ನವದೆಹಲಿ: ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ‘ಏಷ್ಯನ್ ಏರ್ ಗನ್ ಚಾಂಪಿಯನ್‌ಶಿಪ್’ನಲ್ಲಿ ಪಾಲ್ಗೊಳ್ಳಲು ತನ್ನ ದೇಶದ ಶೂಟರ್‌ಗಳಿಗೆ ಬಾಂಗ್ಲಾದೇಶ ಸರ್ಕಾರ ಅನುಮತಿ ನೀಡಿದೆ.
ಫೆಬ್ರವರಿ 2 ರಿಂದ 14 ರವರೆಗೆ ದೆಹಲಿಯ ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ಈ ಕೂಟ ನಡೆಯಲಿದೆ. ಆದರೆ, ಇದೇ ವೇಳೆ ಭಾರತಕ್ಕೆ ಬರಲು ಕ್ರಿಕೆಟ್ ತಂಡಕ್ಕೆ ಅನುಮತಿ ನಿರಾಕರಿಸಿರುವ ಬಾಂಗ್ಲಾ ಸರ್ಕಾರದ ನಡೆಯು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರದ ಇಬ್ಬಗೆಯ ನೀತಿಯನ್ನು ಎತ್ತಿ ತೋರಿಸುತ್ತಿದೆ.
ಶೂಟಿಂಗ್ ತಂಡಕ್ಕೆ ಗ್ರೀನ್ ಸಿಗ್ನಲ್:
ಏಷ್ಯನ್ ಏರ್ ಗನ್ ಚಾಂಪಿಯನ್‌ಶಿಪ್‌ಗಾಗಿ ಬಾಂಗ್ಲಾದೇಶದ ಶೂಟರ್ ರೋಬಿಯುಲ್ ಇಸ್ಲಾಂ ಮತ್ತು ತರಬೇತುದಾರೆ ಶರ್ಮಿನ್ ಅಖ್ತರ್ ಭಾರತಕ್ಕೆ ಪ್ರಯಾಣಿಸಲಿದ್ದಾರೆ. ಈ ವಿಷಯವನ್ನು ಬಾಂಗ್ಲಾದೇಶ ಶೂಟಿಂಗ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಅಲೇಯಾ ಫೆರ್ದೌಸಿ ಖಚಿತಪಡಿಸಿದ್ದಾರೆ. ಈ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 17 ದೇಶಗಳ 300ಕ್ಕೂ ಹೆಚ್ಚು ಶೂಟರ್‌ಗಳು ಭಾಗವಹಿಸುತ್ತಿದ್ದಾರೆ.
ಟಿ20 ವಿಶ್ವಕಪ್‌ನಿಂದ ಬಾಂಗ್ಲಾ ಔಟ್
ಆಶ್ಚರ್ಯಕರ ಸಂಗತಿಯೆಂದರೆ, ಫೆಬ್ರವರಿ 7 ರಿಂದ ಭಾರತ ಮತ್ತು ಶ್ರೀಲಂಕಾದಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ನಿರಾಕರಿಸಿದೆ. ಸರ್ಕಾರದ ಸೂಚನೆಯ ಮೇರೆಗೆ ‘ಭದ್ರತಾ ಕಾರಣ’ಗಳನ್ನು ನೀಡಿ ಭಾರತಕ್ಕೆ ಬರಲು ಒಪ್ಪದ ಕಾರಣ, ಐಸಿಸಿ (ICC) ಬಾಂಗ್ಲಾದೇಶವನ್ನು ಟೂರ್ನಿಯಿಂದ ಕೈಬಿಟ್ಟು ಅದರ ಬದಲಿಗೆ ಸ್ಕಾಟ್ಲೆಂಡ್ ತಂಡವನ್ನು ಸೇರಿಸಿಕೊಂಡಿದೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ರಾಜಕೀಯ ಉದ್ವಿಗ್ನತೆಯ ನಡುವೆ, ಬಿಸಿಸಿಐ (BCCI) ಸೂಚನೆಯಂತೆ ಐಪಿಎಲ್ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಮುಸ್ತಫಿಜುರ್ ರೆಹಮಾನ್ ಅವರನ್ನು ಬಿಡುಗಡೆ ಮಾಡಿತ್ತು. ಇದರಿಂದ ಅಸಮಾಧಾನಗೊಂಡ ಬಾಂಗ್ಲಾ ಕ್ರಿಕೆಟ್ ಮಂಡಳಿ, ಭಾರತಕ್ಕೆ ಬರಲು ಭದ್ರತೆಯ ನೆಪವೊಡ್ಡಿತ್ತು.
ಒಂದೇ ಸಮಯದಲ್ಲಿ ನಡೆಯುವ ಎರಡು ಕ್ರೀಡಾಕೂಟಗಳಲ್ಲಿ, ಶೂಟಿಂಗ್ ತಂಡಕ್ಕೆ ಭಾರತಕ್ಕೆ ಹೋಗಲು ಅನುಮತಿ ನೀಡಿ, ಕ್ರಿಕೆಟ್ ತಂಡಕ್ಕೆ ಭದ್ರತೆಯ ನೆಪ ಹೇಳಿ ತಡೆ ಹಿಡಿದಿರುವುದು ಬಾಂಗ್ಲಾದೇಶದ ವಿಚಿತ್ರ ನಿಲುವನ್ನು ಪ್ರಶ್ನಿಸುವಂತೆ ಮಾಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ