ಕೃಷಿ ಕಾನೂನು ರದ್ದುಪಡಿಸದಿದ್ದರೆ ಖಾಸಗಿ ಸಂಸ್ಥೆಗಳ ಗೋದಾಮು ಧ್ವಂಸ: ಟಿಕಾಯತ್‌ ಎಚ್ಚರಿಕೆ

ಕೇಂದ್ರ ಸರಕಾರ ವಿವಾದಿತ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸದಿದ್ದರೆ ಖಾಸಗಿ ಸಂಸ್ಥೆಗಳು ಆಹಾರಧಾನ್ಯ ಸಂಗ್ರಹಕ್ಕಾಗಿ ನಿರ್ಮಿಸುತ್ತಿರುವ ಗೋದಾಮುಗಳನ್ನು ಕೆಡವಲಾಗುವುದು ಎಂದು ರೈತರ ಆಂದೋಲನದ ಮುಖಂಡ ರಾಕೇಶ್‌ ಟಿಕಾಯತ್‌ ಎಚ್ಚರಿಕೆ ನೀಡಿದ್ದಾರೆ.
ಪಂಜಾಬ್‌ನ ಅಬೋಹರ್ ಸಮೀಪ ಆಯೋಜಿಸಿದ ಕಿಸಾನ್‌ ಮಹಾಪಂಚಾಯತ್‌ನಲ್ಲಿ ಮಾತನಾಡಿದ ಟಿಕಾಯತ್‌, ನೂತನ ಕೃಷಿ ಕಾನೂನುಗಳು ಜಾರಿಗೊಳ್ಳದಿದ್ದರೂ ಕೂಡ ಕೆಲವು ಸಂಸ್ಥೆಗಳು ಧಾನ್ಯ ಸಂಗ್ರಹಕ್ಕೆ ಬೃಹತ್‌ ಗೋದಾಮುಗಳನ್ನು ನಿರ್ಮಿಸುತ್ತಿವೆ. ಕಾನೂನುಗಳು ರದ್ದುಗೊಳ್ಳದಿದ್ದರೆ ಇಂಥ ಗೋದಾಮುಗಳನ್ನು ಕೆಡವಲಾಗುವುದು ಎಂದರು.
ಮೋದಿ ಸರ್ಕಾರವು ಕೆಲವು ಉದ್ಯಮಿಗಳಿಗೆ ದೇಶವನ್ನು ಮಾರಾಟ ಮಾಡಲು ಬಯಸುತ್ತಿದೆ. ಹಾಲು, ವಿದ್ಯುತ್, ರಸಗೊಬ್ಬರಗಳು, ಬೀಜಗಳು ಮತ್ತು ಮೋಟಾರು ವಾಹನಗಳ ಮಾರಾಟವನ್ನು ಕೆಲವು ಕಾರ್ಪೊರೇಟ್ ಸಂಸ್ಥೆಗಳು ನಿಯಂತ್ರಿಸುತ್ತವೆ ಎಂದು ಆರೋಪಿಸಿದರು.
ಮಹತ್ವದ ಬೆಳವಣಿಗೆಯಲ್ಲಿ, ಧಾನ್ಯ ಶೇಖರಣಾ ಕಂಪನಿಯೊಂದು ಸಲ್ಲಿಸಿದ ಮನವಿಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಕೇಂದ್ರ ಮತ್ತು ಪಂಜಾಬ್ ಸರ್ಕಾರಗಳಿಂದ ತಕ್ಷಣದ ಪ್ರತಿಕ್ರಿಯೆ ಕೋರಿವೆ. ಗೋದಾಮುಗಳ ಹೊರಗೆ ನಡೆಯುತ್ತಿರುವ ಪ್ರತಿಭಟನೆಗಳನ್ನು ಕಾನೂನುಬಾಹಿರ ಮತ್ತು ಯಾವುದೇ ಅನುಮತಿಯಿಲ್ಲದ ಪ್ರತಿಭಟನೆ ಎಂದು ಉಲ್ಲೇಖಿಸಿ, ಪ್ರತಿಭಟನಾಕಾರರನ್ನು ಕಾನೂನುಬದ್ಧ ಪ್ರತಿಭಟನಾ ಸ್ಥಳದಲ್ಲಿ ಸ್ಥಳಾಂತರಿಸಲು ಸಂಸ್ಥೆ ಮನವಿ ಮಾಡಿದೆ. ಪ್ರತಿಭಟನಾ ನಿರತ ರೈತರು ಪಟಿಯಾಲದಲ್ಲಿ ಗೋದಾಮುಗಳನ್ನು ಆಕ್ರಮಿಸಿಕೊಂಡಿದ್ದು, ಇದರಿಂದಾಗಿ ವ್ಯಾಪಾರವಿಲ್ಲದೇ ನಷ್ಟವಾಗಿದೆ ಎಂದು ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಉತ್ತಮ ಪ್ರತಿಕ್ರಿಯೆ, ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕಿದ್ದಾರೆ : ಲೋಕಸಭೆ ಚುನಾವಣೆ 1ನೇ ಹಂತದ ಮತದಾನದ ಬಗ್ಗೆ ಪ್ರಧಾನಿ ಮೋದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement