ರಾಜ್ಯಪಾಲರಿಗೆ ಮನವರಿಕೆಯಾಗದ ಟಿವಿಕೆ ಸಂಖ್ಯಾ ಬಲ ; ಅಧಿಕಾರಕ್ಕಾಗಿ ತಮಿಳುನಾಡಿನಲ್ಲಿ ಮುಂದುವರಿದ ಕಸರತ್ತು

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ರಾಜಕಾರಣದಲ್ಲಿ ಅನಿರೀಕ್ಷಿತ ತಿರುವುಗಳು ಕಂಡುಬರುತ್ತಿವೆ. ಚಿತ್ರರಂಗದಿಂದ ರಾಜಕೀಯಕ್ಕೆ ಪದಾರ್ಪಣೆ ಮಾಡಿ ಮೊದಲ ಚುನಾವಣೆಯಲ್ಲೇ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ನಟ ವಿಜಯ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ)ಪಕ್ಷವು ಸರಳ ಬಹುಮತದ ಸಮೀಪ ಬಂದಿದ್ದರೂ ಸರ್ಕಾರ ರಚಿಸಲು ಅಗತ್ಯವಿರುವ ಮ್ಯಾಜಿಕ್ ನಂಬರ್ ತಲುಪಲು ಹೆಣಗಾಡುತ್ತಿದೆ.
ಏಪ್ರಿಲ್ 23 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಎರಡು ವರ್ಷಗಳ ಹಳೆಯ ಪಕ್ಷವಾದ ಟಿವಿಕೆ, ಒಟ್ಟು 234 ಸ್ಥಾನಗಳ ಪೈಕಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಆದರೆ, ಸರ್ಕಾರ ರಚನೆಗೆ ಬೇಕಾದ ಸರಳ ಬಹುಮತಕ್ಕೆ 118 ಸ್ಥಾನಗಳು ಬೇಕಾಗಿದ್ದು, ವಿಜಯ ಅವರಿಗೆ ಇನ್ನೂ 10 ಶಾಸಕರ ಬೆಂಬಲದ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ವಿಜಯ ಬುಧವಾರ ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರಿಗೆ ತಮಗೆ ಬೆಂಬಲ ನೀಡಿರುವ ಶಾಸಕರ ಸಹಿಯುಳ್ಳ ಪತ್ರವನ್ನು ಸಲ್ಲಿಸಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಆದರೆ, ಟಿವಿಕೆ ಮಂಡಿಸಿರುವ ಸಂಖ್ಯಾ ಬಲದ ಆಟದ ಬಗ್ಗೆ ರಾಜ್ಯಪಾಲರು ಅಷ್ಟು ಸುಲಭವಾಗಿ ಸಮಾಧಾನಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಯಾಮಿ ಗೌತಂ ಅತ್ಯುತ್ತಮ ನಟಿ, ಕಾರ್ತಿಕ್ ಆರ್ಯನ್–ಮಮ್ಮುಟ್ಟಿ ಅತ್ಯುತ್ತಮ ನಟರು ; ಪ್ರಶಸ್ತಿಗಳ ಪಟ್ಟಿ

ತಮ್ಮ ಸಂಖ್ಯಾ ಬಲವನ್ನು ಹೆಚ್ಚಿಸಿಕೊಳ್ಳಲು ವಿಜಯ ಈಗಾಗಲೇ ಕಾಂಗ್ರೆಸ್, ವಿಸಿಪಿ ಮತ್ತು ಎಡಪಕ್ಷಗಳ ಬೆಂಬಲ ಕೋರಿದ್ದಾರೆ. ಐದು ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಪಕ್ಷವು ಟಿವಿಕೆಗೆ ಬೆಂಬಲ ನೀಡಲು ಸಮ್ಮತಿಸಿದೆ. ಈ ಬೆಂಬಲದ ನಂತರವೂ ವಿಜಯ ಅವರಿಗೆ ಬಹುಮತಕ್ಕೆ ಇನ್ನೂ ಐದು ಸ್ಥಾನಗಳ ಕೊರತೆ ಉಳಿದಿದೆ. ಮತ್ತೊಂದೆಡೆ, ರಾಜ್ಯದ ಪ್ರಮುಖ ಪಕ್ಷವಾದ ಎಐಎಡಿಎಂಕೆ ಪಕ್ಷವು ಟಿವಿಕೆಗೆ ಬೆಂಬಲ ನೀಡುವ ಸಾಧ್ಯತೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ. ಯಾವುದೇ ಸಂದರ್ಭ ಬಂದರೂ ವಿಜಯ ಅವರ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಎಐಎಡಿಎಂಕೆ ಉಪ ಸಂಯೋಜಕ ಕೆ.ಪಿ. ಮುನುಸಾಮಿ ಮಧ್ಯಮ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ 59 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಎಐಎಡಿಎಂಕೆ 47 ಸ್ಥಾನಗಳಲ್ಲಿ ಜಯಗಳಿಸಿದೆ. ಉಳಿದಂತೆ ಪಿಎಂಕೆ 4, ಐಯುಎಂಎಲ್ 2, ಸಿಪಿಐ 2, ಸಿಪಿಐ(ಎಂ) 2 ಸ್ಥಾನಗಳನ್ನು ಪಡೆದಿದ್ದು, ಬಿಜೆಪಿ, ಡಿಎಂಡಿಕೆ ಮತ್ತು ಎಎಂಎಂಕೆ ತಲಾ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿವೆ. ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿರುವುದರಿಂದ, ವಿಜಯ ಅವರನ್ನು ಅಧಿಕಾರದಿಂದ ದೂರವಿಡಲು ಡಿಎಂಕೆ ಮತ್ತು ಎಐಎಡಿಎಂಕೆ ಕೈಜೋಡಿಸುತ್ತವೆಯೇ ಅಥವಾ ಸಣ್ಣ ಪಕ್ಷಗಳ ಬೆಂಬಲದೊಂದಿಗೆ ಟಿವಿಕೆ ಸರ್ಕಾರ ರಚಿಸುತ್ತದೆಯೇ ಎಂಬುದು ಈಗ ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿದೆ.

ಪ್ರಮುಖ ಸುದ್ದಿ :-   ಉದ್ಧವ್‌ಗೆ ಭಾರಿ ಹಿನ್ನಡೆ ; ಶಿಂಧೆ ಬಣದ ಜೊತೆ ಶಿವಸೇನೆ(ಯುಬಿಟಿ) 6 ಸಂಸದರ ವಿಲೀನಕ್ಕೆ ಲೋಕಸಭೆ ಸ್ಪೀಕರ್ ಅನುಮೋದನೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement