ಸೌದಿ ಜೈಲಿನಲ್ಲಿ 20 ವರ್ಷ, ಮಲಯಾಳಿಗಳಿಂದ 34 ಕೋಟಿ ರೂ. ‘ಬ್ಲಡ್ ಮನಿ’ ಸಂಗ್ರಹ :ಗಲ್ಲು ಶಿಕ್ಷೆಯಿಂದ ಪಾರಾಗಿ ತಾಯ್ನಾಡಿಗೆ ಮರಳಿದ ವ್ಯಕ್ತಿ !

ಕೋಝಿಕ್ಕೋಡ್ : ವಿದೇಶಿ ಜೈಲಿನಲ್ಲಿ ಸುದೀರ್ಘ 20 ವರ್ಷಗಳ ಕಾಲ ಮರಣದಂಡನೆ ಭೀತಿಯಲ್ಲಿ ದಿನದೂಡುತ್ತಿದ್ದ ಕೇರಳದ ಕೋಝಿಕ್ಕೋಡ್ ಮೂಲದ ವ್ಯಕ್ತಿ ಕೊನೆಗೂ ಗುರುವಾರ ತಾಯ್ನಾಡಿಗೆ ಮರಳಿದ್ದಾರೆ. ಸೌದಿ ಅರೇಬಿಯಾದ ಜೈಲಿನಿಂದ ಬಿಡುಗಡೆಯಾಗಿ ಬಂದ ಅಬ್ದುಲ್ ರಹೀಮ್ಅವರನ್ನು ಕರಿಪುರ ವಿಮಾನ ನಿಲ್ದಾಣದಲ್ಲಿ ಅವರ ಕುಟುಂಬಸ್ಥರು, ಆಪ್ತರು ಹರ್ಷೋದ್ಗಾರಗಳೊಂದಿಗೆ ಬರಮಾಡಿಕೊಂಡರು.
ಸೌದಿ ನಿಯಮಾವಳಿಗಳ ಪ್ರಕಾರ ಬರೋಬ್ಬರಿ 34 ಕೋಟಿ ರೂಪಾಯಿ (15 ಮಿಲಿಯನ್ ಸೌದಿ ರಿಯಾಲ್) ‘ಬ್ಲಡ್ ಮನಿ’ (ಪರಿಹಾರ ಧನ) ಪಾವತಿಸಿದ ಬಳಿಕ ರಹೀಮ್‌ ಅವರಿಗೆ ಅಲ್ಲಿನ ಜೈಲಿನಿಂದ ಬಿಡುಗಡೆ ಸಾಧ್ಯವಾಗಿದೆ.
ಸುಮಾರು ಎರಡು ದಶಕಗಳ ಸುದೀರ್ಘ ಕಾಯುವಿಕೆಯ ನಂತರ ತಾಯ್ನಾಡಿನ ಮಣ್ಣಿಗೆ ಕಾಲಿಡುತ್ತಿದ್ದಂತೆ ಅಬ್ದುಲ್ ರಹೀಮ್ ಭಾವುಕರಾಗಿ ಕಣ್ಣೀರು ಹಾಕಿದರು. ಕರಿಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರಿಗೆ ಪ್ರಮುಖ ಉದ್ಯಮಿ ಬಾಬಿ ಚೆಮ್ಮನೂರ್ ಹಾಗೂ ನೆರೆದಿದ್ದ ಸಾರ್ವಜನಿಕರು ಹೂಗುಚ್ಛ ನೀಡಿ ಸ್ವಾಗತಿಸಿದರು. ಈ ವೇಳೆ ರಹೀಮ್ ಸಾರ್ವಜನಿಕರತ್ತ ‘ಥಂಬ್ಸ್ ಅಪ್’ (ಗೆಲುವಿನ ಸಂಕೇತ) ಪ್ರದರ್ಶಿಸಿ ಕೃತಜ್ಞತೆ ಸಲ್ಲಿಸಿದರು.
“ನನಗೆ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ನಾನು ಸದಾ ಋಣಿಯಾಗಿದ್ದೇನೆ,” ಎಂದು ರಹೀಮ್ ಕಾರು ಹತ್ತುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ತಾಯಿ-ಮಗನ ಅಪೂರ್ವ ಮಿಲನ:
ಅಲ್ಲಿಂದ ನೇರವಾಗಿ ಕೋಝಿಕ್ಕೋಡ್‌ನಲ್ಲಿರುವ ತಮ್ಮ ಮನೆಗೆ ರಹೀಮ್ ತಲುಪಿದರು. ಅವರ ಮನೆ ಹತ್ತಿರ ಈಗಾಗಲೇ ಅವರ ತಾಯಿ, ಸ್ನೇಹಿತರು ಮತ್ತು ಸ್ಥಳೀಯ ನಿವಾಸಿಗಳು ನೆರೆದಿದ್ದರು.
ಮನೆಯ ಹೊಸ್ತಿಲಲ್ಲಿ ನಿಂತಿದ್ದ ತಾಯಿಯನ್ನು ಕಂಡೊಡನೆ ರಹೀಮ್ ಓಡಿಹೋಗಿ ಗಟ್ಟಿಯಾಗಿ ಆಲಂಗಿಸಿಕೊಂಡರು. “ನನ್ನ ತಾಯಿಯನ್ನು ಮತ್ತೆ ನೋಡಲು ಸಾಧ್ಯವಾಗುವಂತೆ ಮಾಡಿದ ಹಾಗೂ ಈ ʼಪರಿಹಾರ ಧನʼದ ಮೊತ್ತವನ್ನು ಒಟ್ಟುಗೂಡಿಸಲು ಶ್ರಮಿಸಿದ ಕೇರಳದ ಸಮಸ್ತ ಜನತೆಗೆ ಧನ್ಯವಾದಗಳು ಎಂದು ರಹೀಮ್ ಭಾವುಕರಾಗಿ ನುಡಿದರು.

ಪ್ರಮುಖ ಸುದ್ದಿ :-   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಯಾಮಿ ಗೌತಂ ಅತ್ಯುತ್ತಮ ನಟಿ, ಕಾರ್ತಿಕ್ ಆರ್ಯನ್–ಮಮ್ಮುಟ್ಟಿ ಅತ್ಯುತ್ತಮ ನಟರು ; ಪ್ರಶಸ್ತಿಗಳ ಪಟ್ಟಿ

ರಹೀಮ್ ಸೌದಿ ಜೈಲು ಪಾಲಾಗಿದ್ದು ಏಕೆ?
ಕಷ್ಟದಲ್ಲಿದ್ದ ತನ್ನ ಕುಟುಂಬಕ್ಕೆ ಆಸರೆಯಾಗುವ ಕನಸು ಹೊತ್ತು, 2006ರಲ್ಲಿ 26 ವರ್ಷದ ಯುವಕನಾಗಿದ್ದ ಅಬ್ದುಲ್ ರಹೀಮ್ ‘ಹೌಸ್ ಡ್ರೈವರ್’ ವೀಸಾದ ಮೇಲೆ ಸೌದಿ ಅರೇಬಿಯಾಕ್ಕೆ ತೆರಳಿದ್ದರು. ರಿಯಾದ್ ತಲುಪಿದ ಕೆಲವೇ ದಿನಗಳಲ್ಲಿ ಅವರ ಜೀವನ ದುರಂತ ತಿರುವು ಪಡೆದುಕೊಂಡಿತು.
ಅಲ್ಲಿನ ಸೌದಿ ಕುಟುಂಬವೊಂದರ ವಿಶೇಷಚೇತನ ಬಾಲಕ ಅನಾಸ್ ಅಲ್ ಫಯೀಸ್ (15 ವರ್ಷ) ಎಂಬಾತನ ಆರೈಕೆಯ ಜವಾಬ್ದಾರಿಯನ್ನು ರಹೀಮ್‌ಗೆ ನೀಡಲಾಗಿತ್ತು. ಒಂದು ದಿನ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ರಹೀಮ್ ಅವರ ಕೈ ಆಕಸ್ಮಿಕವಾಗಿ ಬಾಲಕನ ಜೀವ ರಕ್ಷಕ ವ್ಯವಸ್ಥೆಯ (ಲೈಫ್ ಸಪೋರ್ಟ್ ಸಿಸ್ಟಮ್) ಟ್ಯೂಬ್‌ಗೆ ತಗುಲಿ, ಅದು ಕಳಚಿಕೊಂಡಿತು. ಕೆಲವೇ ಕ್ಷಣಗಳಲ್ಲಿ ಉಸಿರುಗಟ್ಟಿ ಆ ಬಾಲಕ ಮೃತಪಟ್ಟಿದ್ದ.

ಮರಣದಂಡನೆ ತೀರ್ಪು ಮತ್ತು ಕ್ಲೌಡ್‌ ಫಂಡಿಂಗ್‌
ಇದು ಕೇವಲ ಆಕಸ್ಮಿಕ, ಉದ್ದೇಶಪೂರ್ವಕ ಕೃತ್ಯವಲ್ಲ ಎಂದು ರಹೀಮ್ ಎಷ್ಟೇ ವಾದಿಸಿದರೂ, 2006ರ ಡಿಸೆಂಬರ್‌ನಲ್ಲಿ ಅವರನ್ನು ಬಂಧಿಸಲಾಯಿತು. ತರುವಾಯ 2012ರಲ್ಲಿ ಸೌದಿ ನ್ಯಾಯಾಲಯ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿತು. 2018ರಲ್ಲಿ ಬಾಲಕನ ಕುಟುಂಬ ಕ್ಷಮಾದಾನ ನೀಡಲು ನಿರಾಕರಿಸಿದಾಗ ರಹೀಮ್ ಅವರ ಮರಣದಂಡನೆ ಬಹುತೇಕ ಖಚಿತವಾಗಿತ್ತು. ಆದರೆ, ಬಾಲಕನ ಕುಟುಂಬವು ಕೊನೆಯದಾಗಿ ಒಂದು ಷರತ್ತು ವಿಧಿಸಿತು; 2024ರ ಏಪ್ರಿಲ್ 18 ರೊಳಗೆ 34 ಕೋಟಿ ರೂ. ಬ್ಲಡ್ ಮನಿ (ಪರಿಹಾರ ಧನ) ನೀಡಿದರೆ ಮಾತ್ರ ಕ್ಷಮಿಸಲು ಒಪ್ಪಿಕೊಂಡಿತು.
ಈ ಅಸಾಧ್ಯವಾದ ಮೊತ್ತವನ್ನು ಕ್ರೋಢೀಕರಿಸಲು ವಿಶ್ವಾದ್ಯಂತ ಇರುವ ಮಲಯಾಳಿಗಳು ಒಂದಾದರು. ‘ಅಬ್ದುಲ್ ರಹೀಮ್ ಲೀಗಲ್ ಅಸಿಸ್ಟೆನ್ಸ್ ಕಮಿಟಿ’ ರಚಿಸಿ, ಕೇವಲ ಕೆಲವೇ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಹಣದ ಮಹಾಪೂರವನ್ನೇ ಹರಿಸುವ ಮೂಲಕ ಭಾರಿ ಕ್ರೌಡ್‌ಫಂಡಿಂಗ್ ನಡೆಸಿ 34 ಕೋಟಿ ರೂಪಾಯಿಯನ್ನು ಸಂಗ್ರಹಿಸಲಾಯಿತು.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ಕೊನೆಗೂ ಮುಗಿದ ಕಾಯುವಿಕೆ:
ಹಣ ಪಾವತಿಯಾದ ನಂತರ, ಜುಲೈ 2024ರಲ್ಲಿ ರಹೀಮ್ ಅವರ ಮರಣದಂಡನೆ ಶಿಕ್ಷೆಯನ್ನು ಸೌದಿ ಕೋರ್ಟ್ ಅಧಿಕೃತವಾಗಿ ರದ್ದುಗೊಳಿಸಿತು. ಆದಾಗ್ಯೂ, ಸೌದಿಯ ಸಾರ್ವಜನಿಕ ಹಕ್ಕುಗಳ ಕಾಯ್ದೆಯಡಿ ಅವರು 20 ವರ್ಷಗಳ ಕಡ್ಡಾಯ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಬೇಕಾಗಿದ್ದರಿಂದ ಇಷ್ಟು ದಿನ ಬಿಡುಗಡೆ ವಿಳಂಬವಾಗಿತ್ತು.
ಅದರಂತೆ ಈ ವಾರ ರಹೀಮ್ ಅವರ ಬಿಡುಗಡೆ ಪ್ರಕ್ರಿಯೆ ಪೂರ್ಣಗೊಂಡು ಅವರು ಜೈಲಿನಿಂದ ಹೊರಬಂದಿದ್ದಾರೆ. 26ರ ಹರೆಯದ ಯುವಕನಾಗಿ ಸೌದಿಗೆ ಹೋಗಿದ್ದ ರಹೀಮ್, ಎರಡು ದಶಕಗಳ ಕಾಲ ಜೈಲಿನಲ್ಲೇ ಕಳೆದು ಈಗ ಮಧ್ಯವಯಸ್ಕನಾಗಿ ತಾಯ್ನಾಡಿಗೆ ಮರಳಿದ್ದಾರೆ. ಕಳೆದುಹೋದ 20 ವರ್ಷಗಳ ನೋವು ಒಂದು ಕಡೆಯಾದರೆ, ಕೊನೆಗೂ ಮಗನನ್ನು ಮರಳಿ ಪಡೆದ ತಾಯಿಯ ಮುಖದ ನಿರಾಳತೆ ಮತ್ತು ಇಡೀ ಕೇರಳದ ಮಾನವೀಯತೆಯ ಗೆಲುವು ಈ ಕಥೆಗೆ ಸುಖಾಂತ್ಯ ಹಾಡಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement