ಸಚಿವ ಸಂಪುಟ ರಚನೆಯಲ್ಲಿ ಆರಂಭವಾಯ್ತು ಅಸಮಾಧಾನ:ಇದು ಕೇವಲ ಗೊಣಗಾಟವೇ ಅಥವಾ ನೂತನ ಸಿಎಂಗೆ ಗಂಭೀರ ಸವಾಲೇ..? ,

ರಘುಪತಿ ಯಾಜಿ
ಬೆಂಗಳೂರು: ಯಾವುದೇ ಮುಖ್ಯಮಂತ್ರಿಗೆ ಸಚಿವರ ಖಾತೆ ಹಂಚಿಕೆ ಮಾಡುವುದು ಒಂದು ಸೂಕ್ಷ್ಮ ಪ್ರಕ್ರಿಯೆಯಾಗಿದ್ದು, ಇಲ್ಲಿಂದಲೇ ಸಮಸ್ಯೆಗಳು ಉದ್ಭವಾಗಬಹುದು.
ಈಗ ಕರ್ನಾಟಕದಲ್ಲಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಇದೇ ಸಮಸ್ಯೆ ಎದುರಾಗಿದೆ. ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದವರನ್ನು ಬಿಟ್ಟು ಬಿಡಿ. ಅವರಿಂದೇನೂ ಅಂಥ ಸಮಸ್ಯೆ ಬರಲಿಕ್ಕಿಲ್ಲ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈಗ ಈ ಹಿಂದೆ ಯಡಿಯೂರಪ್ಪ ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದವರಿಂದಲೇ ಖಾತೆಗಾಗಿ ಕ್ಯಾತೆ ಆರಂಭವಾಗಿದೆ.
2019 ರಲ್ಲಿ ರಾಜ್ಯದ ಸಮ್ಮಿಶ್ರ ಸರ್ಕಾರದ ಪತನದ ಸಮಯದಲ್ಲಿ ರೆಸಾರ್ಟುಗಳಲ್ಲಿ ಜಗಳವಾಡಿದ ಕಾಂಗ್ರೆಸ್ ಶಾಸಕರಲ್ಲಿ ಒಬ್ಬರಾಗಿದ್ದ ಆನಂದ್ ಸಿಂಗ್ ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದು ಶಾಸಕರಾಗಿ ಆಯ್ಕೆಯಾಗಿ ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವರಾಗಿದ್ದರು. ಈಗ ಬೊಮ್ಮಾಯಿ ಸಂಪುಟದಲ್ಲಿಯೂ ಅವರು ಸಚಿವರಾಗಿದ್ದಾರೆ. ಈಗ ಅವರು ಪ್ರವಾಸೋದ್ಯಮ, ಪರಿಸರ ವಿಜ್ಞಾನ ಖಾತೆ ಸಚಿವರಾಗಿದ್ದರು. ಆದರೆ ಅವರಿಗೆ ಈ ಖಾತೆ ತೃಪ್ತಿ ತಂದದಿಲ್ಲ ಎಂದು ಅವರೇ ಹೇಳಿದ್ದಾರೆ. ಈ ಸಂಬಂಧ ಬೊಮ್ಮಾಯಿ ಅವರಿಗೆ ಪರೋಕ್ಷವಾಗಿ ರಾಜೀನಾಮೆ ಎಚ್ಚರಿಕೆಯನ್ನೂ ನೀಡಿ ನಂತರ ಭಾನುವಾರ ಮುಖ್ಯಮಂತ್ರಿ ಅವರನ್ನು ಭೇಟಿಯೂ ಆಗಿದ್ದಾರೆ.
ನಾನು ಈ ಖಾತೆಯನ್ನು ಕೇಳಿರಲಿಲ್ಲ. ನಾನು ಮಾಡಿದ ಯಾವುದೇ ವಿನಂತಿಯನ್ನು ಈಡೇರಿಸಿಲ್ಲ ಎಂದು ಮಾತ್ರ ನಾನು ಹೇಳಬಲ್ಲೆ. ಪಕ್ಷದ ವ್ಯಕ್ತಿಯಾಗಿ ನಾನು ಈ ಬಗ್ಗೆ ಪ್ರತಿಕ್ರಿಯಿಸಲು ಸಿದ್ಧನಿಲ್ಲ. ನಾನು ಮತ್ತೊಮ್ಮೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ನನ್ನ ವಿನಂತಿಯನ್ನು ಮತ್ತೊಮ್ಮೆ ಮಾಡುತ್ತೇನೆ “ಎಂದು ಸಿಂಗ್ ತಮ್ಮ ತವರು ಜಿಲ್ಲೆ ಬಳ್ಳಾರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅಂದರೆ ಮುಖ್ಯಮಂತ್ರಿ ಬೊಮ್ಮಾಯಿ ಭೇಟಿ ಬಳಿಕವೂ ಅವರು ಇನ್ನೂ ಸಮಾಧಾನವಾದಂತೆ ಕಂಡುಬರುತ್ತಿಲ್ಲ.
ಸಚಿವರಾದ ಎಂಟಿಬಿ ನಾಗರಾಜ್ ಅವರು ಕೂಡ ಪುರಸಭೆಯ ಆಡಳಿತ ಖಾತೆ ನೀಡಿರುವುದಕ್ಕೆ ಅಸಮಾಧಾನವಿದೆ ಎಂದು ಅವರೇ ಟ್ವೀಟ್‌ ಮಾಡಿದ್ದಾರೆ. 2019 ರಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ಜನತಾದಳ ಜಾತ್ಯತೀತ-ಕಾಂಗ್ರೆಸ್ ಒಕ್ಕೂಟವನ್ನು ಉರುಳಿಸಲು ಸಹಾಯ ಮಾಡಲು ಅವರು ನಿಷ್ಠೆಯನ್ನು ಬದಲಿಸಿದ ಇನ್ನೊಬ್ಬ ಮಾಜಿ ಕಾಂಗ್ರೆಸ್ ಶಾಸಕ ಹಾಲಿ ವಿಧಾನ ಪರಿಷತ್‌ ಸದಸ್ಯ..
ನಂತರ ನಾಗರಾಜ್ ಅವರು ಹೊಸಕೋಟೆಯಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ನಂತರದಲ್ಲಿ ಅವರನ್ನು ರಾಜ್ಯ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಯಿತು.
ಎಂಟಿಬಿ ನಾಗರಾಜ್ ಅವರೊಂದಿಗೂ ಮಾತನಾಡಿದ ಮುಖ್ಯಮಂತ್ರಿ ” ಬೊಮ್ಮಾಯಿ ಅವರನ್ನೂ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಅವರಿಗೆ ಸಮಾಧಾನವಾದಂತೆ ಕಾಣುತ್ತಿಲ್ಲ.
ಆಗಸ್ಟ್ 4 ರ ಕ್ಯಾಬಿನೆಟ್ ರಚನೆಯ ನಂತರದ ದಿನಗಳಲ್ಲಿ, ಅವರು ಅಸಮಾಧಾನದ ವರದಿಗಳನ್ನು ಉದ್ದೇಶಿಸಿ ಮುಖ್ಯಮಂತ್ರಿ ಬೊಮ್ಮಾಯಿ “ಪ್ರತಿಯೊಬ್ಬರೂ ತಮಗೆ ಬೇಕಾದ ಖಾತೆಗಳನ್ನು ಪಡೆಯಲು ಸಾಧ್ಯವಿಲ್ಲ” ಎಂದು ಈಗಾಗಲೇ ಹೇಳಿದ್ದಾರೆ.
ಹೆಚ್ಚು ಪ್ರಭಾವಶಾಲಿ ಮಂತ್ರಿಗಳು ಬೊಮ್ಮಾಯಿ ಅವರ ಸಚುವ ಸಂಪುಟದಲ್ಲಿಯೂ ಹಿಂದಿನ ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿದ್ದ ಹೊಂದಿದ್ದ ಖಾತೆಗಳನ್ನು ಉಳಿಸಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   6 ವರ್ಷ ನರೇಂದ್ರ ಮೋದಿ ಅನರ್ಹತೆ : ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

ಮಾಹಿತಿ ಪ್ರಕಾರ, ಈ ಖಾತೆಗಾಗಿ ಇರುವ ಕ್ಯಾತೆಗಳಿಂದಾಗಿ ಸದ್ಯಕ್ಕೆ ಸರ್ಕಾರಕ್ಕೆ ಮೇಲ್ನೋಟಕ್ಕೆ ಯಾವುದೇ ಹಾನಿಯಾಗುವ ಸಾಧ್ಯತೆ ಕಡಿಮೆ ಎಂದು ತೋರುತ್ತದೆ. ಆದರೆ ಹಾನಿಗಿಂತ ಸ್ವಲ್ಪ ಸರ್ಕಾರಕ್ಕೆ ಈ ಕ್ಯಾತೆ ರಾಜಕೀಯವಾಗಿ ಮುಜುಗರವನ್ನು ಉಂಟುಮಾಡಬಹುದು.
ಇದು ಮುಂದಿನ ಚುನಾವಣೆ ಮೇಲೆ ಪರಿಣಾಮ ಬೀರಬಹುದು.
ಬೊಮ್ಮಾಯಿ ಅವರಿಗೂ ಅವರು ಜನತಾದಳದಿಂದ ಬಂದವರು ಎಂಬ ಕಾರಣಕ್ಕೆ ಮೂಲ ಬಿಜೆಪಿಯವರಷ್ಟು ಸಲೀಸಾಗಿ ಬಿಜೆಪಿಯವರನ್ನು ನಿಭಾಯಿಸುವುದು ಅವರಿಗೆ ಕಷ್ಟವಾಗಬಹುದು. ಹೀಗಾಗಿ ವಲಸಿಗರಿಗೆ ಸಮಾಧಾನ ಮಾಡಲು ಹೋದರೆ ಮೂಲ ಬಿಜೆಪಿ ಸಚಿವರು ಹಾಗೂ ಮೂಲ ಬಿಜೆಪಿಯವರಿಗೆ ಮಣೆ ಹಾಕಲು ಹೋದರೆ ವಲಸಿಗರ ಗೊಣಗಾಟ ಖಾತೆಗೆ ಕ್ಯಾತೆ ರೂಪ ಪಡೆಯುವುದ ಸಾಧ್ಯತೆ ಅಲ್ಲಗಳೆಯುಂತಿಲ್ಲ.
ಆದರೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗುವುದಕ್ಕೆ ಬಿಜೆಪಿ ಹೈಕಮಾಂಡ್‌ ಸಹ ಗ್ರೀನ್‌ ಸಿಗ್ನಲ್‌ ನೀಡಿದ್ದರಿಂದ ಬಿಜೆಪಿ ಕರ್ನಾಟಕದ ಉಸ್ತುವಾರಿಯಿಂದ ಯಾವುದೇ ಸಮಸ್ಯೆ ಆಗುವ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆದರೆ, ಹೊಸ ಮುಖ್ಯಮಂತ್ರಿಯು ಎದುರಿಸಿದ ಮೊದಲ ರಾಜಕೀಯ ಸವಾಲು ಈಗ ಮಂತ್ರಿಮಂಡಳದ ರಚನೆಯ ನಂತರದ ದಿನದಿಂದಲೇ ಆರಂಭವಾಗಿದೆ.ಅದು ಕೂಡ ಬಿಜೆಪಿಗೆ ವಲಸೆ ಬಂದವರಿಂದಲೇ ಶುರುವಾಗಿದೆ. ಇದು ಕೇವಲ ಗೊಣಗಾಟದ ರೂಪದಲ್ಲಿ ಇರುತ್ತದೆಯೋ ಅಥವಾ ಗಂಭೀರ ಸ್ವರೂಪಕ್ಕೆ ಹೋಗುತ್ತದೆಯೋ ಈಗಲೇ ಹೇಳುವುದು ಕಷ್ಟ. ಆದರೆ ಕಾಂಗ್ರೆಸ್‌ನಿಂದ ವಲಸೆ ಬಂದು ಸಚಿವರಾದ ಬಿ.ಸಿ.ಪಾಟೀಲ ಹಾಗೂ ಮುನಿರತನ್‌ ಮೊದಲಾದವರು ಈಗ ಖಾತೆಗಗಾಗಿ ಕ್ಯಾತೆ ತೆಗೆದವರಿಗೆ ಟಾಂಗ್‌ ನೀಡಿದ್ದಾರೆ. ಇದು ಸದ್ಯದ ಮಟ್ಟಿಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಸವಾಲು ಎದುರಿಸಲು ಸ್ವಲ್ಪಮಟ್ಟಿನ ಅನುಕೂಲತೆ ಒದಗಿಸಿಕೊಟ್ಟಿದೆ. ಆದರೆ ರಮೇಶ ಜಾರಕಿಹೊಳಿ ನಡೆ ಹೇಗಿರುತ್ತದೆ ಎಂಬುದು ಕೂಡ ಇಲ್ಲಿ ಮುಖ್ಯವಾಗುತ್ತದೆ. ಒಟ್ಟಿನಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಆರಂಭದಲ್ಲಿಯೇ ಮಂತ್ರಿಮಂಡಲದ ರಚನೆಯಿಂದಲೇ ಸವಾಲು ಆರಂಭವಾಗಿದ್ದಂತೂ ಹೌದು. ಅದು ಕೇವಲ ಗೊಣಗಾಟ ಅಥವಾ ಅಸಮಾದಾನದ ರೂಪದಲ್ಲಿ ಮಾತ್ರ ಇರುತ್ತದೆಯೋ ಅಥವಾ ಗಂಭೀರ ಸ್ವರೂಪ ಪಡೆಯಬಹುದೇ ಎಂಬುದನ್ನು ಈಗಲೇ ಹೇಳುವುದು ಕಷ್ಟ. ಆದರೆ ಬೊಮ್ಮಾಯಿ ಅವರಿಗೆ ಸವಾಲು ಇರುವುದಂತೂ ಸ್ಪಷ್ಟ.

ಪ್ರಮುಖ ಸುದ್ದಿ :-   ಮೇಕೆದಾಟು : ನದಿಯಲ್ಲಿ ಮುಳುಗಿ ಐವರು ವಿದ್ಯಾರ್ಥಿಗಳು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement