳನ್ನು ಹಾರಿಸಿರಬೇಕು. ಬಹುಶಃ ಆತನೇ ತನ್ನ ಮೇಲೆ ಹಾರಿಸಿಕೊಂಡಿರಬಹುದು. ಆದರೆ ಒಂದು ಅಪರಾಧ ನಡೆದಿದೆ. ನಾವು ಕೇಳುತ್ತಿರುವುದು ಕೇವಲ ಎಫ್‌ಐಆರ್‌ ದಾಖಲಿಸುವಂತೆ. ಇಲ್ಲಿದ್ದಾರೆ ಅವರ ತಾಯಿ ಮತ್ತು ತಂದೆ. ದಯವಿಟ್ಟು ಎಫ್‌ಐಆರ್‌ ದಾಖಲಿಸಿ. ನಾವು ಈ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಮಾತ್ರ ಕೇಳುತ್ತಿದ್ದೇವೆ,” ಎಂದು ರಾಹುಲ್ ಗಾಂಧಿ ಹೇಳಿದರು.
ಬಿಜೆಪಿ ಟೀಕೆ
ರಾಹುಲ್ ಗಾಂಧಿ ನಡೆಸಿದ ಧರಣಿಯನ್ನು ಬಿಜೆಪಿ ಸಂಸದ ರವಿಶಂಕರ ಪ್ರಸಾದ ಟೀಕಿಸಿದ್ದಾರೆ. ರಾಹುಲ್ ಗಾಂಧಿ “ಅರಾಜಕತೆಯ ರಾಜಕೀಯ” ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ವಂದೇ ಮಾತರಂ ವಿವಾದದಿಂದ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್‌ ಈ ತಂತ್ರ ಅನುಸರಿಸುತ್ತಿದೆ ಎಂದು ಹೇಳಿದರು.
“ರಾಹುಲ್ ಗಾಂಧಿ ಅರಾಜಕತೆಯ ರಾಜಕೀಯ ಮಾಡುತ್ತಿರುವುದು ಅತ್ಯಂತ ದುರದೃಷ್ಟಕರ. ಪ್ರಸ್ತುತ ಅವರು ಯಾವುದೇ ಅನುಮತಿ ಅಥವಾ ಪೂರ್ವ ಮಾಹಿತಿ ಇಲ್ಲದೆ ಸಂಸತ್‌ ಸ್ಟ್ರೀಟ್‌ ಪೊಲೀಸ್ ಠಾಣೆ ಎದುರು ಧರಣಿ ನಡೆಸುತ್ತಿದ್ದಾರೆ. ಅವರು ಉಲ್ಲೇಖಿಸುತ್ತಿರುವ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐಆರ್‌ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಅವರಿಗೆ ತಿಳಿಸಿದ್ದಾರೆ. ಈ ವಿಷಯದ ತನಿಖೆಗಾಗಿ ಸುಪ್ರೀಂ ಕೋರ್ಟ್‌ ಹೈ-ಪವರ್ಡ್ ಸಮಿತಿಯನ್ನೂ ರಚಿಸಿದೆ ಎಂದ ಅವರು, ರಾಹುಲ್ ಗಾಂಧಿ, ನೀವು ಯಾವುದೇ ಕಾನೂನನ್ನೂ ಗೌರವಿಸುವುದಿಲ್ಲವೇ?” ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ ತನ್ನ ವಂದೇ ಮಾತರಂ ಕುರಿತ ನಿಲುವಿನಿಂದ ಸಂಕಷ್ಟಕ್ಕೆ ಸಿಲುಕಿರುವ ಕಾರಣ ಈ ರೀತಿಯ ಪ್ರತಿಭಟನೆ ನಡೆಸುತ್ತಿದೆ ಎಂದು ಆರೋಪಿಸಿದ ಅವರು, ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ನ ಕ್ರಮವನ್ನು ಖಂಡಿಸುವುದಾಗಿ ಹೇಳಿದರು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement