
ನವ ದೆಹಲಿ: ಕೋವಿಡ್ -19 ಹೋರಾಟದಲ್ಲಿ ಹಲವಾರು ರಾಜ್ಯಗಳು ವೈದ್ಯಕೀಯ ಆಮ್ಲಜನಕದ ಕೊರತೆ ಎದುರಿಸುತ್ತಿದ್ದು, ಆಕ್ಸಿಜನ್ ಟ್ಯಾಂಕರ್‌ಗಳ ಸಾರಿಗೆ ಸಮಯವನ್ನು ಕಡಿಮೆ ಮಾಡಲು ರೈಲ್ವೆ ಮತ್ತು ವಾಯುಪಡೆಯ ವಿಮಾನಗಳನ್ನು ನಿಯೋಜಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಶುಕ್ರವಾರ ಹನ್ನೊಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉನ್ನತಮಟ್ಟದ ಸಭೆ ನಡೆಸಿದ ಅವರು ಆಮ್ಲಜನಕ ಮತ್ತು ರೆಮ್ಡಿಸಿವಿರ್ ಸೇರಿದಂತೆ ಅಗತ್ಯ ಔಷಧಿಗಳ ಅವಶ್ಯಕತೆ ಪೂರೈಸಲು ಎಲ್ಲಾ ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದಿದ್ದಾರೆ.
ಸಾಂಕ್ರಾಮಿಕ ರೋಗದ ಮೊದಲ ಅಲೆಯಲ್ಲಿ ಭಾರತದ ಯಶಸ್ಸಿನ ದೊಡ್ಡ ಆಧಾರವೆಂದರೆ ನಮ್ಮ ಒಗ್ಗಟ್ಟಿನ ಪ್ರಯತ್ನ ಮತ್ತು ಏಕೀಕೃತ ಕಾರ್ಯತಂತ್ರ. ಕೊರೋನಾ ವಿರುದ್ಧದ ಹೋರಾಟದಲ್ಲಿ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಪ್ರಧಾನಿ ಭರವಸೆ ನೀಡಿದರು.
ಆಮ್ಲಜನಕದ ಟ್ಯಾಂಕರ್‌ಗಳ ಪ್ರಯಾಣದ ಸಮಯ ಕಡಿಮೆ ಮಾಡಲು ಕೇಂದ್ರ ಸರ್ಕಾರವು ಸಾಧ್ಯವಿರುವ ಎಲ್ಲ ಆಯ್ಕೆಗಳನ್ನು ಬಳಸಿಕೊಳ್ಳುತ್ತಿದೆ. ಇದಕ್ಕಾಗಿ ರೈಲ್ವೆ ಆಕ್ಸಿಜನ್ ಎಕ್ಸ್‌ಪ್ರೆಸ್ ಆರಂಭಿಸಲಾಗಿದೆ. ಒಂದು ಮಾರ್ಗದ ಪ್ರಯಾಣದ ಸಮಯ ಕಡಿಮೆ ಮಾಡಲು ಖಾಲಿ ಆಕ್ಸಿಜನ್ ಟ್ಯಾಂಕರ್‌ಗಳನ್ನು ಸಹ ವಾಯುಪಡೆಯಿಂದ ಸಾಗಿಸಲಾಗುತ್ತಿದೆ ಎಂದು ಹೇಳಿದರು.

.


ನಿಮ್ಮ ಕಾಮೆಂಟ್ ಬರೆಯಿರಿ