ಮಹತ್ವದ ಸೂಚನೆ..ನಾಳೆಯಿಂದಲೇ ಜಿಲ್ಲೆಗಳಲ್ಲಿದ್ದು ಕೊರೊನಾ ಹೊಣೆಗಾರಿಕೆ ನಿಭಾಯಿಸಿ: ಉಸ್ತುವಾರಿ ಸಚಿವರುಗಳಿಗೆ ಸಿಎಂ ಕಟ್ಟುನಿಟ್ಟಿನ ಸೂಚನೆ

posted in: ರಾಜ್ಯ | 0

ರಾಜ್ಯ ಸಚಿವ ಸಂಪುಟಸಭೆ:  ಆಮ್ಲಜನಕ ಪೂರೈಕೆ- ಜಗದೀಶ ಶೆಟ್ಟರ, ಕೋವಿಡ್‌ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಬೆಡ್‌ ವ್ಯವಸ್ಥೆ- ಸಚಿವರಾದ ಬೊಮ್ಮಾಯಿ ಹಾಗೂ ಆರ್‌.ಅಶೋಕ, ರೆಮ್ಡೆಸಿವಿರ್‌ ಹಾಗೂ ಔಷಧಗಳ ವ್ಯವಸ್ಥೆ-ಡಿಸಿಎಂ ಅಶ್ವತ್ಥ ನಾರಾಯಣ, ಕೊರೊನಾ ವಾರ್‌ ರೂಂ-ಸಚಿವ ಅರವಿಂದ ಲಿಂಬಾವಳಿಗೆ ಜವಾಬ್ದಾರಿ ವಹಿಸಿದ ಸಿಎಂ

ಬೆಂಗಳೂರು : ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣ ಹಾಗೂ ಆಮ್ಲಜನಕ ಪೂರೈಕೆ, ಆಸ್ಪತ್ರೆಗಳಲ್ಲಿ ಬೆಡ್‌ ವ್ಯವಸ್ಥೆ ಇತ್ಯಾದಿಗಳು ಕುರಿತು ಕರೆದಿದ್ದ ಮಹತ್ವದ ಸಚಿವ ಸಂಪುಟ ಸಭೆ ಮಂಗಳವಾರ ನಡೆಯಿತು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಸಂದರ್ಭದಲ್ಲಿ ಕೆಲವು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೂಡಲೇ ಜಿಲ್ಲೆಗಳಿಗೆ ತೆರಳಿ, ಅಲ್ಲಿಯೇ ಇದ್ದು ಕೊರೋನಾ ನಿಯಂತ್ರಣ ವ್ಯವಸ್ಥೆ ಉಸ್ತುವಾರಿ ಜವಾಬ್ದಾರಿ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ನಾಳೆಯಿಂದ ಎಲ್ಲ ಜಿಲ್ಲೆಯ ಉಸ್ತುವಾರಿ ಸಚಿವರು ತಮಗೆ ವಹಿಸಲಾಗಿರುವ ಜಿಲ್ಲೆಯಲ್ಲಿ ಅವರು ಬೀಡು ಬಿಟ್ಟು ಯುದ್ದೋಪಾದಿಯಲ್ಲಿ ಕೆಲಸ ಮಾಡಬೇಕು. ಜಿಲ್ಲೆಗಳಲ್ಲಿ ಏನೇ ಸಮಸ್ಯೆ ಬಂದರೂ ಅವರೇ ನಿಭಾಯಿಸಬೇಕು. ಏನೇ ಬಂದರೂ ಅವರೇ ಜವಾಬ್ದಾರಿ ಹೊರಬೇಕು
ಆಮ್ಲಜನಕ ನಿರ್ವಹಣೆ, ಔಷಧಿಗಳು, ಬೆಡ್ ಸಿಗದ ಪರಿಸ್ಥಿತಿಯನ್ನು ಸರಿ ಪಡಿಸಲು ಕೆಲವು ಸಚಿವರಿಗೆ ಹೊಣೆಗಾರಿಕೆಯನ್ನು ನೀಡಿದ್ದಾರೆ. ಎಲ್ಲರಿಗೂ ಪ್ರತ್ಯೇಕ ವಿಭಾಗ ಮಾಡಿ ಜವಾಬ್ದಾರಿ ವಹಿಸಿದ್ದಾರೆ. ವಹಿಸಿದ್ದಾರೆ.
ತುರ್ತು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರತಿಯೊಬ್ಬ ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಿಗೆ ತೆರಳಿ, ಅಲ್ಲಿಯೇ ಇದ್ದು, ಅಲ್ಲಿನ ಸಮಸ್ಯೆಗಳನ್ನು ನಿವಾರಿಸುವ ಕೆಲಸ ಮಾಡಬೇಕು. ಜಿಲ್ಲೆಗಳ ಕೋವಿಡ್ ನಿರ್ವಣೆಯ ಹೊಣೆಗಾರಿಕೆ ಅವರಿಗೆ ಸಂಪೂರ್ಣ ಅವಕಾಶ ನೀಡಲಾಗಿದೆ ಎಂದರು.
ಅಲ್ಲದೆ, ಕೋವಿಡ್‌ ನಿಯಂತ್ರಣ ಹಾಗೂ ರೋಗಿಗಳ ಶುಶ್ರೂಷೆಯಲ್ಲಿ ಆಗುತ್ತಿರುವ ತೊಡಕು ಹಾಗೂ ಗೊಂಲ ನಿವಾರಿಸಲು ಕೆಲವರಿಗೆ ಜವಾಬ್ದಾರಿ ನೀಡಲಾಗಿದೆ. ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಅವರಿಗೆ ಆಮ್ಲಜನಕ ಸರಬರಾಜು ನಿರ್ವಹಣೆ ನೀಡಲಾಗಿದ್ದು, ಕೇಂದ್ರ ಸರ್ಕಾರದ ಜೊತೆ ಸಮನ್ವಯ ಸಾಧಿಸಿ ಅಗತ್ಯ ಆಕ್ಸಿಜನ್ ಪೂರೈಕೆ ನಿಗಾ ವಹಿಸಲಿದ್ದಾರೆ ಎಂದು ತಿಳಿಸಿದರು.
.ಅಗತ್ಯ ಔಷಧಿ, ರೆಮ್ಡೆಸಿವಿರ್ ನಿರ್ವಹಣೆಯ ಜವಾಬ್ದಾರಿಯನ್ನು ಉಪ ಮುಖ್ಯಮಂತ್ರಿ ಡಾ.ಸಿಎನ್ ಅಶ್ವತ್ಥ್ ನಾರಾಯಣ್ ಅವರಿಗೆ ವಹಿಸಲಾಗಿದೆ.ಅವರು ರಾಜ್ಯದಲ್ಲಿ ಔಷಧಗಳ ಕೊರತೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳನ್ನು ಕೋವಿಡ್ ಕೆಲಸಕ್ಕೆ ಬಳಸಿಕೊಳ್ಳುವ ಜವಾಬ್ದಾರಿ ಸಹ ನಿಭಾಯಿಸಲಿದ್ದಾರೆ ಎಂದು ತಿಳಿಸಿದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳಿಗೆ ಅಗತ್ಯ ಬೆಡ್ ವ್ಯವಸ್ಥೆ ಕುರಿತಾದ ಹೊಣೆಗಾರಿಕೆ ವಹಿಸಲಾಗಿದೆ. ಸಚಿವರಾದ ಅರವಿಂದ್ ಲಿಂಬಾವಳಿಯವರು ವಾರ್ ರೂಂ ಹಾಗೂ ಕಾಲ್ ಸೆಂಟರ್ ನಿರ್ವಹಣೆ ಜವಾಬ್ದಾರಿ ವಹಿಸಲಾಗಿದ್ದು ಅವರು ಈ ಮೂಲಕ ವೈದ್ಯಕೀಯ ನೆರವನ್ನು ನೀಡಲಿದ್ದಾರೆ ಎಂದರು.
ಚಾಮರಾಜನಗರದ ಆಸ್ಪತ್ರೆಯ ದುರಂತ ಘಟನೆ ಬಗ್ಗೆ ವಿಚಾರಿಸಿದ್ದೇನೆ. ಈ ಘಟನೆಯಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಕ್ರಮ ಕೈಗೊಳ್ಳಲಾಗುತ್ತದೆ. ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಈಗಾಗಲೇ ತನಿಖೆಗೆ ಆದೇಶಿಸಲಾಗಿದ್ದು, ವರದಿ ನಂತ್ರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ಮಹಾರಾಷ್ಟ್ರದಲ್ಲಿ ಕೊರೋನಾ ಅಲೆ ನಿಯಂತ್ರಣಕ್ಕೆ ಬರುತ್ತಿದೆ. ರಾಜ್ಯದಲ್ಲೂ ಕೊರೋನಾ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ರಾಜ್ಯದಲ್ಲಿ ಮಾಧ್ಯಮಗಳಲ್ಲಿ ಕೆಲಸ ಮಾಡುವಂತ ಕೆಲಸಗಾರರನ್ನು ಫ್ರಂಟ್ ಲೈನ್ ವರ್ಕರ್ ಎಂಬುದಾಗಿ ಪರಿಗಣಿಸಲಾಗಿದ್ದು, ಅವರಿಗೂ ಆದ್ಯತೆಯ ಮೇರೆಗೆ ಕೊರೋನಾ ಲಸಿಕೆ ನೀಡುವಂತ ವ್ಯವಸ್ಥೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.
ರಾಜ್ಯದಲ್ಲಿ ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ವೈದ್ಯಕೀಯ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ವೈದ್ಯರು, ನರ್ಸ್ ಗಳನ್ನು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಕೆಲಸ ಮಾಡಲು ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಮೂಲಕ ಕೊರೋನಾ ಸೋಂಕಿತರಿಗೆ ಸೂಕ್ತ ವೈದ್ಯಕೀಯ ವ್ಯವಸ್ಥೆ ಮಾಡುವ ನಿರ್ಧರ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಮೇ 12ರ ನಂತ್ರ ಕೊರೋನಾ ಕರ್ಪ್ಯೂ ಮುಂದುವರೆಯಲಿದೆಯಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದಂತ ಅವರು ಆ ಬಗ್ಗೆ ಅಧಿಕಾರಿಗಳು, ತಜ್ಞರ ಜೊತೆಗೆ ಸಭೆ ನಡೆಸಲಾಗುತ್ತದೆ. ಆ ಸಭೆಯಲ್ಲಿ ಚರ್ಚಿಸಿದ ನಂತರ ಮೇ 12ರ ನಂತರ ಮುಂದುವರೆಸಬೇಕಾ ಅಥವಾ ಬೇಡವಾ ಎನ್ನುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ