ಖಾತೆ ಕ್ಯಾತೆ ನಂತರ ಸಿಎಂ ಬೊಮ್ಮಾಯಿಗೆ ಈಗ ಮಹಾನಗರ ಪಾಲಿಕೆಗಳ ಚುನಾವಣೆಯ ಲಿಟ್ಮಸ್‌ ಟೆಸ್ಟ್

ಬೆಂಗಳೂರು: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈಗ ಮೂರು ಮಹಾನಗರ ಪಾಲಿಕೆಗಳ ಚುನಾವಣೆಯ ಸವಾಲು ಎದುರಾಗಿದೆ.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂಪುಟ ರಚನೆಯಾಗಿ ಖಾತೆಗಾಗಿ ಕೆಲವು ಸಚಿವರ ಖ್ಯಾತೆ, ನಂತರ ಸಮಾಧಾನ ಇವೆಲ್ಲ ವಿದ್ಯಮಾನಗಳ ನಡುವೆಯೇ ಬುಧವಾರ ಚುನಾವಣಾ ಆಯೋಗವು ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ಕಲಬುರ್ಗಿ ಮಹಾನಗರ ಪಾಲಿಕೆಗಳಿಗೆ ಸೆಪ್ಟೆಂಬರ್‌ 3ರಂದು ಚುನಾವಣೆ ಘೋಷಣೆ ಮಾಡಿದೆ. ಜೊತೆಗೆ ದೊಡ್ಡಬಳ್ಳಾಪುರ, ತರೀಕೆರೆ ಮತ್ತು ಇತರ ಕೆಲವು ಸ್ಥಳೀಯ ಸಂಸ್ಥೆಗಳಿಗೆ ಸೆಪ್ಟಂಬರ್ 3ರಂದು ಮತದಾನ ನಡೆಯಲಿದೆ.ಈ ಚುನಾವಣೆ ಫಲಿತಾಂಶವು ಖಂಡಿತವಾಗಿಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸುಗಮ ಆಡಳಿತದ ದೃಷ್ಟಿಯಿಂದ ಮಹತ್ವ ಪಡೆದಿದೆ.
ಇದರ ಜೊತೆಗೆ ಸಿಂಧಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯೂ ಘೋಷಣೆ ಆಗುವ ಸಾಧ್ಯತೆಯೂ ಇದೆ. ಹೀಗಾಗಿ ಬಸವರಾಜ ಬೊಮ್ಮಾಯಿ ಅವರು ತಮಗೆ ಎದುರಾಗಬಹುದಾದ ಸಂಪುಟ ಖ್ಯಾತೆ, ಅಸಮಾಧಾನ ಇತ್ಯಾದಿಗಳನ್ನು ನಿಭಾಯಿಸಲು ಈ ಮಹಾನಗರ ಪಾಲಿಕೆಗಳ ಚುನಾವಣೆ  ಫಲಿತಾಂಶ ಅವರಿಗೆ ಮುಖ್ಯವಾಗಲಿದೆ.
ಕಳೆದ ಏಪ್ರಿಲ್‌ನಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ನಡೆದ ಬೆಳಗಾವಿ ಲೋಕಸಭೆ ಚುನಾವಣೆ ಹಾಗೂ ಎರಡು ಕ್ಷೇತ್ರಗಳ ಚುನಾವಣೆಯಲ್ಲಿ  ನಿರೀಕ್ಷಿತ ಗೆಲುವು ಸಿಕ್ಕಿರಲಿಲ್ಲ. ಕೇಂದ್ರದ ರೈಲ್ವೆ ಸಚಿವರಾಗಿದ್ದ ಸುರೇಶ ಅಂಗಡಿ ನಿಧನದ ನಂತರ ಬೆಳಗಾವಿ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ದಿವಂಗತ ಸುರೇಶ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಅವರು ಅನುಕಂಪದ ಮಧ್ಯೆಯೂ ಪ್ರಯಾಸದ ಗೆಲುವು ಸಾಧಿಸಿದ್ದರು. ಕೇವಲ ನಾಲ್ಕು ಸಾವಿರದ ಆಸಪಾಸು ಮತಗಳ ಅಂತರದಿಂದ ಬಿಜೆಪಿ ಗೆಲುವು ಸಾಧಿಸಿತ್ತು. ಅನಂತರ ಬಸವ ಕಲ್ಯಾಣದ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ಆದರೆ ಮಸ್ಕಿ ಕ್ಷೇತ್ರದಲ್ಲಿ ವಲಸೆ ಶಾಸಕ ಪ್ರತಾಪ ಗೌಡ ಪಾಟೀಲ ಬಿಜೆಪಿಯಿಂದ ಸ್ಪರ್ಧಿಸಿ ಹೀನಾಯವಾಗಿ ಸೋತಿದ್ದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಕರ್ನಾಟಕದಲ್ಲಿ 19 ವಿಧಾನಸಭಾ ಕ್ಷೇತ್ರಗಳಿಗೆ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದ್ದು, ಅದರಲ್ಲಿ ಬಿಜೆಪಿ 16 ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದಿದೆ. ಡಿಸೆಂಬರ್ 2020 ರಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿದೆ ಎಂದು ಪಕ್ಷವು ಹೇಳಿಕೊಂಡಿದೆ.
ಆದರೆ ಈಗ ಬಿಜೆಪಿಯಲ್ಲಿ ನಾಯಕತ್ವ ಬದಲಾಗಿದೆ. ಅದು ಯಡಿಯೂರಪ್ಪ ಅವರ ಹೆಗಲಿನಿಂದ ಬಸವರಾಜ ಬೊಮ್ಮಾಯಿ ಅವರ ಹೆಗಲಿಗೆ ವರ್ಗಾಯಿಲ್ಪಪಟ್ಟಿದೆ. ಬಸವರಾಜ ಬೊಮ್ಮಾಯಿ ನೂತನ ಮುಖ್ಯಮಂತ್ರಿಯಾಗಿ ಸರ್ಕಾರದ ಸಾರಥ್ಯ ವಹಿಸಿದ್ದಾರೆ. ಸರ್ಕಾರದಲ್ಲಿ ಸಚಿವ ಸಂಪುಟದ ರಚನೆಯಾಗಿ ಪ್ರಮಾಣ ವಚನ ಸ್ವೀಕಾರವೂ ಆಗಿದೆ. ಅದರ ಬೆನ್ನಿಗೇ ಕೆಲವು ಅಪಸ್ವರಗಳು ಹಾಗೂ ಅಸಮಾಧಾನಗಳು ಕೇಳಿಬಂದಿವೆ. ಸಚಿವರಾದ ಆನಂದ ಸಿಂಗ್‌ ಹಾಗೂ ಎಂಟಿಬಿ ನಾಗರಾಜ ಅವರು ತಮಗೆ ನೀಡಿದ ಖಾತೆ ಸಮಾಧಾನ ತಂದಿಲ್ಲ ಎಂದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿ ನಂತರ ಅವರನ್ನು ಸಮಾಧಾನ ಮಾಡುವ ಕೆಲಸವೂ ನಡೆದಿದೆ. ಆದರೆ ಇದು ತಾತ್ಕಾಲಿಕ, ಮುಂದೆಯೂ ಎದುರಾಗುವ ಲಕ್ಷಣಗಳಿವೆ. ಇದರ ಜೊತೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಧಾರವಾಡ ಜಿಲ್ಲೆ ರಾಜಕಾರಣಿ ಜಗದೀಶ ಶೆಟ್ಟರ  ತಮ್ಮ ಹಿರಿಯತನದ ಕಾರಣ ನೀಡಿ  ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟ ಸೇರುವುದಿಲ್ಲ ಎಂದು ಹೇಳುವ ಮೂಲಕ ಅದರಿಂದ ದೂರ ಉಳಿದಿದ್ದಾರೆ. ಕೆಲವು ಬಿಜೆಪಿ ಶಾಸಕರಿಗೆ ಕೊನೆ ಕ್ಷಣದಲ್ಲಿ ಬಿಜೆಪಿ ಸಚಿವ ಸಂಪುಟದಲ್ಲಿ ಸೇರುವುದು ತಪ್ಪಿ ಹೋಗಿದೆ. ಮುಖ್ಯವಾಗಿ ಧಾರವಾಡದ ಶಾಸಕ ಅರವಿಂದ ಬೆಲ್ಲದ, ಕಲಬುರ್ಗಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಬೆಳಗಾವಿಯ ಅಭಯ ಪಾಟೀಲ ಇವರ ಹೆಸರು ಪಟ್ಟಿಯಲ್ಲಿತ್ತು ಎಂದು ಹೇಳಲಾಗಿದ್ದು ಕೊನೆಕ್ಷಣದಲ್ಲಿ ಅವರ ಹೆಸರುಗಳು ಸಚಿವರ ಪಟ್ಟಿಯಲ್ಲಿ ಇಲ್ಲವಾಗಿದೆ. ಈ ವಿದ್ಯಾಮನಗಳು ಅವರ ಬೆಂಬಲಿಗರ ಅಸಮಾಧಾನಕ್ಕಂತೂ ಕಾರಣವಾಗಿದೆ. ಇದು ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ಕಲಬುರ್ಗಿ ಮಹಾನಗರ ಪಾಲಿಕೆ ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂದು ಹೇಳುವುದು ಕಷ್ಟ.
ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ 82 ವಾರ್ಡ್‍ಗಳು, ಬೆಳಗಾವಿ-58 ವಾರ್ಡ್‍ಗಳು ಹಾಗೂ ಕಲಬುರ್ಗಿ -55 ವಾರ್ಡ್‍ಗಳನ್ನು ಹೊಂದಿದೆ. ಈ ಪಾಲಿಕೆಗಳ ಜೊತೆಗೆ ದೊಡ್ಡಬಳ್ಳಾಪುರ, ತರೀಕೆರೆ ಮತ್ತು ಇತರ ಕೆಲವು ಸ್ಥಳೀಯ ಸಂಸ್ಥೆಗಳಿಗೆ ಸೆಪ್ಟಂಬರ್ 3ರಂದು ಮತದಾನ ನಡೆಯಲಿದೆ.
ಆಗಸ್ಟ್ 16ರಂದು ಚುನಾವಣಾ ಅಧಿಸೂಚನೆಯನ್ನು ಜಿಲ್ಲಾಧಿಕಾರಿಗಳು ಹೊರಡಿಸಲಿದ್ದಾರೆ. ಆಗಸ್ಟ್ 23 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಆಗಸ್ಟ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಆಗಸ್ಟ್ 26 ನಾಮಪತ್ರಗಳನ್ನು ಹಿಂದಕ್ಕೆ ಪಡೆದುಕೊಳ್ಳಲು ಕೊನೆಯ ದಿನವಾಗಿದೆ. ಸೆಪ್ಟೆಂಬರ್ 3ರಂದು ಮತದಾನ ನಡೆಯಲಿದೆ. ಸೆಪ್ಟೆಂಬರ್ 6ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುವ ಮೂರು ಕ್ಷೇತ್ರಗಳು ಉತ್ತರ ಕರ್ನಾಟಕದಲ್ಲಿರುವುದರಿಂದ ಅದರಲ್ಲಿಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿಂದಿನ ಅವಧಿಯಲ್ಲಿ ಅಧಿಕಾರದಲ್ಲಿದ್ದ ಹುಬ್ಬಳ್ಳಿ-ಧಾರವಾಡದ ಅವಳಿ ನಗರದವರೇ ಆಗಿರುವುದರಿಂದ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಹಾಗೂ ಒತ್ತಡ ಇರಲಿದೆ.

ಪ್ರಮುಖ ಸುದ್ದಿ :-   ಪ್ರಧಾನಿ ಬಗ್ಗೆ ವಿವಾದಾತ್ಮಕ ಹೇಳಿಕೆ, ವಿದ್ಯುತ್‌ ಕಡಿತ ಬೆದರಿಕೆ: ಶಾಸಕ ರಾಜು ಕಾಗೆಗೆ ಚುನಾವಣೆ ಆಯೋಗದಿಂದ ನೋಟಿಸ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement