ಲಾಕ್‌ಡೌನ್‌ ಸಂಕಷ್ಟ: ವಿಶೇಷ ಪ್ಯಾಕೇಜ್ ಪ್ರಕಟಿಸಿದ ಸಿಎಂ ಬಿಎಸ್‌ವೈ.. ನೆರವು ಯಾರಿಗೆಲ್ಲ ಸಿಗಲಿದೆ.?

ಹೈಲೈಟ್ಸ್‌
* ಪ್ರತಿ ಹೆಕ್ಟೇರ್ ಹೂವು ಹಾನಿಗೆ 10 ಸಾವಿರ ರೂ. ಸಹಾಯಧನ
* ಹಣ್ಣು ತರಕಾರಿ ಬೆಳೆಗಾರರಿಗೆ 10 ಸಾವಿರ ರೂ.
* 20 ಸಾವಿರ ರೈತರಿಗೆ ನೆರವು, 12.73 ಕೋಟಿ ಮೊತ್ತದ ನೆರವು
* ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ 3 ಸಾವಿರ
* ಕಟ್ಟಡ ಕಾರ್ಮಿಕರಿಗೆ ತಲಾ 3 ಸಾವಿರ ಪರಿಹಾರ
* ಬೀದಿ ವ್ಯಾಪಾರಸ್ತರಿಗೆ ತಲಾ 2 ಸಾವಿರ ಪರಿಹಾರ
* ಅಸಂಘಟಿತ ಕಾರ್ಮಿಕರಿಗೆ ತಲಾ 2 ಸಾವಿರ ರೂ.
* ಕಲಾವಿದರು ಕಲಾ ತಂಡಗಳಿಗೆ ತಲಾ 3 ಸಾವಿರ ರೂ.
* ಸಹಕಾರಿ ಸಂಘಗಳಿಂದ ರೈತರ ಸಾಲ ಮರುಪಾವತಿ ದಿನಾಂಕ ವಿಸ್ತರಣೆ, 31 ಜುಲೈ ಗೆ ಅವಧಿ ವಿಸ್ತರಣೆ
* ಆರು ಲಕ್ಷ ಜನರಿಗೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಊಟ
* ಬಿಪಿಎಲ್ ಕಾರ್ಡುದಾರರಿಗೆ 5 ಕೆ.ಜಿ ಅಕ್ಕಿ ವಿತರಿಸಲು ನಿರ್ಧಾರ
* ಎಪಿಎಲ್‌ ಕಾರ್ಡುದಾರರಿಗೆ 15 ರೂ. ನಂತೆ 5 ಕೆಜಿ ಅಕ್ಕಿ
* ಲೈನ್ ಮೆನ್ ಗಳು, ಗ್ಯಾಸ್ ಸಿಲೆಂಡರ್ ವಿತರಕರನ್ನ ಫ್ರೆಂಟ್ ಲೈನ್ ವರ್ಕರ್ಸ್ ಎಂದು ಪರಿಗಣಿಸಿ ಲಸಿಕೆ ನೀಡಲು ಆದ್ಯತೆ. …
* ಮೂರು ಕೋಟಿ ಲಸಿಕೆ ಖರೀದಿಗೆ ನಿಗದಿ
* ಕೋವಿಡ್ ನಿರ್ವಹಣೆಗಾಗಿ ಎಸ್.ಡಿ.ಎಫ್ ಹಣವನ್ನ ಪ್ರತಿ ಗ್ರಾಮ ಪಂಚಾಯತಿಳಿಗೆ 50 ಸಾವಿರ ಅನುದಾನ. ಪ್ರತಿ ಗ್ರಾಮ ಪಂಚಾಯತ್
ಪಂಚಾಯತ್‌ನಲ್ಲೂ ಕೋವಿಡ್ ನಿರ್ವಹಣೆಗೆ ಎಸ್‌ಡಿಆರ್‌ಎಫ್‌ ಹಣ ಬಳಕೆ.

ಬೆಂಗಳೂರು: ಜನತಾ ಕರ್ಫ್ಯೂ ಮತ್ತು ಲಾಕ್​ಡೌನ್​ನಿಂದಾಗಿ ವ್ಯಾಪಾರ-ವಹಿವಾಟುಗಳು ಸ್ಥಗಿತಗೊಂಡಿರುವುದರಿಂದ ರಾಜ್ಯ ಸರ್ಕಾರದ 1,250 ಕೋಟಿ ರೂ.ಪ್ಯಾಕೇಜ್‌ ಪ್ರಕಟಿಸಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಪ್ಯಾಕೇಜ್‌ ಪ್ರಕಟಿಸಿದ್ದಾರೆ. ರಾಜ್ಯದ ಬಹುತೇಕ ಎಲ್ಲ ಶ್ರಮಿಕ ವರ್ಗದವರಿಗೆ ಸಹಾಯಧನ ಘೋಷಿಸಿದ್ದಾರೆ. ಲಾಕ್​ಡೌನ್ ಮುಂದುವರೆಸುವ ಬಗ್ಗೆ ಮೇ 23ರಂದು ನಿರ್ಧಾರ ಮಾಡಿದ ನಂತರ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಸಹಾಯಧನ ಫಲಾನುಭವಿಗಳ ಬ್ಯಾಂಕ್​ ಖಾತೆಗೆ ಜಮೆ ಆಗಲಿದೆ. ಇಂದಿರಾ ಕ್ಯಾಂಟೀನ್​ಗಳಲ್ಲಿ ಉಚಿತವಾಗಿ ಊಟ ನೀಡಲಾಗುತ್ತಿದೆ. ಕೋವಿಡ್​ ಹಿನ್ನೆಲೆ ವಿಶೇಷ ಪ್ಯಾಕೇಜ್​ಗೆ ಹಣದ ಕೊರತೆ ಇಲ್ಲ. ಎಲ್ಲ ಫಲಾನುಭವಿಗಳಿಗೂ ಸಹಾಯಧನ ತಲುಪಲಿದೆ.ಎಲ್ಲರಿಗೂ ಹಣ ತಲುಪಿಸಲು ಪ್ರಯತ್ನ ಮಾಡುತ್ತೇವೆ. ಫಲಾನುಭವಿಗಳ ಖಾತೆಗೆ ನೇರವಾಗಿ ಈ ಹಣ ವರ್ಗಾವಣೆ ಮಾಡುವುದಾಗಿಯೂ ಸಿಎಂ ಮಾಡುವುದಾಗಿಯೂ ಮುಖ್ಯಮಂತ್ರಿಗಳು ಹೇಳಿದ್ದಾರೆ.
ಲಾಕ್​ಡೌನ್​ ಮುಂದುವರಿಸುವ ಬಗ್ಗೆ ಮೇ 23ರಂದು ನಿರ್ಧಾರ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಇನ್ನು ಕೋವಿಡ್​ನಿಂದ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥವಾದ ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಒಂದೆರಡು ದಿನದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ಹೂವು ಬೆಳೆಗಾರರಿಗಾಗಿ ಒಟ್ಟು 12.73 ಕೋಟಿ ರೂಪಾಯಿಯನ್ನ ಮೀಸಲಿಟ್ಟಿರುವ ರಾಜ್ಯ ಸರ್ಕಾರ ಪ್ರತಿ ಹೆಕ್ಟೇರ್​ ಹೂವು ಹಾನಿಗೆ 10 ಸಾವಿರ ರೂಪಾಯಿ ಸಹಾಯ ಧನ ನೀಡೋದಾಗಿ ಹೇಳಿದೆ. ಇದರಿಂದ ಸುಮಾರು 20 ಸಾವಿರ ರೈತರಿಗೆ ಅನುಕೂಲವಾಗಲಿದೆ.
ಹಣ್ಣು ಹಾಗೂ ತರಕಾರಿ ಬೆಳೆಗಾರರಿಗೆ ಉಂಟಾದ ನಷ್ಟವನ್ನೂ ಗಮನದಲ್ಲಿಟ್ಟುಕೊಂಡಿರುವ ರಾಜ್ಯ ಸರ್ಕಾರ ಗರಿಷ್ಟ 1 ಹೆಕ್ಟೇರ್​​ಗೆ ಮಿತಿಗೊಳಿಸಿ ಪ್ರತಿ ಹೆಕ್ಟೇರ್​ಗೆ 10 ಸಾವಿರ ರೂಪಾಯಿ ಪರಿಹಾರ ಧನ ನೀಡಲಿದೆ. ಈ ಕಾರ್ಯಕ್ಕಾಗಿ ಪ್ಯಾಕೇಜ್​ನಲ್ಲಿ 69 ಕೋಟಿ ರೂಪಾಯಿಯನ್ನ ಮೀಸಲಿಡಲಾಗಿದೆ. ಇದರಿಂದಾಗಿ ಸುಮಾರು 69 ಸಾವಿರ ರೈತರಿಗೆ ಸಹಾಯವಾಗಲಿದೆ.
ಆಟೋ, ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್​ ಚಾಲಕರಿಗೆ 3 ಸಾವಿರ ರೂಪಾಯಿ ಪರಿಹಾರ ಧನ ಸಿಗಲಿದೆ. ಲೈಸೆನ್ಸ್ ಹಾಗೂ ವಾಹನ ನೋಂದಣಿ ಮಾಡಿಸಿದ 2.10 ಲಕ್ಷ ಫಲಾನುಭವಿಗಳು ಇದಕ್ಕೆ ಅರ್ಹರಾಗಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ 63 ಕೋಟಿ ರೂಪಾಯಿ ಮೀಸಲಿಟ್ಟಿದೆ.
ಕ್ಷೌರಿಕರು, ಅಗಸರು, ಟೇಲರ್​, ಹಮಾಲಿ, ಚಿಂದಿ ಆಯುವವರು, ಕುಂಬಾರ, ಅಕ್ಕಸಾಲಿಗ ಸೇರಿದಂತೆ ವಿವಿಧ ಅಸಂಘಟಿತ ವಲಯದ ಕಾರ್ಮಿಕರಿಗೆ 3 ಸಾವಿರ ರೂಪಾಯಿ ಪರಿಹಾರ ಧನ ಸಿಗಲಿದೆ. ಇದಕ್ಕಾಗಿ ಸರ್ಕಾರ 60.89 ಕೋಟಿ ರೂ.ಗಳನ್ನು ನಿಗದಿ ಮಾಡಿದೆ.
ಆತ್ಮನಿರ್ಭರ್​ ನಿಧಿಯಲ್ಲಿ ನೋಂದಣಿ ಮಾಡಿಸಿದ 2.20 ಲಕ್ಷ ರಸ್ತೆ ಬದಿ ವ್ಯಾಪಾರಿಗಳಿಗೆ 2000 ರೂ. ಪರಿಹಾರ ಸಿಗಲಿದೆ.
4.82 ಕೋಟಿ ರೂಪಾಯಿ ವೆಚ್ಚದಲ್ಲಿ 16,095 ಮಂದಿ ಕಲಾವಿದರು ಹಾಗೂ ಕಲಾ ತಂಡಗಳಿಗೆ ತಲಾ 3000 ರೂಪಾಯಿ ಪರಿಹಾರ ಘೋಷಣೆಯಾಗಿದೆ.
ರೈತರ ಹಾಗೂ ಸ್ವಸಹಾಯ ಸಂಘಗಳು. ಕೃಷಿ ಪತ್ತಿನ ಸಹಕಾರಿ ಸಂಘಗಳು ಹಾಗೂ ಭೂ ಅಭಿವೃದ್ಧಿ ಬ್ಯಾಂಕುಗಳಿಂದ ಸಾಲ ಪಡೆದವರಿಗೆ ಮರುಪಾವತಿ ದಿನಾಂಕವನ್ನ 1-05-2020 ರಿಂದ 31-07-2021 ರವರೆಗೆ ವಿಸ್ತರಣೆ ಮಾಡಲಾಗಿದೆ.
ಪ್ರಧಾನ್​ ಮಂತ್ರಿ ಗರೀಬ್​ ಕಲ್ಯಾಣ್​ ಯೋಜನೆಯ ಅಡಿಯಲ್ಲಿ ಮೇ ಹಾಗೂ ಜೂನ್​ ತಿಂಗಳಲ್ಲಿ ಬಿಪಿಎಲ್​ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿ ಉಚಿತವಾಗಿ ಸಿಗಲಿದೆ. ಈ ಯೋಜನೆಗೆ ಹೆಚ್ಚುವರಿ 30 ಲಕ್ಷ ಮಂದಿಯನ್ನ ಸೇರಿಸಲಾಗಿದ್ದು ಸರ್ಕಾರವೇ ಈ ವೆಚ್ಚ ಭರಿಸಲಿದೆ. ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೂ ಉಚಿತ ಅಕ್ಕಿ ಸಿಗಲಿದೆ. ಎಪಿಎಲ್​ ಕಾರ್ಡು ದಾರರಿಗೆ ಪ್ರತಿ ಕೆಜಿ 15 ರೂಪಾಯಿ ಮೌಲ್ಯದಂತೆ 10 ಕೆಜಿ ಆಹಾರ ಧಾನ್ಯ ಸಿಗಲಿದೆ.
ಬಿಬಿಎಂಪಿ ಹಾಗೂ ನಗರ ಪ್ರದೇಶ ವ್ಯಾಪ್ತಿಯಲ್ಲಿನ ಕಾರ್ಮಿಕರು ಹಾಗೂ ಬಡವರಿಗಾಗಿ ಇಂದಿರಾ ಕ್ಯಾಂಟೀನ್​​ನಲ್ಲಿ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ. ಇದರಿಂದ 6 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಿದೆ ಇದಕ್ಕಾಗಿ ರಾಜ್ಯ ಸರ್ಕಾ 25 ಕೋಟಿ ರೂಪಾಯಿ ಮೀಸಲಿಟ್ಟಿದೆ.
ಕೊರೊನಾ ಸೋಂಕಿಗೆ ಒಳಗಾದ ರೋಗಿಗಳಿಗೆ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಸರ್ಕಾರದಿಂದ ನಿಯೋಜಿಸಲಾದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಾಗಲಿದೆ.
ಕೋವಿಡ್​ ನಿರ್ವಹಣೆಗಾಗಿ ಪ್ರತಿ ಗ್ರಾಮ ಪಂಚಾಯ್ತಿಗೆ 50000 ರೂ.ಗಳಂತೆ ಮುಂಗಡ ಹಣ ನೀಡಲಾಗುತ್ತದೆ. 6000 ಗ್ರಾ.ಪಂಗೆ ಇದರಿಂದ ಅನುಕೂಲವಾಗಲಿದೆ. ಅಲ್ಲದೇ ಮೂರು ದಿನಗಳಲ್ಲಿ 2150 ವೈದ್ಯರನ್ನ ನೇಮಕ ಮಾಡಿಕೊಳ್ಳಲು ಸರ್ಕಾರ ಉದ್ದೇಶಿಸಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕೇವಲ 23ನೇ ವಯಸ್ಸಿಗೆ 19 ಸರ್ಕಾರಿ ಪರೀಕ್ಷೆ ಪಾಸ್ ! ರಾಷ್ಟ್ರಪತಿಯಿಂದ 'ಅಟ್-ಹೋಮ್' ಗೌರವಕ್ಕೆ ಆಯ್ಕೆಯಾದ ಯುವತಿ

 

 

 

 

5 / 5. 6

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement