ನವದೆಹಲಿ: ದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಉನ್ನತ ಮಟ್ಟದ ಬ್ರಿಕ್ಸ್ (BRICS) ಶೃಂಗಸಭೆ ಭಾನುವಾರ ‘ನವದೆಹಲಿ ಘೋಷಣೆ 2026’ರೊಂದಿಗೆ ಮುಕ್ತಾಯಗೊಂಡಿದ್ದು, ಭಾರತದ ಪಾಲಿಗೆ ಮಹತ್ವದ ರಾಜತಾಂತ್ರಿಕ ಯಶಸ್ಸಾಗಿ ಹೊರಹೊಮ್ಮಿದೆ.
ಮೂರು ದಿನಗಳ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಚೀನಾ ಅಧ್ಯಕ್ಷ ಶೀ ಜಿನ್‌ಪಿಂಗ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಸೇರಿದಂತೆ ಕನಿಷ್ಠ 15 ರಾಷ್ಟ್ರಗಳ ನಾಯಕರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳ ಜೊತೆ ಭಾರತದ ಸಂಬಂಧವನ್ನು ಕಾಪಾಡಿಕೊಳ್ಳುವುದರ ಜೊತೆಗೆ, ರಷ್ಯಾ, ಚೀನಾ, ಇರಾನ್ ಸೇರಿದಂತೆ ಪ್ರಮುಖ ಪಾಲುದಾರ ರಾಷ್ಟ್ರಗಳ ಜೊತೆಗಿನ ಬಾಂಧವ್ಯವನ್ನು ಸಮತೋಲನಗೊಳಿಸುವ ರಾಜತಾಂತ್ರಿಕ ನಿಲುವನ್ನು ಪ್ರಧಾನಿ ಮೋದಿ ಶೃಂಗಸಭೆಯಲ್ಲಿ ಪ್ರದರ್ಶಿಸಿದರು.
ಇದರೊಂದಿಗೆ ಬ್ರಿಕ್ಸ್ ಬಿಸಿನೆಸ್ ಫೋರಂ ಹಾಗೂ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಮೋದಿ ಭಾಗವಹಿಸಿ, ಜಾಗತಿಕ ದಕ್ಷಿಣ (Global South) ರಾಷ್ಟ್ರಗಳ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಅಗತ್ಯವನ್ನು ಪ್ರತಿಪಾದಿಸಿದರು. ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆ ತರಬೇಕು ಎಂದು ಕರೆ ನೀಡಿದ ಅವರು, ಬ್ರಿಕ್ಸ್ ರಾಷ್ಟ್ರಗಳ ನಡುವಿನ ಸಹಕಾರವನ್ನು ಹೆಚ್ಚಿಸುವ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಪ್ರಯೋಜನವಾಗುವ ಹಲವು ಉಪಕ್ರಮಗಳನ್ನು ಪ್ರಸ್ತಾಪಿಸಿದರು.
ಮೊದಲ ದಿನ ಪುತಿನ್, ಪೆಜೆಶ್ಕಿಯಾನ್ ಜತೆ ಮಹತ್ವದ ಮಾತುಕತೆ
ಸೆಪ್ಟೆಂಬರ್ 11ರಂದು ಭಾರತ ಮಂಟಪದಲ್ಲಿ ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ನಡುವಿನ ಸಂಬಂಧಗಳು ಉದ್ವಿಗ್ನವಾಗಿರುವ ಸಂದರ್ಭದಲ್ಲಿ ನಡೆದ ಈ ಮಾತುಕತೆ ಮಹತ್ವ ಪಡೆದುಕೊಂಡಿತು.
ಭಾರತ-ರಷ್ಯಾ ಸಂಬಂಧಗಳ ಕುರಿತು ಉಭಯ ನಾಯಕರು ವ್ಯಾಪಕ ಚರ್ಚೆ ನಡೆಸಿದರು. 2030ರ ವೇಳೆಗೆ ಉಭಯ ದೇಶಗಳ ನಡುವಿನ ವಾರ್ಷಿಕ ದ್ವಿಪಕ್ಷೀಯ ವ್ಯಾಪಾರವನ್ನು 100 ಬಿಲಿಯನ್ ಡಾಲರ್‌ಗೆ ಹೆಚ್ಚಿಸುವ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಯಿತು. ರಕ್ಷಣಾ ಸಹಕಾರ, ಇಂಧನ ಭದ್ರತೆ ಹಾಗೂ ರಸಗೊಬ್ಬರ ಭದ್ರತೆಯೂ ಮಾತುಕತೆಯ ಪ್ರಮುಖ ವಿಷಯಗಳಾಗಿದ್ದವು.
ಇದಾದ ಕೆಲವೇ ಗಂಟೆಗಳ ಬಳಿಕ ಪ್ರಧಾನಿ ಮೋದಿ ಅವರು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರನ್ನು ಭೇಟಿಯಾದರು. ಎರಡು ವಾರಗಳ ಅವಧಿಯಲ್ಲಿ ಉಭಯ ನಾಯಕರ ನಡುವೆ ನಡೆದ ಎರಡನೇ ಭೇಟಿಯಿದು. ಪಶ್ಚಿಮ ಏಷ್ಯಾ ಪ್ರದೇಶದಲ್ಲಿನ ಎಲ್ಲ ಸಮಸ್ಯೆಗಳಿಗೆ ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗದ ಮೂಲಕವೇ ಪರಿಹಾರ ಕಂಡುಕೊಳ್ಳಬೇಕು ಎಂಬ ಭಾರತದ ನಿರಂತರ ನಿಲುವನ್ನು ಮೋದಿ ಪುನರುಚ್ಚರಿಸಿದರು.
ಪಶ್ಚಿಮ ಏಷ್ಯಾದಲ್ಲಿ ಸಾಗಣೆಯ ಸ್ವಾತಂತ್ರ್ಯ, ನೌಕಾಯಾನ ಮಾರ್ಗಗಳ ಸುರಕ್ಷತೆ ಹಾಗೂ ನಾವಿಕರ ಭದ್ರತೆಯ ಬಗ್ಗೆಯೂ ಮೋದಿ ಗಮನ ಸೆಳೆದರು. ಇದೇ ವೇಳೆ, ಸಂಘರ್ಷದ ಪರಿಸ್ಥಿತಿಯಲ್ಲಿ ಭಾರತ ಇನ್ನಷ್ಟು ಪ್ರಮುಖ ರಾಜತಾಂತ್ರಿಕ ಪಾತ್ರ ವಹಿಸಬೇಕು ಎಂದು ಪೆಜೆಶ್ಕಿಯಾನ್ ಮನವಿ ಮಾಡಿದರು.
ಪ್ರಧಾನಿ ಮೋದಿ ಅವರು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರ ಜೊತೆಗೂ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಬ್ರಿಕ್ಸ್ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿರುವುದಕ್ಕೆ ಗುಟೆರಸ್ ಅವರು ಮೋದಿಯವರಿಗೆ ಅಭಿನಂದನೆ ಸಲ್ಲಿಸಿದರು. ಬಹುಧ್ರುವೀಯ ಜಾಗತಿಕ ವ್ಯವಸ್ಥೆಯ ಮಹತ್ವ ಹಾಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ಬಹುಪಕ್ಷೀಯ ಸಂಸ್ಥೆಗಳಲ್ಲಿ ಸುಧಾರಣೆ ತರುವ ಅಗತ್ಯದ ಕುರಿತು ಇಬ್ಬರೂ ನಾಯಕರು ಒಮ್ಮತ ವ್ಯಕ್ತಪಡಿಸಿದರು.
ಬ್ರಿಕ್ಸ್ ಬಿಸಿನೆಸ್ ಫೋರಂ ಉದ್ದೇಶಿಸಿ ಮಾತನಾಡಿದ ಮೋದಿ, ಜಾಗತಿಕ ನವೋದ್ಯಮ, ವ್ಯಾಪಾರ ಹಾಗೂ ಆರ್ಥಿಕ ಸಹಕಾರದಲ್ಲಿ ಬ್ರಿಕ್ಸ್ ಒಕ್ಕೂಟದ ಪ್ರಭಾವ ಹೆಚ್ಚುತ್ತಿದೆ ಎಂದು ಹೇಳಿದರು. ಅಂತರರಾಷ್ಟ್ರೀಯ ಸಂಘರ್ಷಗಳ ನಡುವೆಯೂ ಭಾರತ ತನ್ನ ಆರ್ಥಿಕ ಮತ್ತು ವ್ಯಾಪಾರ ನೀತಿಗಳಲ್ಲಿ ಸ್ಥಿತಿಸ್ಥಾಪಕತ್ವ (Resilience) ಹಾಗೂ ನವೋದ್ಯಮವನ್ನು ಆಧಾರವಾಗಿಸಿಕೊಂಡಿದೆ ಎಂದು ಅವರು ವಿವರಿಸಿದರು.
ಎರಡನೇ ದಿನ ಜಿನ್ ಪಿಂಗ್-ಮೋದಿ ಭೇಟಿಯತ್ತ ಎಲ್ಲರ ಚಿತ್ತ
ಏಳು ವರ್ಷಗಳ ಬಳಿಕ ಭಾರತಕ್ಕೆ ಭೇಟಿ ನೀಡಿದ ಚೀನಾ ಅಧ್ಯಕ್ಷ ಶೀ ಜಿನ್‌ಪಿಂಗ್ ಅವರನ್ನು ಪ್ರಧಾನಿ ಮೋದಿ ಸ್ವಾಗತಿಸಿದರು. ಭಾರತ-ಚೀನಾ ಸಂಬಂಧಗಳಲ್ಲಿ ನಿಧಾನವಾಗಿ ಸುಧಾರಣೆಯ ವಾತಾವರಣ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲೇ ಜಿನ್‌ಪಿಂಗ್ ಅವರ ಭಾರತ ಭೇಟಿಯು ವಿಶೇಷ ಮಹತ್ವ ಪಡೆದುಕೊಂಡಿತು.
ಶನಿವಾರ ಬ್ರಿಕ್ಸ್ ಶೃಂಗಸಭೆಯ ಅಧಿಕೃತ ಕಲಾಪಗಳು ಆರಂಭಗೊಂಡವು. ಜಾಗತಿಕ ಆಡಳಿತ ವ್ಯವಸ್ಥೆ, ಬಹುಪಕ್ಷೀಯತೆ, ಆರ್ಥಿಕ ಸಹಕಾರ ಹಾಗೂ ವಿಸ್ತರಿತ ಬ್ರಿಕ್ಸ್ ಒಕ್ಕೂಟದ ಭವಿಷ್ಯ ಪ್ರಮುಖ ಚರ್ಚಾ ವಿಷಯಗಳಾಗಿದ್ದವು.
ಶೃಂಗಸಭೆಯ ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಬ್ರಿಕ್ಸ್ ಯಾವುದೇ ದೇಶ ಅಥವಾ ಗುಂಪಿನ ವಿರುದ್ಧದ ವೇದಿಕೆಯಲ್ಲ ಎಂದು ಸ್ಪಷ್ಟಪಡಿಸಿದರು. ಜಾಗತಿಕ ದಕ್ಷಿಣದ ರಾಷ್ಟ್ರಗಳು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಪರಸ್ಪರ ಸಹಕಾರವನ್ನು ಹೆಚ್ಚಿಸುವಂತೆ ಕರೆ ನೀಡಿದರು. ಜಾಗತಿಕ ಆಡಳಿತ ಸಂಸ್ಥೆಗಳಲ್ಲಿ ಸುಧಾರಣೆ, ಸಾಗರ ಭದ್ರತೆ ಹಾಗೂ ನಾವಿಕರ ಸುರಕ್ಷತೆಯ ಬಗ್ಗೆಯೂ ಅವರು ಪ್ರಸ್ತಾಪಿಸಿದರು.
ಇದೇ ವೇಳೆ, ಪ್ರಧಾನಿ ಮೋದಿ ಮತ್ತು ಶೀ ಜಿನ್‌ಪಿಂಗ್ ನಡುವಿನ ದ್ವಿಪಕ್ಷೀಯ ಮಾತುಕತೆ ಎಲ್ಲರ ಗಮನ ಸೆಳೆಯಿತು. ಗಡಿ ಭದ್ರತೆ ಮತ್ತು ವ್ಯಾಪಾರ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಚೀನಾದ ಜೊತೆಗೆ ‘ಅರ್ಥಪೂರ್ಣ ಮಾತುಕತೆ’ ನಡೆಸಲು ಭಾರತ ಸಿದ್ಧವಿದೆ ಎಂದು ಮೋದಿ ಹೇಳಿದರು.
ಭಾರತ ಮತ್ತು ಚೀನಾ ಪರಸ್ಪರರ ಸಾಮರ್ಥ್ಯ ಹಾಗೂ ಶಕ್ತಿಗಳಿಂದ ಕಲಿಯಬಹುದು ಎಂದು ಶೀ ಜಿನ್‌ಪಿಂಗ್ ಹೇಳಿದರು. ಜಾಗತಿಕ ವೇದಿಕೆಯಲ್ಲಿ ಎರಡೂ ರಾಷ್ಟ್ರಗಳು ಇನ್ನಷ್ಟು ದೊಡ್ಡ ಪಾತ್ರ ವಹಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು. ಉಭಯ ದೇಶಗಳು ತಮ್ಮ ಸಂಬಂಧಗಳನ್ನು ಕಾರ್ಯತಂತ್ರ ಹಾಗೂ ದೀರ್ಘಕಾಲೀನ ದೃಷ್ಟಿಕೋನದಿಂದ ನೋಡಬೇಕು ಮತ್ತು ಭಿನ್ನಾಭಿಪ್ರಾಯಗಳು ಸಂಘರ್ಷಗಳಾಗಿ ಪರಿವರ್ತನೆಯಾಗದಂತೆ ನೋಡಿಕೊಳ್ಳಬೇಕು ಎಂಬ ನಿಲುವನ್ನು ಎರಡೂ ಕಡೆಯವರು ಪುನರುಚ್ಚರಿಸಿದರು.
ಜಿನ್‌ಪಿಂಗ್ ಹೊರತಾಗಿ, ಪ್ರಧಾನಿ ಮೋದಿ ಅವರು ಇಥಿಯೋಪಿಯಾ ಪ್ರಧಾನಿ ಅಬಿ ಅಹ್ಮದ್ ಅಲಿ, ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ, ಯುಎಇಯ ಯುವರಾಜ ಖಾಲಿದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಹಾಗೂ ವಿಯೆಟ್ನಾಂನ ಲೆ ಮಿನ್ ಹಂಗ್ ಅವರೊಂದಿಗೂ ದ್ವಿಪಕ್ಷೀಯ ಮಾತುಕತೆ ನಡೆಸಿದರು. ರಕ್ಷಣಾ, ಇಂಧನ ಹಾಗೂ ವ್ಯಾಪಾರ ಸಹಕಾರವನ್ನು ಮತ್ತಷ್ಟು ಗಾಢಗೊಳಿಸುವ ಕುರಿತು ಚರ್ಚೆಗಳು ನಡೆದವು.
ಮೂರನೇ ದಿನ: ನವದೆಹಲಿ ಘೋಷಣೆಯೊಂದಿಗೆ ಬ್ರಿಕ್ಸ್ ಶೃಂಗಸಭೆ ಸಮಾಪ್ತಿ
ಭಾನುವಾರ ಪ್ರಧಾನಿ ಮೋದಿ ಅವರು 18ನೇ ಬ್ರಿಕ್ಸ್ ಶೃಂಗಸಭೆ ಯಶಸ್ವಿಯಾಗಿ ಮುಕ್ತಾಯಗೊಂಡಿರುವುದನ್ನು ಅಧಿಕೃತವಾಗಿ ಘೋಷಿಸಿದರು. ಇರಾನ್ ಮತ್ತು ಯುಎಇ ನಡುವಿನ ಉದ್ವಿಗ್ನತೆಯ ನಡುವೆಯೂ ‘ನವದೆಹಲಿ ಘೋಷಣೆ 2026’ಕ್ಕೆ ಬ್ರಿಕ್ಸ್ ರಾಷ್ಟ್ರಗಳ ನಡುವೆ ಸಂಪೂರ್ಣ ಒಮ್ಮತ ಸಾಧಿಸುವಲ್ಲಿ ಭಾರತ ಯಶಸ್ವಿಯಾಯಿತು.
ಬ್ರಿಕ್ಸ್ ಕುಟುಂಬದ ನಾಯಕರ ಸಮೂಹ ಚಿತ್ರದಲ್ಲಿ ಪ್ರಧಾನಿ ಮೋದಿ ಅವರು ಪುತಿನ್ ಮತ್ತು ಶೀ ಜಿನ್‌ಪಿಂಗ್ ಅವರ ನಡುವೆ ನಿಂತಿದ್ದರು. ಇದು ಬ್ರಿಕ್ಸ್ ಒಕ್ಕೂಟದ ಹೆಚ್ಚುತ್ತಿರುವ ಶಕ್ತಿ ಹಾಗೂ ಜಾಗತಿಕ ಪ್ರಭಾವಕ್ಕೆ ಪ್ರಬಲ ಪ್ರತೀಕವಾಗಿದೆ ಎಂದು ಮೋದಿ ಬಣ್ಣಿಸಿದರು.
ಇದರ ನಡುವೆ ಭಾರತದಿಂದ ಇತರ ರಾಷ್ಟ್ರಗಳ ನಾಯಕರು ನಿರ್ಗಮಿಸುತ್ತಿದ್ದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂತೊ, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ಹಾಗೂ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರೊಂದಿಗೂ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಹೀಗೆ ಮೂರು ದಿನಗಳ ಬ್ರಿಕ್ಸ್ ಶೃಂಗಸಭೆಯ ಅವಧಿಯಲ್ಲಿ ಬಹುಪಕ್ಷೀಯ ಸಭೆಗಳು, ವ್ಯವಹಾರಿಕ ವೇದಿಕೆಗಳು ಹಾಗೂ 15ಕ್ಕೂ ಹೆಚ್ಚು ರಾಷ್ಟ್ರಗಳ ನಾಯಕರೊಂದಿಗಿನ ದ್ವಿಪಕ್ಷೀಯ ಮಾತುಕತೆಗಳ ಮೂಲಕ ಪ್ರಧಾನಿ ಮೋದಿ ಅವರು ಭಾರತದ ರಾಜತಾಂತ್ರಿಕ ಆದ್ಯತೆಗಳನ್ನು ಜಾಗತಿಕ ವೇದಿಕೆಯಲ್ಲಿ ಪರಿಣಾಮಕಾರಿಯಾಗಿ ಮುಂದಿಟ್ಟರು. ಜಾಗತಿಕ ದಕ್ಷಿಣದ ಧ್ವನಿಯನ್ನು ಬಲಪಡಿಸುವುದು, ಜಾಗತಿಕ ಸಂಸ್ಥೆಗಳ ಸುಧಾರಣೆ ಹಾಗೂ ಬ್ರಿಕ್ಸ್ ರಾಷ್ಟ್ರಗಳ ನಡುವಿನ ಸಹಕಾರ ವಿಸ್ತರಣೆಗೆ ಭಾರತ ಒತ್ತು ನೀಡಿತು.


ನಿಮ್ಮ ಕಾಮೆಂಟ್ ಬರೆಯಿರಿ