ಮುಂಬೈ: ನಿದ್ದೆ ಮಾಡುವುದನ್ನೇ ಉದ್ಯೋಗದ ಅವಕಾಶವನ್ನಾಗಿ ಪರಿವರ್ತಿಸಿಕೊಂಡ ಮುಂಬೈ ಮೂಲದ ಮಹಿಳೆಯೊಬ್ಬರು ಬರೋಬ್ಬರಿ 9.6 ಲಕ್ಷ ರೂ. ಬಹುಮಾನ ಗೆದ್ದಿದ್ದಾರೆ. ಅಷ್ಟೇ ಅಲ್ಲ, ಪ್ರಾಯೋಜಕತ್ವದಲ್ಲಿ ವಿದೇಶ ಪ್ರವಾಸದ ಅವಕಾಶವನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಎರಡು ತಿಂಗಳ ಕಾಲ ನಡೆದ ವಿಶಿಷ್ಟ ‘ಸ್ಲೀಪ್ ಇಂಟರ್ನ್ಶಿಪ್’ ಸ್ಪರ್ಧೆಯಲ್ಲಿ ಜಿನಿಯಾ ಚಟರ್ಜಿ (Jiniya Chatterjee) ಭಾರತದ ನಿದ್ದೆಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ದೇಶಾದ್ಯಂತ ಎರಡು ಲಕ್ಷಕ್ಕೂ ಅಧಿಕ ಮಂದಿ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಿದ್ದರು.
ಮನೆ ಮತ್ತು ಗೃಹೋಪಯೋಗಿ ಉತ್ಪನ್ನಗಳ ಕಂಪನಿಯಾದ ವೇಕ್ಫಿಟ್ (Wakefit) ಆಯೋಜಿಸಿದ್ದ ಈ ವಿನೂತನ ಇಂಟರ್ನ್ಶಿಪ್ನಲ್ಲಿ ಸ್ಪರ್ಧಿಗಳು ನಿದ್ದೆಗೆ ಆದ್ಯತೆ ನೀಡುವುದು, ಪ್ರತಿದಿನ ನಿಗದಿತ ಸಮಯಕ್ಕೆ ಮಲಗುವುದು ಮತ್ತು ಎಚ್ಚರಗೊಳ್ಳುವುದು ಸೇರಿದಂತೆ ಆರೋಗ್ಯಕರ ನಿದ್ರಾ ಕ್ರಮವನ್ನು ಪಾಲಿಸಬೇಕಿತ್ತು. ಇದರ ಜೊತೆಗೆ ಪ್ರತಿ ವಾರ ನೀಡಲಾಗುತ್ತಿದ್ದ ಸೃಜನಾತ್ಮಕ ಸವಾಲುಗಳಲ್ಲಿಯೂ ಭಾಗವಹಿಸಬೇಕಿತ್ತು.
ಎರಡು ಲಕ್ಷಕ್ಕೂ ಅಧಿಕ ಅರ್ಜಿಗಳ ಪೈಕಿ ಹಲವು ಹಂತಗಳ ಆಯ್ಕೆ ಪ್ರಕ್ರಿಯೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಕೇವಲ 10 ಮಂದಿಯನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿತ್ತು. ಈ ಹತ್ತು ಸ್ಪರ್ಧಿಗಳು ಸುಮಾರು 60 ದಿನಗಳ ಕಾಲ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಯೊಬ್ಬರ ನಿದ್ದೆಯ ಗುಣಮಟ್ಟ ಮತ್ತು ಸಾಧನೆಯನ್ನು ನಿರಂತರವಾಗಿ ದಾಖಲಿಸಲಾಗುತ್ತಿತ್ತು. ಪ್ರತಿದಿನದ ನಿದ್ರಾ ಸಾಧನೆಗೆ ನೀಡಲಾಗುತ್ತಿದ್ದ ಅಂಕಗಳ ಆಧಾರದ ಮೇಲೆ ಸ್ಪರ್ಧಿಗಳ ಸ್ಥಾನವನ್ನು ಲೀಡರ್ಬೋರ್ಡ್ನಲ್ಲಿ ನಿರ್ಧರಿಸಲಾಗುತ್ತಿತ್ತು.
ಆದರೆ, ಈ ಸ್ಪರ್ಧೆ ಕೇವಲ ಹೆಚ್ಚು ಹೊತ್ತು ನಿದ್ದೆ ಮಾಡುವುದಕ್ಕೆ ಸೀಮಿತವಾಗಿರಲಿಲ್ಲ. ಸ್ಪರ್ಧಿಗಳು ತಮ್ಮ ಸೃಜನಶೀಲತೆ ಮತ್ತು ಚುರುಕುತನವನ್ನೂ ಸಾಬೀತುಪಡಿಸಬೇಕಿತ್ತು. ಅದಕ್ಕಾಗಿ ಹಲವು ವಿಚಿತ್ರ ಹಾಗೂ ಆಸಕ್ತಿದಾಯಕ ಸವಾಲುಗಳನ್ನು ನೀಡಲಾಗಿತ್ತು.
ಏನಿದ್ದವು ವೇಕ್ಫಿಟ್ನ ನಿದ್ದೆ ಸ್ಪರ್ಧೆಯ ಸವಾಲುಗಳು?
ಪ್ರತಿ ವಾರ ಸ್ಪರ್ಧಿಗಳಿಗೆ ವಿಭಿನ್ನ ಕಾರ್ಯಗಳನ್ನು ನೀಡಲಾಗುತ್ತಿತ್ತು. ಅವುಗಳಲ್ಲಿ ‘ಸ್ಲೀಪ್ ಸಿನಿಮಾ’ (Sleep Cinema) ಪ್ರಮುಖವಾಗಿತ್ತು. ಇದರಲ್ಲಿ ಸ್ಪರ್ಧಿಗಳು ಪ್ರಸಿದ್ಧ ಚಲನಚಿತ್ರಗಳ ದೃಶ್ಯಗಳನ್ನು ನಿದ್ದೆಗೆ ಸಂಬಂಧಿಸಿದ ವಿಶಿಷ್ಟ ಕಲ್ಪನೆಯೊಂದಿಗೆ ಮರುಸೃಷ್ಟಿಸಬೇಕಿತ್ತು.
‘ಸ್ಲೀಪ್ ಬಿಂಗೊ’ (Sleep Bingo) ಮತ್ತೊಂದು ಸವಾಲಾಗಿತ್ತು. ಇದರಲ್ಲಿ ಸ್ಪರ್ಧಿಗಳು ಒಂದು ವಾರದ ತಮ್ಮ ನಿದ್ದೆಯ ಅಭ್ಯಾಸಗಳನ್ನು ಪರಿಶೀಲಿಸಿ, ಅವುಗಳನ್ನು ಮೌಲ್ಯಮಾಪನ ಮಾಡಬೇಕಿತ್ತು.
ಇನ್ನು ‘ಅಂಡರ್ಕವರ್ ಸ್ಲೀಪ್ ಮಿಷನ್’ (Undercover Sleep Mission) ಎಂಬ ಸವಾಲು ಅತ್ಯಂತ ವಿಭಿನ್ನವಾಗಿತ್ತು. ಸಂಭಾಷಣೆಯ ವೇಳೆ ಎದುರಿನವರಿಗೆ ಅನುಮಾನ ಬಾರದಂತೆ ‘ಬ್ಲಾಂಕೆಟ್’ (Blanket) ಅಥವಾ ‘ಪಿಲ್ಲೊ’ (Pillow) ಎಂಬ ಪದಗಳನ್ನು 10 ಬಾರಿ ಬಳಸಬೇಕಿತ್ತು. ಈ ಸವಾಲುಗಳಲ್ಲಿ ಪ್ರತಿ ವಾರ ಅತ್ಯುತ್ತಮ ಪ್ರದರ್ಶನ ನೀಡಿದ ಸ್ಪರ್ಧಿಗೆ ‘ಪ್ರೊ ಸ್ಲೀಪರ್ ಆಫ್ ದಿ ವೀಕ್’ (Pro Sleeper of the Week) ಎಂಬ ಬಿರುದನ್ನು ನೀಡಲಾಗುತ್ತಿತ್ತು.
ಎರಡು ತಿಂಗಳ ಸ್ಪರ್ಧೆಯ ಅಂತ್ಯಕ್ಕೆ ಜಿನಿಯಾ ಚಟರ್ಜಿ, ರತ್ನಗಿರಿ ಮಣಿಕಂದನ್ (Ratnagiri Manikandan) ಮತ್ತು ಮೆಹೆಕ್ ಖೋಟ್ (Mehek Khot) ಕೊನೆಯ ಹಂತಕ್ಕೆ ಆಯ್ಕೆಯಾದರು. ಆದರೆ, ವಾರದ ಸೃಜನಾತ್ಮಕ ಸವಾಲುಗಳಲ್ಲಿ ಅತಿ ಹೆಚ್ಚು ಬಾರಿ ಗೆಲುವು ಸಾಧಿಸಿದ್ದ ಹೈದರಾಬಾದ್ನ ಕರೀಂ ಖಾನ್ (Karim Khan) ವೈಲ್ಡ್ಕಾರ್ಡ್ ಪ್ರವೇಶದ ಮೂಲಕ ಮತ್ತೆ ಸ್ಪರ್ಧೆಗೆ ಮರಳಿದರು. ಇದರಿಂದ ಅಂತಿಮ ಹಣಾಹಣಿಯಲ್ಲಿ ನಾಲ್ವರು ಸ್ಪರ್ಧಿಗಳು ಉಳಿದುಕೊಂಡಿದ್ದರು.
ಅಂತಿಮ ಸುತ್ತಿನಲ್ಲಿ ಜಿನಿಯಾ ಚಟರ್ಜಿ ಗೆದ್ದಿದ್ದು ಹೇಗೆ?
‘ಬಿಗ್ ಬೆಡ್’ (Big Bedd) ಎಂಬ ಹೆಸರಿನಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಎರಡು ಪ್ರಮುಖ ಸವಾಲುಗಳನ್ನು ನೀಡಲಾಗಿತ್ತು. ಮೊದಲನೆಯದು ‘ಮೆಮೊರಿ ಫೋಮ್ ಚಾಲೆಂಜ್’ (Memory Foam Challenge). ಇದರಲ್ಲಿ ಸ್ಪರ್ಧಿಗಳ ವೀಕ್ಷಣಾ ಸಾಮರ್ಥ್ಯ, ನೆನಪಿನ ಶಕ್ತಿ ಮತ್ತು ತಂಡವಾಗಿ ಕೆಲಸ ಮಾಡುವ ಕೌಶಲವನ್ನು ಪರೀಕ್ಷಿಸಲಾಯಿತು. ಉಲ್ಲೇಖಕ್ಕಾಗಿ ನೀಡಲಾಗಿದ್ದ ಚಿತ್ರಗಳನ್ನು ಗಮನಿಸಿ, ಅದರಲ್ಲಿರುವಂತೆ ಮಲಗುವ ಕೋಣೆಯ ವ್ಯವಸ್ಥೆಯನ್ನು ಮರುಸೃಷ್ಟಿಸಬೇಕಿತ್ತು.
ಎರಡನೇ ಸವಾಲು ‘ಸ್ಲೀಪ್ ಆಕ್ಷನ್’ (Sleep Auction) ಆಗಿತ್ತು. ಇದರಲ್ಲಿ ಸ್ಪರ್ಧಿಗಳು ಉತ್ತಮ ನಿದ್ದೆಗೆ ಅಗತ್ಯವಿರುವ ವಿವಿಧ ಸೌಲಭ್ಯಗಳನ್ನು ಬಿಡ್ ಮೂಲಕ ಪಡೆದುಕೊಳ್ಳಬೇಕಿತ್ತು. ದಿಂಬುಗಳು, ಹೊದಿಕೆಗಳು, ಹವಾನಿಯಂತ್ರಣದ (AC) ನಿಯಂತ್ರಣ, ಬೆಳಕಿನ ವ್ಯವಸ್ಥೆ ಹಾಗೂ ಧ್ವನಿ ನಿಯಂತ್ರಣದಂತಹ ಸೌಲಭ್ಯಗಳು ಈ ಬಿಡ್ನಲ್ಲಿದ್ದವು.
ಬಳಿಕ ಅಂತಿಮ ಸ್ಪರ್ಧಿಗಳು ತಾವು ಆಯ್ಕೆ ಮಾಡಿಕೊಂಡ ಸೌಲಭ್ಯಗಳೊಂದಿಗೆ ಸಿದ್ಧಪಡಿಸಿದ ಮಲಗುವ ಕೋಣೆಗಳಲ್ಲಿ ಕೊನೆಯ ಒಂದು ರಾತ್ರಿ ಕಳೆಯಬೇಕಿತ್ತು. ಆ ರಾತ್ರಿ ದಾಖಲಾದ ನಿದ್ರಾ ಅಂಕಗಳೇ ಅಂತಿಮ ಫಲಿತಾಂಶವನ್ನು ನಿರ್ಧರಿಸಿದವು. ಅತ್ಯುತ್ತಮ ನಿದ್ರಾ ಸಾಧನೆ ತೋರಿದ ಜಿನಿಯಾ ಚಟರ್ಜಿ ವಿಜೇತರಾಗಿ ಹೊರಹೊಮ್ಮಿದರು. ಅವರಿಗೆ 9.6 ಲಕ್ಷ ರೂ. ನಗದು ಬಹುಮಾನದ ಜೊತೆಗೆ ವೇಕ್ಫಿಟ್ ಪ್ರಾಯೋಜಕತ್ವದ ಪ್ರವಾಸದ ಅವಕಾಶವೂ ಲಭಿಸಿದೆ.
10 ಲಕ್ಷಕ್ಕೂ ಅಧಿಕ ಅರ್ಜಿಗಳು
ವೇಕ್ಫಿಟ್ ಸಂಸ್ಥೆಯು 2019ರಲ್ಲಿ ಈ ವಿಶಿಷ್ಟ ಸ್ಲೀಪ್ ಇಂಟರ್ನ್ಶಿಪ್ ಕಾರ್ಯಕ್ರಮವನ್ನು ಆರಂಭಿಸಿತ್ತು. ಮೊದಲ ನಾಲ್ಕು ಆವೃತ್ತಿಗಳಲ್ಲಿ ಒಟ್ಟು 10 ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಈವರೆಗೆ 65 ಮಂದಿ ಇಂಟರ್ನ್ಗಳು ತಲಾ ಒಂದು ಲಕ್ಷ ರೂ. ಸ್ಟೈಪೆಂಡ್ (ಶಿಷ್ಯವೇತನ) ಪಡೆದುಕೊಂಡಿದ್ದಾರೆ.
ಈ ಸ್ಪರ್ಧೆಯ ಮುಂದಿನ ಆವೃತ್ತಿಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವವರಿಗಾಗಿ ಆರನೇ ಆವೃತ್ತಿಯ (Season 6) ಪೂರ್ವ ನೋಂದಣಿ ಈಗಾಗಲೇ ಆರಂಭವಾಗಿದೆ. ಆಸಕ್ತರು ವೇಕ್ಫಿಟ್ನ ಅಧಿಕೃತ ವೆಬ್ಸೈಟ್ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.


ನಿಮ್ಮ ಕಾಮೆಂಟ್ ಬರೆಯಿರಿ