ರೈತರ ಪ್ರತಿಭಟನೆ: ವಿದೇಶಿಯರ ಹಸ್ತಕ್ಷೇಪಕ್ಕೆ ಕೇಂದ್ರ ಆಕ್ಷೇಪ

ನವ ದೆಹಲಿ: ನೂತನ ಕೃಷಿ ಮಸೂದೆಗಳನ್ನು ಖಂಡಿಸಿ ನಡೆಯುತ್ತಿರುವ ರೈತರ ಹೋರಾಟದ ಕುರಿತು ಕೆಲ ವಿದೇಶಿಯರು ಹೇಳಿಕೆ ನೀಡಿದ್ದನ್ನು ಭಾರತ ಖಂಡಿಸಿದೆ.

ಖ್ಯಾತ‌  ಪಾಪ್‌ ಗಾಯಕಿ‌ ರಿಹಾನಾ ಹಾಗೂ ಪರಿಸರ ಹೋರಾಟಗಾರರಾದ ಗ್ರೆಟಾ ಥಂಬರ್ಗ್‌ ರೈತರ ಹೋರಾಟಕ್ಕೆ ಬೆಂಬಲ ನೀಡಿದ ಮರುದಿನ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ. ಕೆಲ ಸ್ವ ಹಿತಾಸಕ್ತಿ ಹೊಂದಿದ ಗುಂಪುಗಳು ತಮ್ಮ ಸಿದ್ಧಾಂತವನ್ನು ಹೋರಾಟದ ಮೇಲೆ ಹೇರುತ್ತಿರುವುದು ಹಾಗೂ ಹೋರಾಟಗಾರರ ದಿಕ್ಕು ತಪ್ಪಿಸುತ್ತಿರುವುದು ದುರ್ಭಾಗ್ಯಕರ. ಭಾರತದ ಸಂಸತ್ತು ವ್ಯಾಪಕ ಚರ್ಚೆಯ ನಂತರ ನೂತನ ಕೃಷಿ ಮಸೂದೆಗೆ ಅನುಮೋದನೆ ನೀಡಿದೆ. ನೂತನ ಕಾಯ್ದೆಯಿಂದ ರೈತರಿಗೆ ಉತ್ಪನ್ನಗಳ ಮಾರಾಟಕ್ಕೆ ಮಾರುಕಟ್ಟೆ ಅವಕಾಶಗಳು ವಿಸ್ತರಿಸಲಿವೆ.  ಇದು ಆರ್ಥಿಕ ಪ್ರಗತಿಗೆ ಹಾಗೂ ಸುಸ್ಥಿರ ಕೃಷಿಗೆ ಪೂರಕವಾಗಲಿದೆ. ಕೆಲ ರೈತರು ಮಾತ್ರ ಕಾಯ್ದೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನಾಕಾರರ ಭಾವನೆಗಳಿಗೆ ಬೆಲೆ ನೀಡಿದ ಕೇಂದ್ರ ಸರಕಾರ ಪ್ರತಿಭಟನಾಕಾರರ ಪ್ರತಿನಿಧಿಗಳೊಂದಿಗೆ ಸರಣಿ ಚರ್ಚೆ ನಡೆಸುತ್ತಿದೆ. ಕೇಂದ್ರ ಸಚಿವರು ರೈತರೊಂದಿಗೆ ಸಭೆ ನಡೆಸುತ್ತಿದ್ದು, ಈವರೆಗೆ ೧೧ ಸುತ್ತಿನ ಮಾತುಕತೆ ನಡೆದಿದೆ. ಭಾರತೀಯ ಪೊಲೀಸ್‌ ಪಡೆಗಳು ಪ್ರತಿಭಟನೆಯನ್ನು ಸಮರ್ಪಕವಾಗಿ ನಿಭಾಯಿಸಿದ್ದಾರೆ. ನೂರಾರು ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ.

ಯಾವುದೇ ಹೇಳಿಕೆ ನೀಡುವ ಮುನ್ನ ಸಮರ್ಪಕವಾಗಿ ವಿಷಯವನ್ನು ಮನಗಾಣಬೇಕು. ಸೆಲೆಬ್ರಿಟಿಗಳು ಹಾಗೂ ಇತರರು ಸಾಮಾಜಿಕ ಜಾಲತಾಣಗಳಲ್ಲಿ ವೈಭವೀಕರಣದ ಹೇಳಿಕೆಗಳು ಹಾಗೂ ಹ್ಯಾಷ್‌ಟ್ಯಾಗ್‌  ಹಾಕುವುದು ಸಮರ್ಪಕವಾದುದಲ್ಲ ಎಂದು ಸಚಿವಾಲಯದ ಪ್ರಕಟನೆ ತಿಳಿಸಿದೆ.

 

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement