ಬೆಂಗಳೂರು : ನಾಳೆ ರಾತ್ರಿಯಿಂದ 14 ದಿನಗಳ ವರೆಗೆ ಕರ್ನಾಟಕದಲ್ಲಿ ಜನತಾ ಕರ್ಫ್ಯೂ ಜಾರಿ ಮಾಡಲಾಗುತ್ತಿದೆ. ಬೆಳಿಗ್ಗೆ 6 ರಿಂದ 10 ಗಂಟೆ ವರೆಗೆ ಮಾತ್ರವೇ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರಕಟಿಸಿದ್ದಾರೆ.
ಸೋಮವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸೋಂಕು ದೊಡ್ಡ ಪ್ರಮಾಣದಲ್ಲಿ ಹರಡುತ್ತಿದೆ. ಮಹಾರಾಷ್ಟ್ರ ಮೀರಿಸಿ, ಬೆಂಗಳೂರು ಸುತ್ತಮುತ್ತ ಹೆಚ್ಚು ಹರಡುತ್ತಿದೆ. ಹೀಗಾಗಿ ಸಚಿವ ಸಂಪುಟ ಸದಸ್ಯರು, ತಜ್ಞರ ಜೊತೆಗೆ ಚರ್ಚಿಸಿ, ಕೆಲವು ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದರು.
ಮೊದಲನೆಯದು ಸರ್ಕಾರಿ ಆಸ್ಪತ್ರೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಕೊರೋನಾ ಲಸಿಕೆ ನೀಡಲಾಗುತ್ತದೆ. ಈ ಬಗ್ಗೆ ರೂಪುರೇಷೆಗಳನ್ನು ಆರೋಗ್ಯ ಇಲಾಖೆ ಪ್ರಕಟಿಸಲಿದೆ. ಈ ಕೋವಿಡ್ ತಡೆಯಲು ಬಿಗಿ ಕ್ರಮವಾಗಿ ನಾಳೆ ರಾತ್ರಿಯಿಂದ 14 ದಿನ ಬಿಗಿ ಕ್ರಮ ಜಾರಿಯಲ್ಲಿರುತ್ತದೆ. ಇದು ರಾಜ್ಯಾದ್ಯಂತ ಜಾರಿಯಲ್ಲಿ ಇರಲಿದೆ ಎಂದರು.
ಕೆಎಸ್ಆರ್ಟಿಸಿ, ಬಿಎಂಟಿಸಿ ಸಾರಿಗೆ ಇರುವುದಿಲ್ಲ. ಹೋಟೆಲ್, ರೆಸ್ಟೋರೆಂಟ್ಗಳು ತೆರೆದಿರಲಿದ್ದು, ಪಾರ್ಸಲ್ಗೆ ಮಾತ್ರ ಅವಕಾಶ ನೀಡಲಾಗುವುದು. ಹಾಗೆಯೇ ಬಾರ್ಗಳಲ್ಲಿ ಆಲ್ಕೋಹಾಲ್ ಪಾರ್ಸಲ್ಗೆ ಮಾತ್ರ ಅವಕಾಶವಿರುತ್ತದೆ. ಮದ್ಯದಂಗಡಿಗೂ ಸಮಯ ನಿಗದಿ ಮಾಡಲಾಗಿದ್ದು, ಬೆಳಗ್ಗೆ 6ರಿಂದ 10 ಗಂಟೆಯೊಳಗೆ ಪಾರ್ಸಲ್ ತಂದುಕೊಳ್ಳಬೇಕು. ಬೆಳಗ್ಗೆ 10ರಿಂದ ರಾತ್ರಿ 9 ಗಂಟೆಯವರೆಗೆ ಬಾರ್ಗಳು ಓಪನ್ ಇರುವುದಿಲ್ಲ. ಅದಾದ ಬಳಿಕ ನೈಟ್ ಕರ್ಫ್ಯೂ ಇರುತ್ತದೆ.
ನಾಳೆಯಿಂದ 14 ದಿನಗಳ ಕಾಲ ದಿನನಿತ್ಯದ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶವಿರಲಿದೆ. ಅದಕ್ಕೂ ಸಮಯ ನಿಗದಿ ಪಡಿಸಲಾಗಿದ್ದು, ಬೆಳಗ್ಗೆ 6ರಿಂದ 10 ಗಂಟೆಯ ಒಳಗೆ ಅಗತ್ಯ ವಸ್ತುಗಳನ್ನು ಖರೀದಿಸಬೇಕು. ಮೆಡಿಕಲ್, ಬ್ಯಾಂಕಿಂಗ್, ಕೃಷಿ ಚಟುವಟಿಕೆ, ಕೈಗಾರಿಕೆಗಳಿಗೆ ಯಾವ ನಿರ್ಬಂಧವೂ ಇರುವುದಿಲ್ಲ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆರಳುವ ಸರಕು ಸಾಗಾಣಿಕೆ ವಾಹನಗಳ ಓಡಾಟಕ್ಕೂ ನಿರ್ಬಂಧವಿಲ್ಲ. ಹೋಟೆಲ್ನಿಂದ ಆಹಾರ ಮತ್ತು ಬಾರ್ಗಳಿಂದ ಲಿಕ್ಕರ್ ಪಾರ್ಸಲ್ಗೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ