ಭೀಕರ ಅಗ್ನಿ ದುರಂತ : ಕೋಚಿಂಗ್ ಸೆಂಟರ್‌ನಲ್ಲಿ 14 ಮಂದಿ ಸಜೀವ ದಹನ

ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಸೋಮವಾರ ಮಧ್ಯಾಹ್ನ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ವಾಣಿಜ್ಯ ಸಂಕೀರ್ಣವೊಂದರಲ್ಲಿ ಕಾಣಿಸಿಕೊಂಡ ಭಾರೀ ಬೆಂಕಿ ಅವಘಡದಲ್ಲಿ ಕನಿಷ್ಠ 14 ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಬೆಂಕಿ ಅನಾಹುತದಲ್ಲಿ ಸಿಲುಕಿರುವವರನ್ನು ರಕ್ಷಿಸಲು ಮತ್ತು ಬೆಂಕಿ ನಂದಿಸಲು ಹರಸಾಹಸ ಪಡಲಾಗುತ್ತಿದ್ದು, ಬೃಹತ್ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಫೈರ್ ಬ್ರಿಗೇಡ್ ಇಲಾಖೆಯ ಮಾಹಿತಿ ಪ್ರಕಾರ, ಅಲಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಉಷಾ ಮೆಹ್ತಾ ಮಾರ್ಗದಲ್ಲಿರುವ ಕೋಚಿಂಗ್ ಸೆಂಟರ್ ಒಂದರಲ್ಲಿ ಬೆಂಕಿ ತಗುಲಿರುವ ಬಗ್ಗೆ ಸೋಮವಾರ ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ತುರ್ತು ಸಂದೇಶ ಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ಸಿಬ್ಬಂದಿ, ಹೈಡ್ರಾಲಿಕ್ ಪ್ಲಾಟ್‌ಫಾರ್ಮ್ ವಾಹನ ಸೇರಿದಂತೆ ಒಟ್ಟು 14 ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ ಬೆಂಕಿ ನಿಯಂತ್ರಿಸುವಲ್ಲಿ ತೊಡಗಿದ್ದಾರೆ.

ಜೀವ ಉಳಿಸಿಕೊಳ್ಳಲು ಮೊದಲ ಮಹಡಿಯಿಂದ ಜಿಗಿದ ವಿದ್ಯಾರ್ಥಿಗಳು
ಬೆಂಕಿಯ ಜ್ವಾಲೆ ಇಡೀ ಕಟ್ಟಡವನ್ನು ಆವರಿಸುತ್ತಿದ್ದಂತೆ ಒಳಗಿದ್ದ ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕ ಮೂಡಿದೆ. ದಟ್ಟವಾದ ಹೊಗೆ ಮತ್ತು ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ಬೇರೆ ದಾರಿ ಕಾಣದೆ, ಹಲವು ವಿದ್ಯಾರ್ಥಿಗಳು ಕಟ್ಟಡದ ಮೊದಲ ಮಹಡಿಯಿಂದ ಕೆಳಗೆ ಜಿಗಿದು ಜೀವ ಉಳಿಸಿಕೊಳ್ಳಲು ಸಾಹಸ ಮಾಡಿದ್ದಾರೆ. ಸ್ಥಳದಲ್ಲಿದ್ದ ಸಾರ್ವಜನಿಕರು ಸಿಲುಕಿಕೊಂಡವರನ್ನು ಕೆಳಗೆ ಜಿಗಿಯುವಂತೆ ಕೂಗಿಕೊಳ್ಳುತ್ತಿರುವ ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ
.ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ, “ಬೆಂಕಿ ಕಾಣಿಸಿಕೊಂಡ ತಕ್ಷಣ ಸುಮಾರು ಏಳರಿಂದ ಎಂಟು ವಿದ್ಯಾರ್ಥಿಗಳು ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಿಡಿ ಹೊತ್ತಿಕೊಂಡಿದ್ದರಿಂದಲೇ ಈ ಅನಾಹುತ ನಡೆದಿರಬಹುದು ಎನ್ನಲಾಗುತ್ತಿದೆ. “ಈ ಕಟ್ಟಡದಲ್ಲಿ ಗ್ರಂಥಾಲಯ (ಲೈಬ್ರರಿ), ಕಂಪ್ಯೂಟರ್ ತರಬೇತಿ ಸಂಸ್ಥೆ ಇದೆ. ನಾವು ಸ್ಥಳಕ್ಕೆ ಬಂದಾಗ ಇಡೀ ಕಟ್ಟಡದಿಂದ ದಟ್ಟವಾದ ಹೊಗೆ ಹೊರಬರುತ್ತಿತ್ತು. ನಾವು ತಕ್ಷಣ ಐದಾರು ಜನರನ್ನು ರಕ್ಷಿಸಿದೆವು. ಬೆಂಕಿ ಹೊತ್ತಿಕೊಂಡ ಬಳಿಕ ವ್ಯಕ್ತಿಯೊಬ್ಬರು ಮೇಲಿಂದ ಕೆಳಗೆ ಜಿಗಿದಿದ್ದು, ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಇನ್ನು ಕೆಲವರು ಒಳಗೇ ಸಿಲುಕಿದ್ದಾರೆ” ಎಂದು ಘಟನೆಯ ತೀವ್ರತೆಯನ್ನು ವಿವರಿಸಿದ್ದಾರೆ.

ಉಪಮುಖ್ಯಮಂತ್ರಿ ಭೇಟಿ:
ಘಟನಾ ಸ್ಥಳದಿಂದ ದಟ್ಟವಾದ ಹೊಗೆಯ ರಹದಾರಿ ಕಾಣಿಸುತ್ತಿದ್ದು, ಸುತ್ತಮುತ್ತಲಿನ ಜನರಲ್ಲಿ ಭಾರೀ ಆತಂಕ ಮೂಡಿಸಿದೆ. ವಿಷಯ ತಿಳಿಯುತ್ತಿದ್ದಂತೆ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ ಪಾಠಕ್ ಅವರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಮತ್ತು ಒಳಗಿರುವವರನ್ನು ಸುರಕ್ಷಿತವಾಗಿ ಹೊರತರಲು ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದ್ದಾರೆ. ಸಿಕ್ಕಿಬಿದ್ದವರನ್ನು ಹೊರತರಲು ಸಮರೋಪಾದಿಯಲ್ಲಿ ಕಾರ್ಯಾಚರಣೆ ಸಾಗಿದೆ.

ಪ್ರಮುಖ ಸುದ್ದಿ :-   ಮಹಾರಾಷ್ಟ್ರ ವಿಧಾನಪರಿಷತ್ ಚುನಾವಣೆ : ಮಹಾಯುತಿ ಮೈತ್ರಿಕೂಟಕ್ಕೆ ಭರ್ಜರಿ ಜಯ ; ಒಂದೇ ಒಂದು ಸ್ಥಾನ ಗೆಲ್ಲದ ವಿಪಕ್ಷಗಳು...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement