ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಮಾಜಿ ಪ್ರಧಾನಿ ದಿ.ರಾಜೀವ ಗಾಂಧಿ ಹಂತಕರನ್ನು ಬಿಡುಗಡೆ ಮಾಡುವ ವಿಚಾರದಲ್ಲಿ ಬಿಜೆಪಿ ಹಾಗೂ ಕೇಂದ್ರದ ಮೇಲೆ ತಮಿಳುನಾಡಿನ ಎಐಎಡಿಎಂಕೆ ಸರ್ಕಾರದ ಒತ್ತಡ ಹೆಚ್ಚಾಗುತ್ತಿದೆ.
ರಾಜೀವ ಗಾಂಧಿ ಹಂತಕರನ್ನು ಬಿಡುಗಡೆ ಮಾಡಬೇಕು ಎಂದು ತಮಿಳುನಾಡಿನ ಆಡಳಿತಾರೂಢ ಪಕ್ಷವಾದ ಎಐಎಡಿಎಂಕೆ ಪಕ್ಷ ಕೇಂದ್ರದ ಬಿಜೆಪಿ ನೇತೃತ್ವದ ಪಕ್ಷವನ್ನು ಒತ್ತಾಯಿಸುತ್ತಿದ್ದು, ಇದರಿಂದ ರಾಜಕೀಯವಾಗಿ ಚುನಾವಣೆಯಲ್ಲಿ ತನಗೆ ಲಾಭವಾಗಬಹುದು ಎಂಬುದು ಇದರ ಹಿಂದಿನ ಲೆಕ್ಕಾಚಾರ.
ತಮಿಳುನಾಡು ಸರ್ಕಾರ ರಾಜ್ಯಪಾಲ ಪುರೊಹಿತ್ ಅವರಿಗೆ ಮನವಿ ಮಾಡಿದ್ದು, ಈ ಬಗ್ಗೆ ರಾಷ್ಟ್ರಪತಿಯವರು ನಿರ್ಣಯ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಈ ವಿಷಯದಲ್ಲಿ ಎಐಎಡಿಎಂಕೆ ಒತ್ತಾಯ ಮೊದಲಿನಿಂದಲೂ ಇದ್ದೇ ಇದೆ. ಆದರೆ ಈಗ ತಮಿಳುನಾಡು ವಿಧಾನಸಭೆ ಚುನಾವಣೆ ಹತ್ತಿರ ಬಂದ ಕಾರಣ ಈ ಒತ್ತಾಯ ಇನ್ನೂ ಜೋರಾಗಿದೆ. ಆದರೆ ಮಿತ್ರ ಪಕ್ಷವಾದ ಬಿಜೆಪಿ ಈ ಬಗ್ಗೆ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ.
ಈ ವಿಷಯವು ತಮಿಳುನಾಡು ಮಟ್ಟಿಗೆ ಭಾವನಾತ್ಮಕ ವಿಷಯವಾಗಿದ್ದರೂ, ಇಂತಹ ವಿಷಯಗಳಲ್ಲಿ ಪಕ್ಷವು ಮೃದು ಧೋರಣೆ ತಾಳಿ ರಾಜೀವ್ ಹಂತಕರನ್ನು ಬಿಡುಗಡೆ ಮಾಡಿದರೆ ಪಕ್ಷವು ಭಯೋತ್ಪಾದನೆಯ ಬಗ್ಗೆ ಮೃದು ಧೋರಣೆ ತಾಳಿದಂತೆ ಆಗುತ್ತದೆ ಎಂಬುದು ಬಿಜೆಪಿ ನಾಯಕರಿಗೆ ಇರುವ ಆತಂಕ. ಈ ಕಾರಣಕ್ಕಾಗಿ ತಮ್ಮ ಮಿತ್ರ ಪಕ್ಷವಾದ ಎಐಎಡಿಎಂಕೆ ಎಷ್ಟೇ ಒತ್ತಾಯಿಸುತ್ತಿದ್ದರೂ ಬಿಜೆಪಿ ಅದಕ್ಕೆ ಯಾವುದೇ ಸ್ಪಂದನೆ ನೀಡುತ್ತಿಲ್ಲ. ವಿಧಾನಸಭೆ ಚುನಾವಣೆ ತಮಿಳುನಾಡಿಗಷ್ಟೇ ಸೀಮಿತ. ಆದರೆ ಒಮ್ಮೆ ಬಿಜೆಪಿ ತನ್ನ ನಿಲುವು ಸಡಿಲಿಸದರೆ ರಾಷ್ಟ್ರವ್ಯಾಪಿ ಪಕ್ಷದ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಆಲೋಚನೆ ಬಿಜೆಪಿಗಿದೆ. ಈ ಕಾರಣದಿಂದ ಬಿಜೆಪಿ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎನ್ನಲಾಗಿದೆ.
ಶಿಕ್ಷೆ ಅನುಭವಿಸುತ್ತಿರುವವರಲ್ಲಿ ನಾಲ್ವರು ಶ್ರೀಲಂಕಾದ ತಮಿಳರಾಗಿದ್ದಾರೆ. ಅವರನ್ನು ಬಿಡುಗಡೆ ಮಾಡಿದರೆ ಶ್ರೀಲಂಕಾ ಜೊತೆ ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆ ಉಂಟಾಗಿ ಅದು ತನ್ನ ಬದ್ಧ ವೈರಿಯಾಗಿರುವ ಚೀನಾ ಜೊತೆ ಇನ್ನಷ್ಟು ಸಮೀಪವಾಗಬಹುದು ಎಂಬ ದೂರದ ಆಲೋಚನೆಯೂ ಕೇಂದ್ರ ಸರ್ಕಾರಕ್ಕಿದೆ. ಜೊತೆಗೆ ಒಮ್ಮೆ ಬಿಡುಗಡೆ ಮಾಡಿದರೆ ಬಿಡುಗಡೆಯಾದವರನ್ನು ಶ್ರೀಲಂಕಾ ಸರ್ಕಾರ ವಾಪಸ್ ಕರೆಸಿಕೊಳ್ಳು ನಿರಾಕರಿಸಿದರೆ ಏನು ಮಾಡಬೇಕು ಎಂಬ ಪ್ರಶ್ನೆಯೂ ಇದೆ. ಬಿಡುಗಡೆಯಾದ ಅಪರಾಧಿಗಳನ್ನು ವಾಪಸ್ ಕರೆದುಕೊಂಡು ಹೋಗಲು ದ್ವೀಪ ದೇಶ ನಿರಾಕರಿಸಿದರೆ ಶ್ರೀಲಂಕಾದ ಪ್ರಜೆಗಳೊಂದಿಗೆ ಏನು ಮಾಡಬೇಕು ಎಂಬ ವಿಷಯವಿದೆ. ಪೆರರಿವಾಲನ್ ಅವರ ಕರುಣೆ ಮನವಿಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳಲು ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರಿಗೆ ಸುಪ್ರೀಂ ಕೋರ್ಟ್ ನೀಡಿರುವ ಗಡುವು ಮುಗಿದಿದೆ. ಕೇಂದ್ರ ಸರ್ಕಾರ ಈ ವಿಷಯದಲ್ಲಿ ಹೆಚ್ಚಿನ ಆಸಕ್ತಿ ತೋರಿಲ್ಲ. ಹೀಗಾಗಿ ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯೊಳಗೆ ಎಐಎಡಿಎಂಕೆ ಮನವಿಗೆ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಸ್ಪಂದಿಸುವುದು ಅಸಾಧ್ಯದ ಮಾತು ಎಂದೇ ಅನಿಸುತ್ತದೆ.
ನಿಮ್ಮ ಕಾಮೆಂಟ್ ಬರೆಯಿರಿ