ಹಿಂದೂಸ್ತಾನಿ ಗಾಯಕ ಅಶೋಕ ಹುಗ್ಗಣ್ಣವರ ನಿಧನ

ಹುಬ್ಬಳ್ಳಿ: ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ನಿವೃತ್ತ ಸಂಗೀತ ಪ್ರಾಧ್ಯಾಪಕರಾದ ಅಶೋಕ ಹುಗ್ಗಣ್ಣವರ (64) ಅವರು ಬುಧವಾರ ರಾತ್ರಿ ನಿಧನರಾಗಿದ್ದಾರೆ.
ಮೂಲತಃ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದವರಾದ ಅಶೋಕ ಹುಗ್ಗಣ್ಣವರ ಅವರು, ಹೊನ್ನಾವರದ  ಎಸ್.ಡಿ.ಎಂ. ಕಾಲೇಜಿನಲ್ಲಿ ಸಂಗೀತ ಪ್ರಾಧ್ಯಾಪಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ 2021ರಲ್ಲಿ ನಿವೃತ್ತಿ ಹೊಂದಿದ್ದರು. ನಿವೃತ್ತಿಯ ಬಳಿಕ ಅವರು ಹುಬ್ಬಳ್ಳಿಯಲ್ಲಿ ನೆಲೆಸಿದ್ದರು. ಅಶೋಕ ಹುಗ್ಗಣ್ಣವರ ಅವರು ಪತ್ನಿ ವೀಣಾ (ಶಿಕ್ಷಕಿ) ಹಾಗೂ ಪುತ್ರ ವಿನಾಯಕ (ವಿಜ್ಞಾನಿ ಹಾಗೂ ಗಾಯಕ) ಅವರನ್ನು ಅಗಲಿದ್ದಾರೆ.
ಅಶೋಕ ಹುಗ್ಗಣ್ಣವರ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಂಗೀತ ವಿಷಯದಲ್ಲಿ ಚಿನ್ನದ ಪದಕದೊಂದಿಗೆ ಎಂ.ಎ ಪದವಿ, ಸಂಗೀತ ರತ್ನ ಡಿಪ್ಲೊಮಾ ಪಡೆದಿದ್ದರು. ಅಲ್ಲದೆ, ಸಸ್ಯಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿ ಪಡೆದಿದ್ದರು.
ಹಿಂದೂಸ್ತಾನಿ ಸಂಗೀತದ ಗ್ವಾಲಿಯರ್ ಪದ್ಧತಿಯಲ್ಲಿ ಖ್ಯಾತ ಗುರು ಪಂ. ಲಿಂಗರಾಜ ಬುವಾ ಯರಗುಪ್ಪಿ ಅವರ ಬಳಿ ಸುಮಾರು 12 ವರ್ಷಗಳ ಕಾಲ ಕಠಿಣ ಸಂಗೀತಾಭ್ಯಾಸ ನಡೆಸಿದ್ದರು.
ಪ್ರಶಸ್ತಿಗಳು ಮತ್ತು ಗೌರವಗಳು:
ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು, ಕರ್ನಾಟಕ ಕಲಾಶ್ರೀ, ಅನನ್ಯ ಮನ್ಸೂರ್‌ ಪ್ರಶಸ್ತಿ,  ರಾಗಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement