

ಬಾಗ್ಪತ್: ತಾನು ಬದುಕಿರುವಾಗಲೇ ತನ್ನದೇ ತಿಥಿ ಕಾರ್ಯವನ್ನು ನೆರವೇರಿಸುವ ಮೂಲಕ ಉತ್ತರ ಪ್ರದೇಶದ 80 ವರ್ಷದ ವೃದ್ಧರೊಬ್ಬರು ಎಲ್ಲರ ಗಮನ ಸೆಳೆದಿದ್ದಾರೆ. ತನಗೆ ಗಂಡುಮಕ್ಕಳಿಲ್ಲ, ಒಬ್ಬಳೇ ಮಗಳಿದ್ದು, ತನ್ನ ಮರಣದ ನಂತರ ಆಕೆಯ ಮೇಲೆ ತಿಥಿ ಕಾರ್ಯದ ಜವಾಬ್ದಾರಿ ಬೀಳಬಾರದು ಎಂಬ ಉದ್ದೇಶದಿಂದ ಈ ವಿಶಿಷ್ಟ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯ ಬರೌತ್ ತಾಲ್ಲೂಕಿನ ಜೋಹ್ರಿ ಗ್ರಾಮದ ನಿವಾಸಿ ಬಲ್ಜೋರ್ ಸಿಂಗ್ (80) ಅವರು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಸಾಮಾನ್ಯವಾಗಿ ವ್ಯಕ್ತಿಯೊಬ್ಬರು ಮೃತಪಟ್ಟ 13ನೇ ದಿನದಂದು ಕುಟುಂಬದವರು ನೆರವೇರಿಸುವ ಧಾರ್ಮಿಕ ವಿಧಿವಿಧಾನಗಳೇ ತೇರಹ್ವಿ (ತಿಥಿ ಕಾರ್ಯ). ಇದರಲ್ಲಿ ವಿವಿಧ ಧಾರ್ಮಿಕ ಆಚರಣೆಗಳು ಹಾಗೂ ಬಂಧುಮಿತ್ರರಿಗೆ ಭೋಜನದ ವ್ಯವಸ್ಥೆ ಮಾಡಲಾಗುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ಇಂತಹ ಕಾರ್ಯಗಳನ್ನು ಸಾಮಾನ್ಯವಾಗಿ ಮೃತರ ಪುತ್ರ ನೆರವೇರಿಸುತ್ತಾನೆ.
ಆದರೆ, ಬಲ್ಜೋರ್ ಸಿಂಗ್ ಅವರು ತಾವು ಬದುಕಿರುವಾಗಲೇ ಈ ಎಲ್ಲ ವಿಧಿವಿಧಾನಗಳನ್ನು ನೆರವೇರಿಸಲು ನಿರ್ಧರಿಸಿದ್ದಾರೆ. ಅದರಂತೆ ಭಾನುವಾರ ಸಂಪ್ರದಾಯದಂತೆ ಹವನವನ್ನೂ ನಡೆಸಲಾಗಿದ್ದು, ಸುಮಾರು 900 ಜನರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ತಮ್ಮ ಈ ನಿರ್ಧಾರದ ಹಿಂದಿನ ಕಾರಣವನ್ನು ವಿವರಿಸಿರುವ ಬಲ್ಜೋರ್ ಸಿಂಗ್, “ನನಗೆ ಗಂಡುಮಕ್ಕಳಿಲ್ಲ. ಹೀಗಿರುವಾಗ ನನ್ನ ಮಗಳ ಮೇಲೆ ಈ ಎಲ್ಲ ಜವಾಬ್ದಾರಿಗಳನ್ನು ಹೊರಿಸುವುದು ಸರಿಯಲ್ಲ ಎಂಬ ಆಲೋಚನೆ ಬಂತು. ಹಾಗಾಗಿ ನಾನು ಬದುಕಿರುವಾಗಲೇ ಈ ಕಾರ್ಯವನ್ನು ನೆರವೇರಿಸುತ್ತಿದ್ದೇನೆ” ಎಂದು ಹೇಳಿದ್ದಾರೆ.
ಕಾರ್ಯಕ್ರಮದ ವೇಳೆ ತಮ್ಮ 10 ವರ್ಷದ ಮೊಮ್ಮಗ ಮುಕುಲ್ಗೆ ಪೇಟ ತೊಡಿಸುವ ಮೂಲಕ ಮತ್ತೊಂದು ಸಂಪ್ರದಾಯವನ್ನೂ ನೆರವೇರಿಸಿದ್ದಾರೆ. ಅಜ್ಜನ ಮರಣದ ನಂತರ ಕುಟುಂಬದ ಜವಾಬ್ದಾರಿಯನ್ನು ಮೊಮ್ಮಗನೇ ವಹಿಸಿಕೊಳ್ಳಬೇಕೆಂಬುದನ್ನು ಸಂಕೇತಿಸುವ ಉದ್ದೇಶದಿಂದ ಆತನಿಗೆ ಪೇಟ ತೊಡಿಸಲಾಗಿದೆ.
“ನನ್ನ ಕುಟುಂಬದವರೆಲ್ಲ ಇಲ್ಲಿದ್ದಾರೆ. ಗ್ರಾಮದ ಜನರೂ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ನನಗೆ ಒಬ್ಬಳೇ ಮಗಳಿದ್ದು, ಆಕೆಗೆ ಇಬ್ಬರು ಗಂಡುಮಕ್ಕಳು ಮತ್ತು ಒಬ್ಬಳು ಮಗಳಿದ್ದಾರೆ. ನನ್ನ ಹೆಸರಿನಲ್ಲಿ ಎರಡು ಬಿಘಾ ಜಮೀನಿದೆ. ಅದನ್ನು ಈಗಾಗಲೇ ನನ್ನ ಮೊಮ್ಮಗನಿಗೆ ನೀಡಿದ್ದೇನೆ” ಎಂದು ಬಲ್ಜೋರ್ ಸಿಂಗ್ ತಿಳಿಸಿದ್ದಾರೆ.


ಈ ಕಾರ್ಯಕ್ರಮದ ಸಿದ್ಧತೆಯೂ ಇತರ ದೊಡ್ಡ ಸಮಾರಂಭಗಳಂತೆಯೇ ಅದ್ದೂರಿಯಾಗಿತ್ತು. ಸುಮಾರು 900 ಜನರಿಗೆ ಊಟ ತಯಾರಿಸಲು ಎಂಟು ಮಂದಿ ಅಡುಗೆ ಕೆಲಸಗಾರರನ್ನು ನೇಮಿಸಲಾಗಿತ್ತು. ವಿವಿಧ ಖಾದ್ಯಗಳು ಹಾಗೂ ಸಿಹಿತಿಂಡಿಗಳನ್ನು ಸಿದ್ಧಪಡಿಸಲಾಗಿತ್ತು.
ತಂದೆಯ ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ಅವರ ಏಕೈಕ ಪುತ್ರಿ ಪಿಂಕಿ, “ನನ್ನ ತಂದೆಯೇ ಬದುಕಿರುವಾಗ ತಮ್ಮ ತೇರಹ್ವಿ (13ನೇ ದಿನದ ತಿಥಿ ಕಾರ್ಯ) ನೆರವೇರಿಸುತ್ತಿದ್ದಾರೆ. ನಾನು ಅವರಿಗೆ ಒಬ್ಬಳೇ ಮಗಳು. ನನಗೆ ಸಹೋದರರೂ ಇಲ್ಲ. ಅವರು ಈ ರೀತಿ ಮಾಡುತ್ತಿರುವುದು ನನಗೆ ಸಂತೋಷ ತಂದಿದೆ” ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಸಚಿವ ಕೆ.ಪಿ. ಸಿಂಗ್ ಕೂಡ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಲ್ಜೋರ್ ಸಿಂಗ್ ಅವರ ಈ ವಿಭಿನ್ನ ಆಚರಣೆಯನ್ನು ಅಭಿನಂದಿಸಿದ ಅವರು, ಇಂತಹ ವಿಶಿಷ್ಟ ಸಂಪ್ರದಾಯವನ್ನು ಆರಂಭಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.



ನಿಮ್ಮ ಕಾಮೆಂಟ್ ಬರೆಯಿರಿ