ಕೋವಿಡ್‌ ೨ನೇ ಅಲೆ ಭೀತಿ; ಮದುವೆ ಸಮಾರಂಭಗಳಿಗೆ ಮಾರ್ಷಲ್‌ಗಳ ನಿಯೋಜನೆ

ಬೆಂಗಳೂರು: ಕೋವಿಡ್‌ ಎರಡನೇ ಅಲೆ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ  ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.

ಮದುವೆ ಸಮಾರಂಭಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮ ಕಟ್ಟುನಿಟ್ಟಾಗಿ  ಪಾಲಿಸಲು ಮಾರ್ಷಲ್ ನಿಯೋಜಿಸಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಸೋಮವಾರ ಕರ್ನಾಟಕದ ಎಲ್ಲ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದುವೆ ಸಮಾರಂಭಗಳಲ್ಲಿ ಅಂತರ ಕಾಯ್ದುಕೊಳ್ಳುತ್ತಿಲ್ಲ ಎಂಬುದು ಗೊತ್ತಾಗಿದೆ. ನಾನೇ ಸಮಾರಂಭಕ್ಕೆ ಹೋದರೆ ಮಾಸ್ಕ್ ತೆಗೆಯಿರಿ ಎಂದು ಹೇಳುತ್ತಾರೆ. ಹೀಗಾಗಿ ಮದುವೆ ಸಮಾರಂಭಗಳಲ್ಲಿ ಒಬ್ಬ ಮಾರ್ಷಲ್ ನೇಮಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಸಮಾರಂಭಗಳಲ್ಲಿ 500ಕ್ಕಿಂತ ಹೆಚ್ಚು ಜನರು ಇರಬಾರದು, ಮಾಸ್ಕ್ ಧರಿಸುವ ನಿಯಮ ಕಡ್ಡಾಯವಾಗಿ ಪಾಲಿಸಲು ಈ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೋವಿಡ್ ಮಾರ್ಗಸೂಚಿಗೆ ವಿರುದ್ಧವಾಗಿ ಸಭೆ, ಸಮಾರಂಭ, ಹೋರಾಟ ನಡೆಯುತ್ತಿದೆ. ಇದನ್ನು ಪಾಲಿಸದೆ ಕೋವಿಡ್ ಸೋಂಕು ಹೆಚ್ಚಾದರೆ ಮತ್ತಷ್ಟು ಕಠಿಣ ಕ್ರಮ ಅನಿವಾರ್ಯವಾಗುತ್ತದೆ. ಮತ್ತೆ ಮಹಾರಾಷ್ಟ್ರದ ಕೆಲ ಜಿಲ್ಲೆಗಳಲ್ಲಿ ಕೊವಿಡ್‌ ಹೆಚ್ಚಳವಾಗಿದ್ದರಿಂದ ಮತ್ತೆ ಲಾಕ್ ಡೌನ್ ಮಾಡಲಾಗಿದೆ. ನಮಗೆ ಆ ಪರಿಸ್ಥಿತಿ ಬರುವುದು ಬೇಡ, ಅದಕ್ಕಾಗಿ ಈಗಲೇ ಮುಂಜಾಗ್ರತೆ ತೆಗೆದುಕೊಳ್ಳಬೇಕು, ಕೊವಿಡ್‌ ನಿಯಮ ಸರಿಯಾಗಿ ಪಾಲಿಸಬೇಕು. ಈಗ ಆಹಾರ ಪೂರೈಕೆ ಮಾಡುವವರಿಗೂ ಪರೀಕ್ಷೆ ಮಾಡಿಸಲು ಸೂಚಿಸಲಾಗಿದೆ ಎಂದರು.
ಸರ್ಕಾರಿ ಇಲಾಖೆಗಳಲ್ಲಿ 2,90,000 ಮಂದಿ ಇದ್ದು, ಆರೋಗ್ಯ ಇಲಾಖೆಯ 4,24,573 ಮಂದಿಗೆ ಮೊದಲ ಕೋವಿಡ್ ಡೋಸ್ ನೀಡಲಾಗಿದೆ. 1,20,176 ಮುಂಚೂಣಿ ಸಿಬ್ಬಂದಿಗೆ ಲಸಿಕೆ ನೀಡಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರು ಎರಡು ಬಾರಿ ನೋಂದಣಿ ಮಾಡಿಸಿಕೊಂಡಿದ್ದು, ಅದನ್ನು ತೆಗೆದುಹಾಕಲಾಗುತ್ತಿದೆ.
ಇದರಿಂದಾಗಿ ನಾವು ಮುಟ್ಟಿದ ಗುರಿ ಇನ್ನೂ ಹೆಚ್ಚಾಗಲಿದೆ. ಆರೋಗ್ಯ ಸಿಬ್ಬಂದಿ ಮತ್ತು ಮುಂಚೂಣಿ ಸಿಬ್ಬಂದಿಯಲ್ಲಿ ಶೇ.80 ರಿಂದ ಶೇ.90 ಮಂದಿಗೆ ಫೆಬ್ರವರಿ 28 ರೊಳಗೆ ಲಸಿಕೆ ನೀಡಬೇಕು ಎಂದು ಸೂಚಿಸಲಾಗಿದೆ. ಮುಂಚೂಣಿ ಸಿಬ್ಬಂದಿಗೆ ಫೆಬ್ರವರಿ 22, 23, 24 ಲಸಿಕೆ ಅಭಿಯಾನ ಮಾಡಲಾಗುತ್ತಿದೆ. ಎಲ್ಲ ಅಧಿಕಾರಿಗಳಿಗೆ ಲಸಿಕೆ ಪಡೆಯಲು ತಾಕೀತು ಮಾಡಲಾಗಿದೆ ಎಂದು ತಿಳಿಸಿದರು.
ಬಾಗಲಕೋಟೆ, ದಾವಣಗೆರೆ, ಬೆಂಗಳೂರು ನಗರ, ಧಾರವಾಡ ಜಿಲ್ಲೆಗಳು ಶೇ.50 ಕ್ಕಿಂತ ಕಡಿಮೆ ಇದೆ. ಚಿಕ್ಕಬಳ್ಳಾಪುರ ಶೇ.79, ತುಮಕೂರು ಶೇ.78, ಉತ್ತರ ಕನ್ನಡ ಶೇ.73, ಗದಗ ಶೇ.71, ಚಿಕ್ಕಮಗಳೂರು ಶೇ.70, ಚಾಮರಾಜನಗರ ಶೇ.70 ಈ ಜಿಲ್ಲೆಗಳಲ್ಲಿ ಶೇ.70 ಕ್ಕಿಂತ ಹೆಚ್ಚು ಸಾಧನೆಯಾಗಿದೆ. ಮುಂಚೂಣಿ ಸಿಬ್ಬಂದಿಗೆ ಲಸಿಕೆ ನೀಡುವಲ್ಲಿ ಗದಗ ಶೇ.84, ತುಮಕೂರು ಶೇ.71 ಮುಂದಿದೆ. ಬಾಗಲಕೋಟೆ ಶೇ.23, ಬೆಂಗಳೂರು ನಗರ ಶೇ.26, ಚಾಮರಾಜನಗರ ಶೇ.27 ಹಿಂದುಳಿದಿದ್ದು, ಶೇ.80 ಗುರಿ ಸಾಧಿಸಬೇಕು ಎಂದು ಸೂಚಿಸಲಾಗಿದೆ ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾರದೊಳಗೆ ಈ ಕುರಿತು ಎಲ್ಲ ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಲಿದ್ದಾರೆ ಎಂದರು.

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement