ದೇವಾಲಯದ ಬಾಗಿಲು ಹಾಕುವುದಿಲ್ಲ, ತಾಲಿಬಾನಿಗಳು ನನ್ನನ್ನು ಕೊಂದರೆ ಅದು ದೇವರ ಸೇವೆಯೆಂದು ಭಾವಿಸುವೆ; ಅಫ್ಘಾನ್ ತೊರೆಯಲು ನಿರಾಕರಿಸಿದ ಹಿಂದೂ ಅರ್ಚಕ

ಕಾಬೂಲ್: ಅಫ್ಘಾನಿಸ್ತಾನ ತಾಲಿಬಾನಿಗಳ ಕೈವಶವಾದ ನಂತರ ಲಕ್ಷಾಂತರ ಜನರು ಅಲ್ಲಿಂದ ಪಲಾಯನ ಮಾಡುತ್ತಿದ್ದಾರೆ. ತಾಲಿಬಾನ್ ಉಗ್ರರು ತಮ್ಮನ್ನು ಕೊಲ್ಲಬಹುದು ಎಂಬ ಭೀತಿ ಜನರಿಗೆ ಆವರಿಸಿದೆ. ಜನಸಂದಣಿ ನಿಯಂತ್ರಿಸಲಾಗದೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರವನ್ನೇ ಸ್ಥಗಿತಗೊಳಿಸಲಾಗಿದೆ. ಹಿಂದೂ, ಸಿಖ್ ಸಮುದಾಯದವರಿಗೆ ಜೀವಭಯ ಎದುರಾಗಿದೆ. ಆದರೆ, ಕಾಬೂಲ್​ನ ರತನ್ ನಾಥ್ ದೇವಸ್ಥಾನದ ಪ್ರಧಾನ ಅರ್ಚಕ ಪಂಡಿತ್ ರಾಜೇಶಕುಮಾರ್ ಏನೇ ಆದರೂ ಆ ಹಣೆಬರಹವನ್ನು ಇಲ್ಲಿಯೇ ಅನುಭವಿಸುತ್ತೇವೆ, ಯಾವುದೇ ಕಾರಣಕ್ಕೂ ದೇಶ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ್ದಾರೆ.
ರಾಜೇಶ್ ಕುಮಾರ್ ಅವರ ಜೊತೆಗಿದ್ದ ಬಹುತೇಕ ಹಿಂದೂಗಳು ಭಾರತಕ್ಕೆ ಮರಳಿದ್ದಾರೆ. ಅವರು ರಾಜೇಶಕುಮಾರ್ ತನ್ನ ಕೊನೆಯ ಉಸಿರಿರುವರೆಗೂ ರತನ್ ನಾಥ್ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತೇನೆ. ಒಂದುವೇಳೆ ತಾಲಿಬಾನ್ ಉಗ್ರರು ನನ್ನನ್ನು ಕೊಂದರೆ ಅದು ಕೂಡ ದೇವರ ಸೇವೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಪಂಡಿತ್ ರಾಜೇಶಕುಮಾರ್ ಅವರ ಪೂರ್ವಜರು ಕೂಡ ಇದೇ ದೇವಾಲಯದಲ್ಲಿ ಅರ್ಚಕರಾಗಿದ್ದರು. ವಂಶಪಾರಂಪರ್ಯವಾಗಿ ಬಂದಿರುವ ಈ ಸಂಪ್ರದಾಯವನ್ನು ಅರ್ಧಕ್ಕೆ ನಿಲ್ಲಿಸಿ ನನ್ನ ಜೀವ ಉಳಿಸಿಕೊಳ್ಳಲು ದೇಶ ಬಿಟ್ಟು ಪಲಾಯನ ಮಾಡುವುದಿಲ್ಲ. ನೂರಾರು ವರ್ಷಗಳ ಇತಿಹಾಸವಿರುವ ಈ ಹಿಂದೂ ದೇವಾಲಯದ ಬಾಗಿಲು ಹಾಕುವುದಿಲ್ಲ ಎಂದು ಪಂಡಿತ್ ರಾಜೇಶಕುಮಾರ್ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದೊಳಗೆ ನುಗ್ಗಿ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ವಶಕ್ಕೆ ಪಡೆದ ಬೆನ್ನಲ್ಲೇ ಭಾರತದ ವಿದೇಶಾಂಗ ಸಚಿವಾಲಯ ಅಫ್ಘಾನ್​ನಲ್ಲಿರುವ ಭಾರತೀಯ ರಾಯಭಾರಿ ಅಧಿಕಾರಿಗಳನ್ನು ಏರ್​ಲಿಫ್ಟ್ ಮೂಲಕ ವಾಪಾಸ್ ಕರೆಸಿಕೊಂಡಿದೆ. ಹಾಗೇ, ವಿಶೇಷ ವಿಮಾನದ ಮೂಲಕ ಭಾರತೀಯರನ್ನು ಕರೆತರಲಾಗುತ್ತಿದೆ. ಅಫ್ಘಾನಿಸ್ತಾನದಲ್ಲಿರುವ ಹಿಂದೂ ಹಾಗೂ ಸಿಖ್ ಸಮುದಾಯದ ಜನರ ಜೊತೆ ನಿಕಟ ಸಂಪರ್ಕದಲ್ಲಿರುವ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಅವರನ್ನು ಕರೆತರಲು ಪ್ರಯತ್ನಿಸುತ್ತಿದ್ದಾರೆ.
[email protected] ಇಮೇಲ್ ಹೆಲ್ಪ್​ಲೈನ್ ಮೂಲಕ ಭಾರತಕ್ಕೆ ವಾಪಾಸ್ ಬರಲು ಬಯಸುವ ಅಫ್ಘಾನ್​ನಲ್ಲಿರುವ ಭಾರತೀಯರು ಭಾರತವನ್ನು ಸಂಪರ್ಕಿಸಬಹುದು ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರೀಂದಮ್ ಬಾಗ್ಚಿ ಮಾಹಿತಿ ನೀಡಿದ್ದಾರೆ.ಅಫ್ಘಾನ್​ನಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ನಮ್ಮ ದೇಶಕ್ಕೆ ಕರೆತರುವ ಸಲುವಾಗಿ ಭಾರತದ ವಿದೇಶಾಂಗ ಸಚಿವಾಲಯದಿಂದ ವಿಶೇಷ ಸಹಾಯವಾಣಿ ತೆರೆಯಲಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement