ಯತ್ನಾಳ್‌ ಕಾಂಗ್ರೆಸ್‌ ʼಬಿʼ ಟೀಮ್‌ನಂತೆ ಕೆಲಸ ಮಾಡುತ್ತಿದ್ದಾರೆ: ಸಚಿವ ನಿರಾಣಿ

ಬೆಂಗಳೂರು: ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಾಂಗ್ರೆಸ್‌ “ಬಿʼ ಟೀಮ್‌ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಮುರಗೇಶ ನಿರಾಣಿ ಆರೋಪಿಸಿದರು.

ಪಂಚಮಸಾಲಿ ಸಮುದಾಯದ ಶಾಸಕರು ಹಾಗೂ ಸಚಿವರು ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸನಗೌಡ ಪಾಟೀಲ ಯತ್ನಾಳ ಬೇರೆ ಪಕ್ಷದವರಿಗಿಂತ ನಮ್ಮ ಪಕ್ಷದವರ ಮೇಲೆ ನಿರಂತರ ವಾಗ್ದಾಳಿ ನಡೆಸುತ್ತ ಬಂದಿದ್ದಾರೆ. ಯತ್ನಾಳ ನಮ್ಮ ರಾಜೀನಾಮೆಗೆ ಆಗ್ರಹಿಸಿದ್ದಾರೆ. ರಾಜೀನಾಮೆ ಕೇಳಲು ಅವರಾರು ಎಂಬುದನ್ನು ಸ್ಪಷ್ಟಪಡಿಸಲಿ ಎಂದರು.
ಯಡಿಯೂರಪ್ಪ ಬಗ್ಗೆ ಅವರು ಹಗುರವಾಗಿ ಮಾತನಾಡುವುದು ಸರಿಯಲ್ಲ. ಐದು ದಶಕಗಳ ಕಾಲ ಅವರು ಪಕ್ಷವನ್ನು ಕಟ್ಟಿದ್ದಾರೆ. ಅವರ ಆಶೀರ್ವಾದದಿಂದಲೇ ಯತ್ನಾಳ ಶಾಸಕರಾದರು ಎಂಬುದನ್ನು ಮರೆಯಬಾರದು ಎಂದರು.

ತಾಕತ್ತಿದ್ದರೆ ಅವರು ರಾಜೀನಾಮೆ ನೀಡಿ ಮತ್ತೊಮ್ಮೆ ಚುನಾವಣೆಯಲ್ಲಿ ಗೆದ್ದು ಬರಲಿ ಎಂದು ಯತ್ನಾಳ್‌ಗೆ  ಸಚಿವ ನಿರಾಣಿ ಸವಾಲು ಹಾಕಿದರು.

ಪಂಚಮಸಾಲಿ ಮೀಸಲಾತಿಗೆ ಹಿಂದುಳಿದ ವರ್ಗಗಳ ಆಯೋಗದ ವರದಿ ಬರುವ ತನಕ ಕಾಯಬೇಕು. ಸಮಾಜಕ್ಕೆ ೨ಎ ಮೀಸಲಾತಿ ಸಿಗದಿದ್ದರೆ ಅದಕ್ಕೆ ಯತ್ನಾಳ ಹಾಗೂ ವಿಜಯಾನಂದ ಕಾಶಪ್ಪನವರ ಹೊಣೆಯಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.
ಪಂಚಮಸಾಲಿ ಸಮಾವೇಶ ಕಾಂಗ್ರೆಸ್ ಸಮಾವೇಶದಂತಾಗಿದೆ. ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟದಂತಿಲ್ಲ. ಹೋರಾಟ ರಾಜಕೀಯ ರಹಿತ ಆಗಬೇಕು ಎಂದು ಹೇಳಿದರು.

ಪ್ರಮುಖ ಸುದ್ದಿ :-   ಕಾಂಗ್ರೆಸ್‌ ನಾಯಕ ಶಶಿ ತರೂರ್ ಮೈಮೇಲೆ ಮಲಗಿದ ಎಲ್ಲಿಂದಲೋ ಬಂದ ಮಂಗ..! ಹೃದಯಸ್ಪರ್ಶಿ ಫೋಟೋ ಹಂಚಿಕೊಂಡ ಸಂಸದ

ಸಚಿವ ಸಿ.ಸಿ.ಪಾಟೀಲ ಮಾತನಾಡಿ,  ೨ಎ ಮೀಸಲಿಗೆ ಆಗ್ರಹಿಸಿ ಭಾನುವಾರ ನಡೆದ ಬೆಂಗಳೂರು ಸಮಾವೇಶವನ್ನು ಕೆಲವರು ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಬೂಟಾಟಿಕೆ ಮಾಡುವುದನ್ನೇ ಕೆಲವರು ಸಾಧನೆ ಎಂದುಕೊಂಡಿದ್ದಾರೆ. ಸಮಾವೇಶದಲ್ಲಿಯೇ ವಿಜಯಾನಂದ ಕಾಶಪ್ಪನವರನ್ನು ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಇದು ಕಾನೂನು ಬಾಹೀರ. ಹಿಂದೆ ಕಾಂಗ್ರೆಸ್‌ ಸರ್ಕಾರವಿದ್ದಾಗ ಇದೇ ವಿಜಯಾನಂದ ಕಾಶಪ್ಪನವರ ಅವರು ಸಮಾಜಕ್ಕೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಕೂಡಲಸಂಗಮ ಪೀಠದ  ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಗಳು ವಿಜಯಾನಂದ ಕಾಶಪ್ಪನವರ ಅವರ ಹಿಡಿತದಲ್ಲಿರಬಾರದು. ಅವರು ನಮಗೂ ಸ್ವಾಮಿಗಳು, ಎಲ್ಲರಿಗೂ ಸ್ವಾಮಿಗಳು. ಅವರು ಕಾಶಪ್ಪನವರ ಹಿಡಿತದಲ್ಲಿದ್ದಂತೆ ತೋರುತ್ತಿದೆ. ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.

ಸರ್ಕಾರಕ್ಕೆ ಅದರದ್ದೇ ಆದ ನೀತಿ ನಿಯಮಗಳಿವೆ. ಅದರಂತೆಯೇ ನಡೆಯಬೇಕಾಗುತ್ತದೆ. ಏಕಾಏಕಿ ಮೀಸಲು ಘೋಷಣೆಯನ್ನು ಮಾಡಲಿಕ್ಕೆ ಬರುವುದಿಲ್ಲ. ಈ ಬಗ್ಗೆ ಪರಾಮರ್ಶೆಗೆ ಕಾಲಾವಕಾಶ ಬೇಕಾಗುತ್ತದೆ.ಸ್ವಾಮೀಜಿಗಳು ಸರ್ಕಾರದ ಜೊತೆ ಮಾತುಕತೆ ನಡೆಸಲಿ. ಕೆಲವೇ ಕೆಲವು ಜನರ ಅಭಿಪ್ರಾಯದಂತೆ ಸರ್ಕಾರ ನಡೆಸಲು ಆಗುವುದಿಲ್ಲ. ಹೀಗಾಗಿ ಸರ್ಕಾರಕ್ಕೆ ಒಮ್ಮೆಗೇ ನಿರ್ಣಯ ತೆಗೆದುಕೊಳ್ಳು ಆಗುವುದಿಲ್ಲ ಎಂದರು.

ಪ್ರಮುಖ ಸುದ್ದಿ :-   ಮಹಾರಾಷ್ಟ್ರ | ಗುರುವಾರ ದೇವೇಂದ್ರ ಫಡ್ನವೀಸ್‌, ಇಬ್ಬರು ಡಿಸಿಎಂಗಳ ಪ್ರಮಾಣ ವಚನ ಸ್ವೀಕಾರ ಸಾಧ್ಯತೆ

ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಸಮಾಜದ ಶಾಸಕರು ಹಾಗೂ ಮುಖಂಡರು ಇದ್ದರು.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement