
ಭೋಪಾಲ: ತನ್ನ ಪತ್ನಿಯನ್ನೇ ಹತ್ಯೆಗೈದು, ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕಳೆದ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡು ಬೇರೆ ಬೇರೆ ರಾಜ್ಯಗಳಲ್ಲಿ ಅಲೆದಾಡುತ್ತಿದ್ದ ಮಾಜಿ ಸೇನಾ ಕ್ಯಾಪ್ಟನ್ ಸಂದೀಪ ತೋಮರ್ ಎಂಬಾತ ಅಂತಿಮವಾಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮಧ್ಯಪ್ರದೇಶದ ಪಾಂಡುರ್ನಾ ಜಿಲ್ಲೆಯಲ್ಲಿ ಸ್ಥಳೀಯ ಪೊಲೀಸರು ಮತ್ತು ರಾಷ್ಟ್ರೀಯ ಗುಪ್ತಚರ ಗ್ರಿಡ್ (NATGRID) ಜಂಟಿ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿವೆ. ಎಲ್‌ಪಿಜಿ ಬುಕಿಂಗ್ ಮಾಡಿದ ಸಣ್ಣ ಸುಳಿವಿನ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಈತನನ್ನು ಬಲೆಗೆ ಕೆಡವಿದ್ದಾರೆ.
2013ರಲ್ಲಿ ಮದುವೆಯಾದ ಕೆಲವೇ ತಿಂಗಳಲ್ಲಿ ಸಂದೀಪ ತೋಮರ್ ತನ್ನ ಪತ್ನಿ ಶ್ವೇತಾ ಸಿಂಗ್ ಅವರನ್ನು ಪಂಜಾಬಿನ ಅಬೋಹರ್ ಕ್ಯಾಂಟೋನ್ಮೆಂಟ್‌ನಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಆರಂಭದಲ್ಲಿ ಇದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದರೂ, ವಿಧಿವಿಜ್ಞಾನ (Forensic) ವರದಿಯು ಅದು ಕೊಲೆ ಎಂದು ಸಾಬೀತುಪಡಿಸಿತ್ತು. ಈ ಹಿನ್ನೆಲೆಯಲ್ಲಿ 2014ರಲ್ಲಿ ವಿಚಾರಣಾ ನ್ಯಾಯಾಲಯವು ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು ಮತ್ತು ಆತನನ್ನು ಸೇನೆಯಿಂದ ವಜಾಗೊಳಿಸಲಾಗಿತ್ತು.

ಜಾಮೀನು ಪಡೆದು ಪರಾರಿಯಾಗಿದ್ದ ಆರೋಪಿ
ಐದು ವರ್ಷಗಳ ಜೈಲು ವಾಸದ ನಂತರ, 2019ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಈತನಿಗೆ ಜಾಮೀನು ನೀಡಿತ್ತು. ಆದರೆ, 2022ರ ಸೆಪ್ಟೆಂಬರ್‌ನಲ್ಲಿ ನ್ಯಾಯಾಲಯವು ಆತನ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಾಗ, ಶರಣಾಗುವ ಬದಲು ತೋಮರ್ ನಾಪತ್ತೆಯಾಗಿದ್ದ.
ನಾಲ್ಕು ವರ್ಷಗಳ ಕಾಲ ಪೊಲೀಸರ ಕಣ್ಣು ತಪ್ಪಿಸಲು ತೋಮರ್ ಹಲವಾರು ತಂತ್ರಗಳನ್ನು ಹೂಡಿದ್ದ. ಹೆಸರು ಬದಲಾವಣೆ ಮಾಡಿಕೊಂಡು ನಕಲಿ ಗುರುತಿನೊಂದಿಗೆ ಜಿರಾಕಪುರ, ಒಡಿಶಾ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ವಾಸವಾಗಿದ್ದ.
ನಂತರ ಪಾಂಡುರ್ನಾಕ್ಕೆ ಬಂದು ವಾಸವಾಗಿದ್ದ. ಕೆಲಕಾಲ ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕೆಲಸ ಮಾಡಿದ್ದ ಈತ, ಇತ್ತೀಚೆಗೆ ಜ್ಯೂಸ್ ಫ್ಯಾಕ್ಟರಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿದ್ದ. ತಲೆಮರೆಸಿಕೊಂಡಿದ್ದ ಅವಧಿಯಲ್ಲೇ ಈತ ಮತ್ತೊಂದು ಮದುವೆಯೂ ಆಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಣ್ಣ ಸುಳಿವು ಹಿಡಿದು ಬಲೆಗೆ ಕೆಡವಿದ ಪೊಲೀಸರು
ಎಷ್ಟೇ ಜಾಣತನ ಪ್ರದರ್ಶಿಸಿದರೂ, ತೋಮರ್ ಮಾಡಿದ ಒಂದು ಸಣ್ಣ ತಪ್ಪು ಆತನನ್ನು ಜೈಲು ಸೇರಿಸುವಂತೆ ಮಾಡಿದೆ.
ತನ್ನ ಅಸಲಿ ಪ್ಯಾನ್ (PAN) ಕಾರ್ಡ್ ಬಳಸಿ ಬ್ಯಾಂಕ್ ಖಾತೆ ತೆರೆದಿದ್ದ. ಈ ಖಾತೆಗೆ ಪ್ರತಿ ತಿಂಗಳು ಕಂಪನಿಯಿಂದ ಸಂಬಳ ಜಮೆಯಾಗುತ್ತಿದ್ದುದು ಗುಪ್ತಚರ ಇಲಾಖೆಯ ಗಮನಕ್ಕೆ ಬಂದಿತ್ತು. ಅದೇ ಬ್ಯಾಂಕ್ ಖಾತೆಯನ್ನು ಬಳಸಿ ಎಲ್‌ಪಿಜಿ (LPG) ಸಿಲಿಂಡರ್ ತುಂಬಲು ಮಾಡಲು ಹಣ ಪಾವತಿಸಿದ್ದ. ಇದು ಆತನ ವಿಳಾಸವನ್ನು ಪತ್ತೆಹಚ್ಚಲು ಪೊಲೀಸರಿಗೆ ಸಹಕಾರಿಯಾಯಿತು.
ಅಧಿಕಾರಿಗಳು ಗ್ಯಾಸ್ ಏಜೆನ್ಸಿ ಮೂಲಕ ವಿತರಣಾ ವಿಳಾಸವನ್ನು ಪತ್ತೆಹಚ್ಚಿದರು ಮತ್ತು ಮೊಬೈಲ್ ಟವರ್ ಸ್ಥಳ ದತ್ತಾಂಶದೊಂದಿಗೆ ಅದನ್ನು ದೃಢಪಡಿಸಿದರು,ಎರಡೂ ತಾಳೆಯಾದಾಗ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ನಿವಾಸದಲ್ಲೇ ವಶಕ್ಕೆ ಪಡೆದರು.
ನಂತರ ಈತನನ್ನು ಟ್ರಾನ್ಸಿಟ್ ರಿಮಾಂಡ್‌ನಲ್ಲಿ ಪಂಜಾಬಿಗೆ ಕರೆತರಲಾಯಿತು ಮತ್ತು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು, ನಂತರ ಮಾರ್ಚ್ 28 ರಂದು ಅಬೋಹರ್‌ನಲ್ಲಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. ಈ ವರ್ಷದ ಆರಂಭದಲ್ಲಿ ಪಂಜಾಬ್ ಪೊಲೀಸರಿಂದ ಹೈಕೋರ್ಟ್ ವರದಿ ಕೇಳಿದ ಬೆನ್ನಲ್ಲೇ ಈ ಕಾರ್ಯಾಚರಣೆ ಚುರುಕುಗೊಂಡು ಯಶಸ್ವಿಯಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ