ಖ್ಯಾತ ಕವಿ ಎನ್‌.ಎಸ್‌.ಲಕ್ಷ್ಮೀನಾರಾಯಣ ಭಟ್‌ ವಿಧಿವಶ

ಬೆಂಗಳೂರು: ಕನ್ನಡದ ಖ್ಯಾತ ಕವಿ, ಲೇಖಕ ’ಎನ್‌ಎಸ್‌ಎಲ್’ ಎಂದೇ ಹೆಸರುವಾಸಿಯಾದ ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟ (೮೪) ಅವರು ಶನಿವಾರ ಮುಂಜಾನೆ ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಶನಿವಾರ ಮುಂಜಾನೆ ೪.೪೫ ಗಂಟೆ ವೇಳೆಗೆ ಬೆಂಗಳೂರಿನ ಬನಶಂಕರಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಆಧುನಿಕ ಕನ್ನಡ ಕಾವ್ಯ ಪರಂಪರೆಗೆ ಅತಿದೊಡ್ಡ ಕೊಡುಗೆ ಕೊಟ್ಟ ಹಿರಿಯ ಸಾಹಿತಿ ಡಾ. ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಅವರ ಕೊಡುಗೆ ಬಹಳ ದೊಡ್ಡದು. ಲಕ್ಷ್ಮೀನಾರಾಯಣ ಭಟ್ಟರು ಆಧುನಿಕ ಕನ್ನಡ ಕಾವ್ಯ ಪರಂಪರೆಯ ಬಹು ಮುಖ್ಯ ಕವಿಗಳಲ್ಲಿ ಒಬ್ಬರು. ಅವರ ಭಾವ ಗೀತೆ ಹಾಡದ ಗಾಯಕರೇ ಇಲ್ಲವೆನ್ನುವಷ್ಟು ಅವರ ಭಾವಗೀತೆಗಳು ಜನಪ್ರಿಯತೆ ಪಡೆದಿವೆ.
ಶೇಕ್ಸ್ಪಿಯರ್, ಎಲಿಯಟ್, ಏಟ್ಸ್ ಮುಂತಾದ ಕವಿಗಳನ್ನು ಅದ್ಭುತವಾಗಿ ಕನ್ನಡಕ್ಕೆ ಅನುವಾದಿಸಿದ ಭಟ್ಟರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅಸಂಖ್ಯಾತ ಗೌರವಗಳಿಗೆ ಪಾತ್ರರಾಗಿದ್ದರು. ಅವರ ನಿಧನದಿಂದ ಕನ್ನಡ ಸಾಹಿತ್ಯದ ಆಧುನಿಕ ಕಾವ್ಯ ಪರಂಪರೆಯ ಕೊಂಡಿ ಕಳಚಿದಂತಾಗಿದೆ
೧೯೩೬ ಅ.೨೯ ರಂದು ಶಿವಮೊಗ್ಗದಲ್ಲಿ ಲಕ್ಷ್ಮೀನಾರಾಯಣ ಭಟ್ಟ ಜನಿಸಿದ್ದರು. ತಂದೆ ಶಿವರಾಮ ಭಟ್ಟ, ತಾಯಿ ಮೂಕಾಂಬಿಕೆ. ಎಂಎ ಪದವಿ ಪಡೆದ ಬಳಿಕ ಭಟ್ಟರು ಭಾಷಾಶಾಸ್ತ್ರ ಸಂಶೋಧಕರಾಗಿ ಎರಡು ವರ್ಷ ಕೆಲಸ ಮಾಡಿ, ತದನಂತರ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದರು.
ಸರಳ -ಸಜ್ಜನಿಕೆ ವ್ಯಕ್ತಿತ್ವದ ಇವರು ಅತ್ಯುತ್ತಮ ಸ್ಮರಣ ಶಕ್ತಿ ಹೊಂದಿದ್ದರು. ಕನ್ನಡದ ಖ್ಯಾತ ಸಾಹಿತಿ ತೀನಂಶ್ರೀ ಮಾರ್ಗದರ್ಶನದಲ್ಲಿ ಸಾಹಿತ್ಯ ಸಂಶೋಧನ ವೃತ್ತಿ ಕೈಗೊಂಡರು. ೧೯೬೫ ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯವನ್ನು ಸೇರಿ, ಅಧ್ಯಾಪಕರಾಗಿ, ರೀಡರ್, ಪ್ರಾಧ್ಯಾಪಕ, ನಿರ್ದೇಶಕ, ೧೯೯೦ ರಲ್ಲಿ ಆರ್ಟ ಫ್ಯಾಕಲ್ಟಿ ಡೀನ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಮೈಸೂರು ವಿವಿ ಪಿಎಚ್‌ಡಿ ಪದವಿಗೆ ಆಧುನಿಕ ಕನ್ನಡ ಕಾವ್ಯ ಕುರಿತು ಪ್ರಬಂಧ ಸಾದರ ಪಡಿಸಿದ್ದಾರೆ.
ಶಿಶುಸಾಹಿತ್ಯ ಅವರಿಗೆ ಬಹು-ಪ್ರಿಯವಾದ ಪ್ರಕಾರಗಳಲ್ಲಿ ಒಂದಾಗಿತ್ತು.ಮುದ್ರಾಮಂಜೂಷ ಕಾವ್ಯ, ಜಗನ್ನಾಥ ವಿಜಯ ರಚಿಸಿದ್ದಾರೆ. ಭಟ್ಟರ ಕಾರ್ಯವನ್ನು ಗುರುತಿಸಿ, ಎನ್’ಸಿಆರ್’ಟಿ ಸಂಸ್ಥೆಯಿಂದ ಶಿಶು ಸಾಹಿತ್ಯಕ್ಕಾಗಿ ಬಾಲಸಾಹಿತ್ಯ ಪುರಸ್ಕಾರ ಲಭಿಸಿದೆ.
ಅವರು ಅತ್ಯುತ್ತಮ ಅನುವಾದ ಸಾಹಿತಿಯೂ ಆಗಿದ್ದರು. ಮೃಚ್ಛಕಟಿಕ, ಇಸ್ಪೀಟ್ ರಾಜ್ಯ, ಟ್ವೆಲ್ಫ್ತ್ ನೈಟ್, ಮತ್ತು ಭಾರತೀಯ ಗ್ರಂಥ ಸಂಪಾದನಾ ಪರಿಚಯ, ಕನ್ನಡ ಮಾತು ಎನ್ನುವ ಪುಟ್ಟ-ಗ್ರಂಥ, ಕನ್ನಡ ಭಾಷೆಯನ್ನು ಬೆಳವಣಿಗೆಯನ್ನು ಸೂಕ್ತ ದರ್ಶನಗಳೊಂದಿಗೆ ಸಾರ್ವಜನಿಕರಿಗೆ ತಲುಪಿಸಿದ್ದಾರೆ.
ನವ್ಯ ಸಂಪ್ರದಾಯದ ಕವಿತೆಗಳನ್ನು ಬರೆಯುವುದರಲ್ಲಿ ಆಸಕ್ತರಾಗಿದ್ದ ಭಟ್ಟರು ರಚಿಸಿದ ಗೀತಕಾವ್ಯಗಳ ಸಂಖ್ಯೆ ಅಪಾರ. ಸ್ವಲ್ಪ ಕಾಲ ಸುಗಮ ಸಂಗೀತದ ಮಾಧುರ್ಯತೆ ಎಲ್ಲೋ ತನ್ನ ಇರುವಿಕೆಯನ್ನು ಕಡಿಮೆ ಮಾಡಿಕೊಂಡಿತೇನೋ ಎನ್ನುವ ಭಾವನೆ ಕಂಡಾಗ ’ಎನ್ನೆಸ್ಸೆಲ್’ ಭಾವಗೀತೆಗಳು ಮರಳಿ ಜನಮಾನದಲ್ಲಿ ಹರಿದಾಡಿತು. ಸಂತ ಶಿಶುನಾಳ  ಷರೀಪರ ಗೀತೆಗಳನ್ನು ಸಂಪಾದಿಸುವ ಮಹತ್ವದ ಕೆಲಸ ಮಾಡಿದ್ದರು.
ಶಿವಮೊಗ್ಗ ಸುಬ್ಬಣ್ಣ, ಸಿ.ಅಶ್ವಥ್, ಮೈಸೂರು ಅನಂತಸ್ವಾಮಿ, ಎಚ್.ಕೆ. ನಾರಾಯಣ ಮೊದಲಾದವರು, ಅನೇಕ ಸುಗಮ ಸಂಗೀತ ಗಾಯಕರು, ಭಟ್ಟರ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದ್ದಾರೆ. ಅವರ ದೀಪಿಕಾ, ಭಾವಸಂಗಮ, ನೀಲಾಂಜನ, ಬಾರೋ ವಸಂತ, ಕವಿತಾ, ಮಾಧುರಿ, ಮಂದಾರ, ಬಂದೆ ಬರತಾವ ಕಾಲ, ಅರುಣ ಗೀತೆ, ಊರ ಹೊರಗೆ, ಮೊದಲಾದ ಕವನ ಸಂಕಲನ ಬಿಡುಗಡೆಯಾಗಿದೆ. ಅವತಾರ, ಹಿರಿಯರು, ಕೃತಜ್ಞತೆ, ಪ್ರೀತಿ, ಸವಾರಿ, ಸೀಮಂತಿನಿ, ಮಗನಿಗೊಂದು ಪತ್ರ, ಮೊದಲಾದ ಮೊದಲಾದವುಗಳು ಇವರ ಪೆನ್ನಿನಿಂದ ಮೂಡಿವೆ. ಇವರ ಹಲವಾರು ಧ್ವನಿ ಸುರಳಿಗಳು ಹೊರಬಂದಿವೆ.
ಭಟ್ಟರ ನಿಧನದಿಂದ ಕನ್ನಡ ಕಾವ್ಯ ಹಾಗೂ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
ಸಂತಾಪ:
ಎನ್‌ಎಸ್‌ಎಲ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

ಪ್ರಮುಖ ಸುದ್ದಿ :-   ಸೆರೆ ಕಾರ್ಯಾಚರಣೆ ವೇಳೆ ಕಾಡಾನೆ ಜೊತೆ ಕಾದಾಟದಲ್ಲಿ 8 ಬಾರಿ ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸಾವು

 

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement