ಕೇರಳ ವಿಧಾನಸಭಾ ಚುನಾವಣೆ ೨೦೨೧: ‘ಮೆಟ್ರೊಮ್ಯಾನ್‌ ಶ್ರೀಧರನ್‌ಗಾಗಿ ಬಿಜೆಪಿಯಿಂದ 75 ವರ್ಷದ ವಯೋಮಿತಿ ನಿಯಮ ಸಡಿಲ?

೭೫ ವರ್ಷಕ್ಕಿಂತ ಮೇಲ್ಪಟ್ಟವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡದಿರುವ  ಅಲಿಖಿತ ನಿಯಮವನ್ನು ಕಳೆದ ಕೆಲ ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದ ಬಿಜೆಪಿ ಈಗ ನಿಯಮ ಸಡಿಲಿಸಿದಂತೆ ಕಂಡುಬರುತ್ತಿದೆ.
೨೦೧೪ರಲ್ಲಿ ಕೇಂದ್ರದಲ್ಲಿ ಹೊಸದಾಗಿ ಚುನಾಯಿತರಾದ ಮೋದಿ ನೇತೃತ್ವದ ಸರ್ಕಾರವು 75 ವರ್ಷಕ್ಕಿಂತ ಮೇಲ್ಪಟ್ಟ ಬಿಜೆಪಿ ನಾಯಕರಿಗೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳಲ್ಲಿ ಯಾವುದೇ ಆಡಳಿತಾತ್ಮಕ ಹುದ್ದೆಗಳನ್ನು ನೀಡುವುದಿಲ್ಲ ಎಂದು ಸೂಚಿಸಿತ್ತು.
೨೦೧೪ರಲ್ಲಿ ಮೊದಲ ಬಾರಿಗೆ ಬಿಜೆಪಿಯ ಈ ಅಲಿಖಿತ ನಿಯಮದ ಬಗ್ಗೆ ಸಾರ್ವಜಿಕವಾಗಿ ಚರ್ಚೆಯಾಯಿತು. ೨೦೧೯ರಲ್ಲಿ ಇದೇ ಕಾರಣದಿಂದ ಬಿಜೆಪಿಯ ಹಿರಿಯ ನಾಯಕರಾದ ಎಲ್‌.ಕೆ.ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಶಿ ಅವರಿಗೂ ಟಿಕೆಟ್‌ ನಿರಾಕರಿಸಲಾಗಿತ್ತು ಎಂಬುದು ಮಾಧ್ಯಮಗಳಲ್ಲಿ ಚರ್ಚೆಯಾಗಿತ್ತು.
ಇದು ಬಿಜೆಪಿ ಪಕ್ಷದ ಸಂವಿಧಾನದಲ್ಲಿ ಲಿಖಿತ ನಿಯಮ ಇಲ್ಲದಿದ್ದರೂ ಬಿಜೆಪಿ ಕಳೆದ ಕೆಲ ವರ್ಷಗಳಿಂದ ಇದನ್ನು ಪಾಲಿಸಿಕೊಂಡು ಬರುತ್ತಿದೆ.ಇದಕ್ಕೆ ಕೆಲವು ಅಪವಾದಗಳೂ ಇವೆ. ಉದಾಹರಣೆಗೆ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಈಗ ೮೦ರ ಸನಿಹದಲ್ಲಿದ್ದಾರೆ. ಆದರೂ ಅವರು ಮುಖ್ಯಮಂತ್ರಿಯಾಗಿ ಮುಂದುವರಿದಿದ್ದಾರೆ. ಯಾಕೆಂದರೆ ಸದ್ಯದ ಮಟ್ಟಿಗೆ ಇದು ಕರ್ನಾಟಕದಲ್ಲಿ ಬಿಜೆಪಿಗೆ ಅನಿವಾರ್ಯ. ಯಡಿಯೂರಪ್ಪ ಮುಖ್ಯಮಂತ್ರಿಯಾಗುವಾಗ ಪಕ್ಷದ ವಲಯದಲ್ಲಿ ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆಯೂ ನಡೆಯಿತು. ಆದರೆ ಪಕ್ಷದ ಹೈಕಮಾಂಡ್‌ ಇದಕ್ಕೆ ಹೆಚ್ಚಾಗಿ ತಲೆಕೆಡಿಸಿಕೊಳ್ಳಲಿಲ್ಲ.
ಈಗ,ಕೇಂದ್ರದಲ್ಲಿ ಸತತ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಏರಿರುವ ಬಿಜೆಪಿ ನೆಲೆಯಿಲ್ಲದ ರಾಜ್ಯಗಳಲ್ಲಿ ತನ್ನ ನೆಲೆ ಕಂಡುಕೊಳ್ಳಲು ಹೆಚ್ಚು ವಯಸ್ಸಾದವರಿಗೆ ಅವಕಾಶ ಕಲ್ಪಿಸಲು ಸಿದ್ಧವಾದಂತೆ ತೋರುತ್ತದೆ. ಇದಕ್ಕೆ ತಾಜಾ ಉದಾಹರಣೆ ಕೇರಳ. ಕೇರಳದಲ್ಲಿ ವಿಧಾನಸಭೆ ಚುನಾವಣೆ ಸನಿಹದಲ್ಲಿರುವಾಗ ದೇಶಾದ್ಯಂತ ‘ಮೆಟ್ರೊಮ್ಯಾನ್’ ಎಂದೇ ಕರೆಯಲ್ಪಡುವ ಟೆಕ್ನೋಕ್ರಾಟ್ ಇ. ಶ್ರೀಧರನ್  (೮೮ ವರ್ಷ)  ಬಿಜೆಪಿಗೆ ಸೇರಲಿದ್ದಾರೆ ಎಂಬುದು ಈಗ ಬಹುದೊಡ್ಡ ಸುದ್ದಿಯಾಗಿದೆ. ಇದು ಕೇರಳದಲ್ಲಷ್ಟೇ ಅಲ್ಲ, ದೇಶಾದ್ಯಂತ ಸುದ್ದಿಯಾಗಿದೆ.
ಅವರು ಪಕ್ಷ ಸೇರುವುದನ್ನು ಸದ್ಯಕ್ಕೆ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಬಿಜೆಪಿ ದೊಡ್ಡ ವಿದ್ಯಮಾನ ಎಂಬ ರೀತಿಯಲ್ಲಿ ನೋಡುತ್ತಿದೆ. ಕೇರಳದಲ್ಲಿ ರಾಜಕೀಯ ಸ್ಥಿತಿಯೇ ಬೇರೆ. ಇಲ್ಲಿ ಅನೇಕ ದಶಕಗಳಿಂದ ಪರ್ಯಾಯವಾಗಿ ಆಡಳಿತ ನಡೆಸುತ್ತಿರುವ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಮತ್ತು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಗಳ ಮಧ್ಯೆ ಬಿಜೆಪಿ ನೆಲೆಯೂರಲು ಇಂಥ ಪ್ರಯತ್ನಗಳನ್ನು ಮಾಡಲೇಬೇಕಿದೆ.
ಇನ್ನೂ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾಗದಿದ್ದರೂ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿಯಾಗಲು ಸಿದ್ಧ ಎಂದು ಅವರು ಹೇಳಿಕೆ ನೀಡಿದ್ದನ್ನು ನೋಡಿದರೆ ಬಿಜೆಪಿ ಪಕ್ಷವು ಅವರು ಪಕ್ಷ ಸೇರುವುದಕ್ಕೆ ಬಹುದೊಡ್ಡ ರಾಜಕೀಯ ವೇದಿಕೆ ಸಿದ್ಧಪಡಿಸುತ್ತಿದೆ ಎಂಬುದು ವೇದ್ಯವಾಗುತ್ತದೆ. ಯಾಕೆಂದರೆ ಶ್ರೀಧರನ್‌ ತನ್ನ ಪ್ರತಿಭೆ ಹಾಗೂ ಸಾಹಸದಿಂದ ದೇಶದಲ್ಲಿಯೇ ವಿಖ್ಯಾತಿ ಪಡೆದವರು. ಅವರು ಪಕ್ಷಕ್ಕೆ ಸೇರ್ಪಡೆಯಾದರೆ ಅದು ಕೇರಳಕ್ಕಷ್ಟೇ ಅಲ್ಲ, ದೇಶಾದ್ಯಂತ ವಿದ್ಯಾವಂತ ವಲಯವನ್ನು ತಟ್ಟಲಿದೆ ಎಂಬ ಅಂಶವೂ ಅವರ ಬಿಜೆಪಿ ಸೇರ್ಪಡೆಯಲ್ಲಿ ಅಡಕವಾಗಿದ್ದಂತೆ ತೋರುತ್ತಿದೆ.
ದೆಹಲಿ ಮೆಟ್ರೊ ನಿರ್ಮಾಣದ ಹೊಣೆಹೊತ್ತು ಅದನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿ ಮೆಟ್ರೊಮ್ಯಾನ್‌ ಎಂದೇ ಖ್ಯಾತಿ ಗಳಿಸಿರುವ ಇ. ಶ್ರೀಧರನ್‌ ದೇಶದ ಅತ್ಯಂತ ಕಠಿಣ ರೈಲ್ವೆ ಮಾರ್ಗಗಳಲ್ಲಿ ಒಂದಾದ ಕೊಂಕಣ ರೈಲ್ವೆ ಮಾರ್ಗವನ್ನೂ ಯಶಸ್ವಿಯಾಗಿ ನಿರ್ವಹಿಸಿದ ವಾಸ್ತುಶಿಲ್ಪಿ ಎಂಬುದು ಅವರ ಮತ್ತೊಂದು ವಿಶೇಷ. ಅರಬ್ಬೀ ಸಮುದ್ರಕ್ಕೆ ಹಾದುಕೊಂಡೇ ಹೋಗುವ ಪಶ್ಚಿಮ ಘಟ್ಟವನ್ನೊಳಗೊಂಡ ಈ ಮಾರ್ಗದಲ್ಲಿ ರೈಲು ಹಳಿ ಹಾಕುವುದು ಸವಾಲಿನ ಕೆಲಸವಾಗಿತ್ತು. ನೂರಾರು ಸುರಂಗ ಮಾರ್ಗಗಳು (ಟನೆಲ್‌ಗಳು), ಎರಡು ಸಾವಿರಕ್ಕೂ ಹೆಚ್ಚು ಸೇತುವೆಗಳನ್ನು ನಿರ್ಮಾಣ ಮಾಡಿ ಕಠಿಣ ಕೆಲಸವನ್ನು ಶ್ರೀಧರನ್‌ ಅವರು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇದು ಕೇರಳದಲ್ಲಿಯೂ ಹಾದುಹೋಗುವುದರಿಂದ,ಮತ್ತು  ಕೇರಳ ಹಾಗೂ ದೆಹಲಿ ಅಂತರವನ್ನು ಕಡಿಮೆ ಮಾಡಿದ್ದರಿಂದ, ಜೊತೆಗೆ ಇವರು ಕೇರಳದವರೇ ಆಗಿರುವುದರಿಂದ ಸಹಜವಾಗಿಯೇ ಅವರು ಬಿಜೆಪಿ ಸೇರುವುದು ಕೇರಳದ ಮಟ್ಟಿಗೆ ದೊಡ್ಡ ಸುದ್ದಿಯೇ. ಇದನ್ನು ದೊಡ್ಡ ವಿದ್ಯಮಾನವನ್ನಾಗಿ ಮಾಡುವ ನಿಟ್ಟಿನಲ್ಲಿ ಬಿಜೆಪಿ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಯೋಚಿಸಿದಂತೆ ತೋರುತ್ತಿದೆ. ದೇಶಾದ್ಯಂತ ತಮ್ಮ ಸಾಧನೆ ಹಾಗೂ ಪ್ರತಿಭೆ ಮೂಲಕ ಹೆಸರು ಮಾಡಿರುವ ಕೇರಳದ ಸುಪುತ್ರ ಶ್ರೀಧರನ್‌ ಅವರಿಗೆ ವಯಸ್ಸು ೮೮ ವರ್ಷವಾದರೂ, ಕೇರಳದಲ್ಲಿ ನೆಲೆ ಕಂಡುಕೊಳ್ಳಲು ಶತಾಯ-ಗತಾಯ ಪ್ರಯತ್ನಿಸುತ್ತಿರುವ ಬಿಜೆಪಿಗೆ ಅವರು ಅನಿವಾರ್ಯವಾಗಿದ್ದಾರೆ. ಹೀಗಾಗಿ ಬಿಜೆಪಿಗೆ ಶ್ರೀಧರನ್ ‘ವಯಸ್ಸಿನ ನಿಯಮ’ಕ್ಕೆ ಒಂದು ಅಪವಾದವಾಗಿ ಕಂಡಿದ್ದಾರೆ ಎಂದು ಹೇಳಲಾಗುತ್ತಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement