ನವದೆಹಲಿ: ಪ್ರಮುಖ ನಿಯಂತ್ರಕ ಕ್ರಮವೊಂದರಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ (Paytm Payments Bank) ಬ್ಯಾಂಕಿಂಗ್ ಪರವಾನಗಿಯನ್ನು ರದ್ದುಗೊಳಿಸಿದೆ.
ಅಧಿಕೃತ ಹೇಳಿಕೆಯ ಮೂಲಕ ಈ ನಿರ್ಧಾರವನ್ನು ಖಚಿತಪಡಿಸಿರುವ ರಿಸರ್ವ್ ಬ್ಯಾಂಕ್, ಇನ್ನು ಮುಂದೆ ಪೇಟಿಎಂ ಬ್ಯಾಂಕ್ ಯಾವುದೇ ಬ್ಯಾಂಕಿಂಗ್ ಸೇವೆಗಳನ್ನು ನೀಡಲು ಅನುಮತಿ ಇರುವುದಿಲ್ಲ ಎಂದು ತಿಳಿಸಿದೆ. ನಿಯಂತ್ರಕ ಅನುಸರಣೆಗಳಲ್ಲಿನ ಗಂಭೀರ ಲೋಪಗಳು ಮತ್ತು ನಿಯಮಗಳ ಉಲ್ಲಂಘನೆಯ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಲು ಮತ್ತು ಅವರ ಠೇವಣಿ ಹಾಗೂ ಸೇವೆಗಳಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಆರ್ಬಿಐ ಭರವಸೆ ನೀಡಿದೆ.
ಪರವಾನಗಿ ರದ್ದತಿಗೆ ಕಾರಣಗಳೇನು?
ಆರ್ಬಿಐ ನೀಡಿರುವ ಮಾಹಿತಿಯ ಪ್ರಕಾರ, ಬ್ಯಾಂಕಿನ ಕಾರ್ಯವೈಖರಿಯು ಸಂಸ್ಥೆಗೆ ಮಾತ್ರವಲ್ಲದೆ ಅದರ ಗ್ರಾಹಕರಿಗೂ ಹಾನಿಕಾರಕವಾಗಿದೆ ಎಂದು ಕಂಡುಬಂದಿದೆ. ಇದು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಸೆಕ್ಷನ್ 22 (3)(ಬಿ) ರ ನೇರ ಉಲ್ಲಂಘನೆಯಾಗಿದೆ. ಇದರ ಜೊತೆಗೆ ಇನ್ನುಳಿದ ಕೆಲವು ಕಾರಣಗಳನ್ನೂ ನೀಡಿದೆ. ಬ್ಯಾಂಕಿನ ಮ್ಯಾನೇಜ್ಮೆಂಟ್ ರಚನೆಯು ಠೇವಣಿದಾರರ ಅಥವಾ ಸಾರ್ವಜನಿಕರ ಹಿತಾಸಕ್ತಿಗೆ ಪೂರಕವಾಗಿಲ್ಲ ಎಂದು ಆರ್ಬಿಐ ಗಮನಿಸಿದೆ, ಇದು ಕಾಯ್ದೆಯ ಸೆಕ್ಷನ್ 22 (3)(ಸಿ) ಅನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.
ಬ್ಯಾಂಕ್ ಈಗಿರುವ ರೂಪದಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲು ಬಿಟ್ಟರೆ ಅದರಿಂದ ಯಾವುದೇ ಅರ್ಥಪೂರ್ಣ ಉದ್ದೇಶ ಅಥವಾ ಸಾರ್ವಜನಿಕ ಹಿತಾಸಕ್ತಿ ಈಡೇರುವುದಿಲ್ಲ (ಸೆಕ್ಷನ್ 22 (3)(ಇ)). ಪೇಮೆಂಟ್ಸ್ ಬ್ಯಾಂಕ್ ಪರವಾನಗಿಗೆ ಸಂಬಂಧಿಸಿದ ಷರತ್ತುಗಳನ್ನು ಪಾಲಿಸುವಲ್ಲಿ ಬ್ಯಾಂಕ್ ವಿಫಲವಾಗಿದೆ, ಇದು ಕಾಯ್ದೆಯ ಸೆಕ್ಷನ್ 22 (3)(ಜಿ) ಅಡಿಯಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಹೇಳಿದೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ಕಾರ್ಯನಿರ್ವಹಣೆಯು ಠೇವಣಿದಾರರ ಹಿತಾಸಕ್ತಿಗೆ ಅಪಾಯಕಾರಿ ಎಂದು ಆರ್ಬಿಐ ಹೇಳಿದೆ. ಬ್ಯಾಂಕ್ ತನ್ನ ಪರವಾನಗಿ ಷರತ್ತುಗಳನ್ನು ಪೂರೈಸದ ಕಾರಣ, ಬ್ಯಾಂಕ್ ಅನ್ನು ಸಂಪೂರ್ಣವಾಗಿ ಮುಚ್ಚುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಆರ್ಬಿಐ ಹೈಕೋರ್ಟ್ಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದೆ.
ಆರ್ಬಿಐ ಅಧಿಕೃತ ಆದೇಶದಲ್ಲಿ ಏನಿದೆ?
ತನ್ನ ಅಧಿಕೃತ ಹೇಳಿಕೆಯಲ್ಲಿ ಆರ್ಬಿಐ, “ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್ 24, 2026 ರ ಆದೇಶದಂತೆ, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ರ ಸೆಕ್ಷನ್ 22(4) ರ ಅಡಿಯಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ಗೆ ನೀಡಲಾಗಿದ್ದ ಬ್ಯಾಂಕಿಂಗ್ ಪರವಾನಗಿಯನ್ನು ರದ್ದುಗೊಳಿಸಿದೆ. ಈ ಆದೇಶವು ಏಪ್ರಿಲ್ 24, 2026 ರ ವ್ಯವಹಾರದ ಮುಕ್ತಾಯದ ಸಮಯದಿಂದ ಜಾರಿಗೆ ಬರಲಿದೆ ಎಂದು ಹೇಳಿದೆ.
ಇದರ ಪರಿಣಾಮವಾಗಿ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಇನ್ನು ಮುಂದೆ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ರ ಸೆಕ್ಷನ್ 5(ಬಿ) ಅಡಿಯಲ್ಲಿ ವ್ಯಾಖ್ಯಾನಿಸಲಾದ ಯಾವುದೇ ‘ಬ್ಯಾಂಕಿಂಗ್’ ವ್ಯವಹಾರ ಅಥವಾ ಸೆಕ್ಷನ್ 6 ರ ಅಡಿಯಲ್ಲಿ ಉಲ್ಲೇಖಿಸಲಾದ ಯಾವುದೇ ಇತರ ವ್ಯವಹಾರಗಳನ್ನು ನಡೆಸುವಂತಿಲ್ಲ. ಬ್ಯಾಂಕ್ ಅನ್ನು ವಿಸರ್ಜಿಸಲು (Winding up) ಆರ್ಬಿಐ ಹೈಕೋರ್ಟ್ಗೆ ಶೀಘ್ರದಲ್ಲೇ ಅರ್ಜಿ ಸಲ್ಲಿಸಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ