ಮೌನ ಮುರಿದ ಬಿಎಸ್‌ವೈ.. ಹೈಕಮಾಂಡ್‌ ಹೇಳಿದರೆ ರಾಜೀನಾಮೆ ಹೇಳಿಕೆ.. ಪ್ರತಿ-ದಾಳಿಯೂ ಹೌದು..ಲೆಕ್ಕಾಚಾರದ ಹೇಳಿಕೆಯೂ ಹೌದು..!

ರಘುಪತಿ ಯಾಜಿ

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಹುಬ್ಬಳ್ಳಿ: ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ಏನನ್ನೂ ಹೇಳದೆ ಮೌನವಾಗಿದೆ. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಈ ಬಗ್ಗೆ ಒಂದೂ ಮಾತಾಡಿರಲಿಲ್ಲ. ಆದರೆ ಒಮ್ಮೆಗೇ ಅವರು”ಹೈಕಮಾಂಡ್ ಸೂಚಿಸಿದರೆ ತಕ್ಷಣ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ. ಬಿಜೆಪಿ ಹೈಕಮಾಂಡ್ ಎಲ್ಲಿಯವರೆಗೆ ಅಧಿಕಾರದಲ್ಲಿ ಇರುವಂತೆ ಹೇಳುತ್ತದೆಯೋ, ಅಲ್ಲಿಯವರೆಗೂ ನಾನು ಅಧಿಕಾರದಲ್ಲಿ ಮುಂದುವರೆಯುತ್ತೇನೆ. ಹೈಕಮಾಂಡ್ ರಾಜೀನಾಮೆ ನೀಡುವಂತೆ ಸೂಚಿಸಿದರೆ ತಕ್ಷಣ ನೀಡುತ್ತೇನೆ” ಎಂದು ವಿಧಾನಸೌಧದಲ್ಲಿ ಯಡಿಯೂರಪ್ಪ ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಹಾಗೂ ಯಡಿಯೂರಪ್ಪ ಪರವಾಗಿರುವ ಬಣ ಹಾಗೂ ವಿರೋಧಿ ಬಣಗಳಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಅಷ್ಟೇ ಏಕೆ ಪ್ರತಿಪಕ್ಷಗಳಲ್ಲಿಗೂ ಅಚ್ಚರಿ ತಂದಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸ್ವಭಾವ ಬಲ್ಲವರಾರೂ ಈ ಹೇಳಿಕೆಯನ್ನು ಹಗುರವಾಗಿ ಪರಿಗಣಿಸುವುದಿಲ್ಲ. ಈ ಕಾರಣಕ್ಕಗಿಯೇ ಹೇಳಿಕೆ ನೀಡಿದ ತಕ್ಷಣವೇ ಅಷ್ಟೊಂದು ತೀವ್ರವಾಗಿ ಅದಕ್ಕೆ ಪ್ರತಿಕ್ರಿಯೆಗಳು ಬಂದಿದ್ದು. ಹಾಗಾದರೆ ಯಡಿಯೂರಪ್ಪ ಸಾಂಕ್ರಾಮಿಕದ ಈ ಸಂದರ್ಭದಲ್ಲಿಯೇ ಯಾಕೆ ಈ ಹೇಳಿಕೆ ನೀಡಿದ್ದಾರೆ..? ಇದರಲ್ಲಿಯೇ ಇರುವುದು ಅವರ ಹೇಳಿಕೆಯ ಉದ್ದೇಶದ ಮರ್ಮ.
bimba pratibimbaಬಿಜೆಪಿ ಹೈಕಮಾಂಡ್ ಸೂಚಿಸಿದರೆ ತಕ್ಷಣವೇ ರಾಜೀನಾಮೆ ನೀಡುತ್ತೇನೆ ಎಂಬ ಮುಖ್ಯಮಂತ್ರಿ ಯಡಿಯೂರಪ್ಪ ಭಾನುವಾರ ವಿಧಾನಸೌಧದಲ್ಲಿ ನೀಡಿದ ಹೇಳಿಕೆಯು ಸಾಂಕ್ರಾಮಿಕದ ಬಿಟ್ಟಿನ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಪಕ್ಷದೊಳಗಿನ ತಮ್ಮ ವಿರೋಧಿಗಳಿಗೆ ನೀಡಿದ ಸೂಕ್ಷ್ಮ ಸಂದೇಶ ಕಳುಹಿಸುವಿಕೆ ಮೂಲಕ ಪ್ರತಿದಾಳಿಯ ಒಂದು ಭಾಗವಾಗಿದೆ ಎಂದು ಪಕ್ಷದ ಕೆಲವರು ಹೇಳುತ್ತವೆ.
ಅವರ ಹೇಳಿಕೆಯಲ್ಲಿ ಹಲವಾರು ಸಂದೇಶಗಳು ಹಾಗೂ ಅರ್ಥಗಳನ್ನು ರಾಜಕೀಯವಾಗಿ ವ್ಯಾಖ್ಯಾನಿಸಬಹುದಾಗಿದೆ. ಯಡಿಯೂರಪ್ಪ ಅವರ ಹೇಳಿಕೆಯನ್ನು ವ್ಯಾಖ್ಯಾನಿಸುವುದರ ಮೊದಲು ಅವರು ತಮ್ಮ ಹೇಳಿಕೆಯನ್ನು ಯಾವ ಸಂದರ್ಭದಲ್ಲಿ ನೀಡಿದ್ದಾರೆ ಎಂಬುದನ್ನೂ ಗಮನಿಸಬೇಕಾಗುತ್ತದೆ.
ಇತ್ತೀಚಿಗೆ ಪಕ್ಷದ ಕೆಲವರು ಅವರ ನಾಯಕತ್ವದ ಬಗ್ಗೆ ದೆಹಲಿಗೆ ಹೋಗಿ ಪಕ್ಷದ ಹೈಕಮಾಂಡಿಗೆ ದೂರು ಸಲ್ಲಿಸಿದ ನಂತರ ಹೈಕಮಾಂಡ್‌ ಸದ್ಯಕ್ಕೆ ನಾಯಕತ್ವದ ಬದಲಾವಣೆ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ರಾಜ್ಯದ ಮುಖಂಡರಿಗೆ ಸಂದೇಶ ನೀಡಿದೆ ಎಂಬ ಸುದ್ದಿ ಹೊರಬಿದ್ದ ಒಂದು ವಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಈ ಹೇಳಿಕೆ ಬಂದಿದೆ. ಅಂದರೆ ಕೊರೊನಾ ಸಾಂಕ್ರಾಮಿಕ ಒಂದು ಹಂತದ ವರೆಗೆ ಬರುವ ವರೆಗೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಬಿಜೆಪಿ ಹೈಕಮಾಂಡ್‌ ಮುಂದಾಗುವದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ಯಡಿಯೂರಪ್ಪ ಲೆಕ್ಕಾಚಾರ ಹಾಕಿಯೇ ಈ ಹೇಳಿಕೆ ನೀಡಿದ್ದಾರೆ. ಇದನ್ನು ಪಕ್ಷದ ಹೈಕಮಾಂಡ್‌ ಬೆಂಬಲ ಸದ್ಯಕ್ಕಿದೆ ಎಂದೂ ಅರ್ಥ ಮಾಡಿಕೊಳ್ಳಬಹುದು ಅಥವಾ ಸಾಂಕ್ರಾಮಿಕದ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಹೈಕಮಾಂಡ್‌ ನಾಯಕತ್ವ ಬದಲಾವಣೆಗೆ ಮುಂದಾಗುವುದು ಕಷ್ಟಸಾಧ್ಯ ಎಂದೂ ವ್ಯಾಖ್ಯಾನಿಸಬಹುದು.
ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ರಾಜಕೀಯದಲ್ಲಿ ಹೇಳಿಕೆ ಮೇಲ್ನೋಟಕ್ಕೆ ಕಾಣುವುದಕ್ಕಿಂತ ಆ ಹೇಳಿಕೆಯಲ್ಲಿ ಏನೆಲ್ಲ ಹುದುಗಿದೆಯೋ ಅದಕ್ಕೆ ಹೆಚ್ಚು ಮಹತ್ವವಿದೆ. ಹೇಳಿಕೆಯ ಹಿಂದೆ ಅಡಗಿರುವ ಅಂಶಗಳು ಸಮಯ ಹಾಗೂ ಸಂದರ್ಭಕ್ಕೆ ತಕ್ಕಂತೆ ತನ್ನ ವ್ಯಾಖ್ಯಾನವನ್ನೂ ಬದಲಿಸುತ್ತದೆ.
ತನ್ನ ಮತ್ತು ಸರ್ಕಾರದ ಉಳಿದ ಸಚಿವರು ಹಾಗೂ ಶಾಸಕರ ನಡುವೆ ಸಮನ್ವಯ ಸುಧಾರಿಸಲು ಮತ್ತು ಭಿನ್ನಾಭಿಪ್ರಾಯಗಳನ್ನು ದೂರ ಮಾಡಲು ಪಕ್ಷವು ಒಂದು ಸಮಿತಿ ರಚಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲು ನೇತೃತ್ವದ ಸಮಿತಿಯಲ್ಲಿ ಬಿಜೆಪಿಯ ಐದು ಪ್ರಧಾನ ಕಾರ್ಯದರ್ಶಿಗಳು ಮತ್ತು ಮೂವರುಸಚಿವರು ಇದ್ದಾರೆ. ಈ ನೇಮಕದ ಹಿಂದಿನ ಉದ್ದೇಶದ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದ ಆಡಳಿತ ಸುಗಮವಾಗಿ ಸಾಗುವಂತೆ ಮಾಡುವುದಾಗಿದೆ ಸಮಿತಿ ಯಡಿಯೂರಪ್ಪ ಅವರನ್ನು ಸ್ವಲ್ಪಮಟ್ಟಿಗೆ ನಿಯಂತ್ರಿಸಬಹುದು, ಆದರೆ ಸದ್ಯಕ್ಕೆ ಅವರನ್ನು ಬದಲು ಮಾಡುವ ಉದ್ದೇಶ ಹೈಕಮಾಂಡಿಗೆ ಇಲ್ಲ ಎಂಬುದು ಸಮಿತಿ ನೇಮಕದಿಂದ ಕಾಣುವಂಥದ್ದು. ಒಂದುವೇಳೆ ಸದ್ಯವೇ ಯಡಿಯೂರಪ್ಪ ನಾಯಕತ್ವ ಬದಲಾಯಿಸಬೇಕು ಎಂದಿದ್ದರೆ ಈ ಸಮಿತಿ ನೇಮಕದ ಗೋಜಿಗೆ ಹೈಕಮಾಂಡ್‌ ಹೋಗುತ್ತಿರಲಿಲ್ಲ. ಹಾಗೂ ಸಮಿತಿ ನೇಮಕದ ಅವಶ್ಯಕತೆಯೂ ಇರಲಿಲ್ಲ. ಹೀಗಾಗಿಯೇ ಯಡಿಯೂರಪ್ಪ ಹೈಕಮಾಂಡ್‌ ಸೂಚಿಸಿದರೆ ತಾನು ತಕ್ಷಣವೇ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರ ಹಿನ್ನೆಲೆಯ ಅರ್ಥ ಗಮನಿಸಿದರೆ ಸದ್ಯಕ್ಕೆ ತನಗೆ ಹೈಕಮಾಂಡ್‌ ಈ ತರಹದ ಸೂಚನೆ ನೀಡುವುದಿಲ್ಲ ಎಂಬ ವಿಶ್ವಾಸ ಅವರಲ್ಲಿದ್ದಂತೆ ಕಾಣುತ್ತದೆ. ಈ ವಿಶ್ವಾಸದಿಂದಾಗಿಯೇ ಕಳೆದ ಕೆಲ ತಿಂಗಳಿಂದ ತನ್ನ ವಿರುದ್ಧ ತೆರೆಮರೆಯಲ್ಲಿ ಕೆಲಸ ಮಾಡುತ್ತಿರುವ ಹಲವರು ಹಾಗೂ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವ ಕೆಲವರಿಗೆ ಯಾವ ಸಂದೇಶ ನೀಡಬೇಕಿತ್ತೋ ಆ ಸಂದೇಶವನ್ನೂ ಈ ಹೇಳಿಕೆಯ ಮೂಲಕ ಯಡಿಯೂರಪ್ಪ ನೀಡಿದ್ದಾರೆ ಎಂದೂ ವ್ಯಾಖ್ಯಾನಿಸಲಾಗುತ್ತಿದೆ.
ಇದಕ್ಕಿಂತಲೂ ಗಮನಿಸಬೇಕಾದ ಅವರ ಹೇಳಿಕೆಯ ಪ್ರಮುಖ ಅಂಶವೆಂದರೆ ರಾಜ್ಯದಲ್ಲಿ ತನ್ನ ಬದಲಿಗೆ ಪರ್ಯಾಯ ನಾಯಕರಿಲ್ಲ ಎಂಬುದನ್ನು ನಾನು ಒಪ್ಪುವುದಿಲ್ಲ, ಪರ್ಯಾಯ ನಾಯಕರು ಯಾವಾಗಲೂ ಇರುತ್ತಾರೆ ಎಂದು ಅವರು ಮಾರ್ಮಿಕವಾಗಿ ಹೇಳಿರುವುದು. ಹಾಗಾದರೆ ಅವರ ದೃಷ್ಟಿಯಲ್ಲಿ ಅವರಿಗೆ ಪರ್ಯಯ ನಾಯಕರು ಯಾರು ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಯಡಿಯೂರಪ್ಪ ಅವರಿಗೆ ಬೇಕಾಗಿರುವುದು ಈ ಪ್ರಶ್ನೆ ಉದ್ಭವಿಸುವುದೇ ಆಗಿದೆ. ಮುಖ್ಯವಾಗಿ ಪಕ್ಷದ ಎರಡನೇ ಹಂತದ ನಾಯಕರರಲ್ಲಿ ಈ ಪ್ರಶ್ನೆ ಮೂಡಬೇಕು ಎಂದು ಅವರು ಈ ಹೇಳಿಕೆ ನೀಡಿರುವಂತಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ವತಃ ಬಣವಾದದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿ,ಯಡಿಯೂರಪ್ಪ ಪರವಾಗಿರುವ ಗುಂಪು ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆಯ ಬೇಡಿಕೆಗಳನ್ನು ಮಂಡಿಸಿದೆ ಎಂದೂ ಮಾಧ್ಯಮದಲ್ಲಿ ವರದಿಯಾಗಿತ್ತು. ಅಂದರೆ ಬಿಜೆಪಿಯಲ್ಲಿದ್ದುಕೊಂಡೇ ಅನೇಕರು ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ವಿರುದ್ಧ ಹೇಳಿಕೆಯನ್ನು ಅನೇಕ ದಿನಗಳಿಂದ ನೀಡುತ್ತಿದ್ದರೂ ಅವರ ಮೇಲೆ ಪಕ್ಷದ ಅಧ್ಯಕ್ಷರು ಈವರೆಗೆ ಶಿಸ್ತುಕ್ರಮಕ್ಕೆ ಮುಂದಾಗಿಲ್ಲ ಎಂಬ ಕಾರಣ ನೀಡಿದ ಅವರು ಬಣ ರಾಜಕೀಯಕ್ಕೆ ಪರೋಕ್ಷವಾಗಿ ಇಂಬು ನೀಡುತ್ತಿದ್ದಾರೆ ಎಂದು ಹೈಕಮಾಂಡಿಗೆ ದೂರಲಾಗಿತ್ತು.
ಈತರಹ ವರದಿಯಾದ ಕೆಲವೇ ದಿನಗಳಲ್ಲಿ ಯಡಿಯೂರಪ್ಪ ಪರ್ಯಾಯ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ. ಅಂದರೆ ಈ ಸರ್ಕಾರ ರಚನೆಗೆ ಕಾರಣರಾದ ಕಾಂಗ್ರೆಸ್‌ ಹಾಗೂ ಜಡಿಎಸ್‌ನಿಂದ ಬಂದವರು ಈಗ ಸರ್ಕಾರ ಮುಂದುವರಿಯಲು ಅನಿವಾರ್ಯ. ಪರಿಸ್ಥಿತಿ ಹೀಗಿರುವಾಗ ತಮ್ಮ ವಿರುದ್ಧ ಪದೇಪದೇ ಹೈಕಮಾಂಡ್‌ ಮುಂದೆ ದೂರೊಯ್ಯುವ ಸಂದರ್ಭದಲ್ಲಿ ಯಡಿಯೂರಪ್ಪ ಅವರಿಗೆ ಈ ವಲಸೆ ಶಾಸಕರು ಯಾರ ಪರವಾಗಿದ್ದಾರೆಂಬುದು ಬಹಿರಂಗವಾಗಬೇಕಿತ್ತು. ಆ ಮೂಲಕ ಹೈಕಮಾಂಡಿಗೆ ಈ ಮಾಹಿತಿ ರವಾನೆಯಾಗುವುದು ಬೇಕಿತ್ತು. ಅಂದರೆ ಈ ವಲಸೆ ಶಾಸಕರ ವಿಶ್ವಾಸ ಈಗಲೂ ತನ್ನ ಮೇಲಿದೆ ಎಂಬುದು ಮತ್ತೊಮ್ಮೆ ತಮ್ಮ ಹೇಳಿಕೆಯ ಪ್ರತಿಕ್ರಿಯೆ ರೂಪದಲ್ಲಿ ಜಾಹೀರು ಮಾಡಿಸಿಕೊಂಡ ಯಡಿಯೂರಪ್ಪ ಪಕ್ಷದಲ್ಲಿಯೂ ತನಗೆ ನಿಷ್ಠರು ಎಷ್ಟಿದ್ದಾರೆ ಎಂಬುದನ್ನೂ ಈ ಹೇಳಿಕೆಯ ಮೂಲಕ ಕಂಡುಕೊಂಡಿದ್ದಾರೆ. ಈ ಹೇಳಿಕೆಗೆ ಬಂದ ಪ್ರತಿಕ್ರಿಯೆಯ ಆಧಾರದ ಮೇಲೆಯೇ ಹೈಕಮಾಂಡ್‌ ಎಲ್ಲಿಯಾದರೂ ತನಗೆ ತೊಂದರೆಯಾಗುವ ರೀತಿಯಲ್ಲಿ ನಿರ್ಧಾರ ತೆಗೆದುಕೊಂಡರೆ ಮುಂದಿನ ತನ್ನ ಕ್ರಮ ಹೇಗಿರಬೇಕು ಎಂಬುದನ್ನೂ ನಿರ್ಧರಿಸಲು ಯಡಿಯೂರಪ್ಪ ಬಹಳ ಲೆಕ್ಕಾಚಾರ ಮಾಡಿ ಈ ಹೇಳಿಕೆ ನೀಡಿದ್ದಾರೆ ಎಂದೂ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಸದಸ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ದಕ್ಷಿಣ ಭಾರತದಲ್ಲಿ ಅಧಿಕಾರದಲ್ಲಿರುವ ಏಕೈಕ ರಾಜ್ಯ. ಕರ್ನಾಟಕ ಬಿಟ್ಟು(ಕೇಂದ್ರಾಡಳಿತ ಪ್ರದೇಶ ಪುದುಚೇರಿ ಹೊರತು ಪಡಿಸಿ) ಉಳಿದೆಡೆ ಎಲ್ಲಿಯೂ ಏಪ್ರಿಲ್‌ನಲ್ಲಿ ನಡೆದ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡಿಲ್ಲ.ಹೀಗಾಗಿ ಕರ್ನಾಟಕದಲ್ಲಿ ಅಧಿಕಾರದಲ್ಲಿ ಮುಂದುವರಿಯಬೇಕೆಂದರೆ ಅದಕ್ಕೆ ಯಡಿಯೂರಪ್ಪ ಅವರ ಸಾಥ್‌ ಕೂಡ ಬೇಕಾಗುತ್ತದೆ ಎಂಬುದನ್ನು ಯಡಿಯೂರಪ್ಪ ಈ ಹೇಳಿಕೆಯ ಮೂಲಕ ಹೈಕಮಾಂಡಿಗೆ ತಿಳಿಯಪಡಿಸುವ ಪ್ರಯತ್ನ ಮಾಡಿದ್ದಾರೆ ಎಂದೂ ವ್ಯಾಖ್ಯಾನಿಸಬಹುದಾಗಿದೆ.
ಒಟ್ಟಿನಲ್ಲಿ ಯಡಿಯೂರಪ್ಪ ನೀಡಿದ ಹೇಳಿಕೆಯಿಂದ ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಚರ್ಚೆ ಕೆಲವು ದಿನಗಳಲ್ಲಿ ಒಂದು ಸ್ವರೂಪ ಪಡೆಯಬಹುದು. ಅಲ್ಲಿ ಯಡಿಯೂರಪ್ಪ ನಿಷ್ಠರೆಟ್ಟು, ಭಿನ್ನರೆಷ್ಟು, ಯಡಿಯೂರಪ್ಪ ನೀಡಿದ ಹೇಳಿಕೆಯಿಂದ ಪರ್ಯಾಯ ನಾಯಕರ ಪಟ್ಟಿಯಲ್ಲಿರುವ ಯಾರ್ಯಾರ ಹೆಸರು ಗಟ್ಟಿಯಾಗುತ್ತದೆ ಎಂಬುದೆಲ್ಲ ರಾಜಕೀಯವಾಗಿ ಮುಖ್ಯವಾಗುತ್ತದೆ. ಯಡಿಯೂರಪ್ಪ ಅವರ ಮುಂದಿನ ನಡೆ ಈ ಬೆಳವಣಿಗೆ ಮೇಲೆ ಅವಲಂಬಿತವಾಗಿರುತ್ತದೆ. ಇಲ್ಲದಿದ್ದರೆ ಹೀಗೆಯೇ ಮುಂದುವರಿಯುತ್ತದೆ. ಯಾಕೆಂದರೆ ರಾಜಕೀಯದಲ್ಲಿ ಹೇಳಿಕೆ ಮೇಲ್ನೋಟದ ಅರ್ಥಕ್ಕಿಂತ ಹೇಳಿಕೆಯ ಹಿಂದೆ ಅಡಗಿರುವ ಅರ್ಥವೇ ಹೆಚ್ಚು ಸದ್ದು ಮಾಡುತ್ತದೆ.

ಇಂದಿನ ಪ್ರಮುಖ ಸುದ್ದಿ :-   ಕಾಂತಾರದ 'ವರಾಹರೂಪಂ' ಹಾಡಿನ ವಿವಾದ: ಥೈಕ್ಕುಡಂ ಬ್ರಿಜ್‌ ದಾವೆ ತಿರಸ್ಕರಿಸಿದ್ದ ಕೋಝಿಕ್ಕೋಡ್‌ ನ್ಯಾಯಾಲಯದ ಆದೇಶಕ್ಕೆ ಕೇರಳ ಹೈಕೋರ್ಟ್‌ ತಡೆ

 

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 5

ನಿಮ್ಮ ಕಾಮೆಂಟ್ ಬರೆಯಿರಿ

advertisement