ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಎಲ್ಲ ಸಿದ್ಧತೆ, ಜುಲೈ 15, 17ರಂದು ಅಣಕು ಪರೀಕ್ಷೆ: ಸಚಿವ ಸುರೇಶಕುಮಾರ್

posted in: ರಾಜ್ಯ | 1

ಬೆಂಗಳೂರು: ಈ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಎಲ್ಲ ಅಧಿಕಾರಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಲಸಿಕೆ ಪಡೆಯುವುದರೊಂದಿಗೆ ಪರೀಕ್ಷೆ ಸುರಕ್ಷಿತ ವಾತಾವರಣದಲ್ಲಿ ಅಚ್ಚುಕಟ್ಟಾಗಿ ನಡೆಯಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಮಂಗಳವಾರ ಜಿಲ್ಲಾ ಶೈಕ್ಷಣಿಕ ಉಪನಿರ್ದೇಶಕರು ಮತ್ತು ಬಿಇಒಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದ ನೀಡಿದ ನಂತರ ಮಾತನಾಡಿದ ಅವರು, ಹೊಸ ರೀತಿಯಲ್ಲಿ ನಡೆಯುತ್ತಿರುವ ಪರೀಕ್ಷೆಗಳನ್ನು ಬರೆಯುವ ಕುರಿತು ಮಕ್ಕಳ ಮನಃಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡು, ಕಳೆದ ಬಾರಿಯಂತೆ ಎಲ್ಲ ಅಧಿಕಾರಿಗಳು ಮತ್ತು ಶಿಕ್ಷಕರು ಈ ಬಾರಿಯೂ ಪರೀಕ್ಷೆಯ ಯಶಸ್ಸಿಗೆ ಸಹಕರಿಸಿ ಮಕ್ಕಳ ಹಿತಕ್ಕಾಗಿ ಶ್ರಮಿಸಬೇಕೆಂದು ಸೂಚನೆ ನೀಡಿದರು.
ಶೇಕಡಾ 95 ಕ್ಕಿಂತ ಹೆಚ್ಚು ಸಂಖ್ಯೆಯ ಪರೀಕ್ಷಾ ಸಿಬ್ಬಂದಿ ಲಸಿಕೆಯನ್ನು ಈಗಾಗಲೇ ಪಡೆದುಕೊಂಡಿರುವುದು ಅತ್ಯಂತ ಭರವಸೆ ತಂದಿರುವ ಸಂಗತಿ. ಇನ್ನುಳಿದವರು ಇನ್ನೆರಡು ದಿನಗಳಲ್ಲಿ ಲಸಿಕೆ ಪಡೆಯಲಿದ್ದಾರೆ ಎಂದು ಡಿಡಿಪಿಐ ಗಳು ಅಂಕಿ – ಅಂಶ ಗಳ ಮೂಲಕ ತಿಳಿಸಿದ್ದಾರೆ. ಪರೀಕ್ಷೆಗಳ ಕುರಿತು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಲು ಆಯಾ ಹಂತದಲ್ಲಿ ಕೈಗೊಂಡ ಉಪಕ್ರಮಗಳನ್ನು ಆಲಿಸಿದ ಸಚಿವರು ಉತ್ತಮ ಕ್ರಮಗಳನ್ನು ಇತರೆ ಜಿಲ್ಲೆಗಳವರು ವಿನಿಮಯ ಮಾಡಿಕೊಳ್ಳಬೇಕೆಂದು ಸೂಚನೆ ನೀಡಿದರು.
ಯಾವುದೇ ಕಾರಣದಿಂದಲೂ ಯಾವುದೇ ಒಂದು ಮಗುವೂ ಸಹ ಪರೀಕ್ಷೆಯಿಂದ ವಂಚಿತವಾಗದಂತೆ ಕ್ರಮ ವಹಿಸುವುದೂ ಸೇರಿದಂತೆ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ರೂಪಿಸಿದ ಎಸ್‍ಒಪಿ ಅನುಷ್ಠಾನ ಕುರಿತು ಚರ್ಚಿಸಿ, ಅಗತ್ಯವಿರುವ ಮಕ್ಕಳಿಗೆ ಪರೀಕ್ಷಾ ಕೇಂದ್ರಕ್ಕೆ ಬರಲು ವಾಹನ ವ್ಯವಸ್ಥೆ ಮಾಡಲು ಸೂಚನೆ ನೀಡಿದರು.
ಈಗಾಗಲೇ ಎಸ್ ಎಸ್ ಎಲ್ ಸಿ ಪರೀಕ್ಷಾ ಮಂಡಳಿ ನೀಡಿದ ಪ್ರಶ್ನೆ ಪತ್ರಿಕೆಗಳ ಒಎಂಆರ್ ಶೀಟ್ ಸೇರಿದಂತೆ ಆಯಾ ಜಿಲ್ಲೆಗಳಲ್ಲಿ ರೂಪಿಸಲಾದ ಮಾದರಿ ಪ್ರಶ್ನೆಪತ್ರಿಕೆಗಳಿಗೆ ಮಕ್ಕಳು ಉತ್ತರಿಸಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಪರೀಕ್ಷಾ ಕೇಂದ್ರಗಳಲ್ಲಿ ಮತ್ತು ಆಯಾ ಶಾಲೆಗಳಲ್ಲಿ ಪರೀಕ್ಷೆ ನಡೆಸಿ ಮಾರ್ಗದರ್ಶನ ನೀಡಲಾಗಿದೆ. ಕೆಲ ಜಿಲ್ಲೆಗಳಲ್ಲಿ ಮಕ್ಕಳ ಮನೆಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಿ ಅವುಗಳನ್ನು ಪಡೆದುಕೊಂಡು ಮಾರ್ಗದರ್ಶನ ನೀಡಲಾಗಿದೆ ಎಂದೂ ಸಚಿವರು ತಿಳಿಸಿದರು.
ಹೆಚ್ಚು ಮಳೆಯ ಜಿಲ್ಲೆಗಳಲ್ಲಿ ಸಾರಿಗೆ ವ್ಯವಸ್ಥೆ: ಪರೀಕ್ಷೆ ಮಳೆಗಾಲದ ಸಮಯದಲ್ಲಿ ನಡೆಯುತ್ತಿರುವುದರಿಂದ ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಮಕ್ಕಳು ಪರೀಕ್ಷೆಗೆ ಬಂದು ಹೋಗುವ ಕುರಿತು ಕೈಗೊಳ್ಳಲಾದ ಕ್ರಮಗಳನ್ನು ಆಲಿಸಿದರು.
ಜುಲೈ 15 ಹಾಗೂ 17ರಂದು ಅಣಕು ಪರೀಕ್ಷೆ: ಪರೀಕ್ಷಾ ಸಿದ್ಧತೆ ಕುರಿತಂತೆ ವಿವರಣೆ ಪಡೆದ ಸುರೇಶ್ ಕುಮಾರ್, ಜುಲೈ 15 ಮತ್ತು 17ರಂದು ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಅಣಕು ಪರೀಕ್ಷೆಗಳನ್ನು ನಡೆಸುವುದಕ್ಕೆ ಸೂಚನೆ ನೀಡಿದರು. ಪರೀಕ್ಷಾ ಕೇಂದ್ರ ಪ್ರವೇಶದಿಂದ ಹಿಡಿದು ಪರೀಕ್ಷಾ ಕೊಠಡಿ ಪ್ರವೇಶ ಹಾಗೆಯೇ ಪರೀಕ್ಷೆ ನಂತರ ಮಕ್ಕಳು ಸಾಮಾಜಿಕ ಅಂತರದ ಮೂಲಕ ಪರೀಕ್ಷಾ ಕೇಂದ್ರದಿಂದ ಹೊರಬರುವ ತನಕ ಎಲ್ಲ ರೀತಿಯ ಕ್ರಮಗಳನ್ನು ಪಾಲಿಸುವಂತೆ ಸಚಿವರು ಸೂಚಿಸಿದರು.
ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಭಾಗಿಯಾಗುತ್ತಿರುವ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಮೂಡಿಸಲು ಜುಲೈ 9 ಮತ್ತು 14ರಂದು ಫೋನ್ ಇನ್ ಸಂವೇದನಾ ಕಾರ್ಯಕ್ರಮ ನಡೆಯಲಿದೆ. ಪ್ರತಿಯೊಂದು ಜಿಲ್ಲೆಗಳಿಂದ 2000ಕ್ಕೂ ಹೆಚ್ಚು ಮಕ್ಕಳು ಈ ಸಂವೇದನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

  1. Tanu nayak

    Please cancel SSLC exam how rude is our minister.so bad you r sir we all just hate u

ನಿಮ್ಮ ಕಾಮೆಂಟ್ ಬರೆಯಿರಿ