ರಾಷ್ಟ್ರಗೀತೆಗೆ ಅಗೌರವದ ಆರೋಪ : ವಿಧಾನಸಭೆಯಿಂದ ಹೊರನಡೆದ ತಮಿಳುನಾಡು ರಾಜ್ಯಪಾಲ

ಚೆನ್ನೈ: ತಮಿಳುನಾಡು ವಿಧಾನಸಭೆಯ ಈ ವರ್ಷದ ಮೊದಲ ಅಧಿವೇಶನದ ಆರಂಭದಲ್ಲೇ ಭಾರಿ ನಾಟಕೀಯ ಬೆಳವಣಿಗೆ ನಡೆದಿದೆ. ಸರ್ಕಾರದ ಭಾಷಣದಲ್ಲಿ ತಪ್ಪು ಮಾಹಿತಿಗಳಿವೆ ಹಾಗೂ ರಾಷ್ಟ್ರಗೀತೆಗೆ ಅಗೌರವ ತೋರಲಾಗಿದೆ ಎಂದು ಆರೋಪಿಸಿ ರಾಜ್ಯಪಾಲ ಆರ್.ಎನ್. ರವಿ ಅವರು ಸಾಂಪ್ರದಾಯಿಕ ಭಾಷಣ ಮಾಡದೆಯೇ ಸದನದಿಂದ ಹೊರನಡೆದಿದ್ದಾರೆ.
ಸದನವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು, “ರಾಷ್ಟ್ರಗೀತೆಗೆ ಸರಿಯಾದ ಗೌರವ ನೀಡುತ್ತಿಲ್ಲ ಎಂಬುದು ನನಗೆ ನಿರಾಸೆ ತಂದಿದೆ. ತಮಿಳು ಗೀತೆಯ ನಂತರ ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ನುಡಿಸಬೇಕು ಎಂದು ನಾನು ಕೇಳಿಕೊಂಡಿದ್ದೆ, ಆದರೆ ಸಭಾಧ್ಯಕ್ಷ ಅಪ್ಪಾವು ಅವರು ಇದನ್ನು ನಿರಾಕರಿಸಿದ್ದಾರೆ. ಅಲ್ಲದೆ, ತಪ್ಪು ಮಾಹಿತಿಗಳು ಮತ್ತು ಸುಳ್ಳುಗಳಿಂದ ಕೂಡಿದ ಸರ್ಕಾರದ ಭಾಷಣವನ್ನು ಓದಲು ನನ್ನ ಮನಸ್ಸು ಒಪ್ಪುತ್ತಿಲ್ಲ” ಎಂದು ಹೇಳಿದ್ದಾರೆ. “ನನ್ನ ಮೈಕ್ ಆಫ್ ಮಾಡಲಾಗಿದೆ, ನನಗೆ ಮಾತನಾಡಲು ಅವಕಾಶ ನೀಡದೆ ಅವಮಾನಿಸಲಾಗಿದೆ” ಎಂದು ಅವರು ಗಂಭೀರ ಆರೋಪ ಮಾಡಿದರು.
 ಸಿಎಂ ಸ್ಟಾಲಿನ್ ಆರೋಪ
ರಾಜ್ಯಪಾಲರ ನಡವಳಿಕೆಯನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತೀವ್ರವಾಗಿ ಖಂಡಿಸಿದ್ದಾರೆ. “ರಾಜ್ಯಪಾಲರು ಸಂಪ್ರದಾಯ ಮತ್ತು ಸದನದ ಘನತೆಯನ್ನು ಗಾಳಿಗೆ ತೂರಿ ಹೊರನಡೆದಿದ್ದಾರೆ. ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ ರಾಜ್ಯಪಾಲರು ತಮ್ಮ ವೈಯಕ್ತಿಕ ವಿಚಾರಗಳನ್ನು ಸೇರಿಸಲು ಅವಕಾಶವಿಲ್ಲ. ಅವರು ಉದ್ದೇಶಪೂರ್ವಕವಾಗಿಯೇ ಇಂತಹ ಕೆಲಸ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ತಮಿಳುನಾಡು ಸರ್ಕಾರವು ರಾಜ್ಯಪಾಲರ ಅನುಪಸ್ಥಿತಿಯಲ್ಲೇ ಇಂಗ್ಲಿಷ್ ಭಾಷಣದ ಪ್ರತಿಯನ್ನು ಓದಲಾಗಿದೆ ಎಂದು ಪರಿಗಣಿಸುವ ನಿರ್ಣಯವನ್ನು ಅಂಗೀಕರಿಸಿತು.
ಈ ಘಟನೆಯ ನಂತರ ರಾಜಭವನವು ಪ್ರಕಟಣೆ ಹೊರಡಿಸಿದ್ದು, ರಾಜ್ಯಪಾಲರು ಹೊರನಡೆದಿದ್ದಕ್ಕೆ ಪ್ರಮುಖ ಕಾರಣಗಳನ್ನು ನೀಡಿದೆ:
ರಾಜ್ಯಪಾಲರ ಮೈಕ್ ಅನ್ನು ಪದೇ ಪದೇ ಆಫ್ ಮಾಡಲಾಗಿತ್ತು, ತಮಿಳುನಾಡಿನಲ್ಲಿ ದಲಿತರ ಮೇಲಿನ ದೌರ್ಜನ್ಯ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದರೂ, ಸರ್ಕಾರದ ಭಾಷಣದಲ್ಲಿ ಇದನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ. ರಾಷ್ಟ್ರಗೀತೆಯನ್ನು ಗೌರವಿಸದಿರುವ ಮೂಲಕ ಸಾಂವಿಧಾನಿಕ ಕರ್ತವ್ಯವನ್ನು ಉಲ್ಲಂಘಿಸಲಾಗಿದೆ ಎಂದು ಹೇಳಲಾಗಿದೆ.
 ಸತತ ಮೂರನೇ ವರ್ಷ ರಾಜ್ಯಪಾಲರು ಭಾಷಣ ಮಾಡದೆ ಹೊರನಡೆಯುತ್ತಿರುವುದು ವಿಶೇಷ. 2024 ಮತ್ತು 2025 ರಲ್ಲೂ ಇದೇ ರೀತಿಯ ಘರ್ಷಣೆಗಳು ನಡೆದಿದ್ದವು
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement