ಅಫಘಾನಿಸ್ತಾನ್‌ದಿಂದ ಪಲಾಯನ ಮಾಡುವವರ ಚದುರಿಸಲು ಗುಂಡು ಹಾರಿಸುತ್ತಿರುವ ತಾಲಿಬಾನಿಗಳು:ಈವರೆಗೆ 12 ಜನರು ಸಾವು

ಕಾಬೂಲ್: ಅಫಘಾನಿಸ್ತಾನ ಬಿಟ್ಟು ಹೋಗುವ ಧಾವಂತದಲ್ಲಿ ಗುಂಪುಗೂಡುತ್ತಿರುವ ಜನರನ್ನು ಚದುರಿಸಲು ತಾಲಿಬಾನಿಗಳು ಗುಂಡು ಹಾರಿಸಿದ ಘಟನೆಗಳಲ್ಲಿ ಭಾನುವಾರದಿಂದ ಈವರೆಗೆ 12 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಎಲ್ಲರೂ ತಮ್ಮ ಮನೆಯಲ್ಲೇ ಇರಬೇಕು ಎಂದು ತಾಲಿಬಾನಿಗಳು ಕಟ್ಟಪ್ಪಣೆ ಮಾಡಿದ್ದಾರೆ. ಆಫ್ಘಾನಿಸ್ತಾನ ಬಿಟ್ಟು ಯಾರು ಹೊರ ಹೋಗುವ ಅಗತ್ಯ ಇಲ್ಲ ಎಂದು ಹೇಳಿದೆ. ಭಾನುವಾರದಿಂದ ಕಾಬೂಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದೇಶ ಬಿಟ್ಟು ಹೋಗಲು ಪ್ರತಿನಿತ್ಯ ಸಾವಿರಾರು ಮಂದಿ ಆಗಮಿಸುತ್ತಲೇ ಇದ್ದಾರೆ. ಕೆಲವರು ದಾಂಧಲೆ, ಗಲಾಟೆ ಮಾಡುತ್ತಿದ್ದಾರೆ. ಪರಿಸ್ಥಿತಿಯ ಲಾಭ ಪಡೆದು ಲೂಟಿ, ಜೇಬುಗಳ್ಳತನ ಇತರ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಗುಂಪು ಚದುರಿಸಲು ತಾಲಿಬಾನಿಗಳು ಪದೇ ಪದೇ ಗುಂಡು ಹಾರಿಸುತ್ತಿದ್ದಾರೆ. ಇದರಿಂದ ಈವರೆಗೆ 12 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಈ ನಡುವೆ ಅಮೆರಿಕ ಆಫ್ಘಾನಿಸ್ತಾನ ಸರ್ಕಾರಕ್ಕೆ ಶಸ್ತ್ರಾಸ್ತ್ರಾ ಮಾರಾಟ ಒಪ್ಪಂದವನ್ನು ತಡೆ ಹಿಡಿದಿದೆ. ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ತಮ್ಮ ದೇಶದ ಪ್ರಜೆಗಳು ಹಾಗೂ ರಾಜತಾಂತ್ರಿಕರನ್ನು ಹಿಂಪಡೆಯಲು ಪ್ರಯತ್ನ ಮುಂದುವರೆಸಿರುವುದಾಗಿ ಹೇಳಿದ್ದಾರೆ. ಆಗಸ್ಟ್ 31ರ ಒಳಗೆ ಅಥವಾ ಅಮೆರಿಕಾದ ಎಲ್ಲ ನಾಗರಿಕರು ಮರಳುವವರೆಗೆ ಸೇನಾ ಪಡೆಗಳು ಆಫ್ಘಾನಿಸ್ತಾನದಲ್ಲಿಯೇ ಇರಲಿದೆ ಎಂದು ಅವರು ತಿಳಿಸಿದ್ದಾರೆ.
ಈ ನಡುವೆ ಆಫ್ಘಾನಿಸ್ತಾನದಲ್ಲಿ ಅಮೆರಿಕ ಸೇನಾಪಡೆಗಳ ಜೊತೆ ಭಾಷಾಂತರಿಗಳಾಗಿ ಕೆಲಸ ಮಾಡುತ್ತಿದ್ದ ವಿದ್ಯಾವಂತ ಯುವತಿಯರಿಗೆ ಅಪಾಯ ಹೆಚ್ಚಿದ್ದು, ಅವರನ್ನು ತಕ್ಷಣ ವಾಪಸ್ ಕರೆಸಿಕೊಳ್ಳಬೇಕು ಎಂಬ ಒತ್ತಾಯಗಳು ಕೇಳಿ ಬಂದಿವೆ. ತಾಲಿಬಾನಿಗಳ ವಶದಲ್ಲಿರುವ ಆಫ್ಘಾನಿಸ್ತಾನಕ್ಕೆ ಇನ್ನು ಮುಂದೆ ಯಾವುದೇ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವುದಿಲ್ಲ ಎಂದು ಅಮೆರಿಕಾ ಹೇಳಿದ್ದು, ಈವರೆಗಿನ ಎಲ್ಲಾ ಒಪ್ಪಂದಗಳನ್ನು ಅಮಾನತು ಮಾಡಿದೆ.
ವಿಶ್ವಸಂಸ್ಥೆ ಕೂಡ ತನ್ನ 100 ಸಿಬ್ಬಂದಿ ವಾಪಾಸ್ ಕರೆಸಿಕೊಂಡಿದೆ. ಕಾಬೂಲ್‍ನಿಂದ ಖಜಕಿಸ್ತಾನದ ಸುರಕ್ಷಿತ ಸ್ಥಳಕ್ಕೆ ಸಿಬ್ಬಂದಿ ಸ್ಥಳಾಂತರಿಸಲಾಗಿದೆ ಎಂದು ವಿಶ್ವಸಂಸ್ಥೆ ವಕ್ತಾರ ಸ್ಟಿಫನ್ ಡುಜೆರಿಕ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಅಪರೂಪದ ಮದುವೆ; 2ನೇ ವಿಶ್ವ ಮಹಾಯುದ್ಧದ ಸೇನಾನಿ, 100 ವರ್ಷದ ವ್ಯಕ್ತಿಯೇ ಮದುವೆ ಗಂಡು ....ವಧುವಿಗೆ 96 ವರ್ಷ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement