ಜಾಗತಿಕ ತಾಪಮಾನ ಏರಿಕೆ: ಚಂಡಮಾರುತದಿಂದ ಭಾರತದ ಸುರಕ್ಷಿತ ಪಶ್ಚಿಮ ಕರಾವಳಿ ಆಗುತ್ತಿದೆಯೇ ಅಸುರಕ್ಷಿತ..?

ರಘುಪತಿ ಯಾಜಿ

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ತೌಕ್ಟೆ ಚಂಡಮಾರುತವು ಸಾಮಾನ್ಯ ಚಂಡಮಾರುತವಲ್ಲ ಎಂಬುದನ್ನು ತೋರಿಸಿದೆ. ಅರೆಬಿಯನ್‌ ಸಮುದ್ರದಲ್ಲಿ ಇಷ್ಟೊಂದು ಭೀಕರ ಚಂಡುಮಾರುತ ಇತ್ತೀಚಿಗೆ ಬಂದಿದ್ದೇ ಇಲ್ಲ. ಕಳೆದ ಕೆಲ ದಿನಗಳಿಂದ ಇದರ ಭೀಕರತೆ ಬಗ್ಗೆ ಪದೇ ಪದೇ ಸೂಚನೆ ನೀಡಿದ ಪರಿಣಾಮ ಮುನ್ನೆಚ್ಚರಿಕೆ ವಹಿಸಿ ಎಷ್ಟೋ ಜನರನ್ನು ಮೊದಲೇ ಸ್ಥಳಾಂತರ ಮಾಡಿದ ಪರಿಣಾಮ ಎಷ್ಟೋ ಜೀವ ಹಾನಿಯಾಗುವುದು ತಪ್ಪಿದೆ.
bimba pratibimbaಸಾಗರಗಳಲ್ಲಿ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ, ಬದಲಾಗುತ್ತಿರುವ ಹವಾಮಾನ ಮಾದರಿಗಳು ಮತ್ತು ಕರಾವಳಿ ಪ್ರದೇಶಗಳಲ್ಲಿ ನೆಲೆಸಿರುವ ನಗರಗಳಿಗೆ ಅಪಾಯಗಳು ಉಂಟಾಗುತ್ತವೆ ಎಂಬುದರ ಬಗ್ಗೆ ಈಗಾಗಲೇ ಜಾಗತಿಕ ಹವಾಮಾನ ತಜ್ಞರು ಹೇಳಿದ್ದಾರೆ. ಇದೇ ಅಭಿಪ್ರಾಯ ತೌಕ್ಟೆ ಚಂಡಮಾರುತದ ಬಗ್ಗೆಯೂ ಇದೇ ಅಭಿಪ್ರಾಯ ಬಂದಿದೆ. ಮುಂಬರುವ ಅಪಾಯದ ಸೂಚಕವಾಗಿದೆ ಎನ್ನುತ್ತಾರೆ ಹವಾಮಾನ ತಜ್ಞರು. ಅರೇಬಿಯನ್ ಸಮುದ್ರಕ್ಕೆ ಹೋಲಿಸಿದರೆ ಒಂದು ಶತಮಾನಕ್ಕೂ ಹೆಚ್ಚು ಕಾಲ, ಹೆಚ್ಚಿನ ಚಂಡಮಾರುತಗಳು ಬಂಗಾಳಕೊಲ್ಲಿಯಲ್ಲಿ ಸಂಭವಿಸಿದವು. ಮತ್ತು ಸಾವಿರಾರು ಜನರು ಇದರಿಂದ ಸತ್ತಿದ್ದಾರೆ. ಪ್ರತಿ ವರ್ಷ, ಭಾರತದ ಮೇಲೆ ಪರಿಣಾಮ ಬೀರಿದ ಐದು ಚಂಡಮಾರುತಗಳಲ್ಲಿ, ನಾಲ್ಕು ಬಂಗಾಳಕೊಲ್ಲಿಯಿಂದ ಮತ್ತು ಒಂದು ಅರೇಬಿಯನ್ ಸಮುದ್ರದ ಮೇಲೆ ಬೀಸುತ್ತದೆ ಮತ್ತು ಹೆಚ್ಚಾಗಿ ಮಾನ್ಸೂನ್ ಪೂರ್ವದಲ್ಲಿ (ಏಪ್ರಿಲ್ ನಿಂದ ಜೂನ್) ಬೀಸುತ್ತದೆ. ಬಂಗಾಳ ಕೊಲ್ಲೆಯ ತೀರಗಳಾದ ಒಡಿಸ್ಸಾ, ಪಶ್ಚಿಮ ಬಂಗಾಳ ಹಾಗೂ ಆಂಧ್ರಪ್ರದೇಶದಲ್ಲಿ ಬಂಗಾಳ ಕೊಲ್ಲಿ ಎಂದರೆ ಭಯಪಡುವಷ್ಟು ಈ ಒಂದು ಶತಮಾನದಲ್ಲಿ ಈ ರಾಜ್ಯಗಳ ಕರಾವಳಿ ಪ್ರದೇಶವನ್ನು ಬಂಗಾಳ ಕೊಲ್ಲಿಯಲ್ಲಿ ಉಂಟಾಗುತ್ತಿದ್ದ ಚಂಡಮಾರುಗಳು ಕಾಡಿವೆ. ಸಾವಿರಾರು ಜೀವಗಳನ್ನು ಆಹುತಿ ಪಡೆದುಕೊಂಡಿವೆ. ಅಪಾರ ಪ್ರಮಾಣದ ಆಸ್ತಿಯನ್ನು ಆಪೋಶನ ಮಾಡಿವೆ. ಬದುಕನ್ನೇ ಕಸಿದುಕೊಂಡಿದೆ.
ಆದರೆ ಕಳೆದ ದಶಕದಲ್ಲಿ ನಿಧಾನವಾಗಿ ಚಿತ್ರಣ ಬದಲಾಗಿದೆ. ಅತ್ಯಂತ ಸುರಕ್ಷಿತ ಕರಾವಳಿ ಎಂದು ಭಾವಿಸಿದ್ದ ಭಾರತದ ಪಶ್ಚಿಮದ ಕರಾವಳಿ ಈಗ ಹೆಚ್ಚು ದೊಡ್ಡ ದೊಡ್ಡ ಚಂಡಮಾರುತಕ್ಕೆ ಸಾಕ್ಷಿಯಾಗುತ್ತಿದೆ. ಪರಶುರಾಮ ಸೃಷ್ಟಿ ಎಂದು ಪ್ರತೀತವಾಗಿರುವ ಅರಬ್ಬೀ ಸಮುದ್ರದ ಕೊಂಕಣ ತೀರ ಪ್ರದೇಶಗಳೂ ಇತ್ತೀಚಿಗೆ ಚಂಡಮಾರುಗಳಿಂದ ಅಪಾಯಕ್ಕೆ ತೆರೆದುಕೊಳ್ಳುತ್ತಿವೆ. ಸುರಕ್ಷಿತ ಎಂಬ ಪಶ್ಚಿಮ ಕರಾವಳಿಯ ಪಟ್ಟ ಅರಬ್ಬೀ ಸಮುದ್ರದಲ್ಲಿಯೇ ಕುಸಿಯುತ್ತಿದೆ.
ಕಳೆದ ಐದಾರು ವರ್ಷಗಳಿಂದ ಅಥವಾ ಈ ದಶಕದಲ್ಲಿ ಗಮನಾರ್ಹವಾಗಿ ಬದಲಾಗುತ್ತಿದೆ ಮತ್ತು ನಿಧಾನವಾಗಿ ಅರೇಬಿಯನ್ ಸಮುದ್ರವು ಬಂಗಾಳಕೊಲ್ಲಿಗಿಂತ ಹೆಚ್ಚು ಅಪಾಯಕಾರಿಯಾಗುತ್ತಿದೆ. ಚಂಡಮಾರುತದ ಚಟುವಟಿಕೆಯ ದೃಷ್ಟಿಯಿಂದ ವೇಗವಾಗಿ ಚಲಿಸುತ್ತಿದೆ, ಪೂರ್ವ ದಿಕ್ಕಿನಿಂದ ಮೂರು ಹೋಲಿಸಿದರೆ ಪಶ್ಚಿಮ ಭಾಗದಿಂದ ಐದು ಚಂಡಮಾರುತಗಳು ಹೊರಹೊಮ್ಮಿವೆ. ಕೆಟ್ಟದ್ದೇನೆಂದರೆ, ಈ ಎಲ್ಲಾ ಚಂಡಮಾರುತಗಳನ್ನು ‘ತೀವ್ರ ಚಂಡಮಾರುತಗಳು’ ಅಥವಾ ಅದಕ್ಕಿಂತ ಹೆಚ್ಚು ಎಂದು ವರ್ಗೀಕರಿಸಲಾಗಿದೆ. ತೌಕ್ಟೆಗೆ ಮೊದಲು 2018 ರಲ್ಲಿ ಮೆಕನು ಚಂಡಮಾರುತ, 2019 ರಲ್ಲಿ ವಾಯು ಚಂಡಮಾರುತ ಮತ್ತು 2020 ರಲ್ಲಿ ನಿಸರ್ಗ ಚಂಡಮಾರುತ ಬಂದಿತ್ತು. ಈಗ ತೌಕ್ಟೆ ಚಂಡಮಾರುತ ಗಂಟೆಗೆ 150-175 ಕಿಮೀ ವೇಗದ ವರೆಗೆ ಬೀಸಿದೆ.
ಈ ತಿರುವುಗಳು ಪದೇಪದೇ ಸಂಭವಿಸುತ್ತಿವೆ,. ಇದಕ್ಕೆ ಕಾರಣ ಅರೇಬಿಯನ್ ಸಮುದ್ರದಲ್ಲಿ ರೂಪುಗೊಳ್ಳುವ ವಾಯುಭಾರ ಕುಸಿತ, ತೌಕ್ಟೆ ಚಂಡಮಾರುತವು ಹಿಂದಿನ ಮೂರು ಚಂಡಮಾರುತಗಳಿಗಿಂತ ಕಡಿಮೆ ಸಮಯದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಂತೆ ಕಾಣುತ್ತದೆ. ಇದು ಕಳೆದ ನಾಲ್ಕು ದಶಕಗಳಲ್ಲಿ ಸಮುದ್ರದ ಮೇಲ್ಮೈ ತಾಪಮಾನ (ಎಸ್‌ಎಸ್‌ಟಿ) ಹೆಚ್ಚಳವನ್ನು ಸೂಚಿಸುತ್ತದೆ. ಚಂಡಮಾರುತಗಳು ಆವಿಯಾಗುವ ಬೆಚ್ಚಗಿನ ನೀರಿನಿಂದ ಶಕ್ತಿಯನ್ನು ಪಡೆಯುತ್ತವೆ. ಅರೇಬಿಯನ್ ಸಮುದ್ರದ ಮೇಲೆ ಎಸ್‌ಎಸ್‌ಟಿ 1-2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವುದರೊಂದಿಗೆ, ಹೆಚ್ಚಿನ ಆವಿ ಮತ್ತು ಆರ್ದ್ರ ಗಾಳಿಯು ಚಂಡಮಾರುತದ ಸ್ವರೂಪ ಪಡೆದುಕೊಳ್ಳಲು ಕಾರಣವಾಗುತ್ತಿದೆ. ಮತ್ತು ಘನೀಕರಣದ ಮೂಲಕ ಹೆಚ್ಚಿನ ಶಾಖವನ್ನು ಬಿಡುಗಡೆ ಮಾಡುವುದರೊಂದಿಗೆ, ಒಮ್ಮೆಗೇ ಒತ್ತಡದ ಕುಸಿತವಾಗಿ ಸಂಪೂರ್ಣ ಚಕ್ರವನ್ನು ಪೂರ್ಣಗೊಳಿಸುತ್ತದೆ. ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆ ಆಗುತ್ತಿರುವುದೇ ಇದಕ್ಕೆ ಮೂಲ ಕಾರಣ ಎಂದು ಹವಾಮಾನ ತಜ್ಞರು ಎಚ್ಚರಿಸುತ್ತಲೇ ಇದ್ದಾರೆ. ಅದರಲ್ಲಿಯೂ ಮುಖ್ಯವಾಗಿ ಅಭಿವೃದ್ಧಿ ಹೊಂದಿದ ದೇಶಗಳಿಗೆ ಜಾಗತಿಕ ತಾಪಮಾನ ಹೆಚ್ಚಳದ ಬಗ್ಗೆ ಎಚ್ಚರಿಸುತ್ತಲೇ ಬರುತ್ತಿದ್ದಾರೆ. ಆದರೆ ಅದೆಲ್ಲವೂ ಹೊಳೆಯಲ್ಲಿ ಹುಣಸೆ ಹಣ್ಣನ್ನು ತೊಳೆದಂತಾಗುತ್ತಿದೆ.
ಜಾಗತಿಕ ಹೊರಸೂಸುವಿಕೆ (global emissions) ಮತ್ತು ಹಸಿರುಮನೆ ಅನಿಲಗಳಿಂದ (greenhouses gases) ತಾಪಮಾನವು ಹೆಚ್ಚಾಗಿ ಅದು ಸಾಗರಗಳಿಂದ ಹೀರಲ್ಪಡುತ್ತದೆ. ನಿಸರ್ಗ, ಅಮ್ಫಾ ಸೇರಿದಂತೆ ಇತ್ತೀಚಿನ ಬಿರುಗಾಳಿಗಳು ದುರ್ಬಲದಿಂದ ಕಡಿಮೆ ಅವಧಿಯಲ್ಲಿ ಚಂಡಮಾರುತದ ತೀವ್ರ ಸ್ವರೂಪ ಪಡೆದುಕೊಂಡವು.

150-200 ವರ್ಷಗಳಿಗಿಂತ ಹೆಚ್ಚಿನ ಡೇಟಾ ನೋಡಿದರೆ ಬಂಗಾಳಕೊಲ್ಲಿಯಲ್ಲಿನ ಪ್ರತಿ ನಾಲ್ಕು ಚಂಡಮಾರುತಗಳಿಗೆ, ಅರೇಬಿಯನ್ ಸಮುದ್ರದಲ್ಲಿ ಒಂದು ಇತ್ತು. ಈ ಡೇಟಾವನ್ನು ನೋಡಿದಾಗ ಮತ್ತು ಲೆಕ್ಕ ಹಾಕಿದಾಗ ಈಗ ಅದು ಅದಲು ಬದಲಾಗಿದೆ ಎಂದು ಪುಣೆ ಭಾರತದ ಹವಾಮಾನ ವಿಭಾಗದ ಹವಾಮಾನ ಸಂಶೋಧನೆ ಮತ್ತು ಸೇವೆಗಳ ಮುಖ್ಯ ಎಸ್‌ಐಡಿ ಕೆ.ಎಸ್.ಹೋಸಾಲಿಕರ್ ಹೇಳುತ್ತಾರೆ.

ಕೈಗಾರಿಕಾ ಕ್ರಾಂತಿಯ ನಂತರ ಜಾಗತಿಕ ತಾಪಮಾನವು ಹೆಚ್ಚಾಗಲು ಪ್ರಾರಂಭವಾಯಿತು. ಆದರೆ ಈಗಿನದಕ್ಕೆ ಹೋಲಿಸಿದರೆ ಹೆಚ್ಚಳದ ವೇಗವು ತುಂಬಾ ಕಡಿಮೆಯಿತ್ತು. 1880ರಿಂದ 1980 ರವರೆಗೆ, ಪ್ರತಿ ದಶಕದಲ್ಲಿ ತಾಪಮಾನವು ಸುಮಾರು 0.07 ಡಿಗ್ರಿ ಸೆಲ್ಸಿಯಸ್ ಏರಿತು. ಆದರೆ 1981 ರಿಂದ, ಹೆಚ್ಚಳದ ಪ್ರಮಾಣವು ಈಗ ಪ್ರತಿ 10 ವರ್ಷಗಳಿಗೊಮ್ಮೆ 0.18 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುತ್ತಿದೆ.
ಇತ್ತೀಚನ ದಶಕಗಳಲ್ಲಿ ಹತ್ತರಲ್ಲಿ ಒಂಭತ್ತು ವಿಪರೀತ ಶಾಖದ ವರ್ಷಗಳು 2005ರ ನಂತರ ಮತ್ತು 2015ರಿಂದಲೂ ದಾಖಲಾಗುತ್ತಿದೆ. ಇಂಗಾಲದ ಡೈಆಕ್ಸೈಡ್ (CO2) ಮತ್ತು ಕೈಗಾರಿಕೆಗಳು, ಬಹುಮಹಡಿ ಕಟ್ಟಡಗಳು, ಉಷ್ಣ ವಿದ್ಯುತ್‌ ಸ್ಥಾವರಗಳ ಹೆಚ್ಚಳ, ಅತಿಯಾದ ವಾಣಿಜ್ಯೀಕರಣ, ಅಭಿವೃದ್ಧಿ ಹೆಸರಿನಲ್ಲಿ ಅರಣ್ಯಗಳ ಸಾಮೂಹಿಕ ನಾಶಗಳಿಂದ ವಾತಾವಣದ ಉಷ್ಣತೆ ಹೆಚ್ಚಾಗುತ್ತಿದೆ. ಹಾಗೂ ಹೊರಸೂಸಲ್ಪಟ್ಟ ಇತರ ವಾಯು ಮಾಲಿನ್ಯಕಾರಕಗಳು ಸೂರ್ಯನ ಕಿರಣಗಳನ್ನು ಹೀರಿಕೊಂಡು ವಾತಾವರಣದಲ್ಲಿ ಸಿಕ್ಕಿಬಿದ್ದಾಗ ಜಾಗತಿಕ ತಾಪಮಾನ ಏರಿಕೆಯಾಗುತ್ತದೆ. ಹಸಿರುಮನೆ ಪರಿಣಾಮಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ಅನೇಕ ವರ್ಷಗಳಿಂದ ಹಿಮನದಿಗಳು ವೇಗವಾಗಿ ಕರಗುತ್ತಿವೆ ಮತ್ತು ಇತ್ತೀಚಿಗೆ ಉತ್ತರಾಖಮಡದಲ್ಲಿ ಹಿಮಪದರಗಳು ಪದೇಪದೇ ಕರಗಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದನ್ನುನೋಡುತ್ತಿದ್ದೇವೆ. ಮೊಮ್ಮೆಮೊಮ್ಮೆಯಷ್ಟೇ ಉತ್ತರಾಖಂಡದ ಜೋಶಿ ಮಠದ ಸಮೀಪದ ಪ್ರದೇಶದಲ್ಲಿ ಹಿಮ ಪದರವು ಕುಸಿದು ಪ್ರಾಣ ಹಾನಿಯ ಜೊತೆಗೆ ಅಪಾರ ಹಾನಿಯಾಗಿದೆ. ಸಮುದ್ರ ಮಟ್ಟ ಏರಿಕೆಯಾಗಿ ಒಳನುಗ್ಗುತ್ತಿವೆ. ಸಮುದ್ರ ತೀರದ ಪ್ರದೇಶಗಳ ಸಮೀಪದ ಕೃಷಿ ಭೂಮಿಗಳಿಗೆ ಸಮುದ್ರದ ಉಪ್ಪು ನೀರು ನುಗ್ಗಿಭೂಮಿ ಬಂಜರಾಗುತ್ತಿದೆ.
ತೌಕ್ಟೆ ಚಂಡಮಾರುತವು ಪಶ್ಚಿಮ ಕರಾವಳಿಯಲ್ಲಿ ಕೇರಳ ಮತ್ತು ತಮಿಳುನಾಡಿನಿಂದ ಪ್ರಾರಂಭವಾಗಿ, ಮುಂಬೈಯಿಂದ ಗುಜರಾತದ ವರೆಗೆ ಹಾನಿ ಮಾಡಿ ಹೋಗಿದೆ. ಜೊತೆಗೆ ಜಾಗತಿಕ ತಾಪಮಾನದಿಂದಾಗಿ ಬಂಗಾಳ ಕೊಲ್ಲಿ ತೀರ ಪ್ರದೇಗಳಿಗೆ ಹೋಲಿಸಿದರೆ ಸುರಕ್ಷಿತ ಸಮುದ್ರ ತೀರ ಪ್ರದೇಶ ಎಂದು ಪರಿಗಣಿಸಲಾಗಿದ್ದ ಅರಬ್ಬೀ ಸಮುದ್ರದ ತೀರ ಪ್ರದೇಶವೂ ಈಗ ಸಾಲುಸಾಲು ಅಪಾಯ ಚಂಡಮಾರುತಗಳಿಗೆ ಕಾರಣವಾಗುತ್ತಿದೆ.ಪರಶುಮರಾಮ ಸೃಷ್ಟಿಎಂಬ ಖ್ಯಾತಿಗೆ ಕಾರಣವಾದ ಕೊಂಕಣ ತೀರ ಪ್ರದೇಶವೂ ಈಗ ಅಪಾಯವನ್ನು ಎದುರಿಸುತ್ತಿದೆ. ಬದುಕಿನ ಕಣಜವಾಗಿದ್ದ ಈ ತೀರ ಪ್ರದೇಶ ಈಗ ಭೀಕರವಾಗುತ್ತಿದೆ.

 

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 5

advertisement

ನಿಮ್ಮ ಕಾಮೆಂಟ್ ಬರೆಯಿರಿ