ಕೊನೆಗೂ ಕೊಡಗು ಬಾಲಕಿ ಕೈಸೇರಿದ ಕಳೆದುಹೋಗಿದ್ದ ಅಮ್ಮನ ನೆನಪಿನ ಮೊಬೈಲ್..!

ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರದ ಪುಟ್ಟ ಬಾಲಕಿ ಹೃತಿಕ್ಷಾ ಪ್ರಾರ್ಥನೆ ಕೊನೆಗೂ ಫಲಿಸಿದೆ. ಕೋವಿಡ್‌ನಿಂದ ಮೃತಪಟ್ಟ ತಾಯಿಯ ನೆನಪು ಇರುವ ಮೊಬೈಲ್ ಮೂರು ತಿಂಗಳ ನಂತರ ಆಕೆಯ ಕೈ ಸೇರಿದೆ.
ಮಡಿಕೇರಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಹೃತಿಕ್ಷಾ ತಾಯಿ ಮೇ 16ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಆದರೆ ತಾಯಿಯ ಜೊತೆಗಿದ್ದ ಮೊಬೈಲ್ ಕಳೆದುಹೋಗಿತ್ತು. ತಾಯಿಯ ನೆನಪು ಇರುವ ಮೊಬೈಲ್ ದಯವಿಟ್ಟು ಹುಡುಕಿಕೊಡಿ ಎಂದು ಬಾಲಕಿ ಮನವಿ ಮಾಡಿದ್ದ ಮನವಿಯ ವಿಡಿಯೋ ವೈರಲ್ ಆಗಿತ್ತು.
ನನ್ನ ಜೀವನದ ಅಮೂಲ್ಯ ಜೀವವಾಗಿದ್ದ ತಾಯಿ ಹೋಗಿಬಿಟ್ಟರು. ಅವರ ನನ್ನ ನೆನಪಾಗಿ ಇರುವುದು ಅಮೂಲ್ಯ ಫೋಟೋಗಳು. ಆ ಮೊಬೈಲ್‌ ಕಳೆದು ಹೋಗಿದೆ. ದಯವಿಟ್ಟು ಮೊಬೈಲ್ ಕೊಡಿಸಿಕೊಡಿ” ಎಂದು ಜಿಲ್ಲಾ ಪೊಲೀಸರು ಸೇರಿದಂತೆ ಎಲ್ಲರಿಗೂ ಪುಟ್ಟ ಬಾಲಕಿ ಹೃತಿಕ್ಷಾ ಮನವಿ ಮಾಡಿದ್ದಳು.
ಮೊಬೈಲ್ ಹುಡುಕಿ ಕೊಡಿ ಎಂದು ಬಾಲಕಿ ಕೊಡಗು ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ ಮತ್ತು ಮಡಿಕೇರಿ ಕೋವಿಡ್ ಆಸ್ಪತ್ರೆಯ ಸಿಬ್ಬಂದಿಗೆ ಪತ್ರವನ್ನು ಬರೆದಿದ್ದಳು. ಅವಳ ಮನವಿಗೆ ಸ್ಪಂದಿಸಿ ಮೊಬೈಲ್ ಕಳೆದು ಹೋಗಿರುವ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದರು.
ಕೊನೆಗೂ ಮಡಿಕೇರಿ ನಗರ ಠಾಣೆಯಿಂದ ಬಅಲಕಿಗೆ ಮೊಬೈಲ್‌ ಸಿಕ್ಕಿದ ಬಗ್ಗೆ ಫೋನ್ ಕರೆ ಬಂತು. ಮೊಬೈಲ್ ಸಿಕ್ಕಿದೆ ಠಾಣೆಗೆ ಬಂದು ಪಡೆದುಕೊಳ್ಳುವಂತೆ ಪೊಲೀಸರು ಕರೆ ಮಾಡಿ ತಿಳಿಸಿದ್ದರು. ತನ್ನ ಸೋದರ ಮಾವನ ಜೊತೆ ಗುರುವಾರ ಬಾಲಕಿ ಠಾಣೆಗೆ ತೆರಳಿದ್ದಳು.
ಮಡಿಕೇರಿ ಕೋವಿಡ್ ಆಸ್ಪತ್ರೆ ಗೋದಾಮಿನಲ್ಲಿ ಮೊಬೈಲ್ ಸಿಕ್ಕಿದ್ದು, ಆಸ್ಪತ್ರೆಯ ಸಿಬ್ಬಂದಿ ಅದನ್ನು ಮಡಿಕೇರಿ ನಗರ ಠಾಣೆಗೆ ನೀಡಿದ್ದರು. ಗುರುವಾರ ಬಾಲಕಿ ಹೃತಿಕ್ಷಾ ಮೊಬೈಲ್ ಪರಿಶೀಲಿಸಿ ತನ್ನ ತಾಯಿಯದ್ದು ಎಂದು ಖಚಿತಪಡಿಸಿದಳು. ಅದರಲ್ಲಿ ತಾಯಿಯ ಜೊತೆ ತೆಗೆಸಿಕೊಂಡಿದ್ದ ಫೋಟೋಗಳಿದ್ದು, ಅವನ್ನು ನೋಡಿ ಸಂತಸಪಟ್ಟಳು.
ಕೋವಿಡ್‌ನಿಂದ ಮೃತಪಟ್ಟ ಅಮ್ಮನ ಫೋಟೋ ನೋಡಿ ಬಾಲಕಿ ಹೃತಿಕ್ಷಾ ಸಂತಸಪಟ್ಟಿದ್ದು ನೋಡಿ ಪೊಲೀಸರು, ಠಾಣೆಯಲ್ಲಿ ಸೇರಿದ್ದದರು ಕ್ಷಣಕಾಲ ಮೌನಕ್ಕೆ ಶರಣಾದರು. ಮಹಾಮಾರಿಗೆ ತಾಯಿ ಬಲಿಯಾದರೂ ಮೊಬೈಲ್ ಮೂಲಕ ಆಕೆಯ ನೆನಪನ್ನು ಬಾಲಕಿ ಹೃತಿಕ್ಷಾ ಜೀವಂತವಾಗಿ ಇಟ್ಟುಕೊಂಡಿದ್ದಾಳೆ.
ತಾಯಿ ಮೊಬೈಲ್ ಆಸ್ಪತ್ರೆಯಲ್ಲಿ ಕಳೆದಾಗ ಹೃತಿಕ್ಷಾ, “ನಾನು ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದೇನೆ. ನನ್ನ ತಾಯಿಯ ನೆನಪುಗಳು ಆ ಮೊಬೈಲ್‌ನಲ್ಲಿದೆ.. ಆದ್ದರಿಂದ ಯಾರಾದರೂ ತೆಗೆದುಕೊಂಡಿದ್ದರೆ ಅಥವಾ ಯಾರಿಗಾದರೂ ಸಿಕ್ಕಿದ್ದರೆ ದಯವಿಟ್ಟು ಈ ತಬ್ಬಲಿಗೆ ಅದನ್ನು ತಲುಪಿಸಿ” ಎಂದು ಮನವಿ ಮಾಡಿದ್ದಳು.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement