ಸಾಲುಸಾಲು ಮೀಸಲು ಬೇಡಿಕೆಗಳ ಸವಾಲಿನ ಮಧ್ಯೆ ಸಿಎಂ ಬಿಎಸ್‌ವೈ

ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ತಮ್ಮ ನಾಲ್ಕನೇ ಅವಧಿಯಲ್ಲಿಯೂ ಒಂದಿಲ್ಲ ಎಂದು ಸವಾಲಿನ ಪರಿಸ್ಥಿತಿಯನ್ನು ಎದುರಿಸುತ್ತಲೇ  ಇದ್ದಾರೆ.

ಬಿಜೆಪಿಗೆ ಬೇರೆ ಪಕ್ಷಗಳಿಂದ ಬಂದ ಬಹುತೇಕ ಎಲ್ಲ ಶಾಸಕರಿಗೆ ಸಚಿವ ಸ್ಥಾನ ಕೊಟ್ಟ ನಂತರದಲ್ಲಿಯೂ ಅವರಿಗೆ ಸವಾಲು ಅಥವಾ ಬಿಕ್ಕಟ್ಟಿನ ಪರಿಸ್ಥಿತಿ ತಪ್ಪಿಲ್ಲ. ಯಡಿಯೂರಪ್ಪ ಅಧಿಕಾರದಲ್ಲಿರುವಾಗಲೆಲ್ಲ ಅವರಿಗೆ ಇಂಥ ಸವಾಲುಗಳು ಎದುರಾಗುತ್ತಲೇ ಇರುತ್ತವೆ.  ಅದಕ್ಕೇ ಅವರು ಇತ್ತೀಚಿಗೆ ವಿಧಾನಸಭೆಯಲ್ಲಿ ನನಗೆ ಸವಾಲುಗಳನ್ನು ಎದುರಿಸುವುದೆಂದರೆ ಎಲ್ಲಿಲ್ಲದ ಉತ್ಸಾಹ ಎಂದು ಹೇಳಿರಬೇಕು.

ಈಗ ಎದುರಾಗಿರುವ ಸವಾಲು ಮಂತ್ರಿಮಂಡಲಕ್ಕೆ ಸಂಬಂಧಪಟ್ಟಿದ್ದಲ್ಲ. ಆದರೆ ಒಂದರ್ಥದಲ್ಲಿ  ಮಂತ್ರಿ ಮಂಡಲದಲ್ಲಿರುವವರಿಂದಲೇ ಬಂದಿದ್ದು, ಅವರು ಎತ್ತಿದ ಮೀಸಲು ವಿಷಯ ಈಗ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸವಾಲಿನ ರೂಪದಲ್ಲಿ ಎದುರಿಗೆ ನಿಂತಿದೆ.

ಒಂದೆಡೆ ವಾಲ್ಮೀಕಿ ಸಮುದಾಯದವರು ಪರಿಶಿಷ್ಟ ಪಂಗಡದ ಮೀಸಲನ್ನು ಶೇ.೭.೫ಕ್ಕೆ ಹೆಚ್ಚಿಸಬೇಕು ಎಂದು ಕೇಳುತ್ತಿದ್ದಾರೆ. ಯಡಿಯೂರಪ್ಪ ಸಚಿವ ಸಂಪುಟದಲ್ಲಿರುವ ಇಬ್ಬರು ಪ್ರಮುಖ ಸಚಿವರಾದ ಬಿ.ಶ್ರೀರಾಮುಲು ಹಾಗೂ ರಮೇಶ ಜಾರಕಿಹೊಳಿ ಈ ಕುರಿತು ಬಲವಾಗಿ ಒತ್ತಡ ಹೇರುತ್ತಿದ್ದಾರೆ, ಮತ್ತೊಂದೆಡೆ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಎಂದು ಸಂಪುಟದ ಹಿರಿಯ ಸಚಿವರಾದ ಈಶ್ವರಪ್ಪ ನೇತೃತ್ವದಲ್ಲಿ ಭೈರತಿ ಬಸವರಾಜು, ಎಂಟಿಬಿ ನಾಗರಾಜ ಮೊದಲಾದವರು ಸ್ವಾಮೀಜಿಗಳ ಮೂಲಕ ಚಳವಳಿ ನಡೆಸಿ ಒತ್ತಡ ಹೇರುತ್ತಿದ್ದಾರೆ. ಜೊತೆಗೆ ಕುರುಬ ಸಮುದಾಯದ ಸ್ವಾಮೀಜಿಗಳಿಂದ ಬೆಂಗಲೂರಿನಲ್ಲಿ ಈ ಕುರಿತು ಬೃಹತ್‌ ಸಮಾವೇಶವೂ ನಡೆಯಿತು. ಇದಕ್ಕೂ ಮೊದಲು ವಾಲ್ಮೀಕಿ ಸ್ವಾಮೀಜಿಗಳಿಂದಲೂ ಪರಿಶಿಷ್ಟ ಪಂಗಡದ ಮೀಸಲು ಹೆಚ್ಚಳದ ಕುರಿತು ಇದೇ ರೀತಿ ಸಮಾವೇಶ ನಡೆದಿತ್ತು. ಮಂಗಳವಾರ ಹರಿಹರ ತಾಲೂಕಿನ ರಾಜೇನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕರೆಸಿ ವಾಲ್ಮೀಕಿ ಸ್ವಾಮೀಜಿಗಳ ಸಮ್ಮುಖದಲ್ಲಿ ಮೀಸಲು ಹೆಚ್ಚಳದ ಕುರಿತು ಹಕ್ಕೊತ್ತಾಯ ಸಹ ಮಂಡಿಸಲಾಯಿತು.

ಮತ್ತೊಂದೆಡೆ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮಿಗಳಿಂದ ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ೨ಎಗೆ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿ ಪಾದಯಾತ್ರೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಬೆಂಗಳೂರಿನಲ್ಲಿ ಬೃಹತ್‌ ಹಕ್ಕೊತ್ತಾಯ ಸಮಾವೇಶ ಹಮ್ಮಿಕೊಳ್ಳಾಗಿದೆ.

ಹೀಗೆ ಯಡಿಯೂರಪ್ಪ ಈಗ ಒಂದರ ಬೆನ್ನಿಗೆ ಮತ್ತೊಂದರಂತೆ ಮೀಸಲಿನ ಹಕ್ಕೊತ್ತಾಯದ ಸವಾಲನ್ನು ಎದುರಿಸುತ್ತಿದ್ದಾರೆ.

ಇದರ ಜೊತೆಗೆ ಕೆಲ ಸಮುದಾಯದವರು ತಮ್ಮ ಜಾತಿ-ಸಮುದಾಯಕ್ಕೆ ಮಂಡಳಿ/ನಿಗಮ ರಚಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ವೀರಶೈವ/ಲಿಂಗಾಯತ ಅಭಿವೃದ್ಧಿ ನಿಗಮ ರಚನೆಯಾಯಿತೋ ಈಗ ಬಹುತೇಕ ಸಮುದಾದವರು ತಮ್ಮ ಹಕ್ಕೊತ್ತಾಯ ಮಂಡಿಸುತ್ತಿದ್ದಾರೆ. ಹೀಗೆ ಸಾಲು ಸಾಲು ಬೇಡಿಕೆಗಳ ಸವಾಲುಗಳು ಒಮ್ಮೆಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಎದುರು ಬೃಹದಾಕಾರವಾಗಿ ನಿಂತಿವೆ.

ಇಂಥ ಜಾತಿ ಮೀಸಲಾತಿ ಹಕ್ಕೊತ್ತಾಯದ ಸಮಾವೇಶಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಚಿವ ಸಂಪುಟದ ಸಹೋದ್ಯೋಗಿಗಳೇ ಪಾಲ್ಗೊಳ್ಳುತ್ತಿರುವುದು ವಿಶೇಷ. ಸಚಿವ ಸಂಪುಟದ ಸದಸ್ಯರಾಗಿದ್ದುಕೊಂಡು ಅವರು ತಮ್ಮದೇ ಸರ್ಕಾರಕ್ಕೆ ಹಕ್ಕೊತಾಯ ಮಾಡುತ್ತಿದ್ದಾರೆ…! ಸಚಿವರಾಗಿದ್ದುಕೊಂಡು ತಮ್ಮ ತಮ್ಮ ಜಾತಿಗಳ ಭಾಗವಾಗಿ ನಿಲ್ಲುತ್ತಿದ್ದಾರೆ..!!

ಆದರೆ ಮೀಸಲು ನಿರ್ಧರಿಸುವುದು ಅಥವಾ ಅದಕ್ಕೆ ಸೇರ್ಪಡೆ ಮಾಡುವುದು ಈಗ ಅಷ್ಟು ಸುಲಭವಲ್ಲ. ಅದರಲ್ಲಿಯೂ ಸುಪ್ರೀಂ ಕೋರ್ಟ್‌ ಮೀಸಲಿನ ಪ್ರಮಾಣ ಶೇ.೫೦ ಮೀರಬಾರದು ಎಂದು ತೀರ್ಪು ನೀಡಿದ ನಂತರ. ಅಷ್ಟು ಸುಲಭದಲ್ಲಿ ಮೀಸಲು ಹೆಚ್ಚಳ ಮಾಡಲು ಸಾಧ್ಯವಿಲ್ಲ. ಈಗಾಗಲೇ ತಮಿಳುನಾಡಿನ ಸರ್ಕಾರದ ಪ್ರಕರಣ ಸುಪ್ರಿಂಕೋರ್ಟ್‌ ಮುಂದಿದೆ. ಹೆಚ್ಚೆಂದರೆ ಅವರು ಕೇಂದ್ರಕ್ಕೆ ಶಿಫಾರಸು ಮಾಡಿ ಕಳುಹಿಸಬಹುದು ಅಷ್ಟೆ. ಅದು ಮತ್ತೆ ಸುಪ್ರೀಂಕೋರ್ಟ್‌ ಅವಗಾಹನಗೆ ಬರಬಹದು.ಬರಬಹುದು.

ಆದರೆ ಯಡಿಯೂರಪ್ಪ ಅವರಿಗೆ ಸವಾಲು ಹಾಗೂ ಎಚ್ಚರಿಕೆ ಎರಡೂ ಆಗಿರುವುದು ಲಿಂಗಾಯತ ಸಮುದಾಯಕ್ಕೆ ಸೇರಿದ ಪಂಚಮಸಾಲಿ ಸಮುದಾಯವನ್ನು ೨ಎಗೆ ಸೇರ್ಪಡೆ ಮಾಡುವ ವಿಚಾರ. ಇದರಲ್ಲಿ ಮುಂದಡಿ ಇಟ್ಟರೂ ಕಷ್ಟ, ಹಿಂದಡಿ ಇಟ್ಟರೂ ಕಷ್ಟ, ಮೌನವಾಗಿದ್ದರೂ ಕಷ್ಟ ಎನ್ನುವ ಸ್ಥಿತಿ ಯಡಿಯೂರಪ್ಪ ಅವರದ್ದು. ರಾಜ್ಯದಲ್ಲಿ ಬಹುಸಂಖ್ಯಾತರಾಗಿರುವ ಲಿಂಗಾಯತ ಸಮುದಾಯದ ಮೇರು ನಾಯಕರಾಗಿರುವ ಯಡಿಯೂರಪ್ಪ ಅವರಿಗೆ ಇದು ಉಗುಳಲೂ ಆಗದ ನುಂಗಲೂ ಆಗದ ಸ್ಥಿತಿ. ಯಾಕೆಂದರೆ ಪಂಚಮ ಸಾಲಿ ಸಮುದಾಯ ಲಿಂಗಾಯತರಲ್ಲೇ ದೊಡ್ಡ ಸಮುದಾಯ. ಅಂದರೆ ಲಿಂಗಾಯತರಲ್ಲಿ ಸರಿಸುಮಾರು ಶೇ.೫೦ಕ್ಕಿಂತ ಹೆಚ್ಚಿಗೆ ಇದ್ದಾರೆ. ಉತ್ತರ ಕರ್ನಾಟಕದಲ್ಲಿ ಇವರ ಪ್ರಾಬಲ್ಯ ಹೆಚ್ಚು.ಮುರುಗೇಶ ನಿರಾಣಿ, ಉಮೇಶ ಕತ್ತಿ, ಸಿ.ಸಿ.ಪಾಟೀಲ, ಮೊದಲಾದ ಸಚಿವರು ಇದೇ ಸಮುದಾಯದವರು.ಮತ್ತು ಉತ್ತರ ಕರ್ನಾಟಕದವರೇ. ಇಷ್ಟೇ ಅಲ್ಲ, ಯಡಿಯೂರಪ್ಪ ಅವರಿಗೆ ಸದ್ಯ ರೆಬೆಲ್‌ ಆಗಿರುವ ಬಸನಗೌಡ ಪಾಟೀಲ ಯತ್ನಾಳ ಅವರೂ ಇದೇ ಸಮುದಾಯದವರು. ಹೀಗಾಗಿ ಯಡಿಯೂರಪ್ಪ ಅವರು ಯಾವುದೇ ನಿರ್ಧಾರ ತೆಗೆದುಕೊಂಡೂ ತಂತಿಯ ಮೇಲಿನ ನಡಿಗೆಯೇ. ನಿರ್ಧಾರ ತೆಗೆದುಕೊಳ್ಳವ ಹಾಗಿಲ್ಲ, ತೆಗೆದುಕೊಳ್ಳದೆ ಇರುವ ಹಾಗೆಯೂ ಇಲ್ಲ. ಯಾಕೆಂದರೆ ಸ್ವಲ್ಪ ಯಡವಟ್ಟಾದರೂ ಬುಡಕ್ಕೆ ಬರಬಹುದಾದ ವಿಷಯ.ಅಸಮಾಧಾನಿತರು ಇದನ್ನೇ ಬಂಡವಾಲ ಮಾಡಿಕೊಳ್ಳಬಹುದು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಕ್ಕೆ ಬೆಂಬಲಿಸಿದ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಹೊಡೆತ ಬಿತ್ತು. ಲಿಂಗಾಯತರು ಮತಹಾಕಲಿಲ್ಲ, ಹಿಂದುಳಿದ ವರ್ಗಗಳ ಮತದಾರರು ಕೈಹಿಡಿಯಲಿಲ್ಲ. ಹೀಗಾಗಿ ಕಾಂಗ್ರೆಸ್‌ ಹಿನ್ನಡೆ ಅನುಭವಿಸಿತು. ಇಲ್ಲಿಯೂ ಇದೇ ಸ್ಥಿತಿಯಿದೆ. ತೊಡುವಂತೆಯೂ ಇಲ್ಲ, ತೊಡದೆ ಬಿಡುವಂತೆಯೂ ಇಲ್ಲ. ಯಾಕೆಂದರೆ ಇದರಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಈಗಾಗಲೇ ಚುನಾವಣೆ ರಣತಂತ್ರದಲ್ಲಿ ನಿಪುಣ ಎನ್ನಿಸಿಕೊಂಡಿರುವ ಬಿಜೆಪಿ ಯುವ ನೇತಾರ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೂ ಇದು ತೊಡಕಾಗಬಹುದು. ಹೀಗಾಗಿ ಯಡಿಯೂರಪ್ಪ ಎಚ್ಚರಿಕೆಯ ಹೆಜ್ಜೆ ಇಡಬೇಕಾಗುತ್ತದೆ. ಈಗಾಗಲೇ ಸಂವಿಧಾನದ ಆಶಯ ಹಾಗೂ ಸುಪ್ರೀಂಕೋರ್ಟ್‌ ತೀರ್ಪಿಗೆ ಧಕ್ಕೆಯಾಗದ ರೀತಿಯಲ್ಲಿ ಏನು ಸಾಧ್ಯವಿದೆಯೋ ಅದನ್ನು ಪರಿಶೀಲಿಸುವುದಾಗಿ ಯಡಿಯೂರಪ್ಪ ಮೀಸಲಿನ ಬೇಡಿಕೆ ಇಟ್ಟಿರುವ ಈ ಸಮುದಾಯಗಳಿಗೆ ಸೂಚ್ಯವಾಗಿ ಹೇಳಿದ್ದಾರೆ. ಆದರೆ ಮುಂದೆ ಈ ಸವಾಲುಗಳನ್ನು ಹೇಗೆ ಎದುರಿಸುತ್ತಾರೆ ಎಂಬುದು ಮುಖ್ಯವಾಗುತ್ತದೆ.

 

 

 

 

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement