ಕೊರೊನಾ ಉಲ್ಬಣ: ಕರ್ನಾಟಕದಲ್ಲಿ ಲಾಕ್‌ಡೌನ್ ತರಹದ ನಿರ್ಬಂಧ ಜಾರಿ, ನಾಳಿನ ಕ್ಯಾಬಿನೆಟ್‌ ಸಭೆಯಲ್ಲಿ ನಿರ್ಧಾರ..?

posted in: ರಾಜ್ಯ | 0

ರಘುಪತಿ ಯಾಜಿ
ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಾಖಲೆಯ ಮಟ್ಟ ತಲುಪುತ್ತಿರುವುದರಿಂದ, ಕರ್ನಾಟಕ ಸರ್ಕಾರ  ವೈರಸ್ ಹರಡುವುದನ್ನು ತಡೆಗಟ್ಟಲು ವಾರ ಪೂರ್ತಿ “ಲಾಕ್ ಡೌನ್ ತರಹದ” ನಿರ್ಬಂಧಗಳನ್ನು ನಿರ್ಧರಿಸಬಹುದು.  ರಾಜ್ಯ ಸಚಿವ ಸಂಪುಟ ಸೋಮವಾರ ಬೆಳಿಗ್ಗೆ 11 ಗಂಟೆಗೆ ಸಭೆ ಸೇರಲಿದ್ದು, ಹೀಗಾಗಿ ಈಗ ಎಲ್ಲರ ಚಿತ್ತ ರಾಜ್ಯ ಸಚಿವ ಸಂಪುಟದ ಸಭೆಯ ಮೇಲಿದೆ.
ಕೋವಿಡ್‌ -19 ಪ್ರಕರಣಗಳಲ್ಲಿ ಭಾರಿ ಉಲ್ಬಣ ಕಾಣುತ್ತಿರುವ ಕರ್ನಾಟಕದಲ್ಲಿ ವಾರದ ಎಲ್ಲ ದಿನಗಳಲ್ಲಿ ಲಾಕ್‌ಡೌನ್‌ನಂತಹ ನಿರ್ಬಂಧಗಳನ್ನು ವಿಧಿಸುವ ನಿರ್ಧಾರವನ್ನು ರಾಜ್ಯ ಸಚಿವ ಸಂಪುಟ ಸೋಮವಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಹೇಳಲಾಗುತ್ತಿದೆ.
ಏತನ್ಮಧ್ಯೆ, ಸಾಂಕ್ರಾಮಿಕ ರೋಗ ಹರಡಿದ ನಂತರ ಮೊದಲ ಬಾರಿಗೆ ಕಳೆದ 24 ಗಂಟೆಗಳಲ್ಲಿ ರಾಜ್ಯವು 34 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದು, ಕೇವಲ ಬೆಂಗಳೂರಲ್ಲೇ 20 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈಗಾಗಲೇ ಬೆಂಗಳೂರು ನಗರ ದೇಶದಲ್ಲಿ ಅತಿ ಹೆಚ್ಚು ಕೊರೊನಾ ಸಕ್ರಿಯ ಪ್ರಕರಣಗಳನ್ನು ಹೊಂದಿದ ಕುಖ್ಯಾತಿಗೆ ಕಾರಣವಾಗಿದೆ. ಈ ಮೊದಲು ಪುಣೆ ಈ ಸ್ಥಾನದಲ್ಲಿತ್ತು. ಈಗ ಬೆಂಗಳೂರು ಮುಂಬೈ ಹಾಗೂ ಪುಣೆ ನಗರಗಳಲ್ಲಿ ವರದಿಯಾಗುತ್ತಿರುವ ಪ್ರಕರಣಗಳನ್ನು ಒಟ್ಟು ಸೇರಿಸಿದರೂ ಅದಕ್ಕಿಂತ ಹೆಚ್ಚಿನ ಪ್ರಕರಣಗಳನ್ನು ದಾಖಲಿಸುತ್ತಿದೆ. ಬೆಂಗಳೂರಿನ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗುವುದೇ ಕಠಿಣವಾಗಿ ಅನೇಕರು ಚೆನ್ನೈ ಕಡೆಗೆ ದೌಡಾಯಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಭಾನುವಾರದ ಆರೋಗ್ಯ ಬುಲೆಟಿನ್ ಪ್ರಕಾರ, ಕರ್ನಾಟಕದಲ್ಲಿ 34,804 ರೋಗಿಗಳು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ ಮಾತ್ರ ಕಳೆದ 24 ಗಂಟೆಗಳಲ್ಲಿ 20,733 ಪ್ರಕರಣಗಳು ವರದಿಯಾಗಿವೆ.
ಕರ್ನಾಟಕದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,62,162 ತಲುಪಿದೆ. ಹೀಗಾಗಿ ಸೋಮವಾರದ ಕ್ಯಾಬಿನೆಟ್ ಸಭೆಯಲ್ಲಿ ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಉಚಿತ ಲಸಿಕೆ ನೀಡುವ ಬಗ್ಗೆಯೂ ನಿರ್ಧಾರ ಕೈಗೊಳ್ಳಬಹುದಾಗಿದೆ.
bimba pratibimbaವಾರಾಂತ್ಯದ ಕರ್ಫ್ಯೂ ನಿರ್ಬಂಧಗಳು ಮೇ 4ರ ವರೆಗೆ ಜಾರಿಯಲ್ಲಿವೆ ಮತ್ತು ಮಾರ್ಗಸೂಚಿಗಳ ಪ್ರಕಾರ ಅದು ಮುಂದಿನ ಶನಿವಾರ, ಭಾನುವಾರವೂ ಇರುತ್ತದೆ. ವಾರದ ದಿನಗಳಲ್ಲಿ ಕರ್ಫ್ಯೂ ಜಾರಿಗೊಳಿಸಬೇಕೇ, ಸಂಪೂರ್ಣ ಲಾಕ್‌ಡೌನ್‌ಗೆ ಹೋಗಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ, ಆದರೆ ಯಾವುದೇ ನಿರ್ಧಾರವಾಗಿಲ್ಲ” ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಅವರು ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾಳೆ ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು, ಅದರ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧಾರ ಪ್ರಕಟಿಸಲಿದ್ದಾರೆ. “ನಾವು ಲಾಕ್‌ಡೌನ್ ಪರವಾಗಿಲ್ಲ, ಆದರೆ ಸದ್ಯದ ಪರಿಸ್ಥಿತಿಯಲ್ಲಿ ನಾವು ಸರಪಳಿಯನ್ನು ಮುರಿಯಬೇಕು, ಇದು ಹೇಗೆ ಎಂಬುದರ ಕುರಿತು ಚರ್ಚೆಯಾಗುತ್ತದೆ. ಪ್ರಕರಣಗಳು ಕಡಿಮೆಯಾಗುತ್ತ ಬಂದಂತೆ ನಿರ್ಬಂಧಗಳು ಸಹ ಕಡಿಮೆಯಾಗುತ್ತವೆ “ಎಂದು ಅವರು ಹೇಳಿದ್ದಾರೆ.
ಏಪ್ರಿಲ್ 21 ರಿಂದ ಮೇ 4 ರವರೆಗೆ ಜಾರಿಯಲ್ಲಿರುವ ಕೋವಿಡ್‌ -19 ಮಾರ್ಗಸೂಚಿಗಳ ಪ್ರಕಾರ, ಇಡೀ ರಾಜ್ಯದಲ್ಲಿ ಪ್ರತಿದಿನ ರಾತ್ರಿ 9 ರಿಂದ ಬೆಳಿಗ್ಗೆ 6 ರ ವರೆಗೆ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ ಮತ್ತು ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 6ರ ವರೆಗೆ ವಾರಾಂತ್ಯದ ಕರ್ಫ್ಯೂ ಇರಲಿದೆ.
ಶುಕ್ರವಾರ ರಾತ್ರಿ ಪ್ರಾರಂಭವಾದ ವಾರಾಂತ್ಯದ ಕರ್ಫ್ಯೂ ಸಮಯದಲ್ಲಿ, ಬೆಂಗಳೂರು ಮತ್ತು ರಾಜ್ಯದ ಇತರ ಭಾಗಗಳು ವ್ಯವಹಾರಗಳು ಮತ್ತು ಉಳಿದ ರೆಸ್ಟೋರೆಂಟ್‌ಗಳು ಮುಚ್ಚಿವೆ ಮತ್ತು ವಾಹನಗಳು ರಸ್ತೆಗಿಳಿದಿರಲಿಲ್ಲ. ಆದರೆ ಬೆಳಿಗ್ಗೆ 6 ರಿಂದ 10 ರ ವರೆಗೆ ಸಾರ್ವಜನಿಕರಿಗೆ ಹಾಲು, ದಿನಸಿ ಮತ್ತು ತರಕಾರಿಗಳಂತಹ ಅಗತ್ಯ ವಸ್ತುಗಳನ್ನು ಖರೀದಿಸಲು ಅನುಮತಿ ನೀಡಿದ್ದರಿಂದ ಜನರು ಹೆಚ್ಚಾಗಿ ಮನೆಯೊಳಗೆ ಉಳಿದು ನಿರ್ಬಂಧಗಳನ್ನು ಅನುಸರಿಸಿದ್ದಾರೆ.
ಲಾಕ್ ಡೌನ್ ಬಗ್ಗೆ ಸರ್ಕಾರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿರುವ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರು ಈ ವಿಷಯದ ಬಗ್ಗೆ ಮುಖ್ಯಮಂತ್ರಿಗಳು ಅಥವಾ ಆರೋಗ್ಯ ಸಚಿವರು ಕ್ಯಾಬಿನೆಟ್ ಮುಂದೆ ಇಡುವ ವಿಷಯದ ಆಧಾರದ ಮೇಲೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. “ಜನತಾ ಕರ್ಫ್ಯೂ” ಗಾಗಿ ಸಲಹೆಗಳನ್ನು ಮುಂದಿಡಲಾಗಿದೆ ಎಂದು ಅವರು ಹೇಳಿದ್ದಾರೆ.
ಆದರೆ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ “ಶನಿವಾರದ ಸಭೆಯಲ್ಲಿ ಇಂತಹ ಪ್ರಸ್ತಾಪಗಳು (ಲಾಕ್‌ಡೌನ್) ಬಂದಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು ಮತ್ತು ಇತರ ಕೆಲವು ಸ್ಥಳಗಳಲ್ಲಿ ನಿರ್ಬಂಧಗಳಂತಹ ಲಾಕ್‌ಡೌನ್‌ಗೆ ಹೋಗಬಹುದು ಎಂಬ ತೀವ್ರ ಊಹಾಪೋಹಗಳ ಮಧ್ಯೆ ರಾಜ್ಯ ಸರ್ಕಾರ ಕಳೆದ ವಾರ ರಾತ್ರಿ ಮತ್ತು ವಾರಾಂತ್ಯದ ಕರ್ಫ್ಯೂ ವಿಧಿಸಿತ್ತು, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸರ್ವಪಕ್ಷಗಳ ಸಭೆಯಲ್ಲಿ ಲಾಕ್‌ಡೌನ್‌ಗೆ ಒತ್ತಾಯಿಸಿದ್ದರು. ಆದರೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ವಿರೋಧಿಸಿದ್ದರು.ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದಾಗ ಲಾಕ್‌ಡೌನ್‌ ಕೊನೆಯ ಉಪಾಯವಾಗಿ ಬಳಸುವಂತೆ ರಾಜ್ಯಗಳನ್ನು ಕೋರಿದ್ದರು. ಹೀಗಾಗಿ ಸೋಮವಾರ ನಡೆಯಲಿರುವ ಕ್ಯಾಬಿನೆಟ್‌ ಸಭೆಯ ಮೇಲೆ ರಾಜ್ಯದ ಜನರ ಚಿತ್ತವಿದೆ. ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್‌ ಜಾರಿ ಮಾಡುತ್ತದೆಯಾ ಅಥವಾ ವೀಕೆಂಡ್‌ ಸೆಮಿ ಲಾಕ್‌ಡೌನ್‌ ಅನ್ನು ಉಳಿದ ದಿನಗಳಿಗೂ ವಿಸ್ತರಿಸುತ್ತದೆಯಾ ಅಥವಾ ಮಹಾರಾಷ್ಟ್ರದಲ್ಲಿ ಜಾರಿ ಮಾಡಿದಂತೆ ಲಾಕ್‌ಡೌನ್‌ ತರಹದ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡುತ್ತದೆಯಾ..? ಸೋಮವಾರದ ಸಭೆಯ ನಂತರ ಗೊತ್ತಾಗಲಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 3

ನಿಮ್ಮ ಕಾಮೆಂಟ್ ಬರೆಯಿರಿ